ADVERTISEMENT

‘ಎಚ್‌1–ಬಿ’: ದುರ್ಬಳಕೆ ತಡೆಗೆ ಮಸೂದೆ ಮಂಡನೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 19:15 IST
Last Updated 24 ಮಾರ್ಚ್ 2017, 19:15 IST

ವಾಷಿಂಗ್ಟನ್‌: ‘ಎಚ್‌1–ಬಿ’ ವೀಸಾ ಯೋಜನೆ ದುರ್ಬಳಕೆ ಮಾಡಿಕೊಂಡು ಉದ್ಯೋಗ ಹೊರಗುತ್ತಿಗೆ ನೀಡುವುದರಿಂದ ಅಮೆರಿಕದ ಕಂಪೆನಿಗಳನ್ನು ತಡೆಯುವ ಮಸೂದೆಯನ್ನು ಅಮೆರಿಕ ಕಾಂಗ್ರೆಸ್‌ನಲ್ಲಿ ಮತ್ತೆ ಮಂಡಿಸಲಾಗಿದೆ.

ಡೆಮಾಕ್ರೆಟಿಕ್‌ ಪಕ್ಷದ ಸಂಸದ ಡೆರೆಕ್‌ ಕಿಲ್ಮರ್‌ ಮತ್ತು ರಿಪಬ್ಲಿಕನ್‌ ಪಕ್ಷದ ಡಗ್‌ ಕಾಲಿನ್ಸ್‌ ಅವರು ಕಾಂಗ್ರೆಸ್‌ನ ಕೆಳಮನೆಯಲ್ಲಿ (ಹೌಸ್‌ ಆಫ್‌ ರೆಪ್ರಸೆಂಟೇಟಿವ್ಸ್‌) ಗುರುವಾರ ಮಂಡಿಸಿದ ಮಸೂದೆ ಭಾರತದ ಐ.ಟಿ ಕಂಪೆನಿಗಳು ಮತ್ತು ಉದ್ಯೋಗಿಗಳಿಗೆ ಹೊಡೆತ ನೀಡುವ ಸಾಧ್ಯತೆಯಿದೆ.
‘ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಅಮೆರಿಕನ್ನರ ಕೆಲಸವನ್ನು  ವಿದೇಶಿ ಉದ್ಯೋಗಿಗಳಿಗೆ ವರ್ಗಾಯಿಸುವುದಕ್ಕೆ ಮಸೂದೆ ತಡೆಯೊಡ್ಡಲಿದೆ.

ಅಮೆರಿಕನ್ನರ ಉದ್ಯೋಗ ರಕ್ಷಿಸುವುದು ನಮ್ಮ ಆರ್ಥವ್ಯವಸ್ಥೆಯ ಬೆಳವಣಿಗೆಯ ದೃಷ್ಟಿಯಿಂದ ಮಹತ್ವದ್ದಾಗಿದೆ’ ಎಂದು ಕಾಲಿನ್ಸ್‌ ಹೇಳಿದ್ದಾರೆ.
‘ಅಮೆರಿಕದಲ್ಲಿ ಅರ್ಹ ಉದ್ಯೋಗಿಗಳ ಕೊರತೆಯಿದ್ದರೆ ಎಚ್‌1–ಬಿ ವೀಸಾ ಯೋಜನೆಯಡಿ ವಿದೇಶಗಳಿಂದ ಉದ್ಯೋಗಿಗಳನ್ನು ಕರೆಸಿಕೊಳ್ಳುವ ಅವಕಾಶ ಕಂಪೆನಿಗಳಿಗೆ ಇದೆ. ಆದರೆ ಅಮೆರಿಕದಲ್ಲಿ ಕೌಶಲ ಹೊಂದಿದ ಉದ್ಯೋಗಿಗಳು ಇದ್ದರೂ ವಿದೇಶಿ ಉದ್ಯೋಗಿಗಳ ಮೊರೆ ಹೋಗುತ್ತಿರುವುದು ಸರಿಯಲ್ಲ’ ಎಂದಿದ್ದಾರೆ.

ADVERTISEMENT

‘ಕಾನೂನು ಉಲ್ಲಂಘಿಸಿ ಇಲ್ಲಿನ ಉದ್ಯೋಗವನ್ನು ವಿದೇಶಿಯರ ಕೈಗೆ ನೀಡುವುದಕ್ಕೆ ನಾವು ಕಂಪೆನಿಗಳಿಗೆ ಅವಕಾಶ ನೀಡುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ‘ನಮ್ಮ ನಿಯಮಗಳು ಸ್ಥಳೀಯರಿಗೆ ಉದ್ಯೋಗ ದೊರಕಿಸಿಕೊಡುವುದನ್ನು ಉತ್ತೇಜಿಸುವಂತಿರಬೇಕು’ ಎಂದು ಕಿಲ್ಮರ್‌ ಹೇಳಿದ್ದಾರೆ.

ಎಚ್‌1–ಬಿ ಮತ್ತು ಎಲ್‌–1 ವೀಸಾ ಯೋಜನೆಗಳ ದುರುಪಯೋಗ ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈ ಹಿಂದೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.