ADVERTISEMENT

ಎಚ್‌1ಬಿ ವೀಸಾ ಪ್ರಕ್ರಿಯೆ ತಾತ್ಕಾಲಿಕ ಸ್ಥಗಿತ

15 ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ

ಪಿಟಿಐ
Published 17 ಮಾರ್ಚ್ 2017, 19:30 IST
Last Updated 17 ಮಾರ್ಚ್ 2017, 19:30 IST
ಎಚ್‌1ಬಿ ವೀಸಾ ಪ್ರಕ್ರಿಯೆ ತಾತ್ಕಾಲಿಕ ಸ್ಥಗಿತ
ಎಚ್‌1ಬಿ ವೀಸಾ ಪ್ರಕ್ರಿಯೆ ತಾತ್ಕಾಲಿಕ ಸ್ಥಗಿತ   

ವಾಷಿಂಗ್ಟನ್: ಭಾರತದ ಐಟಿ ವಲಯದಲ್ಲಿ ಜನಪ್ರಿಯವಾಗಿರುವ ಎಚ್‌1ಬಿ ವೀಸಾ ಪ್ರಕ್ರಿಯೆಯನ್ನು ಅಮೆರಿಕ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ವೀಸಾ ಕೋರಿ ಭಾರಿ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆಯಾಗುವ ಕಾರಣ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

‘ಎಚ್‌1ಬಿ ವೀಸಾ ವಿತರಣೆಯನ್ನು ಅಮೆರಿಕ ಕೈಬಿಟ್ಟಿಲ್ಲ. ಕೇವಲ ಪ್ರಕ್ರಿಯೆಯನ್ನಷ್ಟೇ ಸ್ಥಗಿತಗೊಳಿಸಿದೆ. ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆ (ಯುಎಸ್‌ಸಿಐಸಿ) ನಿರ್ದೇಶಕ ಲೋರಿ ಸ್ಕಿಲಬ್ಬಾ ಅವರು ತಿಳಿಸಿದ್ದಾರೆ. ಹಿಂದಿನ ವರ್ಷವೂ ಈ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತೊಗಳಿಸಿದ್ದನ್ನು ಅವರು ನೆನಪಿಸಿದರು.

2018ನೇ ಆರ್ಥಿಕ ವರ್ಷಕ್ಕಾಗಿ ಈ ವರ್ಷದ ಏಪ್ರಿಲ್ 3ರಿಂದ ಎಚ್‌1ಬಿ ಉದ್ಯೋಗ ವೀಸಾ ಅರ್ಜಿಗಳನ್ನು ಸ್ವೀಕರಿಸುವುದಾಗಿ ಅಮೆರಿಕ ತಿಳಿಸಿತ್ತು. ಈ ಬಾರಿ 2.40 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುವ ನಿರೀಕ್ಷೆಯಿದೆ.

ADVERTISEMENT

ವಿಶ್ವಸಂಸ್ಥೆಗೆ ಅಮೆರಿಕ ನೆರವು ದಿಢೀರ್ ಕಡಿತ– ಗುಟೆರಸ್‌ ಟೀಕೆ: ವಿಶ್ವಸಂಸ್ಥೆಗೆ ನೀಡುತ್ತಿದ್ದ ಹಣಕಾಸಿನ ನೆರವನ್ನು ದಿಢೀರ್ ಕಡಿಗೊಳಿಸುವ ಪ್ರಸ್ತಾವ ಮಾಡಿರುವ ಅಮೆರಿಕದ ನೀತಿಯನ್ನು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್ ಅವರು ಖಂಡಿಸಿದ್ದಾರೆ.

ವಿಶ್ವಸಂಸ್ಥೆಗೆ ಅತಿಹೆಚ್ಚು ನೆರವು ನೀಡುತ್ತಿರುವ ಅಮೆರಿಕದ ದಿಢೀರ್ ನಿರ್ಧಾರದಿಂದ ಸಂಘಟನೆಯ ದೀರ್ಘ ಕಾಲೀನ ಸುಧಾರಣೆ ಕಾರ್ಯಕ್ರಮಗಳ ಮೇಲೆ ಪರಿಣಾಮ ಬೀರಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಈ ಸಂಬಂಧ ಅಮೆರಿಕದ ವಿದೇಶಾಂಗ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಲು ಗುಟೆರಸ್ ಅವರು ಸಿದ್ಧರಿದ್ದಾರೆ ಎಂದು ಅವರ ವಕ್ತಾರ ಸ್ಟೀಫನ್ ಡುಜರಿಕ್ ಅವರು ತಿಳಿಸಿದ್ದಾರೆ.

‘ಬಜೆಟ್ ಮೂಲಕ ಕಠಿಣ ಸಂದೇಶ ’
ಮೃದು ಧೋರಣೆಯಿಂದ ಕಠಿಣ ಕ್ರಮಗಳಿಗೆ ಪರಿವರ್ತನೆ ಆಗುತ್ತಿರುವ ದೇಶದ ನಿಲುವುನ್ನು ಬಜೆಟ್ ಮೂಲಕ ಭಾರತ ಸೇರಿದಂತೆ ತನ್ನ ಮಿತ್ರದೇಶಗಳಿಗೆ ಅಮೆರಿಕ ರವಾನಿಸಿದೆ ಎಂದು ಶ್ವೇತಭವನದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿದೇಶಿ ದೇಣಿಗೆ ಪ್ರಮಾಣವನ್ನು ಶೇ 28ರಷ್ಟು ಕಡಿತಗೊಳಿಸುವುದಾಗಿ ಟ್ರಂಪ್ ಅವರು ಬಜೆಟ್‌ನಲ್ಲಿ ಮಾಡಿರುವ ಪ್ರಸ್ತಾವವನ್ನು ಡೆಮಾಕ್ರಟಿಕ್ ಸಂಸದರು ಹಾಗೂ ರಾಜಕೀಯ ತಜ್ಞರು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಿರ್ವಹಣೆ ಹಾಗೂ ಬಜೆಟ್ ಕಚೇರಿ ಕಾರ್ಯಕಾರಿ ನಿರ್ದೇಶಕ ಮೈಕ್ ಮಲ್ವನ್ ಅವರು, ಇದು ನಮ್ಮ ಮಿತ್ರದೇಶಗಳು, ವಿರೋಧಿಗಳು ಮತ್ತು ಇತರೆ ದೇಶಗಳಿಗೆ ಅಮೆರಿಕ ನೀಡುತ್ತಿರುವ ಕಠಿಣ ಸಂದೇಶ ಎಂದು ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.