ADVERTISEMENT

ಎಚ್‌4 ವೀಸಾ: ಕೆಲಸದ ಅವಕಾಶಕ್ಕೆ ಕೊಕ್ಕೆ?

ಪಿಟಿಐ
Published 24 ಏಪ್ರಿಲ್ 2018, 19:43 IST
Last Updated 24 ಏಪ್ರಿಲ್ 2018, 19:43 IST
ಎಚ್‌4 ವೀಸಾ: ಕೆಲಸದ ಅವಕಾಶಕ್ಕೆ ಕೊಕ್ಕೆ?
ಎಚ್‌4 ವೀಸಾ: ಕೆಲಸದ ಅವಕಾಶಕ್ಕೆ ಕೊಕ್ಕೆ?   

ವಾಷಿಂಗ್ಟನ್‌ (ಪಿಟಿಐ): ಎಚ್‌1ಬಿ ವೀಸಾದಾರರ ಸಂಗಾತಿಗಳು (ಗಂಡ ಅಥವಾ ಹೆಂಡತಿ) ಹೊಂದಿರುವ ಕಾನೂನುಬದ್ಧವಾಗಿ ಕೆಲಸ ಮಾಡುವ ಅವಕಾಶವನ್ನು ರದ್ದುಪಡಿಸಲು ಅಮೆರಿಕ ಸರ್ಕಾರ ಚಿಂತನೆ ನಡೆಸಿದೆ. ಇದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಸಾವಿರಾರು ಭಾರತೀಯರ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.

ಉನ್ನತ ಕೌಶಲಗಳನ್ನು ಹೊಂದಿರುವ ವಿದೇಶಿಯರಿಗೆ ಎಚ್‌1ಬಿ ವೀಸಾ ನೀಡಿ ಕೆಲಸಕ್ಕೆ ನಿಯೋಜಿಸಲಾಗುತ್ತದೆ. ಈ ವೀಸಾ ಪಡೆದವರು ಅಮೆರಿ
ಕದ ಕಾಯಂ ನಿವಾಸಿ ಸ್ಥಾನಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ ಈ ಸ್ಥಾನ ದೊರಕುವುದಕ್ಕೆ ದಶಕ ಅಥವಾ ಅದಕ್ಕಿಂತ ಹೆಚ್ಚಿನ ಸಮಯ ಬೇಕು. ಈ ಪ್ರಕ್ರಿಯೆಯ ಅವಧಿಯಲ್ಲಿ ಎಚ್‌1ಬಿ ವೀಸಾ ಹೊಂದಿರುವವರ ಸಂಗಾತಿಗಳಿಗೆ ಕೆಲಸದ ಅವಕಾಶ ಕೊಡುವ ಕಾನೂನನ್ನು 2015ರಲ್ಲಿ ಬರಾಕ್‌ ಒಬಾಮ ಸರ್ಕಾರ ರೂಪಿಸಿತ್ತು.

ಎಚ್‌1ಬಿ ವೀಸಾದಾರರ ಅವಲಂಬಿತ ಸಂಗಾತಿಗಳಿಗೆ ಎಚ್‌4 ವೀಸಾ ನೀಡಲಾಗುತ್ತಿದೆ. ಇಂಥವರಿಗೆ ಕೆಲಸ ಮಾಡುವುದಕ್ಕೆ ಪರವಾನಗಿ
ಯನ್ನೂ ನೀಡಲಾಗುತ್ತದೆ.

ADVERTISEMENT

ಈ ಅವಕಾಶವನ್ನು ರದ್ದುಪಡಿಸುವ ಬಗ್ಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಚಿಂತಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಕರಡು ನಿಯಮ ಕೆಲವೇ ತಿಂಗಳಲ್ಲಿ
ಪ್ರಕಟವಾಗಲಿದೆ. ಈ ಮೂಲಕ 2015ರಲ್ಲಿ ರೂಪುಗೊಂಡ ನಿಯಮ ರದ್ದಾಗಲಿದೆ ಎಂದು ಅಮೆರಿಕದ ಪೌರತ್ವ ಮತ್ತು ವಲಸೆ ಸೇವಾ ಇಲಾಖೆಯ ನಿರ್ದೇಶಕ ಫ್ರಾನ್ಸಿಸ್‌ ಸಿಸಾನಾ ತಿಳಿಸಿದ್ದಾರೆ. ಕರಡು ನಿಯಮ ಪ್ರಕಟವಾದ ಬಳಿಕ ಪ್ರತಿಕ್ರಿಯೆ ನೀಡಲು ಜನರಿಗೆ ಅವಕಾಶ ಇದೆ.

ಎಚ್‌1ಬಿ: ಇನ್ನೂ ಕಠಿಣ?

ಎಚ್‌1ಬಿ ವೀಸಾ ನೀಡಿಕೆಯನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿಸುವ ಎರಡು ಪ್ರಸ್ತಾವಗಳನ್ನು ಅಮೆರಿಕ ಹೊಂದಿದೆ. ವಿದ್ಯುನ್ಮಾನ (ಎಲೆಕ್ಟ್ರಾನಿಕ್‌) ನೋಂದಣಿ ವ್ಯವಸ್ಥೆ ಜಾರಿಗೆ ತರುವುದು ಮೊದಲ ಪ್ರಸ್ತಾವವಾಗಿದೆ. ಇದರಿಂದಾಗಿ ಎಷ್ಟು ಜನರಿಗೆ ವೀಸಾ ನೀಡಲಾಗಿದೆ ಮತ್ತು ವೀಸಾ ನೀಡಿಕೆಯ ಲಾಟರಿ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಯಂತ್ರಿಸುವುದು ಸಾಧ್ಯವಾಗಲಿದೆ.

ಎಚ್‌1ಬಿ ವೀಸಾ ನೀಡಬಹುದಾದ ವಿಶೇಷ ಪರಿಣತಿಯ ಕ್ಷೇತ್ರಗಳು ಯಾವುವು ಎಂಬುದನ್ನು ಹೆಚ್ಚು ಸ್ಪಷ್ಟವಾಗಿ ವ್ಯಾಖ್ಯಾನಿಸುವುದು ಎರಡನೇ ಪ್ರಸ್ತಾವವಾಗಿದೆ. ಉದ್ಯೋಗ, ಉದ್ಯೋಗದಾತ ಮತ್ತು ಉದ್ಯೋಗಿಯ ನಡುವಣ ಸಂಬಂಧಗಳಿಗೆ ಹೊಸ ವ್ಯಾಖ್ಯಾನ ನೀಡುವುದೂ ಇದರಲ್ಲಿ ಸೇರಿದೆ. ಅಮೆರಿಕದ ಕೆಲಸಗಾರರು ಮತ್ತು ಅವರ ವೇತನದ ಪ್ರಮಾಣಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳುವುದು ಈ ಪ್ರಸ್ತಾವಗಳ ಉದ್ದೇಶವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.