ADVERTISEMENT

ಎರಡನೇ ಮಗು: ಚೀನಾ ಅನುಮತಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2013, 19:30 IST
Last Updated 28 ಡಿಸೆಂಬರ್ 2013, 19:30 IST

ಬೀಜಿಂಗ್‌ (ಪಿಟಿಐ): ದಂಪತಿ ಒಂದೇ ಮಗುವನ್ನು ಹೊಂದಬೇಕು ಎನ್ನುವ ನಿಲುವಿನಿಂದ ಹಿಂದೆ ಸರಿದಿರುವ ಚೀನಾ, ಅಗತ್ಯ ಸಂದರ್ಭದಲ್ಲಿ ಇನ್ನೊಂದು ಮಗು ಪಡೆಯುವ ಕುಟುಂಬ ಯೋಜನೆಗೆ ಹಸಿರು ನಿಶಾನೆ ತೋರಿದೆ.

ನ್ಯಾಷನಲ್‌ ಪೀಪಲ್ಸ್‌ ಕಾಂಗ್ರೆಸ್‌ (ಎನ್‌ಪಿಸಿ)ನ ಸ್ಥಾಯಿ ಸಮಿತಿಯ ದ್ವೈಮಾಸಿಕ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಪ್ರಾಂತೀಯ ರಾಜ್ಯಗಳು ತಮ್ಮ ವಿವೇಚನೆಗೆ ಅನುಗುಣವಾಗಿ ಈ ನಿರ್ಣಯವನ್ನು ಜಾರಿಗೆ ತರಬಹುದು.

ಸ್ಥಳೀಯ ಜನಸಂಖ್ಯೆಯನ್ನು ಆಧಾರ­ವಾಗಿಟ್ಟುಕೊಂಡು ಸ್ಥಳೀಯ ಸರ್ಕಾರ­ಗಳು ಕುಟುಂಬ ಯೋಜನೆಗೆ ಸಂಬಂಧಿಸಿ­ದಂತೆ ಮಾರ್ಪಾಡು ಮಾಡಬಹು­ದಾಗಿದೆ.
ಚೀನಾದಲ್ಲಿ ದಂಪತಿ ಒಂದೇ ಮಗುವನ್ನು ಹೊಂದಬೇಕು ಎನ್ನುವುದು ಅಲ್ಲಿನ ಸಂವಿಧಾನದ ಆಶಯವಾಗಿದೆ. ಈ ಕಾನೂನನ್ನು ತಿದ್ದುಪಡಿ ಮಾಡ­ಬೇಕಾದರೆ ಎನ್‌ಪಿಸಿಯ ಅನುಮೋದನೆ ಅಗತ್ಯ.

ಎನ್‌ಪಿಸಿಯ ಈ ನಿರ್ಣಯ ಈಗ ದೇಶದಲ್ಲಿ ಕಾನೂನಾಗಿ ಪರಿವರ್ತನೆ ಆಗಲಿದೆ. ೧೯೯೦ರ ದಶಕದಿಂದ ಈಚೆಗೆ ಚೀನಾ­ದಲ್ಲಿ ಜನಸಂಖ್ಯಾ ಹೆಚ್ಚಳ ೧.೫ರಿಂದ ೧.೬ಕ್ಕೆ ಇಳಿಮುಖವಾಗಿದೆ. ಇದು ದೇಶದ ಮಾನವ ಸಂಪನ್ಮೂಲ ಕೊರತೆಗೆ ಕಾರಣವಾಗಲಿದೆ. ಹಾಗಾಗಿ ಕುಟುಂಬ ಯೋಜನೆಯಲ್ಲಿ ಮಾರ್ಪಾಡು ಮಾಡಲು ಎನ್‌ಪಿಸಿ ನಿರ್ಣಯ ಕೈಗೊಂಡಿದೆ.

೨೦೧೨ರಲ್ಲಿ ಮಾನವ ಸಂಪನ್ಮೂಲ ಪ್ರಮಾಣ ೩೪.೫೦ ಲಕ್ಷಕ್ಕೆ ಇಳಿದಿದೆ. ಈ  ಪ್ರಮಾಣ ಹೀಗೆಯೇ ಮುಂದುವರಿದರೆ ೨೦೨೩ರ ಸುಮಾರಿ ವಾರ್ಷಿಕ ೮೦ ಲಕ್ಷ ಮಾನವ ಸಂಪನ್ಮೂಲ ಇಳಿಮುಖ­ವಾಗಲಿದ್ದು, ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ೧೯೭೦ರಲ್ಲಿ ಚೀನಾದಲ್ಲಿ ದಂಪತಿಗೆ ಒಂದೇ ಮಗು  ಕಾನೂನು ಜಾರಿ ಮಾಡಿದ್ದು, ಇದರಿಂದಾಗಿ ೪೦ ಕೋಟಿ ಮಕ್ಕಳ ಜನನವನ್ನು ತಡೆಹಿಡಿದಂತೆ ಆಗಿದೆ ಎಂದು ಚೀನಾ ಸರ್ಕಾರ ಅಂದಾಜು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.