ADVERTISEMENT

ಕೃತಕ ಬುದ್ಧಿಮತ್ತೆಗೆ ಸೋಲು, ಮನುಷ್ಯನಿಗೆ ಗೆಲುವು

ಪಿಟಿಐ
Published 23 ನವೆಂಬರ್ 2017, 19:30 IST
Last Updated 23 ನವೆಂಬರ್ 2017, 19:30 IST
ಕೃತಕ ಬುದ್ಧಿಮತ್ತೆಗೆ ಸೋಲು, ಮನುಷ್ಯನಿಗೆ ಗೆಲುವು
ಕೃತಕ ಬುದ್ಧಿಮತ್ತೆಗೆ ಸೋಲು, ಮನುಷ್ಯನಿಗೆ ಗೆಲುವು   

ವಾಷಿಂಗ್ಟನ್: ಡ್ರೋನ್‌ ಅನ್ನು ಯಾರು ವೇಗವಾಗಿ ಚಲಾಯಿಸಬಹುದು? ಕೃತಕ ಬುದ್ಧಿಮತ್ತೆ ವ್ಯವಸ್ಥೆಯೇ ಅಥವಾ ಮನುಷ್ಯನೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಈಚೆಗೆ ಸ್ಪರ್ಧೆಯೊಂದನ್ನು ಆಯೋಜಿಸಿತ್ತು.

ಇದಕ್ಕಾಗಿ ಭಾರಿ ಅಡೆತಡೆಗಳಿರುವ ಒಳಾಂಗಣವೊಂದನ್ನು ನಾಸಾ ತಂಡ ರೂಪಿಸಿತ್ತು. ಅಲ್ಲದೆ ಪ್ರತಿಗಂಟೆಗೆ ಗರಿಷ್ಠ 129 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯವಿರುವ ಮೂರು ಡ್ರೋನ್‌ಗಳನ್ನು ತಂಡ ಅಭಿವೃದ್ಧಿಪಡಿಸಿತ್ತು.

ಈ ಡ್ರೋನ್‌ಗಳಲ್ಲಿ ಎರಡನ್ನು ಕೃತಕ ಬುದ್ಧಿಮತ್ತೆಗಳು ಚಲಾಯಿಸಿದವು. ಮತ್ತೊಂದನ್ನು ವಿಶ್ವವಿಖ್ಯಾತ ಡ್ರೋನ್ ಪೈಲಟ್ ಕೆನ್‌ ಲೂ ಚಲಾಯಿಸಿದ್ದರು. ಸ್ಪರ್ಧೆಯಲ್ಲಿ ಲೂ ಅವರು ಗೆಲುವು ಸಾಧಿಸಿದರು. ಆದರೆ ಕೃತಕ ಬುದ್ಧಿಮತ್ತೆಗಳು ಡ್ರೋನ್‌ ಅನ್ನು ಸರಾಗವಾಗಿ ಚಲಾಯಿಸಿದವು ಮತ್ತು ಸ್ಥಿರ ವೇಗಕಾಯ್ದುಕೊಂಡವು ಎಂದು ನಾಸಾ ಹೇಳಿದೆ.

ADVERTISEMENT

ಡ್ರೋನ್‌ಗಳು 129 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದರೂ ಅಡೆತಡೆಗಳಿದ್ದ ಕಾರಣ 48–64 ಕಿ.ಮೀ. ವೇಗ ಮುಟ್ಟುತ್ತಿದ್ದಂತೆಯೇ ವೇಗವನ್ನು ಕಡಿಮೆ ಮಾಡಿಕೊಳ್ಳಬೇಕಾಗುತ್ತಿತ್ತು. ಹೀಗೆ ವೇಗವನ್ನು ಕಡಿಮೆ ಮಾಡಿ ಮತ್ತೆ ಹೆಚ್ಚಿಸುವ ಹಂತಗಳಲ್ಲಿ ಲೂ ಅವರು ಹೆಚ್ಚು ಚಾಕಚಕ್ಯತೆ ತೋರುತ್ತಿದ್ದರು. ಅವರು ಚಲಾಯಿಸುತ್ತಿದ್ದ ಡ್ರೋನ್‌ನ ವೇಗ ಕಡಿಮೆಯಾಗುವ ಪ್ರಮಣ ತೀರಾ ಹೆಚ್ಚು ಇರುತ್ತಿತ್ತು. ಅಲ್ಲದೆ ವೇಗವರ್ಧನೆಯೂ ಕ್ಷಿಪ್ರವಾಗಿರುತ್ತಿತ್ತು. ಹೀಗಾಗಿ ಡ್ರೋನ್‌ಗಳು ಜರ್ಕ್ ಹೊಡೆಯುತ್ತಿದ್ದವು. ಲೂ ಪ್ರತಿ ಲ್ಯಾಪ್‌ಗಳನ್ನು ಸರಾಸರಿ 11.1 ಸೆಕೆಂಡ್‌ನಲ್ಲಿ ಮುಗಿಸಿದ್ದರು. ಲೂ ಅವರ ಪ್ರತಿ ಲ್ಯಾಪ್‌ಗಳಲ್ಲಿನ ಬ್ರೇಕಿಂಗ್, ವೇಗವರ್ಧನೆ ಮತ್ತು ತಿರುವು ಪಡೆಯುವ ರೀತಿ ಭಿನ್ನವಾಗಿದ್ದವು.

ಕೃತಕ ಬುದ್ಧಿಮತ್ತೆಗಳು ಡ್ರೋನ್‌ನ ವೇಗವನ್ನು ತೀರಾ ತಗ್ಗಿಸುತ್ತಿರಲಿಲ್ಲ. ವೇಗವರ್ಧನೆಯೂ ಕ್ಷಿಪ್ರವಾಗಿರಲಿಲ್ಲ. ಆದರೆ ಅವು ಚಲಾಯಿಸುತ್ತಿದ್ದ ಡ್ರೋನ್‌ಗಳ ವೇಗ ಸ್ಥಿರವಾಗಿರುತ್ತಿತ್ತು. ಹೀಗಾಗಿ ಡ್ರೋನ್‌ಗಳು ಜರ್ಕ್ ಹೊಡೆಯುತ್ತಿರಲಿಲ್ಲ. ಇವು ಪ್ರತಿ ಲ್ಯಾಪ್‌ಗಳನ್ನು ಸರಾಸರಿ 13.9 ಸೆಕೆಂಡ್‌ನಲ್ಲಿ ಮುಗಿಸಿದ್ದವು.

‘ನಾನು ಈ ಟ್ರ್ಯಾಕ್‌ನ ಪ್ರತಿ ಇಂಚನ್ನು ಅನುಭವಿಸಿ ಚಾಲನೆ ಮಾಡುತ್ತಿದ್ದರೂ ನನಗೆ ಹೆಚ್ಚು ಶ್ರಮವಾಗುತ್ತಿತ್ತು. ಆಯಾಸ ಹೆಚ್ಚಾಗುತ್ತಿದ್ದಂತೆ ಕೆಲವೊಮ್ಮೆ ನಿಯಂತ್ರಣ ತಪ್ಪಿ ಡ್ರೋನ್‌ ಅಡ್ಡಾದಿಡ್ಡಿಯಾಗಿ ಹೋಗುತ್ತಿದೆ ಎಂದು ಭಾಸವಾಗುತ್ತಿತ್ತು' ಎಂದು ಲೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.