ADVERTISEMENT

ಕೇಟ್‌ ಮಿಡ್ಲ್‌‌ಟನ್‌ಗೆ ಹೆಣ್ಣು ಮಗು

ಬ್ರಿಟನ್‌ ರಾಜಮನೆತನದಲ್ಲಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 3 ಮೇ 2015, 13:30 IST
Last Updated 3 ಮೇ 2015, 13:30 IST

ಲಂಡನ್ (ಪಿಟಿಐ): ರಾಜಕುಮಾರ ವಿಲಿಯಮ್ಸ್‌ನ ಪತ್ನಿ ಕೇಟ್ ಮಿಡ್ಲ್‌ಟನ್ ಶನಿವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಕಿಂಗ್ಸ್‌ಟನ್ ಅರಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

ಬ್ರಿಟನ್ ಕಾಲಮಾನ ಬೆಳಿಗ್ಗೆ 8.34ಕ್ಕೆ ಮಗು ಜನಿಸಿದೆ ಎಂದು ಕಿಂಗ್‌ಸ್ಟನ್ ಅರಮನೆಯ ಪ್ರಕಟಣೆ ತಿಳಿಸಿದೆ.

ಹೆರಿಗೆ ಸಂದರ್ಭದಲ್ಲಿ ರಾಜಕುಮಾರ ವಿಲಿಯಮ್ಸ್‌ ಸಹ ಹಾಜರಿದ್ದರು. ಈಗ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯ ವಾಗಿದ್ದಾರೆ. ಹುಟ್ಟಿದಾಗ ಮಗು 3.7 ಕೆ.ಜಿ ತೂಗುತ್ತಿತ್ತು ಎಂದು ಪ್ರಕಟಣೆ ತಿಳಿಸಿದೆ.

ಕೇಟ್ ಮಿಡ್ಲ್‌ಟನ್ ಅವರನ್ನು ಶನಿವಾರ ಇಲ್ಲಿನ ಸೇಂಟ್‌ ಮೇರಿಸ್ ಆಸ್ಪತ್ರೆ‌ಗೆ ದಾಖಲಿಸಲಾಗಿತ್ತು. ಕೇಟ್  ಮೊದಲನೆ ಮಗುವಿಗೂ ಇದೇ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದರು. ಸಂಪ್ರದಾಯದಂತೆ ಹೊಸ ರಾಜಕುಮಾರಿಯ ಜನನದ ವಿಚಾರ ಕುರಿತು ಬಂಕಿಂಗ್‌ಹ್ಯಾಮ್ ಅರಮನೆಯಿಂದ ಶೀಘ್ರವೇ ಪತ್ರಿಕಾ ಹೇಳಿಕೆ ಹೊರಡಲಿದೆ ಎಂದು ಮೂಲಗಳು ತಿಳಿಸಿವೆ.

ರಾಜಕುಮಾರಿಯ ಆಗಮನ, ಮೇ 7ರ ಚುನಾವಣೆಯಲ್ಲಿ ತಮಗೆ ನೆರವಾಗಲಿದೆ ಎಂದು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮೆರಾನ್ ಆಶಿಸಿದ್ದಾರೆ. ರಾಜಮನೆತನದಲ್ಲಿ ಹೊಸ ಮಗುವಿನ ಜನನ ಆಡಳಿತ ಪಕ್ಷಕ್ಕೆ ಶುಭ ತರಲಿದೆ ಎಂದು ನಿರೀಕ್ಷಿಸಲಾಗಿದೆ. 

ರಾಜಮನೆತನಕ್ಕೆ ಹೊಸ ಮಗುವಿನ ಆಗಮನದ ಬಗ್ಗೆ ಬ್ರಿಟನ್‌ನಲ್ಲಿ ಭಾರಿ ಬೆಟ್ಟಿಂಗ್ ನಡೆದಿತ್ತು. ಕೇಟ್ ಮಿಡಲ್‌ಟನ್‌ ಈ ಬಾರಿ ಹೆಣ್ಣು ಮಗುವಿಗೇ ಜನ್ಮ ನೀಡಲಿದ್ದಾರೆ ಎಂದೇ ಸಾಕಷ್ಟು ಮಂದಿ ಬೆಟ್ಟಿಂಗ್ ಕಟ್ಟಿದ್ದರು.

‘ಡಯಾನ’ ಹೆಸರಿಗೆ ಜನರ ಒಲವು: ಚಾರ್ಲ್ಸ್–  ಕೇಟ್ ಮಗುವಿಗೆ ‘ಡಯಾನ’ ಹೆಸರು ಹೆಚ್ಚು ಸೂಕ್ತ ಎಂದು ಜನಾಭಿಪ್ರಾಯ ವ್ಯಕ್ತವಾಗಿದೆ.

ತದನಂತದ ಸ್ಥಾನ ಅಲೈಸ್ ಮತ್ತು ಚಾರ್ಲೊಟ್ ಹೆಸರಿಗೆ ದೊರೆತಿವೆ. ಆದರೆ ಈ ಬಗ್ಗೆ ಬ್ರಿಟನ್ ಅರಮನೆ ಯಾವುದೇ ಮಾಹಿತಿ ನೀಡಿಲ್ಲ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.