ADVERTISEMENT

ಕೈಲಾಸ್‌ ಸತ್ಯಾರ್ಥಿ, ಮಲಾಲಗೆ ನೊಬೆಲ್‌ ಶಾಂತಿ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2014, 11:26 IST
Last Updated 10 ಅಕ್ಟೋಬರ್ 2014, 11:26 IST

ಓಸ್ಲೊ (ಪಿಟಿಐ): ಭಾರತದ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಸ್‌ ಸತ್ಯಾರ್ಥಿ ಮತ್ತು ಪಾಕಿಸ್ತಾನದ ಹೆಣ್ಣು ಮಕ್ಕಳ ಶಿಕ್ಷಣ ಹಕ್ಕುಗಳ ಯುವ ಹೋರಾಟಗಾರ್ತಿ ಮಲಾಲ ಯೂಸೂಫ್‌ಝೈ ಅವರಿಗೆ ಈ ಬಾರಿಯ ನೊಬೆಲ್‌ ಶಾಂತಿ ಪುರಸ್ಕಾರ ಲಭಿಸಿದೆ.

ಹದಿನೇಳು ವರ್ಷದ ಮಲಾಲ ನೊಬೆಲ್‌ ಶಾಂತಿ ಪುರಸ್ಕಾರ ಪಡೆಯುತ್ತಿರುವ ಅತ್ಯಂತ ಕಿರಿಯ ಸಾಧಕಿಯಾಗಿದ್ದಾರೆ. ಕೈಲಾಸ್‌ ಸತ್ಯಾರ್ಥಿ ಅವರು ‘ಬಚಪನ್‌ ಬಜಾವೊ’ ಆಂದೋಲನದ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ತೊಡಗಿದ್ದಾರೆ.

‘ಮಕ್ಕಳ ಹಕ್ಕುಗಳು ಹಾಗೂ ಶಿಕ್ಷಣದ ಬಗ್ಗೆ ಯುವ ಜನರಲ್ಲಿ ಜಾಗೃತಿ ಮೂಡಿಸಿದ ಚಳವಳಿಗಾಗಿ ಕೈಲಾಸ್‌ ಮತ್ತು ಮಲಾಲ ಅವರಿಗೆ ಪುರಸ್ಕಾರ ನೀಡಲಾಗುತ್ತಿದೆ’ ಎಂದು ಆಯ್ಕೆ ಸಮಿತಿ ಅಭಿಪ್ರಾಯಪಟ್ಟಿದೆ.

ADVERTISEMENT

‘ಗಾಂಧೀವಾದಿಯಾಗಿರುವ ಕೈಲಾಸ್‌ ಸತ್ಯಾರ್ಥಿ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಮಕ್ಕಳ ಕಳ್ಳಸಾಗಣೆ ತಡೆಗೆ ಆಂದೋಲನ ರೂಪಿಸಿದ್ದಾರೆ. ಮಕ್ಕಳ ಹಕ್ಕುಗಳ ಉಲ್ಲಂಘನೆಯಾದ ಸಂದರ್ಭದಲ್ಲೆಲ್ಲಾ ಅವರು ನಿರಂತರ ಹೋರಾಟ ಮಾಡುತ್ತಾ ಬಂದಿದ್ದಾರೆ’ ಎಂದು ಸಮಿತಿ ಹೇಳಿದೆ.

‘ಮಲಾಲ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ದನಿಯಾಗಿದ್ದಾರೆ. ಹಿಂದುಳಿದ ರಾಷ್ಟ್ರಗಳ ಹೆಣ್ಣು ಮಕ್ಕಳ ಶೈಕ್ಷಣಿಕ ಹಕ್ಕುಗಳಿಗಾಗಿ ಹೋರಾಡುತ್ತಿರುವ ಮಲಾಲ ಅವರ ಕಾರ್ಯ ಪರಿಣಾಮಕಾರಿಯಾಗಿದೆ. ಅವರ ಚಳವಳಿಯಿಂದ ಹಲವು ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರೆಯುವಂತಾಗಿದೆ’ ಎಂದು ಸಮಿತಿ ತಿಳಿಸಿದೆ.

‘ಕೈಲಾಸ್‌ ಮತ್ತು ಮಲಾಲ ಅವರನ್ನು ಶಾಂತಿ ಪುರಸ್ಕಾರಕ್ಕೆ ಜಂಟಿಯಾಗಿ ಆಯ್ಕೆ ಮಾಡಿರುವುದು ಒಬ್ಬ ಹಿಂದೂ– ಒಬ್ಬ ಮುಸ್ಲಿಂ ಹಾಗೂ ಒಬ್ಬ ಭಾರತೀಯ– ಒಬ್ಬ ಪಾಕಿಸ್ತಾನಿ ಒಂದೇ ವಿಷಯದ ಬಗ್ಗೆ ಹೋರಾಟ ನಡೆಸುತ್ತಿರುವುದನ್ನು ಗುರುತಿಸಿದಂತಾಗಿದೆ’ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

‘ಈ ಪುರಸ್ಕಾರ ಮಕ್ಕಳ ಹಕ್ಕುಗಳ ಹೋರಾಟಕ್ಕೆ ಸಂದಿರುವ ಗೌರವ’ ಎಂದು ಕೈಲಾಸ್‌ ಸತ್ಯಾರ್ಥಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.