ADVERTISEMENT

ಕ್ಯಾಮೆರಾನ್‌ಗೆ ಅಗ್ನಿಪರೀಕ್ಷೆ

ಬ್ರಿಟನ್‌ ಸಂಸತ್ತಿಗೆ ಇಂದು ಚುನಾವಣೆ

​ಪ್ರಜಾವಾಣಿ ವಾರ್ತೆ
Published 6 ಮೇ 2015, 19:30 IST
Last Updated 6 ಮೇ 2015, 19:30 IST

ಲಂಡನ್‌ (ಪಿಟಿಐ): ಬ್ರಿಟನ್‌ ಸಂಸತ್ತಿಗೆ ಗುರುವಾರ ನಡೆಯುವ ಸಾರ್ವತ್ರಿಕ ಚುನಾವಣೆ ಭಾರಿ ಕುತೂಹಲ ಕೆರಳಿಸಿದೆ. ಮತದಾರರ ಮನವೊಲಿಸಲು ರಾಜಕೀಯ ಪಕ್ಷಗಳ ಮುಖಂಡರು ಮತ್ತು ಕಣದಲ್ಲಿರುವ ಅಭ್ಯರ್ಥಿಗಳು ಕೊನೇ ಕ್ಷಣದ ಕಸರತ್ತು ನಡೆಸಿದ್ದಾರೆ.

ಬ್ರಿಟನ್‌ ಕಾಲಮಾನದ ಪ್ರಕಾರ ಗುರುವಾರ ಬೆಳಿಗ್ಗೆ 7 ರಿಂದ ರಾತ್ರಿ 10 ಗಂಟೆವರೆಗೆ (ಭಾರತೀಯ ಕಾಲಮಾನ ಗುರುವಾರ ಬೆಳಿಗ್ಗೆ 11.30ರಿಂದ ಶುಕ್ರವಾರ ನಸುಕಿನ 2.30) ಮತದಾನ ನಡೆಯಲಿದೆ. ಇದಾದ ತಕ್ಷಣವೇ ಮತಗಳ ಎಣಿಕೆ ಕಾರ್ಯ ಆರಂಭವಾಗಲಿದೆ.

ಬ್ರಿಟನ್‌ ಸಂಸತ್ತು ಒಟ್ಟು 650 ಸದಸ್ಯ ಬಲವನ್ನು ಹೊಂದಿದ್ದು, ಬಹುಮತಕ್ಕೆ 326 ಸ್ಥಾನಗಳು ಬೇಕು. ಸಮೀಕ್ಷೆಗಳ ಪ್ರಕಾರ ಪ್ರಧಾನಿ ಡೇವಿಡ್ ಕ್ಯಾಮೆರಾನ್ ಪ್ರತಿನಿಧಿಸುವ ಕನ್ಸರ್ವೇಟಿವ್ ಪಕ್ಷ  ಕೂದಲೆಳೆಯ ಅಂತರದಲ್ಲಿ ಮೇಲುಗೈ ಸಾಧಿಸುವ  ಸೂಚನೆಗಳಿವೆ.

ಆದರೆ, ಇನ್ನೂ ಕೆಲವು ರಾಜಕೀಯ ವಿಶ್ಲೇಷಕರ ಪ್ರಕಾರ ‘ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬರುವುದಿಲ್ಲ.  2010ರ ಹಾಗೆ ಈ ಬಾರಿಯೂ ಅತಂತ್ರ ಸಂಸತ್ತು  ಅಸ್ತಿತ್ವಕ್ಕೆ ಬರಲಿದೆ’. ಇನ್ಫೋಸಿಸ್‌ ಸಹ ಸಂಸ್ಥಾಪಕ ಎನ್‌.ಆರ್‌.ನಾರಾಯಣ ಮೂರ್ತಿ ಅಳಿಯ  ರಿಷಿ ಸುನಾಕ್‌ ಅವರು ರಿಚ್ಮಂಡ್‌ ಕ್ಷೇತ್ರದಿಂದ ಮೊದಲ ಬಾರಿಗೆ ಕಣಕ್ಕೆ ಇಳಿದಿದ್ದು, ಇತಿಹಾಸ ಸೃಷ್ಟಿಸುವ ನಿರೀಕ್ಷೆಯಲ್ಲಿದ್ದಾರೆ.

ಮತಗಳಿಕೆ ಪ್ರಮಾಣ:  ಮತದಾನ ಆರಂಭವಾಗುವ ಕೆಲವೇ ಗಂಟೆಗಳ ಮುನ್ನ ನಡೆದ ಮತಗಟ್ಟೆ ಸಮೀಕ್ಷೆ ಪ್ರಕಾರ ಕನ್ಸರ್ವೇಟಿವ್‌ ಪಕ್ಷ ಶೇ 34ರಷ್ಟು ಮತಗಳನ್ನು ಗಳಿಸಲಿದೆ.

ವಿರೋಧ ಪಕ್ಷದ ಸ್ಥಾನದಲ್ಲಿರುವ ಎಡ್ವರ್ಡ್‌ ಮಿಲಿಬ್ಯಾಂಡ್ ನೇತೃತ್ವದ ಲೇಬರ್‌ ಪಕ್ಷ ಶೇ 33ರಷ್ಟು ಮತಗಳನ್ನು ಗಳಿಸಲಿದೆ. 2010ರ ಸಾರ್ವತ್ರಿಕ ಚುನಾವಣೆ ನಂತರ ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದ ನಿಕ್ ಕ್ಲೆಗ್ ನೇತೃತ್ವದ ಲಿಬರಲ್‌ ಡೆಮಾಕ್ರಟಿಕ್‌ ಪಕ್ಷ  ಜನಪ್ರಿಯತೆಯನ್ನು ಕಳೆದುಕೊಂಡಿದ್ದು, ನಾಲ್ಕನೇ ಸ್ಥಾನದಲ್ಲಿದೆ. 81 ಬಾರಿ ಚುನಾವಣಾ ಸಮೀಕ್ಷೆ ನಡೆದಿದ್ದು, ಕನ್ಸರ್ವೇಟಿವ್‌ ಪಕ್ಷ ಮುನ್ನೆಡೆ ಸಾಧಿಸಿದೆ ಎಂದು ವರದಿಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.