ADVERTISEMENT

ಚೀನಾದಲ್ಲಿ ಇಂಗ್ಲಿಷ್‌ ಪ್ರಾಬಲ್ಯ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2014, 10:47 IST
Last Updated 24 ನವೆಂಬರ್ 2014, 10:47 IST

ಬೀಜಿಂಗ್‌ (ಪಿಟಿಐ): ಚೀನಾದ ಹೊಸ ತಲೆಮಾರು ಇಂಗ್ಲಿಷ್‌ ಭಾಷೆಯ ಮೇಲೆ ಹಿಡಿತ ಸಾಧಿಸುತ್ತಿದ್ದು, ದೇಶದಲ್ಲಿ ಇಂಗ್ಲಿಷ್‌ ಪ್ರಾಬಲ್ಯ ಹೆಚ್ಚಾಗುತ್ತಿದೆ ಎಂದು ಇತ್ತೀಚೆಗೆ ನಡೆದ ಸಮೀಕ್ಷೆಯೊಂದು ಹೇಳಿದೆ.

ಸ್ವಿಡ್ಜರ್ಲೆಂಡ್‌ ಮೂಲದ ಇಂಗ್ಲಿಷ್‌ ತರಬೇತಿ ಸಂಸ್ಥೆ ‘ಎಜುಕೇಷನ್‌ ಫಸ್ಟ್‌’ ಮತ್ತು ಚೀನಾದ ಮಾನವ ಸಂಪನ್ಮೂಲ ಸೇವಾ ಸಂಸ್ಥೆ ಜಂಟಿಯಾಗಿ ಈ ಸಮೀಕ್ಷೆ ನಡೆಸಿದ್ದು, ಚೀನಾದ ಹೊಸ ತಲೆಮಾರು ವೃತ್ತಿ ನೈಪುಣ್ಯದ ಕಾರಣದಿಂದ ಇಂಗ್ಲಿಷ್‌ ಭಾಷೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದೆ ಎಂದು ತಿಳಿಸಿದೆ.

ಸಮೀಕ್ಷೆ ನಡೆಸಿದ 300 ಜನರಲ್ಲಿ ಅರ್ಧದಷ್ಟು ಮಂದಿ, ಇಂಗ್ಲಿಷ್‌ ಭಾಷೆಯಿಂದ ವೃತ್ತಿಯಲ್ಲಿ ಮೇಲೆರಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ದೇಶದಲ್ಲಿ ಇಂಗ್ಲಿಷ್‌ ಪದವಿ ಪಡೆಯುವವರ ಸಂಖ್ಯೆ  ಶೇ 55ರಷ್ಟು ಹೆಚ್ಚಾಗಿದೆ ಎಂದು ಚೀನಾ ಡೈಲಿ ಪತ್ರಿಕೆ ವರದಿ ಮಾಡಿದೆ.

ADVERTISEMENT

ಇಂಗ್ಲಿಷ್‌ ಭಾಷಾ ಕೌಶಲ ಇಲ್ಲದವರು ವೃತ್ತಿಯಲ್ಲಿ ಮೇಲೇರುವುದು ಕಷ್ಟಕರವಾಗಿದೆ. ಅದರಲ್ಲೂ 1970ರ ನಂತರ ಜನಿಸಿದ ಪೀಳಿಗೆ ಇಂಗ್ಲಿಷ್‌ ಹೊರತಾಗಿ ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸುವುದು ಕಷ್ಟಸಾಧ್ಯ ಎಂದು ಸಮೀಕ್ಷೆ ಹೇಳಿದೆ.

ಚೀನಾ ಚೈನೀಸ್‌ ಭಾಷಾ ಪ್ರಧಾನ್ಯವಾದ ರಾಷ್ಟ್ರ. ಆದರೆ, ಕಳೆದ ಮೂರು ದಶಕಗಳಿಂದ ಆಗಿರುವ ನೀತಿ ನಿರೂಪಣೆಯ ಬದಲಾವಣೆಗಳಿಂದಾಗಿ ಇಂಗ್ಲಿಷ್‌ ಭಾಷೆ ಚೀನಾದಲ್ಲಿ ಮೇಲುಗೈ ಸಾಧಿಸುತ್ತಿದೆ ಎಂಬುದು ತಜ್ಞರ ಅಭಿಮತ.

ಚೀನಾ ಸಮಕಾಲೀನ ಪ್ರಪಂಚಕ್ಕೆ ಹೆಚ್ಚು ತೆರೆದುಕೊಳ್ಳುತ್ತಿದ್ದು ಇಂಗ್ಲಿಷ್‌ ಭಾಷೆಯು ಅನಿವಾರ್ಯವಾಗಿದೆ. ಹೀಗಾಗಿ ಚೀನಾದ ಹೆಚ್ಚಿನ ಶಾಲಾ ಕಾಲೇಜುಗಳು ಇಂಗ್ಲಿಷ್‌ ಭಾಷೆ ಕಲಿಸುವ ಕೋರ್ಸ್‌ ನಡೆಸುತ್ತಿವೆ.

ಚೀನಾದಲ್ಲಿ ಚೈನೀಸ್‌ ಹಾಗೂ ಇಂಗ್ಲಿಷ್‌ ಭಾಷಾ ಕೌಶಲ ಉಳ್ಳವರಿಗೆ ಆರ್ಥಿಕ ಸೇವಾ ವಲಯದಲ್ಲಿ ಹೆಚ್ಚಿನ ಬೇಡಿಕೆ ಇದೆ. ಅಂಥವರಿಗೆ ಹೆಚ್ಚು ವೇತನ ನೀಡಲು ಸಂಸ್ಥೆಗಳು ತಯಾರಿವೆ ಎಂದು 2014ರ ಚೀನಾ ವೇತನ ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.