ADVERTISEMENT

‘ಟ್ರಂಪ್‌ ಬದಲಾಗಿದ್ದಾರೆ’; ಒಬಾಮ

ಪಿಟಿಐ
Published 16 ಜನವರಿ 2017, 19:30 IST
Last Updated 16 ಜನವರಿ 2017, 19:30 IST
‘ಟ್ರಂಪ್‌ ಬದಲಾಗಿದ್ದಾರೆ’; ಒಬಾಮ
‘ಟ್ರಂಪ್‌ ಬದಲಾಗಿದ್ದಾರೆ’; ಒಬಾಮ   

ವಾಷಿಂಗ್ಟನ್‌ : ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌  ಅವರು ಬದಲಾಗಿದ್ದು ಅವರ ಸಾಮರ್ಥ್ಯವನ್ನು ಕಡೆಗಣಿಸಬಾರದು ಎಂದು ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಹೇಳಿದ್ದಾರೆ.

ಟ್ರಂಪ್‌ ಅವರಲ್ಲಿ ಬಂದಿರುವ ಬದಲಾವಣೆ ‘ಅಸಹಜ’ವಾದುದು ಎಂದೂ ಅವರು ಹೇಳಿದ್ದಾರೆ.  ಅಮೆರಿಕದ ಅಧ್ಯಕ್ಷರಾಗಿ ಸಿಬಿಎಸ್‌ ಸುದ್ದಿವಾಹಿನಿಗೆ ನೀಡಿದ ಕೊನೆಯ ಸಂದರ್ಶನದಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ.

ಚುನಾವಣಾ ಪ್ರಚಾರ ಕುರಿತು ಮಾತನಾಡಿದ ಒಬಾಮ, ಸಾಕಷ್ಟು ಸಮಸ್ಯೆಗಳನ್ನು ಸ್ಪಷ್ಟವಾಗಿ ಗುರುತಿಸಲು ಟ್ರಂಪ್‌ ಅವರಿಗೆ ಸಾಧ್ಯವಾಗಿತ್ತು ಎಂದಿದ್ದಾರೆ. ‘ಅಧ್ಯಕ್ಷೀಯ ಚುನಾವಣೆ ಪ್ರಚಾರ ಕಾರ್ಯ ನಡೆಸುವ ಕೆಲವು ಸಾಂಪ್ರದಾಯಿಕ ನಿಯಮಗಳನ್ನು ಮುರಿದಿರುವ ತಮ್ಮ ಬೆಂಬಲಿಗರೊಂದಿಗೆ ಉತ್ತಮ ಸಂಪರ್ಕ ಸಾಧಿಸುವ ಅಥವಾ ಅಭ್ಯರ್ಥಿಯಾಗಿ ತಮ್ಮನ್ನು ಹೇಗೆ ಬಿಂಬಿಸಿಕೊಳ್ಳಬೇಕು ಎನ್ನುವ ಪ್ರತಿಭೆ ಅವರಿಗಿದೆ’ ಎಂದು ಟ್ರಂಪ್‌್ ಕುರಿತು ಒಬಾಮ ಹೇಳಿದ್ದಾರೆ.

ವಾಷಿಂಗ್ಟನ್‌ ಅನ್ನು ಬದಲಿಸುವ ಶಕ್ತಿ ಟ್ರಂಪ್‌ ಅವರಿಗೆ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಒಬಾಮ, ‘ಅಮೆರಿಕದ ಜನತೆ ಮಾತ್ರ ವಾಷಿಂಗ್ಟನ್‌ಅನ್ನು  ಬದಲಿಸಬಲ್ಲರು ಎಂಬುದು ನನ್ನ ಭಾವನೆ’ ಎಂದರು.

‘ಅಖಂಡ ಚೀನಾ ನೀತಿ ರಾಜಿ ಅಸಾಧ್ಯ’
ಬೀಜಿಂಗ್‌ (ಎಪಿ):
ತೈವಾನ್‌ಗೆ ಸಂಬಂಧಿಸಿದಂತೆ ಅಖಂಡ ಚೀನಾ ನೀತಿ ರಾಜಿ ಮಾಡಿಕೊಳ್ಳುವಂತದ್ದಲ್ಲ.  ಒಂದು ವೇಳೆ ರಾಜಿ ಮಾಡಿಕೊಳ್ಳಲು ಯತ್ನಿಸಿದಲ್ಲಿ ಅದು  ‘ಬಂಡೆಗಲ್ಲು ಎತ್ತಲು ಹೋಗಿ ಕಾಲು ಪೆಟ್ಟು ಮಾಡಿಕೊಂಡಂತೆ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್‌ ಹೇಳಿದ್ದಾರೆ.

‘ಜಗತ್ತಿನಲ್ಲಿ ಎಲ್ಲವನ್ನೂ ಚೌಕಾಸಿ ಅಥವಾ ವ್ಯಾಪಾರ ಮಾಡಲಾಗು ವುದಿಲ್ಲ’ ಎಂದು ಅವರು ಹೇಳಿದ್ದಾರೆ. ಅಖಂಡ ಚೀನಾ ನೀತಿ ಪ್ರಶ್ನಿಸುವ ರೀತಿಯಲ್ಲಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪುನಃ ನೀಡಿರುವ ಹೇಳಿಕೆಗೆ ಚೀನಾ ಈ ಪ್ರತಿಕ್ರಿಯೆ ನೀಡಿದೆ.

ಅಖಂಡ ಚೀನಾ ನೀತಿಯಲ್ಲಿ  ರಾಜಿ  ಮಾಡಿಕೊಳ್ಳಬಹುದು ಎನ್ನುವಂತೆ ಟ್ರಂಪ್‌ ಅವರು ದಿ ವಾಲ್‌ ಸ್ಟ್ರೀಟ್‌ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು.  ಅವರ ಈ ಹೇಳಿಕೆಯಿಂದ  ತೈವಾನ್‌ಗೆ ಸಂಬಂಧಿಸಿದಂತೆ ಅಮೆರಿಕ–ಚೀನಾದ ಬಾಂಧವ್ಯಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT