ADVERTISEMENT

ಟ್ವಿಟರ್‌ನಲ್ಲಿ ಬಾಬ್ಬಿ ಗೇಲಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2015, 19:30 IST
Last Updated 2 ಜುಲೈ 2015, 19:30 IST

ವಾಷಿಂಗ್ಟನ್‌ (ಪಿಟಿಐ): ಅಮೆರಿಕ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಭಾರತ ಮೂಲದ ಬಾಬ್ಬಿ ಜಿಂದಾಲ್‌ ಟ್ವಿಟರ್‌ನಲ್ಲಿ ಪ್ರಶ್ನೆಗಳನ್ನು ಆಹ್ವಾನಿಸಿ ಗೇಲಿಗೊಳಗಾಗಿದ್ದಾರೆ. ಅವರಿಗೆ ನೂರಾರು ಟ್ವೀಟ್‌ಗಳು ಬಂದಿದ್ದು, ಇರುಸುಮುರುಸು ಪ್ರಶ್ನೆಗಳನ್ನು ಜನ ಕೇಳಿದ್ದಾರೆ. ಕೆಲವರು ಹಾಸ್ಯ ಮಾಡಿದ್ದಾರೆ.

‘ಆಸ್ಕ್‌ ಬಾಬ್ಬಿ ಜಿಂದಾಲ್‌’ ಎಂಬ ಶೀರ್ಷಿಕೆಯಲ್ಲಿ ಅವರು ಪ್ರಶ್ನೆಗಳನ್ನು ಆಹ್ವಾನಿಸಿದ್ದರು.  ಜಿಂದಾಲ್‌ ಅವರ ರಾಜಕೀಯ ಕ್ರಿಯಾ ಸಮಿತಿ (ಪಿಎಸಿ) ಪ್ರಶ್ನೆಗ ಳನ್ನು ಆಹ್ವಾನಿಸುವಂತೆ ಸಲಹೆ ನೀಡಿತ್ತು.  ಮಂಗಳವಾರ ಟ್ವಿಟರ್‌ನಲ್ಲಿ ಅತಿ ಹೆಚ್ಚು ಚರ್ಚೆಗೊಳಗಾದ 10 ಪ್ರಮುಖ  ವಿಷಯ ಗಳಲ್ಲಿ ಬಾಬ್ಬಿ ಅವರನ್ನು ಕೇಳಲಾದ ಪ್ರಶ್ನೆಗಳೂ ಸೇರಿದ್ದವು. 

ಪ್ರಶ್ನೆಗಳಲ್ಲಿ ಸಲಿಂಗ ವಿವಾಹ ಕುರಿತ ಬಾಬ್ಬಿ ಅವರ ನಿಲುವನ್ನು ಅಣಕ ಮಾಡಲಾಗಿದೆ. ‘ಜೀವಶಾಸ್ತ್ರದ ಪದವಿ ಪಡೆದಿದ್ದರೂ ನೀವು ವಿಜ್ಞಾನ ವಿರೋಧಿಯಾಗಿರುವುದು ಏಕೆ?’ ಎಂದು ಒಬ್ಬರು ಟ್ವೀಟ್‌ ಮಾಡಿದ್ದಾರೆ. ‘ನಾನು ಸಲಿಂಗಿ, ನಾಸ್ತಿಕ ಮತ್ತು ವಲಸಿಗ. ನನ್ನನ್ನು ಹೇಗೆ ಶಿಕ್ಷಿಸಬೇಕು ಎಂಬ ಯೋಜನೆ ಹೇಗೆ ರೂಪಿಸುತ್ತೀರಿ’ ಎಂದು ವ್ಯಕ್ತಿಯೊಬ್ಬರು ಪ್ರಶ್ನಿಸಿದ್ದಾರೆ.

ಈ ಹಿಂದೆ ಬಾಬ್ಬಿ ‘ಭಾರತ ಮೂಲದ ವ್ಯಕ್ತಿ ಎಂದು ಕರೆಸಿಕೊಳ್ಳುವುದು  ಇಷ್ಟವಿಲ್ಲ’ ಎಂದು ಹೇಳಿದ್ದು ವಿವಾದ ಸೃಷ್ಟಿಸಿತ್ತು. ಆಗಲೂ ಸಾಮಾಜಿಕ ಜಾಲತಾಣದಲ್ಲಿ ಅವರು  ಗೇಲಿಗೆ ಒಳಗಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.