ADVERTISEMENT

ತಲೆವಸ್ತ್ರ ಧರಿಸದೇ ಸೌದಿಗೆ ಬಂದ ಮೆಲನಿಯಾ ಟ್ರಂಪ್‌

ಸಂಕ್ಷಿಪ್ತ ಸುದ್ದಿ

ಪಿಟಿಐ
Published 20 ಮೇ 2017, 19:30 IST
Last Updated 20 ಮೇ 2017, 19:30 IST
ತಲೆವಸ್ತ್ರ ಧರಿಸದೇ ಸೌದಿಗೆ ಬಂದ ಮೆಲನಿಯಾ ಟ್ರಂಪ್‌
ತಲೆವಸ್ತ್ರ ಧರಿಸದೇ ಸೌದಿಗೆ ಬಂದ ಮೆಲನಿಯಾ ಟ್ರಂಪ್‌   

ರಿಯಾದ್‌: ತಲೆಗೆ ವಸ್ತ್ರ ಧರಿಸದೇ, ಸೌದಿ ಅರೇಬಿಯಾ ಬಂದಿಳಿದಿರುವ ಅಮೆರಿಕದ ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್‌ ನಿರ್ಧಾರವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ.

ವಿದೇಶಿ ಮಹಿಳೆಯರಿಗೆ ಸೌದಿ ಅರೇಬಿಯಾ ಸರ್ಕಾರವು ವಿಧಿಸಿರುವ ನಿಯಮವನ್ನು ಉಲ್ಲಂಘಿಸುವ ಮೂಲಕ  ಮೆಲನಿಯಾ ತನ್ನ ನಿಲುವಿಗೆ ಅಂಟಿಕೊಂಡಿದ್ದಾರೆ.

ಈ ವರ್ಷ ಸೌದಿಗೆ ಭೇಟಿ ನೀಡಿದ್ದ ಜರ್ಮನಿ ಚಾನ್ಸೆಲರ್‌ ಏಂಜೆಲಾ ಮರ್ಕೆಲ್‌ ಹಾಗೂ ಬ್ರಿಟನ್‌ ಪ್ರಧಾನಿ ತೆರೆಸಾ ಮೇ ಕೂಡ ತಲೆವಸ್ತ್ರ ಧರಿಸಿರಲಿಲ್ಲ.
2015ರ ಜನವರಿಯಲ್ಲಿ ಅಧ್ಯಕ್ಷ ಬರಾಕ್‌ ಒಬಾಮ ಜತೆಗೆ ಸೌದಿಗೆ ಭೇಟಿ ನೀಡಿದ್ದ ಮಿಶೆಲ್‌ ಒಬಾಮ ಕೂಡ ತಲೆವಸ್ತ್ರ ಧರಿಸಿರಲಿಲ್ಲ.

ಈ ನಿಲುವನ್ನು ಆಗ  ಡೊನಾಲ್ಡ್‌ ಟ್ರಂಪ್‌ ತೀವ್ರವಾಗಿ ಟೀಕಿಸಿದ್ದರು. ಆದರೆ ಡೊನಾಲ್ಡ್‌ ಟ್ರಂಪ್‌ ಅವರ ಚೊಚ್ಚಲ ವಿದೇಶ ಪ್ರವಾಸದಲ್ಲೇ, ಅವರ ಪತ್ನಿಯೇ ನಿಯಮ ಉಲ್ಲಂಘಿಸಿ ಗಮನ ಸೆಳೆದಿದ್ದಾರೆ.

ಕಾನ್  ಚಿತ್ರೋತ್ಸವದಲ್ಲಿ ‘ಸಂಗಾಮಿತ್ರಾ’ ಫಸ್ಟ್‌ಲುಕ್‌ ಬಿಡುಗಡೆ
ಕಾನ್‌ (ಪಿಟಿಐ):
ಫ್ರಾನ್ಸ್‌ ಸಿನಿಮಾ ಉತ್ಸವದಲ್ಲಿ ತಮಿಳು ಸಿನಿಮಾ ಗಮನಸೆಳೆಯುವುದು ಕಡಿಮೆ. ವಿಶೇಷವೆಂದರೆ, ತಮಿಳಿನ ಬಹುನಿರೀಕ್ಷಿತ  ₹ 250 ಕೋಟಿ  ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ‘ಸಂಗಾಮಿತ್ರಾ’ ಸಿನಿಮಾದ ಫಸ್ಟ್‌ಲುಕ್‌ ಕಾನ್‌ ಚಿತ್ರೋತ್ಸವದಲ್ಲಿ ಬಿಡುಗಡೆಗೊಂಡಿತು.

ಈ ಸಿನಿಮಾವನ್ನು ಸುಂದರ್‌.ಸಿ. ನಿರ್ದೇಶನ ಮಾಡುತ್ತಿದ್ದು, ಜಯರಾಮ್‌ ರವಿ, ಆರ್ಯ ಹಾಗೂ ಶ್ರುತಿ ಹಾಸನ್‌ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದು, ಎ.ಆರ್‌.ರೆಹಮಾನ್‌ ಸಂಗೀತ ನೀಡಲಿದ್ದಾರೆ.

ತಮಿಳು ಇತಿಹಾಸದ ಎಂಟನೇ ಶತಮಾನದ ಕಥೆಯನ್ನು ಸಿನಿಮಾ ಒಳಗೊಳ್ಳಲಿದ್ದು, ಎರಡು ಭಾಗಗಳಲ್ಲಿ ಸಿನಿಮಾ ನಿರ್ಮಾಣಗೊಳ್ಳಲಿದೆ. ಇದರ ಮೊದಲ ಭಾಗವು 2018ರಲ್ಲಿ ಬಿಡುಗಡೆಯಾಗಲಿದೆ.

ಷರೀಫ್‌ಗೆ ಏಳು ದಿನ ಗಡುವು
ಲಾಹೋರ್ (ಪಿಟಿಐ):
ಪನಾಮ ಹಗರಣ ಸಂಬಂಧ ಏಳು ದಿನಗಳೊಳಗೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವಂತೆ ನವಾಜ್ ಷರೀಫ್ ಅವರಿಗೆ ಪಾಕ್ ಸುಪ್ರೀಂಕೋರ್ಟ್ ವಕೀಲರ ಸಂಘ ಹಾಗೂ ಲಾಹೋರ್ ಹೈಕೋರ್ಟ್ ವಕೀಲರ ಸಂಘಗಳು ಗಡುವು ನೀಡಿವೆ. ಇಲ್ಲವಾದರೆ ದೇಶದಾದ್ಯಂತ ಚಳವಳಿ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.