ADVERTISEMENT

ದೆಹಲಿಗೆ ಗುರಿಯಿಡಲು ಪಾಕ್‌ಗೆ 5 ನಿಮಿಷ ಸಾಕು: ಎ.ಕ್ಯೂ.ಖಾನ್

​ಪ್ರಜಾವಾಣಿ ವಾರ್ತೆ
Published 29 ಮೇ 2016, 23:12 IST
Last Updated 29 ಮೇ 2016, 23:12 IST
ಅಬ್ದುಲ್‌ ಖಾದಿರ್‌
ಅಬ್ದುಲ್‌ ಖಾದಿರ್‌   

ಇಸ್ಲಾಮಾಬಾದ್‌ (ಪಿಟಿಐ): ‘ಅಣ್ವಸ್ತ್ರ ಹೊಂದಿರುವ ಪಾಕಿಸ್ತಾನಕ್ಕೆ ಭಾರತದ ರಾಜಧಾನಿ ದೆಹಲಿಗೆ ಗುರಿಯಿಡುವುದು ಕೇವಲ ಐದು ನಿಮಿಷದ ಕೆಲಸ’ ಎಂದು ಪಾಕಿಸ್ತಾನ ಅಣು ಯೋಜನೆ ಪಿತಾಮಹ ಡಾ. ಅಬ್ದುಲ್‌ ಖಾದಿರ್‌ ಖಾನ್‌ ಹೇಳಿದ್ದಾರೆ.

ಮೊದಲ ಅಣ್ವಸ್ತ್ರ ಪರೀಕ್ಷೆಯ 18ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿ, ‘ರಾವಲ್ಪಿಂಡಿ ಸಮೀಪದ ಕಹುತಾದಿಂದ ದೆಹಲಿ ಮೇಲೆ ದಾಳಿ ನಡೆಸಲು ಪಾಕಿಸ್ತಾನಕ್ಕೆ ಐದೇ ನಿಮಿಷ ಸಾಕು’ ಎಂದರು.

ಕಹುತಾದಲ್ಲಿ ಅಣು ಬಾಂಬ್‌ ಯೋಜನೆಗೆ ಸಂಬಂಧಿಸಿದ ಪ್ರಮುಖ ಯುರೇನಿಯಂ ಅಭಿವೃದ್ಧಿ ಕೇಂದ್ರ ‘ಕಹುತಾ ಸಂಶೋಧನಾ ಪ್ರಯೋಗಾಲಯ’ (ಕೆಆರ್‌ಎಲ್‌) ಇದೆ. ‘1984ರಲ್ಲೇ ಪಾಕಿಸ್ತಾನ ಅಣ್ವಸ್ತ್ರ ಪರೀಕ್ಷೆಗೆ ಸಿದ್ಧವಾಗಿತ್ತು. ಆದರೆ ಅಂದಿನ ಪಾಕ್‌ ಅಧ್ಯಕ್ಷ ಜಿಯಾ ಉಲ್‌ ಹಖ್‌ ಅಣು ಪರೀಕ್ಷೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಅದು ಸಾಧ್ಯವಾಗಲಿಲ್ಲ’ ಎಂದರು.

‘ಪಾಕ್‌ ಅಣು ಪರೀಕ್ಷೆ ನಡೆಸಿದರೆ ವಿಶ್ವದ ಇತರೆ ರಾಷ್ಟ್ರಗಳ ಸೇನೆ ಮಧ್ಯೆ ಪ್ರವೇಶಿಸಬಹುದು ಎಂದು ನಂಬಿದ್ದೇ ಅವರ ವಿರೋಧಕ್ಕೆ ಕಾರಣ. ಅಲ್ಲದೆ ಆಫ್ಘಾನಿಸ್ತಾನದ ಮೇಲೆ ರಷ್ಯಾ ಆಕ್ರಮಣ ನಡೆಸಿದ್ದರಿಂದ ಪಾಕಿಸ್ತಾನ ಜಾಗತಿಕ ಶಕ್ತಿಗಳ ಸಹಾಯ ಪಡೆಯುತ್ತಿದ್ದದ್ದು ಸಹ ಅಣು ಪರೀಕ್ಷೆಗೆ ನಿರ್ಬಂಧವಾಗಿತ್ತು’ ಎಂದು ಅವರು ಹೇಳಿದರು.

'ಉಡಾಯಿಸುವ ಶಕ್ತಿ ಭಾರತಕ್ಕಿದೆ’
‘ಅಬ್ದುಲ್‌ ಖಾದಿರ್‌ ಅವರದು ಅಪ್ರಬುದ್ಧ ಮತ್ತು ವಿಚಿತ್ರ ಹೇಳಿಕೆ. ಇಡೀ ಪಾಕಿಸ್ತಾನವನ್ನೇ ನೆಲಸಮ ಮಾಡುವಷ್ಟು ತಾಕತ್ತು ಭಾರತಕ್ಕಿದೆ. ಅಣ್ವಸ್ತ್ರ ಯುದ್ಧಕ್ಕೆ ಬಳಸುವ ಅಸ್ತ್ರವಲ್ಲ. ಅದು ಯುದ್ಧವನ್ನು ತಡೆಯಲು ಬಳಸುವ ಬೆದರಿಕೆಯ ಶಸ್ತ್ರಾಸ್ತ್ರ ಅಷ್ಟೆ’ ಎಂದು ಭಾರತದ ಮಾಜಿ ಸೇನಾ ಮುಖ್ಯಸ್ಥ ಹಾಗೂ ಅಂತರರಾಷ್ಟ್ರೀಯ ವಿವೇಕಾನಂದ ಪ್ರತಿಷ್ಠಾನದ ಚಿಂತಕರ ಚಾವಡಿಯ ನಿರ್ದೇಶಕ ಜನರಲ್‌ ಎನ್‌.ಸಿ. ವಿಜ್‌   ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.