ADVERTISEMENT

ಪಾಕ್‌: ಎನ್‌ಕೌಂಟರ್‌ಗೆ ನಾಲ್ವರು ಉಗ್ರರು ಬಲಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2015, 9:39 IST
Last Updated 29 ಜೂನ್ 2015, 9:39 IST

ಲಾಹೋರ್ (ಪಿಟಿಐ): ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ನಾಲ್ವರು ಉಗ್ರರು ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ಸೋಮವಾರ ನಡೆದಿದೆ.  ಮೃತ ಉಗ್ರರು ‘ಬೃಹತ್‌ ಪ್ರಮಾಣದ ದಾಳಿಗೆ’ ಸಂಚು ರೂಪಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ಉಗ್ರವಾದಿಗಳು ಮನೆಯೊಂದರಲ್ಲಿ ಅಡಗಿಕೊಂಡಿರುವ ಬಗ್ಗೆ ಖಚಿತ ಸುಳಿವಿನ ಮೇರೆಗೆ ಗುಪ್ತಚರ ದಳಗಳ ಸಹಯೋಗದಲ್ಲಿ ಪೊಲೀಸರು ಶೇಖುಪುರ ಜಿಲ್ಲೆಯ ರಚನಾ ಪಟ್ಟಣದ ಖಾನ್‌ ಕಾಲೋನಿಯಲ್ಲಿ ಸೋಮವಾರ ನಸುಕಿನಲ್ಲಿ ಈ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಪಂಜಾಬ್ ಪೊಲೀಸ್ ವಕ್ತಾರರೊಬ್ಬರು ತಿಳಿಸಿದ್ದಾರೆ.

‘ಪೊಲೀಸ್ ಕಮ್ಯಾಂಡೋಗಳು ಮನೆಯನ್ನು ಸುತ್ತುವರಿಯುತ್ತಿದ್ದಂತೆಯೇ ಮನೆಯ ಒಳಗಿದ್ದವು ಗುಂಡಿನ ದಾಳಿ ನಡೆಸಿದರು. ಈ ವೇಳೆ, ನಡೆಸಲಾದ ಪ್ರತಿದಾಳಿಯಲ್ಲಿ  ಮೂವರು ಉಗ್ರಗಾಮಿಗಳು ಹತರಾದರು. ಒಬ್ಬ ಭಯೋತ್ಪಾದಕ ಸ್ವಯಂ ಸ್ಫೋಟಿಸಿಕೊಂಡ. ಘಟನೆಯಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಒಂಬತ್ತು ಜನರು ಗಾಯಗೊಂಡರು’ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

ಅಲ್ಲದೇ, ‘ಈ ಉಗ್ರರನ್ನು ಕೊಲ್ಲುವ ಮೂಲಕ ಭದ್ರತಾ ಪಡೆಗಳು ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ’ ಎಂದು ಅವರು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.