ADVERTISEMENT

ಪ್ಲೂಟೊ ಮೇಲ್ಮೈನಲ್ಲಿ ‘ಹಿಮನದಿ’

ನ್ಯೂ ಹೊರೈಜನ್ ಕಳುಹಿಸಿದ ಚಿತ್ರದಲ್ಲಿ ಹಿಮಹಾಸುಗಳ ಹರಿವು ಪತ್ತೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2015, 19:30 IST
Last Updated 25 ಜುಲೈ 2015, 19:30 IST

ವಾಷಿಂಗ್ಟನ್ (ಎಎಫ್‌ಪಿ, ಐಎಎನ್‌ಎಸ್): ಪ್ಲೂಟೊ ಮೇಲ್ಮೈನಲ್ಲಿ ಸಾರಜನಕದ ಹಿಮಹಾಸು ಹರಿಯುತ್ತಿರುವುದು ಪತ್ತೆಯಾಗಿದೆ. ಇದನ್ನು ಭೂಮಿಯಲ್ಲಿನ ಹಿಮ ನದಿಗಳಿಗೆ ಹೋಲಿಸಬಹುದು. ಅಲ್ಲದೆ ಅಲ್ಲಿನ ವಾತಾವರಣದಲ್ಲಿ ದೂಳಿನ ದಟ್ಟ ಮೋಡಗಳಿರುವುದೂ  ಪತ್ತೆಯಾಗಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.

ನಾಸಾದ ನ್ಯೂ ಹೊರೈಜನ್ ನೌಕೆ ಯಲ್ಲಿರುವ ಕ್ಯಾಮೆರಾ ತೆಗೆದಿರುವ ಚಿತ್ರಗ ಳನ್ನು ಪರಿಶೀಲಿಸಿ ನಾಸಾ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ‘ಪ್ಲೂಟೊದ ಸ್ಪುಟ್ನಿಕ್ ವಲಯ ದಲ್ಲಿರುವ  ಟಾಮ್‌ಬಾಗ್ ರೆಜಿಯೊ ಎಂಬ ಸಪಾಟಾದ ಪ್ರದೇಶದ ಚಿತ್ರದಲ್ಲಿ ಈ ಹಿಮನದಿಗಳು ಪತ್ತೆಯಾಗಿವೆ.

ಸರಿ­ಸುಮಾರು ಬಿಳಿಬಣ್ಣದಂತೆ ಗೋಚರಿಸುವ ಮೇಲ್ಮೈನಲ್ಲಿ  ಸುರುಳಿ ಸುತ್ತಿದಂತಿರುವ ಕಪ್ಪು ಗೆರೆಗಳು ಪತ್ತೆಯಾಗಿವೆ. ವಾಸ್ತವವಾಗಿ ಇವು ಕೊರಕಲುಗಳು. ಹಿಮನದಿಗಳು ಹರಿದಿದ್ದರಿಂದ ಉಂಟಾಗಿವೆ’  ಎಂದು ಅವರು ಹೇಳಿದ್ದಾರೆ. ‘ಒಂದು ಹಿಮಹಾಸುಗಳು ಹರಿದಿರುವುದನ್ನು ಚಿತ್ರದಲ್ಲಿ ಸ್ಪಷ್ಟವಾಗಿ ಗುರುತಿಸಲಾಗಿದೆ.

ಇನ್ನೂ ಹಲವು ಹಿಮಹಾಸುಗಳು ಹರಿಯುತ್ತಿವೆ. ಇವು ಭೂಮಿಯ ಮೇಲಿನ ಹಿಮನದಿಗಳನ್ನು ಬಹುಪಾಲು ಹೋಲುತ್ತವೆ. ಇಂತಹ ಲಕ್ಷಣಗಳನ್ನು ಭೂಮಿ ಮತ್ತು ಮಂಗಳದಂತಹ ಗ್ರಹಗಳಲ್ಲಿ ಮಾತ್ರ ಕಾಣಲು ಸಾಧ್ಯ’ ಎಂದು ನ್ಯೂ ಹೊರೈಜನ್ ತಂಡದ ವಿಜ್ಞಾನಿ ಜಾನ್ ಸ್ಪೆನ್ಸರ್ ಹೇಳಿದ್ದಾರೆ.

ಈ ಹಿಮ ಸಾರಜನಕ, ಇಂಗಾಲದ ಮೊನಾಕ್ಸೈಡ್ ಮತ್ತು ಮಿಥೇನ್‌ನಿಂದ ರಚನೆಯಾಗಿದೆ. ಅಲ್ಲದೆ ಈ ಹಿಮ ಹಾಸುಗಳು ಪರ್ವತ ಪ್ರದೇಶಗಳಿಂದ ತಗ್ಗಿನತ್ತ ಹರಿಯುತ್ತಿವೆ ಎಂದು ಅವರು ಹೇಳಿದ್ದಾರೆ. ‘ಪ್ಲೂಟೊದಲ್ಲಿ ಉಷ್ಣಾಂಶ –390 ಡಿಗ್ರಿ ಫ್ಯಾರನ್‌ಹೀಟ್‌ನಷ್ಟು ಇರುವುದರಿಂದ ಈ ಹಿಮಹಾಸುಗಳು ಹಿಮನದಿಯಂತೆ ಹರಿಯುತ್ತಿವೆ’ ಎಂದು ಮತ್ತೊಬ್ಬ ವಿಜ್ಞಾನಿ ಬಿಲ್ ಮೆಕ್‌ಕಿನಾನ್ ಸ್ಪಷ್ಟಪಡಿಸಿದ್ದಾರೆ.
*
ಕೆಂಪು ಬಣ್ಣಕ್ಕೆ ದೂಳಿನ ಮೋಡ ಕಾರಣ
ಪ್ಲೂಟೊ ಮೇಲ್ಮೈನಿಂದ  130 ಕಿ.ಮೀ ಎತ್ತರದಲ್ಲಿ ದೂಳಿನ ಮೋಡಗಳಿರುವುದನ್ನೂ ನ್ಯೂ ಹೊರೈಜನ್ ಕಳುಹಿಸಿರುವ ಚಿತ್ರದಲ್ಲಿ ಗುರುತಿಸಲಾಗಿದೆ. ಈ ಮೋಡಗಳಲ್ಲಿ ದೂಳು, ದ್ರವ ಕಣಗಳು ಮತ್ತು ಬಿಸಿ  ಗಾಳಿ ಇದೆ ಎಂದು ನಾಸಾ ವಿಜ್ಞಾನಿಗಳು ಊಹಿಸಿದ್ದಾರೆ.

‘ಪ್ಲೂಟೊ ವಾತಾವರಣದಲ್ಲಿ ಹೈಡ್ರೊಕಾರ್ಬನ್ ಅಂಶಗಳು ಇವೆ ಎಂಬ ವಾದಕ್ಕೆ ಈ ದೂಳಿನ ಮೋಡಗಳು ಪ್ರಮುಖ ಸಾಕ್ಷ್ಯವಾಗಬಹುದು. ಅಲ್ಲದೆ ಈ ಮೋಡಗಳೇ ಪ್ಲೂಟೊಗೆ ಕೆಂಪು ಬಣ್ಣ ನೀಡಿವೆ’ ಎಂದು ಮತ್ತೊಬ್ಬ ವಿಜ್ಞಾನಿ ಮೈಕೆಲ್ ಸಮ್ಮರ್‌ ಅಭಿಪ್ರಾಯಪಟ್ಟಿದ್ದಾರೆ.
*
ಹರಿಯುವ ಹಿಮ, ಪರ್ವತ ಸಾಲು, ವಾತಾವರಣ, ದೂಳಿನ ಮೋಡದಂತಹ  ಗ್ರಹದ ಲಕ್ಷಣಗಳನ್ನು ಪ್ಲೂಟೊ ತೋರುತ್ತಿರುವುದು ನಿಜಕ್ಕೂ ರೋಚಕ
-ಜಾನ್ ಗ್ರನ್ಸ್‌ಫೆಲ್ಡ್ ,
ನಾಸಾದ ಸೈನ್ಸ್ ಮಿಷನ್ಸ್ ನಿರ್ದೇಶನಾಲಯ  ಸಹ ಆಡಳಿತಾಧಿಕಾರಿ

*
ಮುಖ್ಯಾಂಶಗಳು
* ಭೂಮಿಯ ಮೇಲಿನ ಹಿಮನದಿ ಗಳನ್ನು ಹೋಲುವ ಹಿಮಹಾಸುಗಳು
* ಸಾರಜನಕ, ಇಂಗಾಲದ ಮೊನಾ ಕ್ಸೈಡ್ ಮತ್ತು ಮಿಥೇನ್‌ನಿಂದ ಕೂಡಿದ ಹಿಮ
* ಇನ್ನೂ ಹರಿಯುತ್ತಿರುವ ಸಾಕಷ್ಟು ಹಿಮಹಾಸುಗಳು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.