ADVERTISEMENT

ಬೆಟ್ಟದಕೇಶವಿ: ಹೊಯ್ಸಳರ ಕಾಲದ ಶಾಸನ ಪತ್ತೆ

ಮೂರು ಅಡಿ ಉದ್ದ, ಒಂದೂವರೆ ಅಡಿ ಅಗಲದ ಮಿದುಕಲ್ಲಿನ ಮೇಲೆ ಬರಹ: ಡಾ.ಶ್ರೀವತ್ಸರಿಂದ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 9:25 IST
Last Updated 16 ಫೆಬ್ರುವರಿ 2017, 9:25 IST
ಶಾಸನವನ್ನು ಪರಿಶೀಲಿಸುತ್ತಿರುವ ಸಂಶೋಧಕ ಹಾಗೂ ಶಾಸನ ತಜ್ಞ ಡಾ.ಶ್ರೀವತ್ಸ ಎಸ್‌.ವಟಿ
ಶಾಸನವನ್ನು ಪರಿಶೀಲಿಸುತ್ತಿರುವ ಸಂಶೋಧಕ ಹಾಗೂ ಶಾಸನ ತಜ್ಞ ಡಾ.ಶ್ರೀವತ್ಸ ಎಸ್‌.ವಟಿ   
ಬೇಲೂರು: ತಾಲ್ಲೂಕಿನ ಬೆಟ್ಟದಕೇಶವಿ ಗ್ರಾಮದಲ್ಲಿ ಹೊಯ್ಸಳರ ಕಾಲದ ಅಪ್ರಕಟಿತ ಶಾಸನ ಬುಧವಾರ ಪತ್ತೆಯಾಗಿದೆ. 
ಬೇಲೂರಿನ ಶಾಸನ ತಜ್ಞ, ಸಂಶೋಧಕ ಡಾ.ಶ್ರೀವತ್ಸ ಎಸ್.ವಟಿ ಅವರು ಇದನ್ನು ಪರಿಶೀಲಿಸಿದ್ದು, ‘ಇದು ಇಲ್ಲಿಯವರೆಗೆ ಶಾಸನ ಸಂಪುಟದಲ್ಲಿ ಅಧಿಕೃತವಾಗಿ ದಾಖಲಾಗಿಲ್ಲ’ ಎಂದು ತಿಳಿಸಿದ್ದಾರೆ.
 
ಬೇಲೂರಿನ ಪ್ರವಾಸಿ ಮಾರ್ಗದರ್ಶಿ ತೊ.ಚ.ಶಶಿಕುಮಾರ್ ಅವರ ಕೋರಿಕೆಯಂತೆ ಪರಿಶೀಲಿಸಿದಾಗ ಬೆಟ್ಟದಕೇಶವಿ ಗ್ರಾಮದ ಪುಟ್ಟೇಗೌಡ ಅವರ ಕಾಫಿತೋಟದಲ್ಲಿ ಈ ಶಾಸನ ಪತ್ತೆಯಾಗಿದೆ ಎಂದು ಹೇಳಿದ್ದಾರೆ.
 
‘ಸುಮಾರು ಮೂರು ಅಡಿ ಉದ್ದ, ಒಂದೂವರೆ ಅಡಿ ಅಗಲದ ಕ್ಲೊರೇಟಿಕ್‌ಶಿಷ್ಟ್ ಮಿದುಕಲ್ಲಿನ ಶಾಸನ ಇದಾಗಿದೆ. 25 ಸಾಲುಗಳ ಸಾಹಿತ್ಯವಿದೆ. ವಿಷ್ಣುವರ್ಧನನ ಮರಿಮಗ ಎರಡನೇ ನರಸಿಂಹನ ಅಧಿಕಾರಿ ಮಾದ ಎಂಬಾತನು ಚೆನ್ನ ಗೋಪಾಲನಾಥ ದೇವರಿಗೆ ಬೆಟ್ಟದಕೇಶವಿ ಗ್ರಾಮವನ್ನು ದಾನವಾಗಿ ಕೊಟ್ಟ ಬಗ್ಗೆ ದಾಖಲಿಸಲಾಗಿದೆ. ಶಾಲಿವಾಹನ ಶಕೆ 1144 ಚಿತ್ರಭಾನು ಸಂವತ್ಸರದ ಜ್ಯೇಷ್ಠ ಶುದ್ಧ ಪಂಚಮಿ ಭಾನುವಾರ ಎಂಬ ಕಾಲ ನಿರೂಪಣೆ ಇದ್ದು, ಇದು ಕ್ರಿ.ಶ 1222ರ ಆಗಸ್ಟ್ 15 ಗುರುವಾರಕ್ಕೆ ಸಮೀಕೃತವಾಗುತ್ತದೆ’ ಎಂದು  ಸ್ಪಷ್ಟಪಡಿಸಿದ್ದಾರೆ.
 
‘ಈ ಶಾಸನವು ಹೊಯ್ಸಳರ ಕಾಲದ ಅತಿಸುಂದರ ಲಿಪಿಯನ್ನೂ, ಶುದ್ಧವಾದ ಸಂಸ್ಕೃತ ಭೂಯಿಷ್ಠ ಕನ್ನಡ ಭಾಷೆಯನ್ನೂ, ಶ್ಲೋಕ, ಕಂದ, ವೃತ್ತ ಮುಂತಾದ ಛಂದೋಬದ್ಧ ಭಾಷಾ ಸಾಹಿತ್ಯವನ್ನೂ, ಕಾವ್ಯಚಮತ್ಕಾರಗಳನ್ನೂ ಹೊಂದಿದ ಪುಟ್ಟ ಚಂಪೂ ಕಾವ್ಯದಂತಿದೆ’ ಎಂದು ವಿವರಿಸಿದ್ದಾರೆ.
 
ಗೋಪಾಲಕೃಷ್ಣನ ಪ್ರಾರ್ಥನೆಯೊಂದಿಗೆ ಹೊಯ್ಸಳವಂಶದ ವಿನಯಾದಿತ್ಯ, ಎರೆಯಂಗ, ವಿಷ್ಣುವರ್ಧನ, 1ನೇ ನರಸಿಂಹ, 2ನೇ ಬಲ್ಲಾಳ, 2ನೇ ನರಸಿಂಹರನ್ನು ಒಂದೇ ಪಂಕ್ತಿಯಲ್ಲಿ ದಾಖಲಿಸಿ, ಹೊಯ್ಸಳ ಚಕ್ರವರ್ತಿ ನರಸಿಂಹನ ತೇಜಸ್ಸು ಶತ್ರುಮಂಡಲವನ್ನು ಆವರಿಸಿತ್ತು. ಶತ್ರುಗಳ ಮಾಂಸದಿಂದ ಅವನ ಖಡ್ಗ ತೃಪ್ತಿಹೊಂದಿತ್ತು. ವೈರಿಪತ್ನಿಯರ ನಿಟ್ಟುಸಿರಿಂದ ಅವನ ಧ್ವಜಪತಾಕೆ ಪಟಪಟಿಸಿತ್ತು. ಅವನ ಶ್ವೇತಛತ್ರದಡಿ ಭೂಮಿ ಸಂಸ್ಥಾಪಿತವಾಗಿತ್ತು’ ಎಂದು ಚಮತ್ಕಾರಯುಕ್ತವಾಗಿ ವರ್ಣಿಸಿದೆ. 
 
‘ಆ ನರಸಿಂಹನ ಮಹಾಪ್ರಧಾನ, ಸರ್ವಾಧಿಕಾರಿ, ಮಹಾಪಸಾಯ್ತ, ಬಾಹತ್ತರನಿಯೋಗಾಧಿಪತಿ ಮಾದ(ಪ)ನು ತಗರೆನಾಡೆಪ್ಪತ್ತರ ಗಾವುಂಡುಗಳ ಸಮಕ್ಷಮದಲ್ಲಿ ಬೆಟ್ಟದಕೇಶವಿ ಗ್ರಾಮವನ್ನು ಅದರ ಸಮಸ್ತ ಆದಾಯಗಳೊಂದಿಗೆ ಪ್ರಸನ್ನ ಚೆನ್ನಗೋಪಾಳನಾಥ ದೇವನಿಗೆ ದಾನವಾಗಿ ನೀಡಿರುವ ಶಾಸನವಾಗಿದೆ. ಈ ಮಾದ ಎಂಬ ಅಧಿಕಾರಿ ಹೊಯ್ಸಳ ಶಾಸನಗಳಲ್ಲಿ ಪ್ರಸ್ತಾಪಿತವಾಗಿಲ್ಲ’ ಎಂದು ತಿಳಿಸಿದ್ದಾರೆ.
 
‘ಅಧ್ಯಯನಾರ್ಹವಾದ ಈ ಶಾಸನ ಶಿಥಿಲವಾಗುತ್ತಿದೆ. ಇದರ ರಕ್ಷಣೆ ಮತ್ತು ದಾಖಲಾತಿ ಅಗತ್ಯ. ಹೊಯ್ಸಳಕಾಲದ ಕಾವ್ಯಶೈಲಿ, ಭಾಷೆ, ಲಿಪಿಗಳ ಬಗ್ಗೆ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇದೊಂದು ಆಕರವಾಗಬಲ್ಲದು’ ಎಂದೂ ಡಾ. ಶ್ರೀವತ್ಸ ಅಭಿಪ್ರಾಯಿಸಿದ್ದಾರೆ. 
ಸಮೀಪದಲ್ಲೇ ಗಂಗರ ಕಾಲದ ಮತ್ತೊಂದು ವೀರಗಲ್ಲು ಸಂಶೋಧಿಸಿದ್ದು ಅದು ಬಹಳ ಸವೆದಿರುವುದರಿಂದ ಪ್ರಸ್ತುತ ಓದಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.