ADVERTISEMENT

‘ಬೆದರಿಸಿದರೆ ಉಳಿಗಾಲವಿಲ್ಲ’

ಉತ್ತರ ಕೊರಿಯಾ ವಿದೇಶಾಂಗ ಸಚಿವರಿಗೆ ಎಚ್ಚರಿಕೆ

ಪಿಟಿಐ
Published 24 ಸೆಪ್ಟೆಂಬರ್ 2017, 19:39 IST
Last Updated 24 ಸೆಪ್ಟೆಂಬರ್ 2017, 19:39 IST
‘ಬೆದರಿಸಿದರೆ ಉಳಿಗಾಲವಿಲ್ಲ’
‘ಬೆದರಿಸಿದರೆ ಉಳಿಗಾಲವಿಲ್ಲ’   

ನ್ಯೂಯಾರ್ಕ್‌: ‘ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಧಾಟಿಯಲ್ಲೇ ಅಲ್ಲಿನ ವಿದೇಶಾಂಗ ಸಚಿವರು ಬೆದರಿಕೆ ಒಡ್ಡಿದರೆ, ಅವರಾರೂ ಹೆಚ್ಚು ದಿನ ಬದುಕುಳಿಯುವುದಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೇರ ಎಚ್ಚರಿಕೆ ನೀಡಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಶನಿವಾರ ಮಾತನಾಡಿದ್ದ ಉತ್ತರ ಕೊರಿಯಾ ವಿದೇಶಾಂಗ ಸಚಿವ ರಿ ಯೊಂಗ್‌ ಹೊ, ‘ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರು ಬೆದರಿಕೆ ಒಡ್ಡುವ ಮೂಲಕ ಸೇನಾ ಸಂಘರ್ಷಕ್ಕೆ ಕಾರಣವಾಗಬಹುದು. ಅಮೆರಿಕ ಹಾಗೂ ಮಿತ್ರಪಡೆಗಳು ತಮ್ಮ ದೇಶದ ಮೇಲೆ ಬೆದರಿಕೆ ಒಡ್ಡುವ ಮೊದಲು ಎರಡು ಬಾರಿ ಆಲೋಚಿಸಬೇಕು’ ಎಂದು ಟ್ರಂಪ್‌ ವಿರುದ್ಧ ವಾಗ್ದಾಳಿ ನಡೆಸಿದ್ದರು.

‘ಉತ್ತರ ಕೊರಿಯಾದ ವಿದೇಶಾಂಗ ಸಚಿವರು ವಿಶ್ವಸಂಸ್ಥೆಯ ಅಧಿವೇಶನಲ್ಲಿ ಮಾತನಾಡಿದ್ದು ಈಗ ಕೇಳಿಸಿಕೊಂಡೆ. ಲಿಟಲ್‌ ರಾಕೆಟ್‌ಮ್ಯಾನ್‌ (ಕಿಮ್‌ ಜಾಂಗ್‌) ಅವರಂತೆ ಮಾತನಾಡಿದರೆ, ಅವರು ಕೂಡ ಹೆಚ್ಚು ದಿನ ಬಾಳುವುದಿಲ್ಲ’ ಎಂದು ಶನಿವಾರ ರಾತ್ರಿ ಟ್ವೀಟ್‌ನಲ್ಲಿ ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ರಿ ಯೊಂಗ್‌ ಹೇಳಿದ್ದೇನು ?
" ಟ್ರಂಪ್‌ ಅವರನ್ನು ಅಮೆರಿಕನ್ನರು  ‘ಶೋಕದ ರಾಜ’  ‘ಸುಳ್ಳಿನ ಮಹಾರಾಜ’ ಹಾಗೂ ‘ಸೈತಾನ ಅಧ್ಯಕ್ಷ’ ಎಂದು ಅಡ್ಡಹೆಸರಿನಿಂದ ಗುರುತಿಸುತ್ತಾರೆ. ವಯಸ್ಸಾದ ಜೂಜುಕೋರ ವ್ಯಕ್ತಿಯು ಭೂಮಿಯನ್ನು ಕಬಳಿಸಲು ವಂಚನೆ ಹಾಗೂ ಬೆದರಿಕೆಗಳನ್ನು ಒಡ್ಡುತ್ತಿದ್ದಾರೆ " ಎಂದು ರಿ ಯೊಂಗ್‌ ತಮ್ಮ ಭಾಷಣದಲ್ಲಿ ಲೇವಡಿ ಮಾಡಿದ್ದರು.

ಈ ಮಧ್ಯ,  ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರು ‘ಉತ್ತರ ಕೊರಿಯಾದ ಬಳಿ ಅಣುಬಾಂಬ್‌ ಇರುವುದು ಅಮೆರಿಕಕ್ಕೆ ತಿಳಿದಿದೆ. ಆದ್ದರಿಂದ ಅದು ಉತ್ತರ ಕೊರಿಯಾದ ಮೇಲೆ ದಾಳಿ ನಡೆಸುವುದಿಲ್ಲ’ ಎಂದಿದ್ದಾರೆ.
*
‘ಅಮೆರಿಕ ಯುದ್ಧ ವಿಮಾನ ಹಾರಾಟ’
ನ್ಯೂಯಾರ್ಕ್‌: ಉತ್ತರ ಕೊರಿಯಾದ ಪೂರ್ವ ಕರಾವಳಿ ತೀರದಲ್ಲಿ ಅಮೆರಿಕದ ಯುದ್ಧ ವಿಮಾನಗಳು ಶನಿವಾರ ಹಾರಾಟ ನಡೆಸಿವೆ ಎಂದು ಅಮೆರಿಕದ ರಕ್ಷಣಾ ಸಚಿವಾಲಯ ಪೆಂಟಗನ್‌ ತಿಳಿಸಿದೆ.

‘ ಈ ಕಾರ್ಯಾಚರಣೆಯು ಮೂಲಕ ಯಾವುದೇ ಬೆದರಿಕೆಯನ್ನು ಎದುರಿಸುವ ಸಂಬಂಧ ಸೇನೆಯು ಅನೇಕ ಅವಕಾಶಗಳನ್ನು ಮುಕ್ತವಾಗಿರಿಸಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ವಿರೋಧಿಗಳಿಗೆ ಸಂದೇಶ ರವಾನಿಸಿದ್ದಾರೆ’ ಎಂದು ಪೆಂಟಗನ್‌ನ ಮುಖ್ಯ ವಕ್ತಾರೆ ದನಾ ಡಬ್ಲ್ಯೂ ವೈಟ್‌ ತಿಳಿಸಿದ್ದಾರೆ.

ಗುವಾಮ್‌ನಿಂದ ಹೊರಟ ಅಮೆರಿಕ ವಾಯುಸೇನೆಯ ಬಿ–1ಬಿ ಲ್ಯಾನ್ಸರ್‌ ಯುದ್ಧ ವಿಮಾನಗಳು ಹಾಗೂ ಜಪಾನ್‌ನ ಒಕಿನಾವಾದಿಂದ ತೆರಳಿದ ಎಫ್‌–15ಸಿ ಈಗಲ್‌ ಯುದ್ಧ ವಿಮಾನಗಳು ಉತ್ತರ ಕೊರಿಯಾದ ಪೂರ್ವ ಕರಾವಳಿ ತೀರದ ಅಂತರರಾಷ್ಟ್ರೀಯ ವಾಯುಪ್ರದೇಶದಲ್ಲಿ ಹಾರಾಟ ನಡೆಸಿದ್ದವು ಎಂದು ತಿಳಿಸಿದರು.

ಉತ್ತರ ಕೊರಿಯಾದ ಅಣ್ವಸ್ತ್ರ ಕಾರ್ಯಕ್ರಮಗಳ ಕುರಿತಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ ನೀಡಿದ ಬೆನ್ನಲ್ಲೇ ಯುದ್ಧ ವಿಮಾನಗಳ ಹಾರಾಟ ಎರಡು ರಾಷ್ಟ್ರಗಳ ನಡುವೆ ಕದನದ ವಾತಾವರಣ ಸೃಷ್ಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.