ADVERTISEMENT

ಭಾರತಕ್ಕೆ ಚೀನಾ ಕಠಿಣ ಎಚ್ಚರಿಕೆ

ತಪ್ಪು ತಿದ್ದಿಕೊಂಡು ಶಾಂತಿ ಕಾಪಾಡಲು ಸಹಕರಿಸಿ: ರಕ್ಷಣಾ ವಕ್ತಾರ ಕ್ವಿಯನ್ ವು

ರಾಯಿಟರ್ಸ್
Published 24 ಜುಲೈ 2017, 19:30 IST
Last Updated 24 ಜುಲೈ 2017, 19:30 IST

ಬೀಜಿಂಗ್‌ : ತನ್ನ ಭೂ ಪ್ರದೇಶವನ್ನು ರಕ್ಷಿಸಿಕೊಳ್ಳುವ ಚೀನಾದ ಸೇನೆಯ ಸಾಮರ್ಥ್ಯದ ಬಗ್ಗೆ ಭಾರತಕ್ಕೆ ಸರಿಯಾದ ತಿಳಿವಳಿಕೆ ಇಲ್ಲ ಎಂದು ಚೀನಾದ ರಕ್ಷಣಾ ಸಚಿವಾಲಯ ಎಚ್ಚರಿಕೆ ನೀಡಿದೆ.

‘ಭಾರತ ತಪ್ಪನ್ನು ತಿದ್ದಿಕೊಳ್ಳಬೇಕು. ಪ್ರಚೋದನೆಯನ್ನು ನಿಲ್ಲಿಸಿ ಶಾಂತಿ ಕಾಪಾಡಲು ಸಹಕರಿಸಬೇಕು ಎಂಬುದು ನಮ್ಮ ಬಲವಾದ ಒತ್ತಾಯ’ ಎಂದು ಚೀನಾ ರಕ್ಷಣಾ ವಕ್ತಾರ ಕ್ವಿಯನ್‌ ವು, ಹೇಳಿದ್ದಾರೆ.

‘ಪರ್ವತವೊಂದನ್ನು ಅಲುಗಾಡಿಸುವುದು ಸುಲಭ. ಆದರೆ ಚೀನಾ ಸೇನೆಯನ್ನು ಅಲುಗಾಡಿಸುವುದು ಸಾಧ್ಯವಿಲ್ಲ. ಚೀನಾದ ಭೂಪ್ರದೇಶವನ್ನು ರಕ್ಷಿಸುವ ಸಾಮರ್ಥ್ಯವನ್ನು ನಿರಂತರವಾಗಿ ಬಲಪಡಿಸುತ್ತಾ ಬರಲಾಗಿದೆ’ ಎಂದು ವು ಕ್ವಿಯನ್‌ ಹೇಳಿದ್ದಾರೆ.

ADVERTISEMENT

ಭಾರತ–ಚೀನಾ–ಭೂತಾನ್‌ ಗಡಿಯಲ್ಲಿರುವ ದೋಕಲಾ ಎಂಬಲ್ಲಿ ಚೀನಾದ ಸೇನೆ ರಸ್ತೆ ನಿರ್ಮಿಸಲು ನಡೆಸಿದ ಪ್ರಯತ್ನವನ್ನು ಭಾರತದ ಸೇನೆ ತಡೆದಿದೆ. ಹೀಗಾಗಿ ಸುಮಾರು ಒಂದು ತಿಂಗಳಿನಿಂದ ಅಲ್ಲಿ ಬಿಕ್ಕಟ್ಟು ಇದೆ.

ಗಡಿಯಲ್ಲಿ ರಸ್ತೆ ನಿರ್ಮಾಣ ಗಂಭೀರ ಪರಿಣಾಮಗಳಿಗೆ ಕಾರಣವಾದೀತು ಎಂದು ಚೀನಾಕ್ಕೆ ಭಾರತ ಎಚ್ಚರಿಸಿದೆ. ಬಿಕ್ಕಟ್ಟು ಪರಿಹಾರ ಕಾಣಬೇಕಿದ್ದರೆ ಭಾರತದ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳಲೇಬೇಕು ಎಂದು ವು ಕ್ವಿಯನ್‌ ಪುನರುಚ್ಚರಿಸಿದ್ದಾರೆ.

‘ಬಿಕ್ಕಟ್ಟು ಇರುವ ಪ್ರದೇಶದಲ್ಲಿ ಚೀನಾ ಸೇನೆಯ ನಿಯೋಜನೆ ಮತ್ತು ಕವಾಯತು ಇನ್ನಷ್ಟು ಹೆಚ್ಚಲಿದೆ’ ಎಂದು ಅವರು ಹೇಳಿದ್ದಾರೆ.

ದ್ವಿಪಕ್ಷೀಯ ಸಭೆ ಸಾಧ್ಯತೆ: ಬ್ರಿಕ್ಸ್‌ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ  ಸಭೆಯ ಸಂದರ್ಭದಲ್ಲಿ ಭಾರತದ ಎನ್‌ಎಸ್‌ಎ ಅಜಿತ್‌ ಡೊಭಾಲ್‌ ಮತ್ತು ಚೀನಾದ ಸ್ಟೇಟ್‌ ಕೌನ್ಸಿಲರ್‌ ಯಾಂಗ್‌ ಜೀಚಿ ನಡುವೆ ದ್ವಿಪಕ್ಷೀಯ ಸಭೆ ನಡೆಯುವ ಸಾಧ್ಯತೆ ಇದೆ.

ಬ್ರಿಕ್ಸ್‌ ಸಭೆ ಇದೇ 27 ಮತ್ತು 28ರಂದು ಬೀಜಿಂಗ್‌ನಲ್ಲಿ ನಡೆಯಲಿದೆ. ದ್ವಿಪಕ್ಷೀಯ ಸಭೆಯನ್ನು ಚೀನಾದ ವಿದೇಶಾಂಗ ವಕ್ತಾರ ಲು ಕಾಂಗ್‌ ದೃಢಪಡಿಸಿಲ್ಲ. ಆದರೆ ಹಿಂದೆ ಬ್ರಿಕ್ಸ್‌ನ ಸಭೆ ನಡೆದಾಗಲೆಲ್ಲ ದ್ವಿಪಕ್ಷೀಯ ಮಾತುಕತೆ ನಡೆದಿತ್ತು ಎಂದು ಅವರು ತಿಳಿಸಿದ್ದಾರೆ. ಸಿಕ್ಕಿಂ ಗಡಿಯಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿರುವುದರಿಂದ ಈ ದ್ವಿಪಕ್ಷೀಯ ಸಭೆ ಮಹತ್ವ ಪಡೆದುಕೊಂಡಿದೆ.

***

ವ್ಯಾಪಾರ ಕೊರತೆ ಕಳವಳಕಾರಿ
ನವದೆಹಲಿ:
ಚೀನಾದ ಜತೆಗೆ ವ್ಯಾಪಾರ ಕೊರತೆ ಕಳವಳದ ವಿಚಾರ. ಹಾಗಾಗಿ ಚೀನಾದ ಮಾರುಕಟ್ಟೆಯಲ್ಲಿ ಭಾರತದ ಸರಕುಗಳು ದೊರೆಯುವಂತೆ ಮಾಡಲು ಎಲ್ಲ ಪ್ರಯತ್ನ ನಡೆಸಲಾಗುತ್ತಿದೆ ಎಂದು ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್‌ ಲೋಕಸಭೆಗೆ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಈ ಬಗ್ಗೆ ಚೀನಾ ಸರ್ಕಾರದ ಜತೆ ಮಾತುಕತೆ ನಡೆಸಿದ್ದಾರೆ ಎಂದು ಅವರು ಹೇಳಿದರು.

ಭಾರತ ಕಳೆದ ಮೂರು ವರ್ಷಗಳಲ್ಲಿ ವ್ಯಾಪಾರ ಕೊರತೆ ಎದುರಿಸುತ್ತಿರುವ 25 ದೇಶಗಳ ಪಟ್ಟಿಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ. ಸ್ವಿಟ್ಜರ್‌ಲೆಂಡ್‌, ಸೌದಿ ಅರೇಬಿಯ, ಇಂಡೊನೇಷ್ಯಾ ಮತ್ತು ದಕ್ಷಿಣ ಕೊರಿಯ ಜತೆಗೂ ಭಾರತ ಭಾರಿ ವ್ಯಾಪಾರ ಕೊರತೆ ಎದುರಿಸುತ್ತಿದೆ. ಅಮೆರಿಕ, ಅರಬ್‌ ಸಂಯುಕ್ತ ಸಂಸ್ಥಾನ, ಬಾಂಗ್ಲಾದೇಶ ಮತ್ತು ಬ್ರಿಟನ್‌ ದೇಶಗಳ ಜತೆಗೆ ಭಾರತವು ಅನುಕೂಲಕರ ವ್ಯಾಪಾರ ಸಮತೋಲನ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.