ನ್ಯೂಯಾರ್ಕ್ (ಪಿಟಿಐ): ಏಷ್ಯಾ ಪೆಸಿಫಿಕ್ ವಲಯದ ಆರ್ಥಿಕ ಸ್ಥಿತಿಯನ್ನು ಬದಲಾಯಿಸಲು ಕಾರಣರಾದ 25 ಪ್ರಭಾವಿ ಮಹಿಳೆಯರ ಪಟ್ಟಿಯನ್ನು ಫಾರ್ಚೂನ್ ನಿಯತಕಾಲಿಕೆ ಬಿಡುಗಡೆ ಮಾಡಿದ್ದು ಐಸಿಐಸಿಐ ಬ್ಯಾಂಕಿನ ಮುಖ್ಯಸ್ಥೆ ಚಂದಾ ಕೊಚ್ಚಾರ್ ಸೇರಿದಂತೆ ಭಾರತದ ಎಂಟು ಮಹಿಳೆಯರು ಸ್ಥಾನ ಪಡೆದಿದ್ದಾರೆ.
ಈ ಪೈಕಿ ಚಂದಾ ಕೊಚ್ಚಾರ್ 2ನೇ ಸ್ಥಾನದಲ್ಲಿದ್ದರೆ, ಎಸ್ಬಿಐನ ಅರುಂಧತಿ ಭಟ್ಟಾಚಾರ್ಯ 4ನೇ ಸ್ಥಾನ, ಎಚ್ಪಿಸಿಎಲ್ನ ನಿಷಿ ವಾಸುದೇವ 5ನೇ ಸ್ಥಾನ ಹಾಗೂ ಆಕ್ಸಿಸ್ ಬ್ಯಾಂಕಿನ ಶಿಖಾ ಶರ್ಮ 10ನೇ ಸ್ಥಾನ ಪಡೆದಿದ್ದಾರೆ. ಪಟ್ಟಿಯಲ್ಲಿ ಆಸ್ಟ್ರೇಲಿಯಾದ ವೆಸ್ಟ್ಪಕ್ ಬ್ಯಾಂಕಿನ ಮುಖ್ಯಸ್ಥೆ ಗೇಲ್ ಕೆಲ್ಲಿ ಅವರು ಮೊದಲ ಸ್ಥಾನ ಪಡೆದಿದ್ದಾರೆ.
25ರೊಳಗೆ ಸ್ಥಾನ ಪಡೆದ ಇತರ ಭಾರತೀಯರು: ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ಷಾ (19), ರಾಷ್ಟ್ರೀಯ ಷೇರು ಮಾರುಕಟ್ಟೆ ಕಾರ್ಯನಿರ್ವಹಣಾಧಿಕಾರಿ ಚಿತ್ರಾ ರಾಮಕೃಷ್ಣ (22), ಎಚ್ಎಸ್ಬಿಸಿಯ ನೈನಾ ಲಾಲ್ ಕಿದ್ವಾಯಿ(23), ಟೇಫ್ ಅಧ್ಯಕ್ಷೆ ಮಲ್ಲಿಕಾ ಶ್ರೀನಿವಾಸನ್ (25).
ಏಷ್ಯಾ ಪೆಸಿಫಿಕ್ ಪ್ರದೇಶದ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ಮಹಿಳೆಯರು ಜಾಗತಿಕ ಮಟ್ಟದಲ್ಲಿ ಅತ್ಯುನ್ನತ ಸ್ಥಾನದಲ್ಲಿದ್ದಾರೆ. ಭಾರತದ ಭಟ್ಟಾಚಾರ್ಯ ಹಾಗೂ ವಾಸುದೇವ ಸೇರಿ ಮೂರನೇ ಒಂದು ಭಾಗದಷ್ಟು ಮಹಿಳೆಯರು ಹೊಸದಾಗಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಫಾರ್ಚೂನ್ ನಿಯತಕಾಲಿಕೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.