ADVERTISEMENT

ಭಾರತ– ಪಾಕ್ ಮಾತುಕತೆ ಆರಂಭ

ಸಿಂಧೂ ನದಿ ಕುರಿತ ಸಭೆ: ಜಲವಿದ್ಯುತ್‌ ಸ್ಥಾವರಗಳ ಬಗ್ಗೆ ಪ್ರಸ್ತಾಪ

ಪಿಟಿಐ
Published 20 ಮಾರ್ಚ್ 2017, 19:30 IST
Last Updated 20 ಮಾರ್ಚ್ 2017, 19:30 IST
ಇಸ್ಲಾಮಾಬಾದ್‌: ಸಿಂಧೂನದಿ ಕುರಿತಂತೆ ಭಾರತ ಹಾಗೂ ಪಾಕಿಸ್ತಾನದ ಅಧಿಕಾರಿಗಳ ಮಟ್ಟದ ಮಾತುಕತೆ ಸೋಮವಾರ ಆರಂಭವಾಗಿದೆ.
 
ಭಾರತದ ಪರವಾಗಿ ಸಿಂಧೂನದಿ ಸಮಿತಿ ಆಯುಕ್ತ ಪಿ.ಕೆ. ಸಕ್ಸೇನಾ ನೇತೃತ್ವದಲ್ಲಿ 10 ಸದಸ್ಯರು ಹಾಗೂ ಪಾಕಿಸ್ತಾನ ಕಡೆಯಿಂದ ಮಿರ್ಜಾ ಆಸಿಫ್‌ ಸಯೀದ್‌ ನೇತೃತ್ವದಲ್ಲಿ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. 
 
ಸಿಂಧೂ ನದಿ ಪ್ರದೇಶದಲ್ಲಿ ಭಾರತ ನಿರ್ಮಿಸಲು ಉದ್ದೇಶಿಸಿರುವ ಮೂರು ಜಲವಿದ್ಯುತ್‌ ಸ್ಥಾವರಗಳ ಕುರಿತು ಸಭೆಯಲ್ಲಿ ಪಾಕಿಸ್ತಾನ ಪ್ರಸ್ತಾಪ ಮಾಡಿದೆ. 
 
ಚೆನಾಬ್‌ ನದಿಗೆ 1ಸಾವಿರ ಮೆ.ವಾ. ಸಾಮರ್ಥ್ಯದ ಪಕುಲ್‌ ದುಲ್‌ ಸ್ಥಾವರ, ಚೆನಾಬ್‌ನ ಉಪನದಿಗಳಾಗಿರುವ ಮಿಯಾರ್‌ ನಲ್ಲಾ ನದಿಗೆ 120 ಮೆ.ವಾ. ಸಾಮರ್ಥ್ಯ ಹಾಗೂ ಕಲ್ನಾಯ್‌ ನದಿಗೆ 43 ಮೆ.ವಾ. ಸಾಮರ್ಥ್ಯದ ಜಲವಿದ್ಯುತ್‌ ಸ್ಥಾವರಗಳನ್ನು ನಿರ್ಮಿಸಲು ಭಾರತ ಯೋಜನೆ ಸಿದ್ಧಪಡಿಸಿದೆ. 
 
ಆದರೆ ಈ ಜಲವಿದ್ಯುತ್‌ ಸ್ಥಾವರಗಳ ನಿರ್ಮಾಣ 1960ರ ಸಿಂಧೂ ನದಿ ಒಪ್ಪಂದದ ಉಲ್ಲಂಘನೆಯಾಗುತ್ತದೆ ಎಂದು ಪಾಕ್‌ ವಾದಿಸುತ್ತಿದೆ.

ಜಮ್ಮು–ಕಾಶ್ಮೀರ, ಹಿಮಾಚಲದಲ್ಲಿ ನಿರ್ಮಾಣ: ಜಮ್ಮು ಮತ್ತು ಕಾಶ್ಮೀರದಲ್ಲಿ ಪಕುಲ್‌ ದುಲ್‌ ಹಾಗೂ ಕಲ್ನಾಯ್‌ ಜಲ ವಿದ್ಯುತ್‌ ಸ್ಥಾವರವನ್ನು ಕ್ರಮವಾಗಿ ₹7,464 ಕೋಟಿ ಹಾಗೂ ₹396 ಕೋಟಿ ವೆಚ್ಚದಲ್ಲಿ (2008ರ ಅಂದಾಜು) ನಿರ್ಮಿಸಲಾಗುತ್ತಿದೆ.
 
ಹಿಮಾಚಲ ಪ್ರದೇಶದ ಲಹೌಲ್‌ ಸ್ಪಿಟಿ ಜಿಲ್ಲೆಯಲ್ಲಿ ಅಂದಾಜು ₹1,125 ಕೋಟಿ ವೆಚ್ಚದಲ್ಲಿ ಮಿಯಾರ್‌ ಸ್ಥಾವರ ನಿರ್ಮಿಸುವ ಯೋಜನೆ ಇದೆ. ಸಿಂಧೂ ನದಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ಪಾಕಿಸ್ತಾನದ ಜಲ ಸಂಪನ್ಮೂಲ ಮತ್ತು ವಿದ್ಯುತ್‌್ ಸಚಿವ ಖವಾಜಾ ಆಸಿಫ್‌್್ ತಿಳಿಸಿದ್ದಾಗಿ ಅಲ್ಲಿನ ರೇಡಿಯೊ ಪಾಕಿಸ್ತಾನ್‌ ವರದಿ ಮಾಡಿದೆ. 
 
ಈ ಹಿಂದೆ 2015ರಲ್ಲಿ ಉಭಯ ರಾಷ್ಟ್ರಗಳ ನಡುವೆ ಕೊನೆಯ ಬಾರಿಗೆ ಸಿಂಧೂ ನದಿ ಸಮಿತಿ ಸಭೆ ನಡೆದಿತ್ತು. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ನಡೆಸಿದ ಉರಿ ಭಯೋತ್ಪಾದಕ ದಾಳಿ ಕಾರಣಕ್ಕೆ 2016ರ ಸೆಪ್ಟೆಂಬರ್‌ನಲ್ಲಿ ಆಯೋಜಿಸಲಾಗಿದ್ದ ಸಭೆ ರದ್ದಾಗಿತ್ತು.
 
ಶಾಂತಿ ಮಾತುಕತೆಗೆ ಚಾಲನೆ
ಸಿಂಧೂ ನದಿ ಸಮಿತಿ ಸಭೆಯಿಂದ ಭಾರತ–ಪಾಕಿಸ್ತಾನ ನಡುವೆ ನಿಂತುಹೋಗಿರುವ ಶಾಂತಿ ಮಾತುಕತೆಗೆ ಪುನಃ ಚಾಲನೆ ದೊರಕಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿರುವುದಾಗಿ ಪಾಕ್‌ ಮಾಧ್ಯಮ ವರದಿ ಮಾಡಿದೆ.

ಮಾತುಕತೆ ಪುನರಾರಂಭಕ್ಕೆ ಈ ಸಭೆ ಮೊದಲ ಹೆಜ್ಜೆಯಾಗಬಹುದು ಎಂದು ಡಾನ್‌ ಪತ್ರಿಕೆ ವರದಿಯಲ್ಲಿ ಉಲ್ಲೇಖಿಸಿದೆ. ಈ ಸಾಧ್ಯತೆಗಳನ್ನು ಭಾರತೀಯ ಅಧಿಕಾರಿಗಳು ತಳ್ಳಿಹಾಕಿದ್ದಾರೆ.

ಝೇಲಂ ಹಾಗೂ ಚೆನಾಬ್‌ ನದಿಗಳಿಗೆ ಕಿಶನ್‌ಗಂಗಾ ಹಾಗೂ ರ್‍ಯಾಟಲ್‌ ಜಲವಿದ್ಯುತ್‌ ಸ್ಥಾವರ ನಿರ್ಮಿಸುತ್ತಿರುವುದು ಸೇರಿದಂತೆ ಇತರೆ ವಿವಾದಗಳನ್ನು ಚರ್ಚಿಸಲು ಆಹ್ವಾನಿಸಿ ಪಿ.ಕೆ. ಸಕ್ಸೇನಾ ಅವರು ಪತ್ರ ಬರೆದಿರುವುದು ಈ ಸಂದರ್ಭದಲ್ಲಿ ಮಹತ್ವ ಪಡೆದುಕೊಂಡಿದೆ.

ಆದರೆ ಈ ವಿವಾದಗಳನ್ನು ಈಗಾಗಲೇ ವಿಶ್ವಬ್ಯಾಂಕ್‌ ಬಳಿ ಪ್ರಸ್ತಾಪಿಸಿರುವುದರಿಂದ ಚರ್ಚೆ ಪ್ರಸ್ತಾವನೆಯನ್ನು ನಿರಾಕರಿಸಲಾಗಿದೆ ಎಂದು ಪಾಕ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.