ADVERTISEMENT

ಮರಳಿ ಬನ್ನಿ: ರೋಹಿಂಗ್ಯಾ ಮುಸ್ಲಿಮರಿಗೆ ಆಹ್ವಾನ

ಏಜೆನ್ಸೀಸ್
Published 19 ಸೆಪ್ಟೆಂಬರ್ 2017, 19:30 IST
Last Updated 19 ಸೆಪ್ಟೆಂಬರ್ 2017, 19:30 IST
ಆಂಗ್‌ ಸಾನ್‌ ಸೂಕಿ (ಸಂಗ್ರಹ ಚಿತ್ರ)
ಆಂಗ್‌ ಸಾನ್‌ ಸೂಕಿ (ಸಂಗ್ರಹ ಚಿತ್ರ)   

ನೇಪಿದಾವ್‌: ಧರ್ಮ ಮತ್ತು ಜನಾಂಗದ ನೆಲೆಯಲ್ಲಿ ಛಿದ್ರವಾಗಿರುವ ಮ್ಯಾನ್ಮಾರ್‌ ಒಗ್ಗಟ್ಟಾಗಿ ಮುಂದುವರಿಯಲು ನೆರವಾಗುವಂತೆ ಅಲ್ಲಿನ ನಾಯಕಿ ಆಂಗ್‌ ಸಾನ್‌ ಸೂಕಿ ಅಂತರರಾಷ್ಟ್ರೀಯ ಸಮುದಾಯವನ್ನು ಕೋರಿದ್ದಾರೆ. ಸೇನಾ ಕಾರ್ಯಾಚರಣೆಯಿಂದ ಬೆದರಿ ದೇಶ ತೊರೆದು ಹೋಗಿರುವ ರೋಹಿಂಗ್ಯಾ ಸಮುದಾಯದ ಮುಸ್ಲಿಮರು ಮ್ಯಾನ್ಮಾರ್‌ಗೆ ಮರಳುವಂತೆ ಅವರು ಕರೆ ನೀಡಿದ್ದಾರೆ.

ರೋಹಿಂಗ್ಯಾ ಸಮುದಾಯಕ್ಕೆ ಸೇರಿದ ಮುಸ್ಲಿಮರೇ ಹೆಚ್ಚಾಗಿರುವ ಮ್ಯಾನ್ಮಾರ್‌ನ ರಾಖೈನ್‌ ರಾಜ್ಯದಲ್ಲಿ ಆಗಸ್ಟ್‌ 25ರ ಬಳಿಕ ಭಾರಿ ಕೋಮು ಸಂಘರ್ಷ ನಡೆಯುತ್ತಿದೆ. ರೋಹಿಂಗ್ಯಾ ಸಮುದಾಯದ ಹಲವು ಮಂದಿ ಮೃತಪಟ್ಟಿದ್ದು ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ಅಲ್ಲಿಂದ ಪಲಾಯನ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.

ಅಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಜಾಗತಿಕ ಮಟ್ಟದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ರೋಹಿಂಗ್ಯಾ ಸಮುದಾಯವನ್ನು ನಿರ್ಮೂಲನೆ ಮಾಡುವ ಯತ್ನ ಮ್ಯಾನ್ಮಾರ್‌ನಲ್ಲಿ ನಡೆಯುತ್ತಿದೆ ಎಂದು ವಿಶ್ವಸಂಸ್ಥೆ ಆಕ್ಷೇಪಿಸಿತ್ತು. ಶಾಂತಿ ನೊಬೆಲ್‌ ಪ್ರಶಸ್ತಿ ಪುರಸ್ಕೃತರಾಗಿರುವ ಸೂಕಿ ಅವರು ಈ ಬಗ್ಗೆ ಏನನ್ನೂ ಮಾತನಾಡಿಲ್ಲ ಎಂಬ ಬಗ್ಗೆಯೂ ಅಸಮಾಧಾನ ವ್ಯಕ್ತವಾಗಿತ್ತು.

ADVERTISEMENT

ಈಗ ತಮ್ಮ 30 ನಿಮಿಷದ ಭಾಷಣದ ಮೂಲಕ ಟೀಕಾಕಾರರಿಗೆ ಉತ್ತರ ನೀಡಲು ಸೂಕಿ ಅವರು ಯತ್ನಿಸಿದ್ದಾರೆ. ‘ದ್ವೇಷ ಮತ್ತು ಭೀತಿ ಈ ಜಗತ್ತಿನ ಪ್ರಮುಖ ಪೀಡೆಗಳು. ಧಾರ್ಮಿಕ ನಂಬಿಕೆಗಳು ಮತ್ತು ಜನಾಂಗೀಯ ದ್ವೇಷದಿಂದ ಮ್ಯಾನ್ಮಾರ್ ಛಿದ್ರವಾಗಲು ಅವಕಾಶ ಕೊಡುವುದಿಲ್ಲ. ವೈವಿಧ್ಯಮಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ಹಕ್ಕು  ಎಲ್ಲರಿಗೂ ಇದೆ’ ಎಂದು ಅವರು ಹೇಳಿದ್ದಾರೆ.

ಹಿಂಸೆಯಿಂದ ನಿರ್ವಸಿತರಾಗಿರುವ ಎಲ್ಲ ಗುಂಪುಗಳ ಬಗ್ಗೆಯೂ ಅವರು ನೋವು ವ್ಯಕ್ತಪಡಿಸಿದ್ದಾರೆ. ದೇಶದಿಂದ ವಲಸೆ ಹೋಗಿರುವ ರೋಹಿಂಗ್ಯಾ ಸಮುದಾಯದ ಮುಸ್ಲಿಮರನ್ನು ಪರಿಶೀಲನಾ ಪ್ರಕ್ರಿಯೆ ಬಳಿಕ ಮರಳಿ ದೇಶದೊಳಕ್ಕೆ ಸೇರಿಸಿಕೊಳ್ಳಲು ಸಿದ್ಧ ಎಂದೂ ಅವರು ಹೇಳಿದ್ದಾರೆ. ದೇಶ ಬಿಟ್ಟು ಹೋಗಿರುವ 4.10 ಲಕ್ಷ ಜನರಲ್ಲಿ ಎಷ್ಟು ಮಂದಿಗೆ ಹಿಂದಿರುಗುವ ಅರ್ಹತೆ ಎಂಬುದು ಗೊತ್ತಾಗಿಲ್ಲ.

ಸೇನೆಯ ಮೇಲುಗೈ: ಉಗ್ರರ ಜತೆ ನಂಟು ಹೊಂದಿರುವವರನ್ನು ದೇಶಕ್ಕೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮ್ಯಾನ್ಮಾರ್‌ನ ಸೇನೆ ಈಗಾಗಲೇ ಹೇಳಿದೆ. ರೋಹಿಂಗ್ಯಾ ಸಮುದಾಯದ ಮುಸ್ಲಿಮರ ನೂರಾರು ಗುಡಿಸಲುಗಳನ್ನು ಸೇನೆಯು ಸುಟ್ಟು ಹಾಕಿದೆ ಎಂದು ಆರೋಪಿಸಲಾಗುತ್ತಿದೆ.

ಸೇನೆಯನ್ನು ನಿಯಂತ್ರಿಸುವಷ್ಟು ಅಧಿಕಾರ ಸೂಕಿ ಅವರಿಗೆ ಇಲ್ಲ ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ. ಸೇನೆ ಸರ್ಕಾರದ ನಡುವೆ ಅತ್ಯಂತ ನಾಜೂಕಾದ ಅಧಿಕಾರ ಹಂಚಿಕೆ ಸೂತ್ರದ ಪ್ರಕಾರ ಅಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪನೆಯಾಗಿದೆ.

‘ರೋಹಿಂಗ್ಯಾ ಸಮುದಾಯದ ವಿರುದ್ಧ ಜನಾಂಗೀಯ ದ್ವೇಷದಿಂದ ದಾಳಿ ನಡೆಸಿಲ್ಲ. ಭಯೋತ್ಪಾದನಾ ಕೃತ್ಯ ಎಸಗಿದವರ ವಿರುದ್ಧ ಕಾನೂನುಸಮ್ಮತ ರೀತಿಯಲ್ಲಿಯೇ ಕಾರ್ಯಾಚರಣೆ ನಡೆಸಲಾಗಿದೆ’ ಎಂದು ತನ್ನ ಕಾರ್ಯಾಚರಣೆಯನ್ನು ಸೇನೆ ಸಮರ್ಥಿಸಿಕೊಂಡಿದೆ.

ಘಟನಾವಳಿ
*ಅರಕನ್‌ ರೋಹಿಂಗ್ಯಾ ಸಾಲ್ವೇಷನ್‌ ಆರ್ಮಿ (ಅರ್ಸಾ) ಎಂಬ ಉಗ್ರಗಾಮಿ ಸಂಘಟನೆ ಆಗಸ್ಟ್‌ 25ರಂದು ಹಲವು ಪೊಲೀಸ್‌ ಠಾಣೆಗಳ ಮೇಲೆ ದಾಳಿ ನಡೆಸಿದೆ ಎಂಬ ಆರೋಪ
*ಬಳಿಕ ರೋಹಿಂಗ್ಯಾ ಸಮುದಾಯದ ಮುಸ್ಲಿಮರು ಹೆಚ್ಚಾಗಿರುವ ರಾಖೈನ್‌ ರಾಜ್ಯದಲ್ಲಿ ಸೇನಾ ಕಾರ್ಯಾಚರಣೆ
*ರೋಹಿಂಗ್ಯಾ ಮುಸ್ಲಿಮರ ಹತ್ಯೆ ಮತ್ತು ಅವರ ಮನೆಗಳಿಗೆ ಬೆಂಕಿ
*ಸುಮಾರು 4 ಲಕ್ಷ ಜನರು ಬಾಂಗ್ಲಾ ದೇಶಕ್ಕೆ ವಲಸೆ
*ರಾಖೈನ್‌ ರಾಜ್ಯದಲ್ಲಿ 30 ಸಾವಿರದಷ್ಟು ಬೌದ್ಧರು ಮತ್ತು ಹಿಂದೂಗಳೂ ನಿರ್ವಸಿತರಾಗಿದ್ದಾರೆ
*ಮ್ಯಾನ್ಮಾರ್‌ ನಾಯಕಿ ಸೂಕಿ ಅವರು ಜನಾಂಗೀಯ ಹಿಂಸೆ ತಡೆಗೆ ಏನನ್ನೂ ಮಾಡಿಲ್ಲ ಎಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶ

ದೌರ್ಜನ್ಯ ತಕ್ಷಣ ನಿಲ್ಲಿಸಿ: ಗುಟೆರಸ್‌
ರೋಹಿಂಗ್ಯಾ ಮುಸ್ಲಿಮರ ಮೇಲೆ ನಡೆಯುತ್ತಿರುವ ಸೇನಾ ದೌರ್ಜನ್ಯವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್‌ ಹೇಳಿದ್ದಾರೆ. ಮ್ಯಾನ್ಮಾರ್‌ ಜನರನ್ನು ಉದ್ದೇಶಿಸಿ ಸೂಕಿ ಅವರು ಮಾತನಾಡಿದ ಬಳಿಕ ಗುಟೆರಸ್‌ ಅವರು ಈ ಹೇಳಿಕೆ ನೀಡಿದ್ದಾರೆ.

‘ರೋಹಿಂಗ್ಯಾ ಸಮುದಾಯದ ಸಮಸ್ಯೆಗಳು ದೀರ್ಘ ಕಾಲದಿಂದ ಪರಿಹಾರ ಕಾಣದೆ ಉಳಿದುಕೊಂಡಿವೆ. ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕು’ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಗುಟೆರಸ್‌ ಹೇಳಿದ್ದಾರೆ.

**

ಮ್ಯಾನ್ಮಾರ್‌ನಿಂದ ವಲಸೆ ಹೋದವರನ್ನು ಮರಳಿ ಸೇರಿಸಿಕೊಳ್ಳಲು ಯಾವುದೇ ಸಮಸ್ಯೆ ಇಲ್ಲ. ಅವರಿಗೆ ಸಂಪೂರ್ಣ ರಕ್ಷಣೆಯ ಭರವಸೆ ನೀಡಲಾಗುವುದು.
-ಆಂಗ್‌ ಸಾನ್‌ ಸೂಕಿ, ಮ್ಯಾನ್ಮಾರ್‌ನ ಕೌನ್ಸೆಲರ್‌

ಭಾರತದ ನಿಲುವಿಗೆ ಜೇಟ್ಲಿ ಸಮರ್ಥನೆ
ನವದೆಹಲಿ:
ಭಾರತಕ್ಕೆ ವಲಸೆ ಬಂದಿರುವ ರೋಹಿಂಗ್ಯಾ ಮುಸ್ಲಿಮರನ್ನು ವಾಪಸ್‌ ಕಳುಹಿಸುವ ಕೇಂದ್ರ ಸರ್ಕಾರದ ನೀತಿಯನ್ನು ಕೇಂದ್ರ ಸಚಿವ ಅರುಣ್‌ ಜೇಟ್ಲಿ ಸಮರ್ಥಿಸಿಕೊಂಡಿದ್ದಾರೆ. ‘ಪ್ರತಿ ದೇಶವೂ ತನ್ನ ವಿದೇಶಾಂಗ ಮತ್ತು ಭದ್ರತಾ ನೀತಿ ಮತ್ತು ಜನಸಮುದಾಯದ ಸಮತೋಲನದ ಆಧಾರದಲ್ಲಿ ನಿರ್ಧಾರ ಕೈಗೊಳ್ಳುತ್ತದೆ’ ಎಂದು ಅವರು ಹೇಳಿದ್ದಾರೆ.

ಲೋಕಸಭೆಯ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರೂ ಇದೇ ನಿಲುವನ್ನು ವ್ಯಕ್ತಪಡಿಸಿದ್ದಾರೆ. ‘ರೋಹಿಂಗ್ಯಾ ಮುಸ್ಲಿಮರಿಗೆ ಆಶ್ರಯ ನೀಡುವ ಹೊಣೆ ಹೊತ್ತುಕೊಳ್ಳಲು ಭಾರತ ಸಜ್ಜಾಗಿಲ್ಲ’ ಎಂದು ಅವರು ಹೇಳಿದ್ದಾರೆ.‘ರಾಷ್ಟ್ರೀಯ ಸುರಕ್ಷತೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ’ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಮ್‌ ಮಾಧವ್‌ ಅಭಿಪ್ರಾಯಪಟ್ಟಿದ್ದಾರೆ.

ರೋಹಿಂಗ್ಯಾ ಮುಸ್ಲಿಮರು ಅಕ್ರಮ ವಲಸಿಗರು. ಅವರನ್ನು ನಿರಾಶ್ರಿತರು ಎಂದು ಪರಿಗಣಿಸಿ ಆಶ್ರಯ ನೀಡಿದರೆ ಭಾರತದ ಪೌರರ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ಗೆ ಸೋಮವಾರ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಕೇಂದ್ರ ಸರ್ಕಾರ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.