ADVERTISEMENT

ಮಹಿಳೆಗೆ ಕಿರುಕುಳ: ಭಾರತದ ವ್ಯಕ್ತಿಗೆ 19 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2016, 19:30 IST
Last Updated 29 ಏಪ್ರಿಲ್ 2016, 19:30 IST

ವಾಷಿಂಗ್ಟನ್‌ (ಪಿಟಿಐ):  ಮಹಿಳೆಯೊಬ್ಬರಿಗೆ  ಕಿರುಕುಳ ನೀಡಿದ ಆರೋಪದಲ್ಲಿ ಭಾರತ ಮೂಲದ ವ್ಯಕ್ತಿಗೆ  19 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ.
ಆರೋಪಿ ಜಿತೇಂದ್ರ ಸಿಂಗ್‌ (32) ಎಂಬಾತ ಮಹಿಳೆಯನ್ನು ಹಿಂಬಾಲಿಸುವ ಮೂಲಕ ಕಿರುಕುಳ ನೀಡಿದ್ದು, ಕೊಲಿನ್‌ ಪ್ರಾಂತ್ಯದ ಜಿಲ್ಲಾ ಅಟಾರ್ನಿ ಗ್ರೆಗ್‌ ವಿಲ್ಲಿಸ್‌ ಆತನಿಗೆ ಶಿಕ್ಷೆ ವಿಧಿಸಿದರು.

ಸಂತ್ರಸ್ತ ಮಹಿಳೆಯನ್ನು  ಸಿಂಗ್‌ ದೆಹಲಿಯಲ್ಲಿ ಕಾಲೇಜಿಗೆ ಹೋಗುತ್ತಿರುವ ಸಂದರ್ಭದಲ್ಲಿ ಭೇಟಿ ಮಾಡಿದ್ದರು. 2006ರಲ್ಲಿ ಸಿಂಗ್‌ ಮಹಿಳೆಯ ಬಳಿ ವಿವಾಹ ವಿಷಯ ಪ್ರಸ್ತಾಪಿಸಿದ್ದರು. ಆದರೆ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದರಿಂದ ಆಕೆ ಸಿಂಗ್‌ ಆಕ್ರೋಶಕ್ಕೆ ತುತ್ತಾಗಿದ್ದರು.

ಕಾಲೇಜು ಮುಗಿಯುವವರೆಗೂ ಸಿಂಗ್‌ ಸಂತ್ರಸ್ತೆಯ ಮನೆಗೆ ಹೋಗಿ ಆಕೆಗೆ ಹಿಂಸೆ ನೀಡಿ ಜೀವಬೆದರಿಕೆ ಹಾಕುತ್ತಿದ್ದನು. 2007ರಲ್ಲಿ ಆಕೆ ಹೆಚ್ಚಿನ ಅಧ್ಯಯನಕ್ಕಾಗಿ ನ್ಯೂಯಾರ್ಕ್‌ಗೆ ತೆರಳಿದರು.  ಆಗ ಆತ ಭಾರತದಲ್ಲಿದ್ದ ಆಕೆಯ ತಂದೆಗೆ ಕಿರುಕುಳ  ನೀಡುತ್ತಿದ್ದ. ಈ ಸಂಬಂಧ ಆತನ ವಿರುದ್ಧ ದೂರು ನೀಡಲಾಗಿತ್ತು.

ಬಳಿಕ ಆರೋಪಿ ನ್ಯೂಯಾರ್ಕ್‌ಗೆ ಹೋಗಿ ಮಹಿಳೆ ದಾಖಲಾಗಿದ್ದ ವಿಶ್ವವಿದ್ಯಾಲಯಕ್ಕೆ ಸೇರಿದ್ದನು. ವಿ.ವಿ ಆವರಣದಿಂದ ದೂರ ಇರುವಂತೆ ಸೂಚನೆ ನೀಡಿದರೂ ಆತ ಅದನ್ನು ಕಡೆಗಣಿಸಿದ್ದ. ಬಳಿಕ ಮಹಿಳೆ ಕ್ಯಾಲಿಫೋರ್ನಿಯಾಕ್ಕೆ ಹೋಗಿದ್ದಾಗಲೂ ಆತ ಹಿಂಬಾಲಿಸಿದ್ದ.

ಮಹಿಳೆ ಪ್ಲಾನೊಗೆ ತೆರಳಿದ್ದ ಸಂದರ್ಭದಲ್ಲಿ 2011ರಿಂದ 2014ರವರೆಗೆ ದೂರವಾಣಿ ಮೂಲಕ ಕಿರುಕುಳ ನೀಡಿದ್ದನು. 2014ರಲ್ಲಿ ಪ್ಲಾನೊದಲ್ಲಿದ್ದ ಆಕೆಯ ಮನೆಯ ಬಾಗಿಲು ಮುರಿದು ಪಾಸ್‌ಪೋರ್ಟ್‌, ಸಾಮಾಜಿಕ ಭದ್ರತಾ ಹಕ್ಕು ಚೀಟಿ, ಆಭರಣಗಳನ್ನು ಕದ್ದೊಯ್ದಿಯ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.