ADVERTISEMENT

ಮಾತುಕತೆಗೆ ಮೋದಿ ಸರ್ಕಾರ ಅಡ್ಡಿ

ಪಾಕಿಸ್ತಾನದ ‘ದಿ ನೇಷನ್‌’ ಪತ್ರಿಕೆ ಸಂಪಾದಕೀಯದಲ್ಲಿ ವಿಶ್ಲೇಷಣೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2015, 19:36 IST
Last Updated 3 ಅಕ್ಟೋಬರ್ 2015, 19:36 IST
ನವಾಜ್ ಷರೀಫ್
ನವಾಜ್ ಷರೀಫ್   

ಇಸ್ಲಾಮಾಬಾದ್ (ಪಿಟಿಐ, ಐಎಎನ್ಎಸ್): ಭಾರತದಲ್ಲಿನ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಹೋದರೆ ಮಾತ್ರ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಮಾತುಕತೆ ಸಾಧ್ಯ ಎಂದು ಪಾಕಿಸ್ತಾನದ ‘ದಿ ನೇಷನ್‌’ ಪತ್ರಿಕೆ ಹೇಳಿದೆ.

ಮಾತುಕತೆಗೆ ಪಾಕ್‌ ಸಿದ್ಧವಿದ್ದರೂ ಭಾರತ ಮುಂದೆ ಬರುತ್ತಿಲ್ಲ. ಆದ್ದರಿಂದ ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಂಡರೆ ಶಾಂತಿ ಮಾತುಕತೆ ಸಾಧ್ಯ ಎಂದು ಸಂಪಾದಕೀಯದಲ್ಲಿ ಅಭಿಪ್ರಾಯ ಪಡಲಾಗಿದೆ. ವಿಶ್ವಸಂಸ್ಥೆಯ ಪಾಕಿಸ್ತಾನದ ಕಾಯಂ ರಾಜತಾಂತ್ರಿಕ ಅಧಿಕಾರಿ ಮಲಿಹಾ ಲೋಧಿ ಅವರು ಪಾಕಿಸ್ತಾನದಲ್ಲಿಯ ಭಯೋತ್ಪಾಕ ಕೃತ್ಯಕ್ಕೆ ಭಾರತ ಕುಮ್ಮಕ್ಕು ನೀಡಿರುವ ಸಾಕ್ಷ್ಯಾಧಾರಗಳ ದಾಖಲೆಯನ್ನು ವಿಶ್ವಸಂಸ್ಥೆಯ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ ಬೆನ್ನಲ್ಲೇ ಈ ಸಂಪಾದಕೀಯ ಪ್ರಕಟವಾಗಿದೆ.

ಭಾರತ ಕುಮ್ಮಕ್ಕು (ಲಂಡನ್): ಪಾಕಿಸ್ತಾನದಲ್ಲಿ ನಡೆಯುವ ಭಯೋತ್ಪಾದಕ ಚಟುವ ಟಿಕೆಗಳಿಗೆ  ಭಾರತ ಕುಮ್ಮಕ್ಕು ನೀಡುತ್ತಿರುವ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರಗಳು ಇವೆ ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ತಿಳಿಸಿದರು.

‘ಇದು ಗಂಭೀರ ವಿಷಯ ಆಗಿರುವುದರಿಂದ ನಾವು ಇದನ್ನು ಸೂಕ್ತ ಪುರಾವೆಗಳೊಂದಿಗೆ  ವಿಶ್ವಸಂಸ್ಥೆಯ ಗಮನಕ್ಕೆ ತಂದಿದ್ದೇವೆ. ಅಲ್ಲದೆ ಇತರ ದೇಶಗಳ ಗಮನಕ್ಕೂ ತರಲಾಗಿದೆ’ ಎಂದು ಅವರು ಹೇಳಿದರು.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ಅವರು ಪಾಕಿಸ್ತಾನಕ್ಕೆ ತೆರಳುವ ಮುನ್ನ ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಶಾಂತಿ ಮಾತುಕತೆಗೆ ತಾವು ಸೂಚಿಸಿರುವ ಕಾರ್ಯ ಸಾಧುವಾದ ಸಲಹೆಗಳನ್ನು ಒಪ್ಪಿಕೊಂಡು ಯಾವತ್ತಾದರೂ ಭಾರತ ಮಾತುಕತೆಗೆ ಬರಲೇಬೇಕಾಗುತ್ತದೆ ಎಂದು ಷರೀಫ್ ಹೇಳಿದರು. ಪಾಕಿಸ್ತಾನದ  ಮೇಲೆ ಭಾರತ ಪರೋಕ್ಷವಾಗಿ  ಯುದ್ಧ ಮಾಡುವುದನ್ನು ನಿಲ್ಲಿಸಬೇಕು, ಯುದ್ಧದಿಂದ ಯಾರ ಉದ್ದೇಶವೂ ಈಡೇರುವುದಿಲ್ಲ ಎಂದು  ಅವರು ಹೇಳಿದರು.

ಇತ್ಯರ್ಥವಾಗದ ಕಾರ್ಯಸೂಚಿ: ಕಾಶ್ಮೀರ ವಿಚಾರವು ದೇಶ ವಿಭಜನೆಯ ಸಂದರ್ಭದಲ್ಲಿ ಇತ್ಯರ್ಥವಾಗದೆ ಉಳಿದಿರುವ ವಿಷಯವಾಗಿದೆ ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ  ಜನರಲ್ ರಹೀಲ್ ಷರೀಫ್ ಹೇಳಿದ್ದಾರೆ.

ಈ ವಲಯದಲ್ಲಿ ಶಾಂತಿ ನೆಲೆಸಬೇಕು ಎಂಬ ಕಳಕಳಿ ಇದ್ದರೆ ವಿಶ್ವದ ಮುಖಂಡರು ಸಮಸ್ಯೆ ಬಗೆಹರಿಸಲು ಸಹಾಯ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ರಕ್ಷಣೆ ಮತ್ತು ಭದ್ರತೆಗೆ ಸಂಬಂಧಿಸಿದ ಸ್ವಾಯತ್ತ  ಚಿಂತಕರ ಚಾವಡಿಯಾಗಿರುವ ಲಂಡನ್‌ನ ರಾಯಲ್ ಯುನೈಟೆಡ್ ಸರ್ವಿಸಸ್‌ ಸಂಸ್ಥೆಯಲ್ಲಿ ಮಾತನಾಡಿದ ರಹೀಲ್ ‘ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಇರುವ ಭಿನ್ನಾಭಿಪ್ರಾಯಕ್ಕೆ ಕಾಶ್ಮೀರ ವಿಚಾರವೇ ಪ್ರಮುಖ ಕಾರಣ’ ಎಂದು ಹೇಳಿದ್ದಾರೆ.

ಭಾರತದ ಭದ್ರತಾ ಪಡೆಗಳಿಂದ ಪದೇ ಪದೇ ಕದನ ವಿರಾಮ ಉಲ್ಲಂಘನೆ ಆಗುತ್ತಿರುವುದು ಈ ವಲಯದಲ್ಲಿನ ಭದ್ರತೆಗೆ ಆತಂಕವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ. ಈಗ ಪಾಕಿಸ್ತಾನದಲ್ಲಿ ಆರ್ಥಿಕ ಸುಧಾರಣೆಗೆ ಅನುಕೂಲವಾಗುವಂತಹ ಭದ್ರತಾ ವ್ಯವಸ್ಥೆ ಇದೆ ಎಂದು ತಿಳಿಸಿದ್ದಾರೆ. ಆಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪಿಸಲು  ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ಅಡ್ಡಿ ಪಡಿಸುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

‘ಪಾಕ್ ಆಂತರಿಕ ವಿಚಾರದಲ್ಲಿ ಭಾರತದ ಹಸ್ತಕೇಪ: ಅಜೀಜ್
ನ್ಯೂಯಾರ್ಕ್‌ (ಪಿಟಿಐ):
‘ನಮ್ಮ  ಆಂತರಿಕ ವಿಚಾರದಲ್ಲಿ ಭಾರತ ಹಸ್ತಕ್ಷೇಪ ಮಾಡುವ ಮೂಲಕ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ’ ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ  ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಜೀಜ್ ಆಪಾದಿಸಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಬಾಕಿ ಇರುವ ಅಂತರರಾಷ್ಟ್ರೀಯ ವಿವಾದಗಳ ಪೈಕಿ ಕಾಶ್ಮೀರ ವಿಚಾರವು ಇತ್ಯರ್ಥವಾಗದೆ ಉಳಿದಿರುವ ಹಳೆಯ ವಿವಾದ ಎಂದು ಅವರು ತಿಳಿಸಿದ್ದಾರೆ.

ಇಸ್ಲಾಮ್ ಸಹಕಾರ ಸಂಘಟನೆಯ (ಐಒಸಿ) ವಿದೇಶಾಂಗ ಸಚಿವರ ವಾರ್ಷಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭಾರತದ ಭದ್ರತಾ ಪಡೆಗಳು ಕದನ ವಿರಾಮ ಉಲ್ಲಂಘಿಸುವುದರ ಜತೆಗೆ ಮಾನವ ಹಕ್ಕುಗಳನ್ನೂ ಉಲ್ಲಂಘಿಸುತ್ತಿವೆ ಎಂದು ಆಪಾದಿಸಿದ್ದಾರೆ.

ಕಾಶ್ಮೀರಿಗಳ ಮೇಲೆ ನಡೆಸುತ್ತಿರುವ ದಬ್ಬಾಳಿಕೆಯನ್ನು ನಿಲ್ಲಿಸಿ ಶಾಂತಿಯುತ ಮಾತುಕತೆಯ ಮೂಲಕ ವಿವಾದ ಬಗೆ ಹರಿಸಿಕೊಳ್ಳುವಂತೆ ಭಾರತದ ಮೇಲೆ ಒತ್ತಡ ಹೇರಬೇಕು ಎಂದು ಐಒಸಿ ವಿದೇಶಾಂಗ ಸಚಿವರನ್ನು ಅವರು ಒತ್ತಾಯಿಸಿದ್ದಾರೆ.

ಕಾಶ್ಮೀರದ ಜನತೆಗೆ ತಮ್ಮ ಆಯ್ಕೆಯ ಸರ್ಕಾರದ ಅವಕಾಶ ನೀಡದೆ ಅಂತರರಾಷ್ಟ್ರೀಯ ಆಶಯಗಳಿಗೆ ವಿರುದ್ಧವಾಗಿ ವರ್ತಿಸಲಾಗುತ್ತಿದೆ ಎಂದ ಅವರು, ಕಾಶ್ಮೀರದಲ್ಲಿ ಇದುವರೆಗೆ ನಡೆದಿರುವ ಚುನಾವಣೆಗಳಿಗೆ ಕಾನೂನಿನ ಮಾನ್ಯತೆ ಇಲ್ಲ ಎಂದು ಅಜೀಜ್ ಹೇಳಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಗೊತ್ತುವಳಿ ಅನ್ವಯ ಕಾಶ್ಮೀರದ ಜನತೆಯ ಸ್ವಾತಂತ್ರ್ಯ ವಿಚಾರ ನಿರ್ಣಯವಾಗಬೇಕು ಎಂದು ಐಒಸಿ ಸಮಾವೇಶದಲ್ಲಿ ನಿರ್ಣಯ ಅಂಗೀಕರಿಸಲಾಯಿತು. ವಿಶ್ವಸಂಸ್ಥೆಯ 70ನೇ ವಾರ್ಷಿಕ ಸಮಾವೇಶದ ವಿವಿಧ ವೇದಿಕೆಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ಮುಖಂಡರು ಪರಸ್ಪರ ಆರೋಪ ಮತ್ತು ಪ್ರತ್ಯಾರೋಪ ಮಾಡುವುದು ನಡೆಯುತ್ತಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.