ADVERTISEMENT

ಮೂರನೇ ಉಪಗ್ರಹ ಉಡಾವಣೆ

ಜಿಪಿಎಸ್‌ಗೆ ಪರ್ಯಾಯ ವ್ಯವಸ್ಥೆ ರೂಪಿಸುವ ಜಪಾನ್ ಯತ್ನ

ಏಜೆನ್ಸೀಸ್
Published 19 ಆಗಸ್ಟ್ 2017, 19:30 IST
Last Updated 19 ಆಗಸ್ಟ್ 2017, 19:30 IST
ಮೂರನೇ ಉಪಗ್ರಹ ಉಡಾವಣೆ
ಮೂರನೇ ಉಪಗ್ರಹ ಉಡಾವಣೆ   

ಟೋಕಿಯೊ: ಕಾರುಗಳ‌ ಪಥದರ್ಶನ ಮತ್ತು ಸ್ಮಾರ್ಟ್ ಫೋನುಗಳ ನಕ್ಷೆಯಲ್ಲಿ ಹೆಚ್ಚು ನಿಖರತೆ ಒದಗಿಸುವ ಉದ್ದೇಶದಿಂದ ಜಪಾನ್ ಶನಿವಾರ ಉಪಗ್ರಹ ಉಡಾವಣೆ ಮಾಡಿದೆ.

ಭೌಗೋಳಿಕ ಪ್ರದೇಶವನ್ನು ಸ್ಥಳೀಯ ವ್ಯವಸ್ಥೆಯ ಮೂಲಕವೇ ಗುರುತಿಸಲು ಸಹಾಯವಾಗುವ ತಂತ್ರಜ್ಞಾನ ರೂಪಿಸುವ ನಿಟ್ಟಿನಲ್ಲಿ ಜಪಾನ್ ಉಡಾವಣೆ ಮಾಡಿರುವ ಮೂರನೇ ಉಪಗ್ರಹ ಇದಾಗಿದೆ.

‘ಉಡಾವಣೆಯಾದ 30 ನಿಮಿಷಗಳ ಬಳಿಕ ಮಿಷಿಬಿಕಿ–3 (ಮಾರ್ಗದರ್ಶನ) ಉಪಗ್ರಹವನ್ನು ರಾಕೆಟ್ ಬಿಡುಗಡೆ ಮಾಡಿದೆ’ ಎಂದು ಜಪಾನ್ ಏರೋಸ್ಪೇಸ್ ಎಕ್ಸ್ ಪ್ಲೋರೇಷನ್ ಏಜೆನ್ಸಿ (ಜೆಎಎಕ್ಸ್ಎ) ತಿಳಿಸಿದೆ. ಕಳೆದ ವಾರವೇ ಉಪಗ್ರಹ ಉಡಾವಣೆ ಆಗಬೇಕಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ  ತಡ ಆಗಿದೆ.

ಅಮೆರಿಕ ನಿರ್ಮಿತ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ ಅನ್ನು (ಜಿಪಿಎಸ್) ಜಪಾನ್ ಅವಲಂಭಿಸಿದೆ. ಗುಡ್ಡ ಮತ್ತು ಎತ್ತರದ ಕಟ್ಟಡಗಳು ಜಿಪಿಎಸ್ ಸಿಗ್ನಲ್‌ಗೆ ಅಡ್ಡಿ ಮಾಡುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ದೇಶೀಯವಾಗಿ ಪರ್ಯಾಯ ವ್ಯವಸ್ಥೆಯೊಂದನ್ನು ರೂಪಿಸುವ ಉದ್ದೇಶ ಈ ಯೋಜನೆಯ ಹಿಂದಿದೆ.

ಇದರ ಅಂಗವಾಗಿ ಇನ್ನೂ ಒಂದು ಉಪಗ್ರಹ ಉಡಾವಣೆ ಬಾಕಿ ಇದೆ. 2023ರ ವೇಳೆಗೆ ಕಕ್ಷೆಯಲ್ಲಿ ಉಪಗ್ರಹಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುವ ಯೋಜನೆಯನ್ನು ಜಪಾನ್ ಹಾಕಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.