ADVERTISEMENT

‘ರಕ್ಷಣಾ ಯೋಜನೆಗೆ ಸುಸಮಯ’

ಅಮೆರಿಕ–ಭಾರತ ಪಾಲುದಾರಿಕೆ ಕುರಿತು ಮಾತನಾಡಿದ ಹಿರಿಯ ಅಧಿಕಾರಿ ಕೀಥ್ ವೆಬ್‌ಸ್ಟರ್

ಪಿಟಿಐ
Published 26 ಏಪ್ರಿಲ್ 2018, 19:30 IST
Last Updated 26 ಏಪ್ರಿಲ್ 2018, 19:30 IST

ವಾಷಿಂಗ್ಟನ್: ಭಾರತ–ಅಮೆರಿಕ ಪ್ರಮುಖ ರಕ್ಷಣಾ ಪಾಲುದಾರರಾಗಿದ್ದು, ಎರಡೂ ದೇಶಗಳು ರಕ್ಷಣಾ ಯೋಜನೆಗಳ ಕುರಿತು ಚಿಂತನೆ ನಡೆಸಲು ಸಮಯ ಕೂಡಿ ಬಂದಿದೆ ಎಂದು ಹಿರಿಯ ಅಧಿಕಾರಿ ಕೀಥ್ ವೆಬ್‌ಸ್ಟರ್ ಹೇಳಿದ್ದಾರೆ.

‘ಪಾಲುದಾರಿಕೆಯನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯಲು ಉಭಯ ಸರ್ಕಾರಗಳು ಯೋಜನೆಗಳನ್ನು ರೂಪಿಸಬೇಕು ಮತ್ತು ಅದಕ್ಕೆ ಬದ್ಧರಾಗಬೇಕು. ನಿಗದಿತ ಕಾಲಾವಧಿಯಲ್ಲಿ ಅದು ಜಾರಿಗೆ ಬರುವ ಕುರಿತು ಉನ್ನತ ಮಟ್ಟದ ಅಧಿಕಾರಿಗಳು ನಿಗಾ ವಹಿಸಬೇಕು’ ಎಂದು ಬರಾಕ್ ಒಬಾಮ ಅಧ್ಯಕ್ಷರಾಗಿದ್ದಾಗ ರಕ್ಷಣಾ ವ್ಯಾಪಾರ ಮತ್ತು ತಂತ್ರಜ್ಞಾನ ಉಪಕ್ರಮದ ಪ್ರತಿನಿಧಿಯಾಗಿದ್ದ ಕೀಥ್ ಅಭಿಪ್ರಾಯಪಟ್ಟಿದ್ದಾರೆ.

‘ಈ ವಲಯದ ಬಾಂಧವ್ಯ ವೃದ್ಧಿ, ಹೂಡಿಕೆ ಹಾಗೂ ಜಂಟಿ ಸಾಮರ್ಥ್ಯ ಹೆಚ್ಚಿಸಬೇಕು. ಎರಡೂ ರಾಷ್ಟ್ರಗಳು ಕೈ ಜೋಡಿಸಿದರೆ ಮುಂದಿನ ತಲೆಮಾರಿನ ಯುದ್ಧ ವಾಹನಗಳ ಅಭಿವೃದ್ಧಿಯ ಅವಕಾಶಗಳು ತೆರೆದುಕೊಳ್ಳಲಿವೆ’ ಎಂದು ಅಮೆರಿಕ–ಭಾರತ ಫ್ರೆಂಡ್‌ಶಿಪ್ ಕೌನ್ಸಿಲ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದ್ದಾರೆ.

ADVERTISEMENT

‘ಕೊಡು ಕೊಳ್ಳುವ ವ್ಯವಹಾರವಷ್ಟೇ ಅಲ್ಲದೆ, ‘ಭಾರತದಲ್ಲಿ ತಯಾರಿಸಿ’ ಉಪಕ್ರಮದ ಅಡಿ ಭಾರತವು ವಿಶಿಷ್ಟ ಯೋಜನೆಗಳನ್ನು ರೂಪಿಸಿದರೆ ಸ್ಪಷ್ಟವಾದ ಪ್ರಗತಿ ಕಾಣಲು ಸಾಧ್ಯ. ಇಂಥ ಪ್ರಯತ್ನಕ್ಕೆ ಯಾವುದೇ ಹಿಂಜರಿಕೆ ಇಲ್ಲದೆ ಅಮೆರಿಕವು ಬೆಂಬಲಿಸಬೇಕು’ ಎಂದು ಕೀಥ್‌ ವೆಬ್‌ಸ್ಟರ್ ವಾದಿಸಿದ್ದಾರೆ.

ನಿರ್ಬಂಧ ಸಲ್ಲ: ಭಾರತದ ಮೇಲೆ ನಿರ್ಬಂಧಗಳನ್ನು ಹೇರಲು ಅಮೆರಿಕ ಮುಂದಾದರೆ ಅದು ಉಭಯ ರಾಷ್ಟ್ರಗಳ ಬಾಂಧವ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ತಜ್ಞರು ಮತ್ತು ಜನಪ್ರತಿನಿಧಿಗಳು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.