ADVERTISEMENT

ರಾಜಕೀಯ ಆಟಕ್ಕೆ ಸಿದ್ಧ: ಎಚ್ಚರಿಕೆ

ಏಜೆನ್ಸೀಸ್
Published 6 ಏಪ್ರಿಲ್ 2017, 19:30 IST
Last Updated 6 ಏಪ್ರಿಲ್ 2017, 19:30 IST

ಬೀಜಿಂಗ್: ಪ್ರಕ್ಷುಬ್ಧಗೊಂಡಿರುವ ಭಾರತದ ಉತ್ತರದ ಗಡಿಯಲ್ಲಿ ಭೌಗೋಳಿಕ –ರಾಜಕೀಯ ಆಟವಾಡಲು ಚೀನಾ ಸಮರ್ಥವಾಗಿದೆ ಎಂದು ಭಾರತಕ್ಕೆ ಚೀನಾ ಮಾಧ್ಯಮಗಳು ಎಚ್ಚರಿಕೆ ನೀಡಿವೆ.  ಈ ಮೂಲಕ ಕಾಶ್ಮೀರ ವಿಷಯವನ್ನು ಪರೋಕ್ಷವಾಗಿ ಪ್ರಸ್ತಾಪಿಸಿವೆ.

ಅರುಣಾಚಲ ಪ್ರದೇಶಕ್ಕೆ ಟಿಬೆಟಿಯನ್ನರ ಧರ್ಮಗುರು ದಲೈ ಲಾಮಾ ಅವರು ಭೇಟಿ ನೀಡಿರುವುದು ವಿವಾದದ ಸ್ವರೂಪ ಪಡೆದಿರುವಾಗಲೇ ಚೀನಾ ಎಚ್ಚರಿಸಿದೆ.

‘ಚೀನಾದ ಜಿಡಿಪಿ ಭಾರತಕ್ಕಿಂತ ಎಷ್ಟೋ ಪಟ್ಟು ಅಧಿಕವಿದೆ. ಚೀನಾದ ಸೇನಾಬಲ ಹಿಂದೂ ಮಹಾಸಾಗರವನ್ನು ಆವರಿಸಬಲ್ಲದು. ಭಾರತದ ನೆರೆಯ ದೇಶಗಳ ಜತೆ ಚೀನಾ ಅತ್ಯುತ್ತಮ ಸಂಬಂಧವನ್ನೂ  ಸಾಧಿಸಿದೆ. ಭಾರತದ ಉತ್ತರದ ಗಡಿ ಪ್ರಕ್ಷುಬ್ದವಾಗಿದೆ. ಈ ವೇಳೆ  ರಾಜಕೀಯ ಆಟ ಶುರುವಾದರೆ, ಚೀನಾ ಭಾರತದ ಎದುರು ಸೋಲೊಪ್ಪಿಕೊಳ್ಳುತ್ತದೆಯೇ? ಎಂದು ಗ್ಲೋಬಲ್ ಟೈಮ್ಸ್ ಪತ್ರಿಕೆ ಸಂಪಾದಕೀಯದಲ್ಲಿ ಬರೆದಿದೆ.

ADVERTISEMENT

ಥಾಯ್ಲೆಂಡ್‌:  ಹೊಸ ಸಂವಿಧಾನಕ್ಕೆ ಸಹಿ
ಬ್ಯಾಂಕಾಕ್‌(ಎಎಫ್‌ಪಿ):
ಸೇನಾ ಬೆಂಬಲದ ಹೊಸ ಸಂವಿಧಾನಕ್ಕೆ ಥಾಯ್ಲೆಂಡ್‌ನ ರಾಜ ಗುರುವಾರ ಸಹಿ ಹಾಕಿದರು. ಇದರಿಂದಾಗಿ ಸರ್ಕಾರದಲ್ಲಿ ಸೇನೆಯ ಬಲ ಹೆಚ್ಚಿದೆ..

ರಾಜಧಾನಿ ಬ್ಯಾಂಕಾಕ್‌ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ರಾಜ ಮಹಾ ವಜಿರಾಲಾಂಗ್‌ ಕಾರ್ನ್‌ ಅವರು ಹೊಸ ಸಂವಿಧಾನಕ್ಕೆ ಸಹಿ ಹಾಕಿದರು.

1932 ರ ನಂತರ ಥಾಯ್ಲೆಂಡ್‌ನಲ್ಲಿ 21 ನೇ ಸಂವಿಧಾನ (ಚಾರ್ಟರ್‌) ಜಾರಿಯಾಗುತ್ತಿದೆ.  ಭ್ರಷ್ಟ ಜನಪ್ರತಿನಿಧಿ ಗಳನ್ನು ದೂರ ಇಡಲು ಈಗಿನ ಸಂವಿ ಧಾನ ಅವಕಾಶ ಕಲ್ಪಿಸಿದೆ. 

ಆಕ್ಷೇಪಾರ್ಹ ಹೇಳಿಕೆ  ಧರ್ಮಗುರು ಸ್ವದೇಶಕ್ಕೆ
ಸಿಂಗಪುರ:
ಯಹೂದಿಗಳು ಮತ್ತು ಕ್ರಿಶ್ಚಿಯನ್ನರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಭಾರತ ಮೂಲದ ಧರ್ಮಗುರು ನಲ್ಲ ಮೊಹಮದ್‌ ಅಬ್ದುಲ್‌ ಜಮೀಲ್‌ (46) ಅವರಿಗೆ ಸ್ವದೇಶಕ್ಕೆ ಮರಳುವಂತೆ ಇಲ್ಲಿನ ಸರ್ಕಾರ ಸೂಚಿಸಿದೆ. 

ಗೃಹ ಸಚಿವಾಲಯ ಈ ಸಂಬಂಧ ಕಳೆದ ಏಪ್ರಿಲ್‌ 3ರಂದು ಪ್ರಕಟಣೆ ಹೊರಡಿಸಿತ್ತು.

ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆ ಎರಡು ಭಿನ್ನ ಸಮುದಾಯಗಳ ನಡುವೆ ದ್ವೇಷದ ಭಾವನೆ ಮೂಡಿಸುವ ಹೇಳಿಕೆ ನೀಡಿರುವ ಬಗ್ಗೆ ತಪ್ಪೊಪ್ಪಿಕೊಂಡಿರುವ ಧರ್ಮಗುರು ಜಮೀಲ್‌, ಅಂದಾಜು ₹ 2 ಲಕ್ಷ ದಂಡ ಕಟ್ಟಿದ್ದರು. ಕ್ರಿಶ್ಚಿಯನ್‌, ಸಿಖ್‌, ಬೌದ್ಧ, ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಸದಸ್ಯರ ಮುಂದೆಯೂ ಕ್ಷಮೆಯಾಚಿಸಿದ್ದರು. ‘ಸರ್ಕಾರದ ತೀರ್ಮಾನವನ್ನು ಗೌರವಿಸುತ್ತೇನೆ’ ಎಂದು ಜಮೀಲ್‌ ತಿಳಿಸಿದ್ದಾರೆ.

ಹೂಡಾ ವಿರುದ್ಧ ಸಿಬಿಐ ಪ್ರಕರಣ
ನವದೆಹಲಿ:
ಕಾಂಗ್ರೆಸ್ ಪಕ್ಷದ ನಿಯಂತ್ರಣದಲ್ಲಿ ಇರುವ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ನಡೆಸುವ ಅಸೋಸಿ ಯೇಟೆಡ್ ಜರ್ನಲ್ಸ್‌ಗೆ ಭೂಮಿಯನ್ನು ಮರು ಹಂಚಿಕೆ ಮಾಡಿ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ ಆಪಾದನೆಯಲ್ಲಿ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪೇಂದ್ರ ಹೂಡಾ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

ಭೂಮಿಯನ್ನು ಮರು ಹಂಚಿಕೆ ಮಾಡುವ ಮೂಲಕ ರಾಜ್ಯದ ಬೊಕ್ಕಸಕ್ಕೆ 62 ಲಕ್ಷ ನಷ್ಟ ಉಂಟುಮಾಡಿ ವಂಚಿಸಲಾಗಿದೆ ಮತ್ತು ಒಳಸಂಚು ನಡೆಸಲಾಗಿದೆ ಎಂದು ಹೂಡಾ ವಿರುದ್ಧ ದೋಷಾರೋಪ ಮಾಡಲಾಗಿದೆ.

ಅಸೋಸಿಯೇಟೆಡ್ ಜರ್ನಲ್ಸ್‌ಗೆ  ಹರಿಯಾಣ ನಗರಾಭಿವೃದ್ಧಿ ಪ್ರಾಧಿಕಾರವು 3,500 ಚದರ್ ಮೀಟರ್ ಜಮೀನು ಮಂಜೂರು ಮಾಡಿತ್ತು. ಆದರೆ ಕಂಪೆನಿಯು ನಿಗದಿತ ಅವಧಿಯಲ್ಲಿ ಕಟ್ಟಡ ನಿರ್ಮಿಸದ ಕಾರಣ ಭೂಮಿಯನ್ನು ವಾಪಸ್ ಪಡೆಯಲಾಗಿತ್ತು.

ಸರ್ಕಾರದ ಈ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.  ಭೂಪೇಂದ್ರ ಹೂಡಾ ಅವರು ಹರಿಯಾಣ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದಾಗ ಭೂಮಿಯನ್ನು ಪುನಃ ಮಂಜೂರು ಮಾಡಲಾಗಿತ್ತು.

ಲೈಂಗಿಕ ಕಿರುಕುಳ ಸಂತ್ರಸ್ತೆಗೆ 90 ದಿನ ರಜೆ
ನವದೆಹಲಿ:
ಸರ್ಕಾರಿ ಕಚೇರಿಯಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳಾ ಉದ್ಯೋಗಿಯು ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ 90 ದಿನಗಳವರೆಗೆ ಸಂಬಳಸಹಿತ ರಜೆ ಪಡೆಯುವುದಕ್ಕೆ ಅವಕಾಶ ಇದೆ.

2013ರ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ, ಪರಿಹಾರ ಕಾಯ್ದೆಯ ಪ್ರಕಾರ ಈ ಅವಕಾಶವಿದೆ ಎಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಲಿಖಿತ ಉತ್ತರದಲ್ಲಿ ರಾಜ್ಯಸಭೆಗೆ ತಿಳಿಸಿದರು.

ಪಾಕ್ ರಾಷ್ಟ್ರಗೀತೆ ಹಾಡಿದ 12  ಯುವಕರ ವಶ
ಶ್ರೀನಗರ (ಐಎಎನ್ಎಸ್):
ಕ್ರಿಕೆಟ್ ಪಂದ್ಯದ ವೇಳೆ ಪಾಕಿಸ್ತಾನದ ರಾಷ್ಟ್ರಗೀತೆ ಹಾಡಿರುವ 12 ಯುವಕರನ್ನು  ಇಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಾಕಿಸ್ತಾನ ಕ್ರಿಕೆಟ್‌ ತಂಡದ ಸಮವಸ್ತ್ರ ಧರಿಸಿದ್ದ  ಈ ಯುವಕರು, ಆ ದೇಶದ ರಾಷ್ಟ್ರಗೀತೆ ಹಾಡುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

ಗಂದೇರ್ಬಲ್ ಜಿಲ್ಲೆಯ ಪೊಲೀಸರು ಬುಧವಾರ ಸಂಜೆ ಈ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದೇ ಎರಡರಂದು ಗಂಡೇರ್ಬಲ್‌ನಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆ ಈ ದೃಶ್ಯಾವಳಿಗಳನ್ನು ಚಿತ್ರೀಕರಿಸಲಾಗಿದೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.