ADVERTISEMENT

ಲಂಡನ್‌: ಅತ್ಯಾಚಾರ ಸಂತ್ರಸ್ತೆಯಿಂದ ಕ್ಲಿನಿಕ್‌

​ಪ್ರಜಾವಾಣಿ ವಾರ್ತೆ
Published 29 ಜುಲೈ 2016, 19:30 IST
Last Updated 29 ಜುಲೈ 2016, 19:30 IST

ಲಂಡನ್ (ಪಿಟಿಐ):  ಭಾರತೀಯ ಮೂಲದ ಅತ್ಯಾಚಾರ ಸಂತ್ರಸ್ತೆಯೊಬ್ಬರು ಅತ್ಯಾಚಾರ ಮತ್ತು ಲೈಂಗಿಕ ಹಲ್ಲೆಗೊಳಗಾದವರಿಗಾಗಿ ಬ್ರಿಟನ್‌ನಲ್ಲಿ ಮೊದಲ ಹೆರಿಗೆ ಕ್ಲಿನಿಕ್‌ ತೆರೆದಿದ್ದಾರೆ.

ನುರಿತ ದಾದಿಯರು ಮತ್ತು ಮನೋವೈದ್ಯರನ್ನು ಕ್ಲಿನಿಕ್‌ನಲ್ಲಿ ಸೇವೆಗೆ ಲಭ್ಯರಿದ್ದಾರೆ. ‘ಮೈ ಬಾಡಿ ಬ್ಯಾಕ್ ಪ್ರಾಜೆಕ್ಟ್‌’ ಎಂಬ ಈ ಕ್ಲಿನಿಕ್‌ ಬಾರ್ಟ್ಸ್ ಹೆಲ್ತ್ ಎನ್‌ಎಚ್‌ಎಸ್‌ ಟ್ರಸ್ಟ್‌ನ ಸಹಯೋಗದಲ್ಲಿ ಲಂಡನ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಪ್ರಸವಪೂರ್ವ ವಿಶೇಷ ಶುಶ್ರೂಷೆ ತರಬೇತಿ ಪಡೆದ  ದಾದಿಯರು, ಸ್ತ್ರೀರೋಗ ತಜ್ಞ ವೈದ್ಯರು, ಮಕ್ಕಳ ತಜ್ಞರು ಚಿಕಿತ್ಸೆ ನೀಡುತ್ತಾರೆ.
‘ಈ ಕ್ಲಿನಿಕ್‌ ಯಶಸ್ವಿಯಾದಲ್ಲಿ ಬ್ರಿಟನ್‌ನ ಇತರ ಆಸ್ಪತ್ರೆಗಳಿಗೂ ಯೋಜನೆಯನ್ನು ವಿಸ್ತರಿಸಲಾಗುವುದು. 

ಸಂತ್ರಸ್ತರು ತಾವು ಅನುಭವಿಸಿದ ತೊಂದರೆಯ ಬಗ್ಗೆ ಕ್ಲಿನಿಕ್‌ನ ಆಡಳಿತ ವಿಭಾಗಕ್ಕೆ ತಿಳಿಸುವುದು ಕಡ್ಡಾಯವಲ್ಲ. ಆದರೆ ವೈದ್ಯರ ಭೇಟಿಗೆ ಸಮಯ ನಿಗದಿಪಡಿಸಿ, ಬಳಿಕ ಶುಶ್ರೂಷೆ ಪಡೆಯಬಹುದು’ ಎಂದು ಇಲ್ಲಿ ಕನ್ಸಲ್ಟೆಂಟ್‌ ಮಿಡ್‌ವೈಫ್‌ ಆಗಿರುವ ಇಂದರ್‌ಜೀತ್‌ ಕೌರ್‌ ಬಿಬಿಸಿಗೆ ತಿಳಿಸಿದ್ದಾರೆ.

ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತರಿಗೆ ರಾಯಲ್‌ ಲಂಡನ್‌ ಆಸ್ಪತ್ರೆಯಲ್ಲಿನ ಹೆರಿಗೆ ವಾರ್ಡ್‌ನಲ್ಲಿ ಸಮಗ್ರ ಸೇವೆ, ಅಗತ್ಯವಾದ ಪ್ರಸವಪೂರ್ವ ಶುಶ್ರೂಷೆಗಳನ್ನು ಕ್ಲಿನಿಕ್‌ನಲ್ಲಿ ನೀಡಲಾಗುವುದು. ಭೇಟಿ ಪೂರ್ವನಿಗದಿಗೆ ಇ–ಮೇಲ್ ಮೂಲಕವೂ ಮನವಿ ಸಲ್ಲಿಸಬಹುದು.

ಈ ಕ್ಲಿನಿಕ್‌ ಆರಂಭಿಸಿರುವ ಮಹಿಳೆ ಎಳೆಯ ವಯಸ್ಸಿನಲ್ಲಿ ಅತ್ಯಾಚಾರಕ್ಕೆ ಗುರಿಯಾಗಿದ್ದರು. 2015ರ ಆಗಸ್ಟ್‌ನಲ್ಲಿ ರಾಯಲ್‌ ಲಂಡನ್‌ ಆಸ್ಪತ್ರೆಯಲ್ಲಿ ಲೈಂಗಿಕ ಆರೋಗ್ಯ ಕ್ಲಿನಿಕ್‌ ಆರಂಭಿಸಿದ್ದರು.

2015ರಿಂದ ಸುಮಾರು 800 ಮಹಿಳೆಯರು ಈ ಕ್ಲಿನಿಕ್‌ಗೆ ಭೇಟಿ ನೀಡಿದ್ದಾರೆ. ಇದೇ ರೀತಿಯ ಕ್ಲಿನಿಕ್‌ಗಳನ್ನು ಗ್ಲಾಸ್ಗೋ ಹಾಗೂ ಸ್ಕಾಟ್ಲೆಂಡ್‌ಗಳಲ್ಲಿ ಆರಂಭಿಸಲು ಮಾತುಕತೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.