ADVERTISEMENT

ಲಖ್ವಿ ವಿವಾದ: ಬದಲಾದ ಚೀನಾ

ವಿಶ್ವಸಂಸ್ಥೆ ನಿರ್ಬಂಧ ಸಮಿತಿಯಲ್ಲಿ ಭಾರತದ ವಿರುದ್ಧ ನಿಂತ ಬಳಿಕ ಹೊಸ ನಡೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2015, 19:30 IST
Last Updated 2 ಜುಲೈ 2015, 19:30 IST

ಬೀಜಿಂಗ್‌ (ಪಿಟಿಐ): ಭಯೋತ್ಪಾದನೆ ವಿರುದ್ಧ ಜಂಟಿ ಕಾರ್ಯತಂತ್ರದ ಭಾಗವಾಗಿ ಮುಂಬೈ ದಾಳಿಯ ಸಂಚುಕೋರ ಝಕೀವುರ್‌ ರೆಹಮಾನ್‌ ಲಖ್ವಿಯ ಬಿಡುಗಡೆಯ ವಿಚಾರವನ್ನು ಭಾರತದೊಂದಿಗೆ ಚರ್ಚಿಸುವ ಪ್ರಸ್ತಾವವನ್ನು ಚೀನಾ ಮುಂದಿಟ್ಟಿದೆ.

ಆಶ್ಚರ್ಯವೆಂದರೆ, ಲಖ್ವಿ ಬಿಡುಗಡೆಗೆ ಸಂಬಂಧಿಸಿ ಪಾಕಿಸ್ತಾನದ ವಿರುದ್ಧ ವಿಶ್ವಸಂಸ್ಥೆ ಕ್ರಮ ಕೈಗೊಳ್ಳುವುದಕ್ಕೆ ಚೀನಾ ತಡೆ ಒಡ್ಡಿದ್ದು ಭಾರತದ ಕಳವಳಕ್ಕೆ ಕಾರಣವಾಗಿತ್ತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನದ ಪರವಾಗಿ ಚೀನಾ ನಿಂತ ಬಳಿಕ ಇದೇ ಮೊದಲ ಬಾರಿಗೆ ಈ ವಿಷಯದ ಬಗ್ಗೆ ಹೇಳಿಕೆ ನೀಡಲಾಗಿದೆ.

‘ಭಾರತ, ಚೀನಾಗಳೆರಡೂ ಭಯೋತ್ಪಾದನೆಯಿಂದ ಸಂತ್ರಸ್ತವಾಗಿವೆ. ಭಯೋತ್ಪಾದನೆ ಬಗ್ಗೆ ನಾವು ಒಂದೇ ರೀತಿಯ ನಿಲುವು ಹೊಂದಿದ್ದೇವೆ. ಭಯೋತ್ಪಾದನೆ ತಡೆಯಲು ಪರಿಣಾಮಕಾರಿಯಾಗಿಯೂ  ಕೆಲಸ ಮಾಡುತ್ತಿದ್ದೇವೆ. ನಾವು ಎಲ್ಲ ರೀತಿಯ ಭಯೋತ್ಪಾ
ದನೆಯನ್ನು ವಿರೋಧಿಸುತ್ತಿದ್ದೇವೆ’ ಎಂದು ಚೀನಾದ ಏಷ್ಯಾ ವ್ಯವಹಾರಗಳ ಇಲಾಖೆಯ ಉಪ ಮಹಾನಿರ್ದೇಶಕ ಹುವಾಂಗ್‌ ಕ್ಸಿಲಿಯನ್‌ ಹೇಳಿದ್ದಾರೆ.

ಆದರೆ ಬಹುಪಕ್ಷೀಯವಾದ ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿ ಹೆಚ್ಚಿನ ಚರ್ಚೆ ನಡೆಸಬೇಕಾದ ಅಗತ್ಯ ಇದೆ ಎಂದೂ ಅವರು ಹೇಳಿದ್ದಾರೆ. ಭಯೋತ್ಪಾದನೆ ತಡೆಗೆ ಸಂಬಂಧಿಸಿ ಭಾರತ ಮತ್ತು ಚೀನಾಗಳೆರಡೂ ವಿಶ್ವಸಂಸ್ಥೆಯಲ್ಲಿ ಸಮಾನ ನಿಲುವು ಹೊಂದಿದೆ ಎಂದೂ ಹುವಾಂಗ್‌ ಹೇಳಿದ್ದಾರೆ.

ಲಖ್ವಿ ವಿಷಯದಲ್ಲಿ ಚೀನಾವು ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ನಿಲುವು ತಳೆದಿತ್ತು. ಭಾರತದ ವಿನಂತಿಯ ಮೇರೆಗೆ ವಿಶ್ವಸಂಸ್ಥೆಯ ನಿರ್ಬಂಧಗಳ ಸಮಿತಿ ಸಭೆ ಸೇರಿತ್ತು. ಲಖ್ವಿಯ ಬಿಡುಗಡೆಗೆ ಸಂಬಂಧಿಸಿ ಪಾಕಿಸ್ತಾನದಿಂದ ಸ್ಪಷ್ಟನೆ ಕೇಳುವ ಉದ್ದೇಶವನ್ನು ಸಮಿತಿ ಹೊಂದಿತ್ತು. ಆದರೆ ಭಾರತ ಸಾಕಷ್ಟು ಸಾಕ್ಷ್ಯಗಳನ್ನು ನೀಡಿಲ್ಲ ಎಂಬ ನೆಪ ಮುಂದಿಟ್ಟ ಚೀನಾ ಕ್ರಮ ಕೈಗೊಳ್ಳುವುದನ್ನು ತಡೆದಿತ್ತು.

ಇದಲ್ಲದೆ, ಹಿಜ್ಬುಲ್‌ ಮುಜಾಹಿದೀನ್‌ ಮುಖ್ಯಸ್ಥ ಸಯ್ಯದ್‌ ಸಲಾಹುದ್ದೀನ್‌ ಮತ್ತು ಲಷ್ಕರ್‌ ಎ ತಯಬಾ ಮುಖಂಡ ಹಫೀಜ್‌ ಸಯೀದ್‌ ವಿರುದ್ಧ ಭದ್ರತಾ ಮಂಡಳಿ ಕ್ರಮ ಕೈಗೊಳ್ಳಬೇಕೆಂಬ ಭಾರತದ ಒತ್ತಾಯದ ವಿರುದ್ಧವಾಗಿಯೂ ಚೀನಾ ನಿಂತಿತ್ತು.

ಸಂಪರ್ಕ ರಸ್ತೆ: ಭಾರತ, ಚೀನಾ ಮತ್ತು ನೇಪಾಳದ ನಡುವೆ ಆರ್ಥಿಕ ವಲಯವೊಂದನ್ನು ಸ್ಥಾಪಿಸುವ ಪ್ರಸ್ತಾವವನ್ನು ಚೀನಾ ಮುಂದಿಟ್ಟಿದೆ. ಟಿಬೆಟ್‌ ಮೂಲಕ ನೇಪಾಳ ಮತ್ತು ಭಾರತವನ್ನು ಸಂಪರ್ಕಿಸುವ ಮಾರ್ಗ ಮತ್ತು ಭೂಕಂಪದಿಂದ ನಾಶವಾಗಿರುವ ನೇಪಾಳದ ಪುನರ್‌ ನಿರ್ಮಾಣ ಈ ಯೋಜನೆಯ ಭಾಗವಾಗಿದೆ.

ಈ ಪ್ರದೇಶದಲ್ಲಿ ಸಂಪರ್ಕವನ್ನು ಉತ್ತಮಪಡಿಸುವುದಕ್ಕಾಗಿ ಇದು ಮಹತ್ವದ ಉಪಕ್ರಮವಾಗಿದೆ ಎಂದು ಹುವಾಂಗ್‌ ಕ್ಸಿಲಿಯನ್‌ ಹೇಳಿದ್ದಾರೆ. ಹಿಮಾಲಯವನ್ನು ಹಾದು ಟಿಬೆಟ್‌  ಮೂಲಕ ನೇಪಾಳ, ಭಾರತವನ್ನು ಸಂಪರ್ಕಿಸುವ ರೈಲು ಮಾರ್ಗ ನಿರ್ಮಾಣಕ್ಕೂ ಚೀನಾ ಆಸಕ್ತಿ ಹೊಂದಿದೆ. ಈ ಬಗ್ಗೆ ಮೂರು ದೇಶಗಳ ನಡುವೆ ಚರ್ಚೆ ಅಗತ್ಯವಾಗಿದೆ. ಭಾರತ ಪೂರಕವಾಗಿ ಸ್ಪಂದಿಸಿದರೆ ಈ ಬಗ್ಗೆ ಮುಂದಡಿ ಇಡಬಹುದು ಎಂದು ಹುವಾಂಗ್‌ ಹೇಳಿದ್ದಾರೆ.
*
‘ಕಾಶ್ಮೀರದಲ್ಲಿ ಯೋಧರನ್ನು ನೇಮಿಸಿಲ್ಲ’
ಬೀಜಿಂಗ್‌ (ಐಎಎನ್‌ಎಸ್‌):
ತನ್ನ ದೇಶದ ಯಾವುದೇ ಸಶಸ್ತ್ರ ಸಿಬ್ಬಂದಿಯನ್ನು  ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನೇಮಿಸಿಲ್ಲ ಎಂದು ಚೀನಾ ಸ್ಪಷ್ಟಪಡಿಸಿದೆ.   ಯೋಧರ ನೇಮಕ  ಕುರಿತ ವರದಿಗಳು ಕೇವಲ ಕಟ್ಟುಕಥೆಗಳು ಎಂದು ಹೇಳಿದೆ.

ಆಧುನಿಕ ತಂತ್ರಜ್ಞಾನ ಮತ್ತು ಉಪಗ್ರಹಗಳ ಬಳಕೆಯ ಈ ಕಾಲದಲ್ಲಿ ಎಲ್ಲೆಲ್ಲಿ ಯೋಧರನ್ನು ನೇಮಿಸಲಾಗಿದೆ ಎಂದು ಕಂಡು ಹಿಡಿಯಬಹುದಾಗಿದೆ ಎಂದು  ಭಾರತ ಮತ್ತು ಪಾಕಿಸ್ತಾನಗಳ ದ್ವಿಪಕ್ಷೀಯ ಬಾಂಧವ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಹಿರಿಯ ಅಧಿಕಾರಿಯೊಬ್ಬರು  ಹೇಳಿದ್ದಾರೆ.
*
ಮುಖ್ಯಾಂಶಗಳು
* ಭಯೋತ್ಪಾದನೆ ವಿರುದ್ಧ ಖಚಿತ ನಿಲುವು: ಚೀನಾ ಸ್ಪಷ್ಟನೆ
* ಭಾರತ, ನೇಪಾಳ, ಚೀನಾ  ಸಂಪರ್ಕ ರಸ್ತೆಗೆ ಚಿಂತನೆ
* ಭಾರತ ಉತ್ಸಾಹ ತೋರಿದರೆ ರೈಲು ಮಾರ್ಗ ನಿರ್ಮಾಣಕ್ಕೂ ಸಿದ್ಧ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT