ADVERTISEMENT

ವಿಪ್ರೊ ವಿರುದ್ಧ ದೂರಿತ್ತ ಭಾರತೀಯ ಉದ್ಯೋಗಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2015, 19:54 IST
Last Updated 7 ಅಕ್ಟೋಬರ್ 2015, 19:54 IST

ಲಂಡನ್‌ (ಪಿಟಿಐ): ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಕಂಪೆನಿ ವಿಪ್ರೊದ ಲಂಡನ್‌ನ ಕಚೇರಿಯಲ್ಲಿ ಉದ್ಯೋಗಿಯಾಗಿದ್ದ ಭಾರತೀಯ ಮೂಲದ ಮಹಿಳೆಯೊಬ್ಬರು ₹10 ಕೋಟಿ ಪರಿಹಾರ ಕೋರಿ ಕಂಪೆನಿ ವಿರುದ್ಧ ಇಲ್ಲಿನ ಎಂಪ್ಲಾಯಿಮೆಂಟ್‌ ಟ್ರಿಬ್ಯುನಲ್‌ಗೆ ದೂರು ನೀಡಿದ್ದಾರೆ.

ಕಂಪೆನಿ ಮೇಲೆ ಲಿಂಗ ತಾರತಮ್ಯ, ಅಸಮಾನ ವೇತನ ಮತ್ತು ಅನ್ಯಾಯವಾಗಿ ಕೆಲಸದಿಂದ ತೆಗೆದು ಹಾಕಿರುವುದಾಗಿ 39ರ ಹರೆಯದ ದೂರುದಾರ ಮಹಿಳೆ  ಆರೋಪ ಮಾಡಿದ್ದಾರೆ. ಕಚೇರಿಯಲ್ಲಿರುವ ವಿವಾಹಿತ ವ್ಯಕ್ತಿಯೊಬ್ಬರ ಜತೆ ಅನೈತಿಕ ಸಂಬಂಧ ಬೆಳೆಸುವಂತೆ ತಮ್ಮ ಮೇಲೆ ಒತ್ತಡ ಹೇರಲಾಗಿತ್ತು. ಹಿರಿಯ ಉಪಾಧ್ಯಕ್ಷರಾಗಿದ್ದ ಆ ವ್ಯಕ್ತಿ ತಮಗೆ ಕಿರುಕುಳ ನೀಡುತ್ತಿದ್ದರು ಎಂದೂ ದೂರಿನಲ್ಲಿ ಆರೋಪಿದ್ದಾರೆ.

‘ಕಂಪೆನಿಯ ವ್ಯವಹಾರ ನಿಮಿತ್ತ  2013ರಲ್ಲಿ ಸ್ಟಾಕ್‌ಹೋಮ್‌ಗೆ ಪ್ರವಾಸ ಕೈಗೊಂಡಿದ್ದ ಸಂದರ್ಭ 54ರ ಹರೆಯದ ಆ ವ್ಯಕ್ತಿ ಅಶ್ಲೀಲವಾಗಿ ಮಾತನಾಡಿದ್ದರು. ನಾನು ಧರಿಸಿದ್ದ ಬ್ಲೌಸ್‌ ತುಂಬಾ ಬಿಗಿಯಾಗಿದೆ ಎಂದಿದ್ದರು’ ಎಂದು ದೂರಿನಲ್ಲಿ ವಿವರಿಸಿದ್ದಾರೆ. ‘ಪುರುಷ ಉದ್ಯೋಗಿಗಳಿಗಿಂತ ಕಡಿಮೆ ವೇತನ ನೀಡುವ ಮೂಲಕ ವೇತನ ತಾರತಮ್ಯ ಎಸಗಲಾಗಿತ್ತು. ನಾನು ವಾರ್ಷಿಕವಾಗಿ ₹75 ಲಕ್ಷ ವೇತನ ಪಡೆಯುತ್ತಿದ್ದೆ. ಆದರೆ ನನ್ನದೇ ಹುದ್ದೆಯಲ್ಲಿದ್ದ ಪುರುಷ ಉದ್ಯೋಗಿಗಳಿಗೆ ವಾರ್ಷಿಕವಾಗಿ ₹1.50 ಕೋಟಿ ಸಿಗುತ್ತಿತ್ತು’ ಎಂದು ಅವರು ದೂರಿದ್ದಾರೆ.

ಪ್ರತಿಕ್ರಿಯೆಗೆ ನಕಾರ: ಮಹಿಳೆ ನೀಡಿದ ದೂರಿನ ಬಗ್ಗೆ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಲು ವಿಪ್ರೊ ನಿರಾಕರಿಸಿದೆ. ‘ಕಂಪೆನಿ ವಿರುದ್ಧದ ದೂರಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಎಲ್ಲ ಉದ್ಯೋಗಿಗಳನ್ನು ಸಮಾನ ರೀತಿಯಲ್ಲಿ ನೋಡಲು ವಿಪ್ರೊ ಬದ್ಧವಾಗಿದೆ. ಅದೇ ರೀತಿ ಕೆಲಸದ ಸ್ಥಳದಲ್ಲಿ ಯಾವುದೇ ಕಿರುಕುಳ ಮತ್ತು ತಾರತಮ್ಯ ಇಲ್ಲದಂತೆ ನೋಡುತ್ತಾ ಬಂದಿದೆ. ಈ ದೂರಿನ ವಿರುದ್ಧ ನ್ಯಾಯಾಲಯದಲ್ಲೇ ಹೋರಾಟ ನಡೆಸುತ್ತೇವೆ’ ಎಂದು ಕಂಪೆನಿಯ ಪ್ರಕಟಣೆ ತಿಳಿಸಿದೆ. ‘ಕಂಪೆನಿಯ ನಿಯಮಗಳನ್ನು ಉಲ್ಲಂಘಿಸಿರುವುದು ಸಾಬೀತಾದ ಕಾರಣ ಇಬ್ಬರನ್ನೂ ಕೆಲಸದಿಂದ ವಜಾಗೊಳಿಸಲಾಗಿದೆ’ ಎಂದು ಪ್ರಕಟಣೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.