ADVERTISEMENT

ವೃದ್ಧೆಯ ಮೇಲೆ ಲೈಂಗಿಕ ದೌರ್ಜನ್ಯ: 100 ವರ್ಷ ಜೈಲು

ಪಿಟಿಐ
Published 29 ಏಪ್ರಿಲ್ 2017, 19:30 IST
Last Updated 29 ಏಪ್ರಿಲ್ 2017, 19:30 IST
ಟೆವಿನ್‌
ಟೆವಿನ್‌   

ನ್ಯೂಯಾರ್ಕ್‌: 89 ವರ್ಷದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ದರೋಡೆ ನಡೆಸಿದ 23 ವರ್ಷದ ಯುವಕನಿಗೆ ನ್ಯಾಯಾಲಯ 100 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಅಮೆರಿಕದ ಇಲಿನಾಯ್ಸ್‌ ರಾಜ್ಯದ  ಬೋಲಿಂಗ್‌ಬ್ರೂಕ್‌ ಗ್ರಾಮದ ಟೆವಿನ್‌ ರೈನೆ ಎಂಬಾತನಿಗೆ ಡ್ಯೂಪೇಜ್‌ ಪ್ರಾಂತ್ಯದ ನ್ಯಾಯಾಧೀಶರು ಜೈಲು ಶಿಕ್ಷೆ ನೀಡಿದ್ದಾರೆ.

2015ರಲ್ಲಿ ಮಹಿಳೆಯ ಮನೆಯ ಬಾಗಿಲು ಮುರಿದು ಒಳ ನುಗ್ಗಿದ ಟೆವಿನ್‌, ಬಂದೂಕು ತೋರಿಸಿ ಬೆದರಿಕೆಯೊಡ್ಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಅನಂತರ ಬಲವಂತವಾಗಿ ಎಟಿಎಂಗೆ ಕರೆದೊಯ್ದು ಹಣ ದೋಚಿದ್ದ ಎಂದು ದೂರು ದಾಖಲಾಗಿತ್ತು. ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದಕ್ಕೆ 60 ವರ್ಷ ಹಾಗೂ ಶಸ್ತ್ರಧಾರಿಯಾಗಿ ದರೋಡೆ ನಡೆಸಿರುವುದಕ್ಕೆ 40 ವರ್ಷ ಜೈಲು ಶಿಕ್ಷೆ ನೀಡಲಾಗಿದೆ.

‘ತೀರ್ಪನ್ನು ಪುನರ್‌ ಪರಿಶೀಲಿಸುವಂತೆ ಆರೋಪಿ ಪರ ವಕೀಲರು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ’ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.

ಟೆವಿನ್‌, ಪರೋಲ್‌ ಮೇಲೆ ಬಿಡುಗಡೆಗೆ ಅರ್ಹನಾಗಬೇಕಾದರೆ ಆತ 100 ವರ್ಷಗಳ ಶಿಕ್ಷೆಯ ಪ್ರಮಾಣದಲ್ಲಿ ಶೇ85ರಷ್ಟು ಜೈಲುಶಿಕ್ಷೆ ಅನುಭವಿಸಬೇಕಾಗಿದೆ.

‘ಲೈಂಗಿಕ ದೌರ್ಜನ್ಯ ಎಸಗಿ ದರೋಡೆ ನಡೆಸಿದ ವ್ಯಕ್ತಿ ಟೆವಿನ್‌ ಅಲ್ಲ, ಅಪರಿಚಿತ ವ್ಯಕ್ತಿ ಎಂದು ಆತನ ಪರ ವಕೀಲರು ವಾದಿಸಿದ್ದರು. ಆದರೆ ಬಂದೂಕಿನಲ್ಲಿ ಟೆವಿನ್‌ ಹಾಗೂ ಮಹಿಳೆಯ ಡಿಎನ್‌ಎ ಪತ್ತೆಯಾಗಿತ್ತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.