ADVERTISEMENT

ಶ್ರೀನಿವಾಸ್‌ ಕೂಚಿಭೊಟ್ಲ ಹತ್ಯೆಗೆ ಟ್ರಂಪ್‌ ಖಂಡನೆ

ಪಿಟಿಐ
Published 1 ಮಾರ್ಚ್ 2017, 20:30 IST
Last Updated 1 ಮಾರ್ಚ್ 2017, 20:30 IST
ಶ್ರೀನಿವಾಸ್‌ ಕೂಚಿಭೊಟ್ಲ ಹತ್ಯೆಗೆ ಟ್ರಂಪ್‌ ಖಂಡನೆ
ಶ್ರೀನಿವಾಸ್‌ ಕೂಚಿಭೊಟ್ಲ ಹತ್ಯೆಗೆ ಟ್ರಂಪ್‌ ಖಂಡನೆ   

ವಾಷಿಂಗ್ಟನ್‌: ಭಾರತದ ಎಂಜಿನಿಯರ್‌ ಕೂಚಿಭೊಟ್ಲ ಅವರ ಹತ್ಯೆ ಕುರಿತು ಟ್ರಂಪ್‌ ಮೌನ ಮುರಿದಿದ್ದು, ಕನ್ಸಾಸ್‌ನಲ್ಲಿ ನಡೆದ ಘಟನೆಯನ್ನು ಖಂಡಿಸಿದ್ದಾರೆ.

ಅಮೆರಿಕ ಕಾಂಗ್ರೆಸ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಮಂಗಳವಾರ ಚೊಚ್ಚಲ ಭಾಷಣ ಮಾಡಿದ ಅವರು, ‘ಯೆಹೂದಿಗಳನ್ನು ಗುರಿಯಾಗಿಸಿ ನಡೆಯುತ್ತಿರುವ ದಾಳಿಗಳು ಮತ್ತು ಕನ್ಸಾಸ್‌ನಲ್ಲಿ ನಡೆದ ಗುಂಡಿನ ದಾಳಿ ಖಂಡನಾರ್ಹ. ದ್ವೇಷ ಮತ್ತು ಕೆಟ್ಟ ಶಕ್ತಿಗಳ ವಿರುದ್ಧ ಅಮೆರಿಕ ಒಗ್ಗಟ್ಟಿನಿಂದ ಹೋರಾಡಲಿದೆ’ ಎಂದು ಹೇಳಿದ್ದಾರೆ.

ಕುಟುಂಬ ಸದಸ್ಯರನ್ನು ಆಹ್ವಾನಿಸಬೇಕಿತ್ತು: ಭಾಷಣದ ಸಂದರ್ಭದಲಿ ಕೂಚಿಭೊಟ್ಲ ಅವರ ಕುಟುಂಬದ ಸದಸ್ಯರನ್ನು ಆಹ್ವಾನಿಸದ ಟ್ರಂಪ್‌ ಕ್ರಮವನ್ನು ಡೆಮಾಕ್ರಟಿಕ್‌ ಪಕ್ಷದ ಸೆನೆಟರ್‌ ಬರ್ನಿ ಸ್ಯಾಂಡರ್ಸ್‌ ಟೀಕಿಸಿದ್ದಾರೆ.

ಶ್ರೀನಿವಾಸ್‌ ಅವರ ಕುಟುಂಬದ ಸದಸ್ಯರನ್ನು ಟ್ರಂಪ್‌ ಏಕೆ ಆಹ್ವಾನಿಸಿಲ್ಲ ಎಂದು ಸ್ಯಾಂಡರ್ಸ್‌ ತಮ್ಮ ‘ಫೇಸ್‌ಬುಕ್‌’ ಖಾತೆಯಲ್ಲಿ ಪ್ರಶ್ನಿಸಿದ್ದಾರೆ.

‘ಯಾವುದೇ ವ್ಯಕ್ತಿಯ ಹತ್ಯೆ ನಡೆದರೂ ಅದೊಂದು ದುರಂತ. ಟ್ರಂಪ್‌ ಅವರು ವಲಸಿಗರ ವಿರುದ್ಧ ದ್ವೇಷ ಕಾರುತ್ತಿದ್ದಾರೆ. ದೇಶವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ವಲಸೆ ನೀತಿ: ನಿಲುವು ಸಡಿಲ
ವಲಸೆ ನೀತಿ ಬಗೆಗಿನ ತಮ್ಮ ಬಿಗಿ ನಿಲುವನ್ನು ಸಡಿಲಗೊಳಿಸಿರುವ ಟ್ರಂಪ್‌, ‘ಅರ್ಹತೆ ಆಧಾರದ ವಲಸೆ ನೀತಿ’ ಜಾರಿಗೆ ತರುವಂತೆ ಸಲಹೆ ನೀಡಿದ್ದಾರೆ. ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ ಕೆಲ ದೇಶಗಳಲ್ಲಿ ಅರ್ಹತೆ ಆಧರಿತ ವಲಸೆ ನೀತಿಯಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.