ADVERTISEMENT

ಶ್ವೇತಭವನದ ಉಪ್ಪರಿಗೆಗೆ ಅಯೋವಾ ಮೊದಲ ಮೆಟ್ಟಿಲು

ಸುಧೀಂದ್ರ ಬುಧ್ಯ
Published 6 ಅಕ್ಟೋಬರ್ 2016, 19:36 IST
Last Updated 6 ಅಕ್ಟೋಬರ್ 2016, 19:36 IST
ಶ್ವೇತಭವನದ ಉಪ್ಪರಿಗೆಗೆ ಅಯೋವಾ ಮೊದಲ ಮೆಟ್ಟಿಲು
ಶ್ವೇತಭವನದ ಉಪ್ಪರಿಗೆಗೆ ಅಯೋವಾ ಮೊದಲ ಮೆಟ್ಟಿಲು   

ಭಾರತ ಮತ್ತು ಅಮೆರಿಕ ಪ್ರಜಾಪ್ರಭುತ್ವ ರಾಷ್ಟ್ರಗಳಾದರೂ ಎರಡು ದೇಶಗಳ ಚುನಾವಣಾ ಮಾದರಿಗಳಲ್ಲಿ ವ್ಯತ್ಯಾಸವಿದೆ. ಮುಖ್ಯವಾಗಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಐದು ಹಂತಗಳನ್ನು ಗುರುತಿಸಬಹುದು. ಜನವರಿಯಿಂದ - ಆಗಸ್ಟ್‌ವರೆಗೆ ನಡೆಯುವ ಪ್ರಾಥಮಿಕ ಹಂತದ, ಪಕ್ಷದ ಆಂತರಿಕ ಚುನಾವಣೆ, ಸೆಪ್ಟೆಂಬರ್‌ನಲ್ಲಿ ಆಯೋಜನೆಯಾಗುವ ಪಕ್ಷದ ರಾಷ್ಟೀಯ ಪ್ರತಿನಿಧಿ ಸಭೆ, ಅಕ್ಟೋಬರ್ - ನವೆಂಬರ್ ಅವಧಿಯ ಚುನಾವಣಾ ಪ್ರಚಾರ, ಸಾರ್ವಜನಿಕ ಚರ್ಚೆ, ನವೆಂಬರ್ ಎರಡನೇ ಮಂಗಳವಾರ ನಡೆಯುವ ಚುನಾವಣೆ, ಕೊನೆಯದಾಗಿ, ಮರು ವರ್ಷ ಜನವರಿ 20ರಂದು ನಡೆಯುವ ಪದಗ್ರಹಣ ಸಮಾರಂಭ.

ಪ್ರಾಥಮಿಕ ಹಂತದ ಚುನಾವಣೆಗಳು ಸಾಮಾನ್ಯವಾಗಿ ಜನವರಿಯಲ್ಲೇ ಆರಂಭವಾಗುತ್ತವೆ. ಸಾಂಪ್ರದಾಯಿಕವಾಗಿ ಅಯೋವಾ ರಾಜ್ಯದಲ್ಲಿ ಮೊದಲು ಚುನಾವಣೆ ನಡೆಯುತ್ತದೆ. ನಂತರ ನ್ಯೂ ಹ್ಯಾಂಪ್‌ಶೈರ್ ರಾಜ್ಯದಲ್ಲಿ ಮತದಾನ ನಡೆಯುತ್ತದೆ. ಇವು ಜನಸಂಖ್ಯೆಯ ದೃಷ್ಟಿಯಿಂದ ಪುಟ್ಟ ರಾಜ್ಯಗಳು. ಆದರೆ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ರಾಜ್ಯಗಳಿಗೆ ಮಹತ್ವದ ಸ್ಥಾನವಿದೆ. ಅಭ್ಯರ್ಥಿಗಳು ವೈಯಕ್ತಿಕವಾಗಿ ಯಾವುದೇ ಸಮೀಕ್ಷೆ ನಡೆಸಿ, ತಮ್ಮ ಜನಪ್ರಿಯತೆ ಅಳೆದುಕೊಂಡರೂ, ಅದರ ಸತ್ಯಾಸತ್ಯತೆ ಗೋಚರವಾಗುವುದು ಈ ರಾಜ್ಯಗಳಲ್ಲೇ. ಇಲ್ಲಿನ ಫಲಿತಾಂಶ, ಕೆಲವೊಮ್ಮೆ, ನಂತರ ನಡೆಯುವ ಇತರ ರಾಜ್ಯಗಳ ಚುನಾವಣೆಯ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಸುದ್ದಿ ಮಾಧ್ಯಮಗಳು ಈ ಎರಡು ರಾಜ್ಯಗಳ ಚುನಾವಣಾ ಫಲಿತಾಂಶ ಹಿಡಿದುಕೊಂಡು ದಿನಗಟ್ಟಲೇ ಚರ್ಚಿಸುತ್ತವೆ.

ಈ ಚರ್ಚೆಗಳ ಬಗ್ಗೆ ಒಂದು ಆರೋಪವೂ ಇದೆ. ಈ ಎರಡು ರಾಜ್ಯಗಳಲ್ಲಿ ಬಹುಸಂಖ್ಯೆಯಲ್ಲಿರುವುದು ಬಿಳಿಯರು. ಹಾಗಾಗಿ, ಬಿಳಿಯರ ನಿರ್ಣಯವನ್ನು ಆಫ್ರಿಕನ್ ಅಮೆರಿಕನ್ನರ ಮತ್ತು ಲ್ಯಾಟಿನ್ ಅಮೆರಿಕನ್ನರ ಮೇಲೆ ಹೇರುವ ಹುನ್ನಾರ ಇದು ಎಂಬ ವಾದವೂ ಇದೆ.

ಕೆಲವೊಮ್ಮೆ ಈ ಅವಳಿ ರಾಜ್ಯಗಳಲ್ಲಿ ಹಿನ್ನಡೆಯಾದರೆ, ಅಭ್ಯರ್ಥಿಗಳು ಸ್ಪರ್ಧೆಯಿಂದ ಹಿಂದೆ ಸರಿಯುವುದೂ ಇದೆ. 1952ರಲ್ಲಿ ಪುನರಾಯ್ಕೆ ಬಯಸಿ ಸ್ಪರ್ಧಿಸಿದ್ದ ಹ್ಯಾರಿ ಟ್ರೂಮನ್, ನ್ಯೂ ಹ್ಯಾಂಪ್‌ಶೈರ್‌ ರಾಜ್ಯದಲ್ಲಿ ಹಿನ್ನಡೆ ಅನುಭವಿಸಿದ್ದರು. ಆ ಹಿನ್ನಡೆಯಿಂದಲೇ ತಮ್ಮ ಸೋಲನ್ನು ಅಂದಾಜಿಸಿದ ಟ್ರೂಮನ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. 1968ರಲ್ಲೂ ಹಾಗೆಯೇ ಆಯಿತು. ಪುನರಾಯ್ಕೆ ಬಯಸಿದ್ದ ಲಿಂಡನ್ ಜಾನ್ಸನ್, ಇಲ್ಲಿನ ಪ್ರಾಥಮಿಕ ಚುನಾವಣೆಯಲ್ಲಿ ತಮ್ಮ ನಿರೀಕ್ಷೆ ಹುಸಿಯಾದೊಡನೆಯೇ, ಕಣದಿಂದ ಹೊರಗುಳಿಯುವ ತೀರ್ಮಾನ ಮಾಡಿದರು.

ಹಾಗಂತ ರೊನಾಲ್ಡ್ ರೇಗನ್ ವಿಷಯದಲ್ಲಿ ಇದು ನಿಜವಾಗಲಿಲ್ಲ. ಅವರು ಅಯೋವಾದಲ್ಲಿ ಸೋತರೂ, ನಂತರದ ಚುನಾವಣೆಗಳಲ್ಲಿ ಗೆದ್ದು ಪಕ್ಷದ ಅಭ್ಯರ್ಥಿಯಾದರು. 2008ರಲ್ಲಿ ಇಲಿನಾಯ್ಸ್ ರಾಜ್ಯದಿಂದ ಒಂದು ಬಾರಿಗಷ್ಟೇ ಸೆನೆಟರ್ ಆಗಿದ್ದ ಬರಾಕ್ ಒಬಾಮ ಮತ್ತು ನ್ಯೂಯಾರ್ಕ್‌ನಿಂದ ಎರಡು ಅವಧಿಗೆ ಸೆನೆಟರ್ ಆಗಿದ್ದ ಹಿಲರಿ ಕ್ಲಿಂಟನ್ ಕಣದಲ್ಲಿದ್ದರು. ಒಬಾಮ ಅಯೋವಾ ರಾಜ್ಯದಲ್ಲಿ ಗೆದ್ದರು. ಕ್ಲಿಂಟನ್ ಮೂರನೆಯ ಸ್ಥಾನಕ್ಕೆ ತಳ್ಳಲ್ಪಟ್ಟರು. ಅಲ್ಲಿಂದ ಒಬಾಮ ಗೆಲುವಿನ ಅಂತರವನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿದರು.

ಈ ಬಾರಿ ಅಯೋವಾ ರಾಜ್ಯದಲ್ಲಿ ಹಿಲರಿ ಮೊದಲ ಸ್ಥಾನ ಗಳಿಸಿದರೂ, ನ್ಯೂ ಹ್ಯಾಂಪ್‌ಶೈರ್‌ನಲ್ಲಿ ದ್ವಿತೀಯ ಸ್ಥಾನಕ್ಕಿಳಿದರು. ನಂತರ ಬರ್ನಿ ಸ್ಯಾಂಡರ್ಸ್ ಮತ್ತು ಹಿಲರಿ ವಿರುದ್ಧ ಹಲವು ರಾಜ್ಯಗಳಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟಿತು. ಕೊನೆಗೆ, ಹಿಲರಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾದರು. ಟ್ರಂಪ್ ವಿಷಯದಲ್ಲಿ ಅದಕ್ಕೆ ವಿರುದ್ಧ ಆಯಿತು. ಟ್ರಂಪ್ ಅಯೋವಾದಲ್ಲಿ ಎರಡನೆಯ ಸ್ಥಾನದಲ್ಲಿದ್ದು, ನ್ಯೂ ಹ್ಯಾಂಪ್‌ಶೈರ್‌ನಲ್ಲಿ ಮೊದಲ ಸ್ಥಾನಕ್ಕೆ ಏರಿದರು. ನಂತರ ಅದೇ ಜನಪ್ರಿಯತೆಯನ್ನು ಕಾಪಾಡಿಕೊಂಡು, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾದರು.

ಹೀಗೆ ಈ ಎರಡು ರಾಜ್ಯಗಳು ಅಧ್ಯಕ್ಷೀಯ ಚುನಾವಣೆಗೆ ಮುನ್ನುಡಿ ಬರೆದ ಮೇಲೆ, ಇನ್ನುಳಿದ ರಾಜ್ಯಗಳಲ್ಲಿ ಚುನಾವಣೆಯ ತಯಾರಿ ನಡೆಯುತ್ತದೆ. ಹೆಚ್ಚಿನ ರಾಜ್ಯಗಳು ಒಂದೇ ದಿನ ಚುನಾವಣೆಗೆ ಸಜ್ಜಾಗುತ್ತವೆ ಅದನ್ನು ‘Super Tuesday’ ಎಂದು ಕರೆಯಲಾಗುತ್ತದೆ. ಆಯಾ ರಾಜ್ಯದಿಂದ ಪ್ರತಿನಿಧಿಗಳಾಗಿ ಆಯ್ಕೆಯಾಗಲು ಬಯಸುವ ಹಲವರ ಭವಿಷ್ಯ ನಿರ್ಧಾರವಾಗುವುದು, ಈ ಮಹಾ ಮಂಗಳವಾರದ ದಿನ. ‘ಸೂಪರ್ ಟ್ಯೂಸ್ಡೆ’
ಫಲಿತಾಂಶದ ಬಳಿಕ, ಗೆದ್ದ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸುವ ಅಧ್ಯಕ್ಷೀಯ ಅಭ್ಯರ್ಥಿ, ಆ ರಾಜ್ಯದಲ್ಲಿ ಗೆಲುವು ಸಾಧಿಸಿದಂತಾಗುತ್ತದೆ. ಹಾಗಾಗಿ ಅಧ್ಯಕ್ಷ ಪದವಿಯ ಮೇಲೆ ಕಣ್ಣಿಟ್ಟವರ ಎದೆ ಬಡಿತವನ್ನು ಈ ಮಹಾ ಮಂಗಳವಾರ ಹೆಚ್ಚಿಸುತ್ತದೆ.

ಈ ಬಾರಿ ಮಾರ್ಚ್ 1ರ ಮಂಗಳವಾರ, ಅಲಬಾಮ, ಕೊಲರಾಡೊ, ಅರ್ಕಾನ್ಸಾಸ್, ಜಾರ್ಜಿಯಾ, ಮೆಸಾಚುಸೆಟ್ಸ್‌, ಮಿನ್ನೆಸೋಟಾ, ಟೆನ್ನಿಸ್ಸೀ, ಟೆಕ್ಸಾಸ್, ವರ್ಜೀನಿಯಾ ಮುಂತಾದ ಕಡೆ ಪ್ರಾಥಮಿಕ ಹಂತದ ಚುನಾವಣೆ ನಡೆಯಿತು. ಡೆಮಾಕ್ರಟಿಕ್ ಪಕ್ಷದಲ್ಲಿ ಹಿಲರಿ ಕ್ಲಿಂಟನ್ ಅವರಿಗೆ ಪೈಪೋಟಿ ನೀಡುತ್ತಿದ್ದ, ಸ್ಯಾಂಡರ್ಸ್ ನಾಲ್ಕು ರಾಜ್ಯಗಳಲ್ಲಿ ಅಂದು ಮುನ್ನಡೆ ಸಾಧಿಸಿ, 321 ಪ್ರತಿನಿಧಿಗಳ ಬೆಂಬಲ ಗಳಿಸಿಕೊಂಡರು. ಆದರೆ ಹಿಲರಿ ನಿರೀಕ್ಷೆ ಮೀರಿ, ಏಳು ರಾಜ್ಯಗಳನ್ನು ಗೆದ್ದು, 486 ಪ್ರತಿನಿಧಿಗಳ ಬೆಂಬಲದೊಂದಿಗೆ ಸ್ಯಾಂಡರ್ಸ್ ಅವರನ್ನು ಪಕ್ಕಕ್ಕೆ ತಳ್ಳಿ ದಾಪುಗಾಲು ಹಾಕಿದರು.

ರಿಪಬ್ಲಿಕನ್ ಪಕ್ಷದ ಮಟ್ಟಿಗೆ ಡೊನಾಲ್ಡ್ ಟ್ರಂಪ್ ಏಳು ರಾಜ್ಯ ಗೆದ್ದರೆ, ಟೆಡ್ ಕ್ರೂಸ್ ಮೂರು ರಾಜ್ಯ ಗೆದ್ದರು. ಉಳಿದ ಉಮೇದುವಾರರು ಒಂದು, ಎರಡು ರಾಜ್ಯಗಳಿಗೆ ಸಮಾಧಾನ ಹೊಂದಬೇಕಾಯಿತು. ಈ ಮಹಾ ಮಂಗಳವಾರ ಡೊನಾಲ್ಡ್ ಟ್ರಂಪ್ ಬೆನ್ನಿಗೆ 256 ಪ್ರತಿನಿಧಿಗಳನ್ನು ನೀಡಿತ್ತು. ಇಂತಹ ಮೂರು ಮಹಾ ಮಂಗಳವಾರಗಳು ಈ ಬಾರಿಯ ಚುನಾವಣೆಯಲ್ಲಿ ಘಟಿಸಿದವು. ಡೆಮಾಕ್ರಟಿಕ್ ಪಕ್ಷದಲ್ಲಿ ಹಿಲರಿ, ರಿಪಬ್ಲಿಕನ್ ಪಾರ್ಟಿಯಲ್ಲಿ ಟ್ರಂಪ್ ಈ ಮೂರರಲ್ಲೂ ಮುನ್ನಡೆ ಸಾಧಿಸಿ, ಹೆಚ್ಚೆಚ್ಚು ಪ್ರತಿನಿಧಿಗಳ ಬೆಂಬಲ ಗಳಿಸುತ್ತಾ ಸಾಗಿದರು. ಇತರ ಅಭ್ಯರ್ಥಿಗಳು ಒಬ್ಬೊಬ್ಬರಾಗಿ ಸ್ಪರ್ಧೆಯಿಂದ ಹಿಂದೆ ಸರಿದರು.

ಹೀಗೆ ಪ್ರತಿ ರಾಜ್ಯದಲ್ಲೂ ಪ್ರಾಥಮಿಕ ಹಂತದ ಚುನಾವಣೆಗಳು ಮುಗಿದ ಮೇಲೆ, ಸೆಪ್ಟೆಂಬರ್ ಮೊದಲ ವಾರ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯನ್ನು ಘೋಷಿಸಲಾಗುತ್ತದೆ. ನಂತರವಷ್ಟೇ ಸಾರ್ವತ್ರಿಕ ಚುನಾವಣಾ ಪ್ರಕ್ರಿಯೆ ಬಿರುಸುಗೊಳ್ಳುತ್ತದೆ. ಡೆಮಾಕ್ರಟಿಕ್ ಪಕ್ಷದ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳು ದೇಶದಾದ್ಯಂತ ಸಂಚರಿಸಿ, ಜನರ ಸಮಸ್ಯೆಗಳನ್ನು ಚರ್ಚಿಸಿ, ತಮ್ಮ ನಿಲುವುಗಳನ್ನು ಮಂಡಿಸಿ, ಮತ ಕೇಳುತ್ತಾರೆ. ಮುಖ್ಯವಾಗಿ ಯಾವುದೇ ಪಕ್ಷಕ್ಕೆ ಬದ್ಧವಾಗದೇ, ಚುನಾವಣೆಯಿಂದ ಚುನಾವಣೆಗೆ ತಮ್ಮ ನಿಲುವು ಬದಲಿಸುವ, ನಿರ್ಣಾಯಕ ರಾಜ್ಯಗಳು ಎನಿಸಿಕೊಂಡ ‘ಸ್ವಿಂಗ್ ಸ್ಟೇಟ್ಸ್’ ಕಡೆಗೆ ಹೆಚ್ಚು ಗಮನಹರಿಸುತ್ತಾರೆ.

ಸಾಮಾನ್ಯವಾಗಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಮೆಸಾಚುಸೆಟ್ ರಾಜ್ಯದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅದು ಎಂದಿಗೂ ಡೆಮಾಕ್ರಾಟ್ ಅಭ್ಯರ್ಥಿಗಳ ಬೆನ್ನಿಗೆ ನಿಲ್ಲುತ್ತದೆ. ಅಂತೆಯೇ ರಿಪಬ್ಲಿಕನ್ ಅಭ್ಯರ್ಥಿ ಕೂಡ ಎಲ್ಲೆಡೆ ಸಮಯ ವ್ಯಯಿಸುವುದಿಲ್ಲ. ಓಹಿಯೋ, ಪೆನ್ಸಿಲ್ವೇನಿಯಾ, ಮಿಶಿಗನ್, ಫ್ಲಾರಿಡಾ ತನ್ನ ನಿರ್ಧಾರವನ್ನು ಚುನಾವಣೆಗೆ ತಕ್ಕಂತೆ ಬದಲಿಸುತ್ತದೆ. ಹಾಗಾಗಿ ಅಭ್ಯರ್ಥಿಗಳು ಇಲ್ಲಿನ ಮತದಾರರನ್ನು ಒಲಿಸಿಕೊಳ್ಳಲು ಮುತುವರ್ಜಿ ತೋರುತ್ತಾರೆ.
ಸಾಮಾನ್ಯವಾಗಿ ರಿಪಬ್ಲಿಕನ್ ಪಕ್ಷ, ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತೆರಿಗೆ ಇಳಿಸುವ ಬಗ್ಗೆ, ಹಿಂದಿನ ಸರ್ಕಾರಗಳು ಅನುಷ್ಠಾನಗೊಳಿಸಿದ ಯೋಜನೆಯನ್ನು ಮಾರ್ಪಡಿಸುವ, ಇಲ್ಲವೇ ರದ್ದು ಮಾಡುವ ಬಗ್ಗೆ, ವ್ಯಾಪಾರ ವಹಿವಾಟಿನ ಮೇಲೆ ಸರ್ಕಾರದ ನಿಬಂಧನೆಗಳನ್ನು ಸಡಿಲಿಸುವ ಬಗ್ಗೆ ಆಶ್ವಾಸನೆ ನೀಡುತ್ತದೆ. ಅದಕ್ಕೆ ಪ್ರತಿಯಾಗಿ ಡೆಮಾಕ್ರಟಿಕ್ ಪಕ್ಷ, ಬಡವರಿಗೆ ಸಹಾಯಧನ ನೀಡುವ, ಪ್ರಕೃತಿ ವಿಕೋಪ ತಡೆಗಟ್ಟಲು ಕ್ರಮ ಕೈಗೊಳ್ಳುವ, ಉದ್ಯೋಗ ಅವಕಾಶ ಹೆಚ್ಚು ಮಾಡುವ ಬಗ್ಗೆ ಪ್ರಣಾಳಿಕೆಯಲ್ಲಿ ಭರವಸೆ ನೀಡುತ್ತದೆ. ಇದಲ್ಲದೇ ಎರಡೂ ಪಕ್ಷಗಳು ತಮ್ಮ ಅವಧಿಯಲ್ಲಿ ವಿದೇಶಾಂಗ ನೀತಿ ಹೇಗಿರುತ್ತದೆ ಎಂಬ ಬಗ್ಗೆ ಹೇಳಿಕೊಳ್ಳುತ್ತವೆ.

ರಿಪಬ್ಲಿಕನ್ನರು ಮಿಲಿಟರಿಗೆ ಹೆಚ್ಚು ಶಕ್ತಿ ತುಂಬುವ ಬಗ್ಗೆ ಮಾತನಾಡಿದರೆ, ಡೆಮಾಕ್ರಟಿಕ್‌ ಪಕ್ಷದವರು ಇತರ ರಾಷ್ಟ್ರಗಳೊಂದಿಗೆ ಸಂಬಂಧ ಸುಧಾರಿಸಿಕೊಳ್ಳುವ ಬಗ್ಗೆ ತಮ್ಮ ಯೋಚನೆ ಏನಿದೆ ಎನ್ನುವುದನ್ನು ಜನರ ಮುಂದಿಡುತ್ತಾರೆ. ಒಟ್ಟಿನಲ್ಲಿ ಎರಡೂ ಪಕ್ಷದ ಅಭ್ಯರ್ಥಿಗಳು, ಜನರಲ್ಲಿ ಭವಿಷ್ಯದ ಬಗ್ಗೆ ಹೇರಳವಾಗಿ ಕನಸು ತುಂಬುತ್ತಾರೆ. ಭಾರತವಾಗಲೀ, ಅಮೆರಿಕವಾಗಲೀ ರಾಜಕಾರಣಿಗಳ ಕೆಲಸ ಅದೇ ತಾನೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.