ADVERTISEMENT

ಷರೀಫ್‌ ಪದತ್ಯಾಗಕ್ಕೆ ಸೇನಾ ಮುಖ್ಯಸ್ಥರ ಸಲಹೆ?

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 19:30 IST
Last Updated 1 ಸೆಪ್ಟೆಂಬರ್ 2014, 19:30 IST

ಇಸ್ಲಾಮಾಬಾದ್‌ (ಪಿಟಿಐ): ಪಾಕಿ­ಸ್ತಾನ ಪ್ರಧಾನಿ ನವಾಜ್‌ ಷರೀಫ್‌ ಅವ­ರಿಗೆ  ಪದತ್ಯಾಗ ಮಾಡುವಂತೆ ಸೇನಾ ಮುಖ್ಯಸ್ಥ ರಹೀಲ್‌ ಷರೀಫ್‌ ಅವರು ಸಲಹೆ ನೀಡಿದ್ದಾರೆ ಎನ್ನಲಾ­ಗಿದ್ದು, ಇದು ವಿವಾದಕ್ಕೆ ಎಡೆಮಾಡಿ­ಕೊಟ್ಟಿದೆ.

ಸೇನಾ ಮುಖ್ಯಸ್ಥರು ಸೋಮವಾರ ಪ್ರಧಾನಿ ಅವರನ್ನು ಭೇಟಿ ಮಾಡಿ, ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು. ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರ ತ್ಯಜಿಸುವಂತೆ ಪ್ರಧಾನಿಗೆ ಸಲಹೆ ಮಾಡಿದರು ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.

‘ದುನಿಯಾ’ ವಾಹಿನಿಯಲ್ಲಿ ಈ ಕುರಿತ ವರದಿ ಪ್ರಸಾರವಾಗು­ತ್ತಿ­ದ್ದಂ­ತೆಯೇ ಸ್ಪಷ್ಟನೆ ನೀಡಿರುವ ಸರ್ಕಾರ ಮತ್ತು ಸೇನಾ ಮುಖ್ಯಸ್ಥರು, ಇದೊಂದು ಆಧಾರ ರಹಿತ ವರದಿ. ಆ ರೀತಿಯ ಸಲಹೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ತಾತ್ಕಾಲಿಕವಾಗಿ ಮೂರು ತಿಂಗಳ ಅವಧಿಗೆ ರಾಜೀನಾಮೆ ಕೊಡಿ ಹಾಗೂ  ಕಳೆದ ವರ್ಷ ನಡೆದ ಸಾರ್ವತ್ರಿಕ ಚುನಾ­ವಣೆ ಸಂದರ್ಭದಲ್ಲಿ ನಡೆದಿದೆ ಎನ್ನ­ಲಾದ ಅವ್ಯವಹಾರಗಳ ಬಗ್ಗೆ ತನಿಖೆ ನಡೆ­ಸಲು ಸ್ವತಂತ್ರ ತನಿಖಾ ಆಯೋಗ ರಚಿಸಿ ಎಂದು ರಹೀಲ್‌ ಸಲಹೆ ಮಾಡಿ­ದ್ದಾರೆ’ ಎಂದು ಈ ವಾಹಿನಿ ವರದಿ ಮಾಡಿದೆ.

ಆದರೆ, ಸರ್ಕಾರದ ವಕ್ತಾರರು ಇದನ್ನು ತಳ್ಳಿಹಾಕಿದ್ದು, ಇದೆಲ್ಲ ಊಹಾ­ಪೋಹ. ಯಾವುದೇ ಆಧಾರ­ಗಳಿ­ಲ್ಲದ ಈ ರೀತಿಯ ವದಂತಿಗಳಿಗೆ ಕಿವಿಗೊಡ­ಬಾರದು ಎಂದು ಹೇಳಿದ್ದಾರೆ.

ಸೇನಾ ವಕ್ತಾರ ಮೇಜರ್‌ ಜನರಲ್‌ ಅಸೀಮ್‌ ಬಾಜ್ವಾ ಅವರೂ ಈ ವರದಿಗಳನ್ನು ತಳ್ಳಿಹಾಕಿದ್ದಾರೆ. ಪ್ರಧಾನಿ ಪುತ್ರಿ ಮರ್ಯಮ್‌ ನವಾಜ್‌ ಷರೀಫ್‌ ಕೂಡ ಈ ವರದಿಯಲ್ಲಿ ಸತ್ಯಾಂಶ ಇಲ್ಲ ಎಂದು ತಿಳಿಸಿದ್ದಾರೆ.

ಸೇನಾ ಮುಖ್ಯಸ್ಥರು ಮತ್ತು ಪ್ರಧಾನಿ ನಡುವೆ ಭದ್ರತೆ ಹಾಗೂ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಪಾಕಿಸ್ತಾನ್‌ ಮುಸ್ಲಿಂ ಲೀಗ್‌ನ ನಾಯಕರು ತಿಳಿಸಿದ್ದಾರೆ.

ಸಚಿವಾಯದಲ್ಲಿ ದಾಂದಲೆ: ಪಾಕಿ­ಸ್ತಾನ­­ದಲ್ಲಿನ ಆಂತರಿಕ ಬಿಕ್ಕಟ್ಟು ಸೋಮ­ವಾರ ತಾರಕಕ್ಕೆ ಏರಿದ್ದು,  ಭಾರಿ ಭದ್ರತೆಯ ನಡುವೆಯೂ ಪ್ರತಿ­ಭಟನಾಕಾರರು ಸಚಿ­ವಾ­ಲಯ ಮತ್ತು ಸರ್ಕಾರದ ಅಧಿ­ಕೃತ ಪ್ರಸಾರ ವಾಹಿನಿ ಪಿಟಿವಿ ಕಚೇರಿಗೆ ಮುತ್ತಿಗೆ ಹಾಕಿ ದಾಂದಲೆ ನಡೆಸಿದರು.

ಪ್ರತಿಭಟನಾಕಾರರು ಸಚಿವಾಲ­ಯಕ್ಕೆ ನುಗ್ಗದಂತೆ ಸೇನೆ ಮನವಿ ಮಾಡಿತು. ಆದರೆ, ಇದಕ್ಕೆ ಕಿವಿಗೊ­ಡದ ಪ್ರತಿಭಟ­ನಾ­­ಕಾ­ರರು ಗೇಟ್‌­ಗಳನ್ನು ಮುರಿದು ಕಟ್ಟಡದ ಒಳಗೆ ನುಗ್ಗಿದರು.

ಈ ಸಂದರ್ಭದಲ್ಲಿ ಪೊಲೀಸರು ರಬ್ಬರ್‌ ಗುಂಡುಗಳನ್ನು ಹಾರಿಸಿ, ಅಶ್ರು­ವಾಯು ಷೆಲ್‌ಗಳನ್ನು ಸಿಡಿಸಿ ಪ್ರತಿ­ಭ­ಟ­ನಾಕಾರರನ್ನು ಚದು­ರಿ­ಸಲು ಪ್ರಯ­ತ್ನಿಸಿ­ದರು. ಆದರೆ, ಇದರಿಂದ ಯಾವುದೇ ಪ್ರಯೋಜನ ಆಗಲಿಲ್ಲ.

ನಂತರ 800ಕ್ಕೂ ಹೆಚ್ಚು ಪ್ರತಿಭಟ­ನಾ­­ಕಾರರು ಪಿಟಿವಿ ಕಚೇರಿಗೆ ನುಗ್ಗಿ ದಾಂದಲೆ ನಡೆಸಿದರು.  ಕ್ಯಾಮೆರಾ­ಗಳಿಗೆ ಹಾನಿ ಮಾಡಿದರು. ಅಲ್ಲಿಗೆ ಧಾವಿಸಿ ಬಂದ ಸೇನಾ ಸಿಬ್ಬಂದಿ, ಪ್ರತಿಭಟ­ನಾ-ಕಾರರನ್ನು  ಚದು­ರಿಸಿ ಕಚೇರಿಯನ್ನು ವಶಕ್ಕೆ ಪಡೆಯಿತು.

ಅಧಿವೇಶನ: ಪ್ರಧಾನಿ ಷರೀಫ್‌ ಅವರು ಮಂಗಳವಾರ ಸಂಸತ್‌ ವಿಶೇಷ ಅಧಿ­ವೇಶನ ಕರೆದಿದ್ದು, ಸದನದಲ್ಲೇ ಈ ವಿಷಯ (ಪ್ರತಿಭಟನಾಕಾರರ ರಾಜೀ­ನಾಮೆ ಒತ್ತಾಯ) ಇತ್ಯರ್ಥ­ವಾಗಬೇಕು ಎಂದು ಹೇಳಿದ್ದಾರೆ.

ಬೆಂಬಲ: ಇಮ್ರಾನ್‌ಖಾನ್‌ ನಡೆಸುತ್ತಿ­ರುವ ಹೋರಾಟಕ್ಕೆ ಮಾಜಿ ಕ್ರಿಕೆಟಿಗ ಜಾವೇದ್‌ ಮಿಯಾಂದಾದ್‌ ಬೆಂಬಲ ಸೂಚಿಸಿದ್ದಾರೆ.
ನೆರವು ನೀಡಲು ಸಿದ್ಧ– ಸುಪ್ರೀಂ ಕೋರ್ಟ್‌: ರಾಜಕೀಯ ಬಿಕ್ಕಟ್ಟನ್ನು ಹೋಗ­ಲಾಡಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಪ್ರತಿಭಟನಾಕಾರರು ಬಯ­ಸಿ­ದರೆ ಮಧ್ಯ ಪ್ರವೇಶಿಸುವುದಾಗಿ ಹೇಳಿ­ರುವ ಸುಪ್ರೀಂ ಕೋರ್ಟ್‌, ನೆರವು ನೀಡುವ ಪ್ರಸ್ತಾವ ಮುಂದಿಟ್ಟಿದೆ.

ಖಾದ್ರಿ ವಿರುದ್ಧ ಪ್ರಕರಣ ದಾಖಲು
ಸಂಸತ್‌ ಮೇಲೆ ದಾಳಿಗೆ ಯತ್ನಿಸಿದ ಆರೋಪದ ಮೇಲೆ ಪಾಕಿಸ್ತಾನ ತೆಹರಿಕ್‌ ಎ–ಇನ್ಸಾಫ್‌ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್‌ ಖಾನ್‌ ಮತ್ತು ಪಾಕಿಸ್ತಾನ ಅವಾಮಿ ತೆಹರಿಕ್‌ (ಪಿಎಟಿ) ಪಕ್ಷದ ಮುಖ್ಯಸ್ಥ ತಹಿರುಲ್‌ ಖಾದ್ರಿ ವಿರುದ್ಧ ಪ್ರಕರಣ ದಾಖಲಾಗಿದೆ.

ಭಯೋತ್ಪಾದನೆ ನಿಗ್ರಹ ಕಾಯ್ದೆಯಡಿ ಇಬ್ಬರೂ ಮುಖಂಡರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿ­ಸಿದ್ದಾರೆ. ಪ್ರಧಾನಿ ಷರೀಫ್‌ ರಾಜೀನಾಮೆಗೆ ಆಗ್ರಹಿಸಿ ಇಮ್ರಾನ್‌ ಖಾನ್‌ ಮತ್ತು ತಹಿರುಲ್‌ ಖಾದ್ರಿ ನೇತೃತ್ವದಲ್ಲಿ ಎರಡು ವಾರಗಳಿಂದ ನಡೆಯುತ್ತಿರುವ  ಪ್ರತಿಭಟನೆ ಹಿಂಸಾರೂಪ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT