ADVERTISEMENT

‘ಸೇ ಗುಡ್‌ಬೈ ಬೇಬಿ, ಸೇ ಗುಡ್‌ಬೈ’: ಅವಳಿ ಮಕ್ಕಳ ಕಳೆದುಕೊಂಡ ಅಪ್ಪನಿಂದ ಕಣ್ಣೀರ ವಿದಾಯ

ಏಜೆನ್ಸೀಸ್
Published 8 ಏಪ್ರಿಲ್ 2017, 5:39 IST
Last Updated 8 ಏಪ್ರಿಲ್ 2017, 5:39 IST
‘ಸೇ ಗುಡ್‌ಬೈ ಬೇಬಿ, ಸೇ ಗುಡ್‌ಬೈ’: ಅವಳಿ ಮಕ್ಕಳ ಕಳೆದುಕೊಂಡ ಅಪ್ಪನಿಂದ ಕಣ್ಣೀರ ವಿದಾಯ
‘ಸೇ ಗುಡ್‌ಬೈ ಬೇಬಿ, ಸೇ ಗುಡ್‌ಬೈ’: ಅವಳಿ ಮಕ್ಕಳ ಕಳೆದುಕೊಂಡ ಅಪ್ಪನಿಂದ ಕಣ್ಣೀರ ವಿದಾಯ   

ಬೈರೂತ್‌: ‘ಹೋಗ್ತೀನಿ ಅಂತ ಹೇಳು ಕಂದಾ.. ಹೋಗ್ತೀನಂತ ಹೇಳು’

ಇಬ್ಬರು ಮಕ್ಕಳನ್ನು ಕಳೆದುಕೊಂಡ ಅಬ್ದಲ್ ಅಮೀದ್‌ ಅಲ್‌ಯೂಸೆಫ್‌ ಎನ್ನುವವರು ಎರಡೂ ಮಕ್ಕಳ ಶವಗಳನ್ನು ಅಪ್ಪಿಕೊಂಡು ಶವ ಸಂಸ್ಕಾರಕ್ಕೂ ಮುನ್ನ ಕಣ್ಣೀರಿಡುತ್ತಾ ದುಃಖ ತೋಡಿಕೊಂಡದ್ದು ಹೀಗೆ.

ಇಂತಹದೊಂದು ಕರುಣಾಜನಕವಾದ ವಿಡಿಯೋದಲ್ಲಿ ಅಲ್‌ಯೂಸೆಫ್‌ ಕಾರಿನ ಮುಂಬಾಗದಲ್ಲಿ ಅವಳಿ ಮಕ್ಕಳ ಶವಗಳನ್ನು ತಬ್ಬಿಕೊಂಡು ಕಣ್ಣೀರಿಡುತ್ತಾ ಕುಳಿತಿದ್ದಾರೆ. ಈ ವಿಡಿಯೊ ವಿಶ್ವದಾದ್ಯಂತ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ADVERTISEMENT

ಯೂಸೆಫ್‌, ಉತ್ತರ ಸಿರಿಯಾದ ಖಾನ್‌ ಶೇಕೌನ್‌ ನಗರದಲ್ಲಿ ಮಂಗಳವಾರ(04) ನಡೆದಿದ್ದ ರಾಸಾಯನಿಕ ದಾಳಿಯ ವೇಳೆ 9 ತಿಂಗಳಿನ ತನ್ನಿಬ್ಬರು ಅವಳಿ ಮಕ್ಕಳು, ಹೆಂಡತಿ ಹಾಗೂ ಕೆಲವು ಸಂಬಂಧಿಗಳನ್ನು ಕಳೆದುಕೊಂಡಿದ್ದರು.

[Related]

ಈ ದಾಳಿಯಲ್ಲಿ ಸಿರಿಯಾದ ಸುಮಾರು 72 ಮಂದಿ ಸಾವಿಗೀಡಾಗಿದ್ದರು.

ದಾಳಿಯ ನಂತರ ಆರಂಭದಲ್ಲಿ ತನ್ನ ಕುಟುಂಬ ಸದಸ್ಯರು ಚೆನ್ನಾಗಿದ್ದಾರೆ ಎಂದೇ ಭಾವಿಸಿದ್ದ 29 ವರ್ಷದ ಅಲ್‌ಯುಸುಫ್‌, ‘ನಾನು ದಾಳಿಯ ಸಂದರ್ಭದಲ್ಲಿ ಮಕ್ಕಳು ಹಾಗೂ ನನ್ನ ಹೆಂಡತಿಯ ಪಕ್ಕದಲ್ಲಿಯೇ ಇದ್ದೆ. ದಾಳಿಯ ನಂತರ ಅವರನ್ನು ಮನೆಯಿಂದ ಹೊರಗೆ ಹೊತ್ತು ತಂದು ತಕ್ಷಣ ಆಸ್ಪತ್ರೆಗೆ ಸೇರಿಸಿದೆ. ಎಲ್ಲರೂ ಪ್ರಜ್ಞಾವಸ್ಥೆಯಲ್ಲಿಯೇ ಇದ್ದರು. ಆದರೆ ಹತ್ತು ನಿಮಿಷಗಳ ನಂತರ ಜ್ಞಾನ ತಪ್ಪಿದ್ದರು’ ಎಂದು ಹೇಳಿಕೊಂಡಿದ್ದಾರೆ.

ನಂತರ ತನ್ನಿಬ್ಬರು ಸಹೋದರರು, ಸ್ನೇಹಿತರು ಹಾಗೂ ನೆರೆಹೊರೆಯವರ ಶವಗಳನ್ನು ಕಂಡು ಅವರನ್ನು ಉಳಿಸಿಕೊಳ್ಳಲಾಗದ್ದಕ್ಕೆ ‘ನನ್ನಿಂದ ಯಾರನ್ನೂ ರಕ್ಷಿಸಲು ಆಗಲಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು. ಇದಾದ ಬೆನ್ನಲ್ಲೇ ವೈದ್ಯರಿಂದ ತನ್ನ ಮಕ್ಕಳು ಹಾಗೂ ಹೆಂಡತಿಯೂ ಸಾವಿಗೀಡಾಗಿರುವ ಬಗ್ಗೆ ತಿಳಿದು ಆಘಾತಕ್ಕೊಳಗಾಗಿದ್ದರು.

‘ಘಟನೆಯಿಂದಾಗಿ ಅಮೀದ್‌ ತೀವ್ರವಾಗಿ ಆಘಾತಗೊಂಡಿದ್ದಾನೆ’ ಎಂದು ಅಲ್‌ಯೂಸೆಫ್‌ ಅವರ ಮತ್ತೊಬ್ಬ ಸಹೋದರ ಅಲಾ ಮಾಧ್ಯಗಳಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.