ADVERTISEMENT

ಸ್ವೆಟ್ಲಾನಾಗೆ ಸಾಹಿತ್ಯ ನೊಬೆಲ್‌

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2015, 19:51 IST
Last Updated 8 ಅಕ್ಟೋಬರ್ 2015, 19:51 IST
ಸ್ವೆಟ್ಲಾನಾಗೆ ಸಾಹಿತ್ಯ ನೊಬೆಲ್‌
ಸ್ವೆಟ್ಲಾನಾಗೆ ಸಾಹಿತ್ಯ ನೊಬೆಲ್‌   

ಸ್ಟಾಕ್‌ಹೋಂ (ಎಎಫ್‌ಪಿ): 2015ನೇ ಸಾಲಿನ ನೊಬೆಲ್‌ ಸಾಹಿತ್ಯ ಪ್ರಶಸ್ತಿಗೆ ಬೆಲಾರಸ್‌ನ ಲೇಖಕಿ ಸ್ವೆಟ್ಲಾನಾ ಅಲೆಕ್ಸಿಯೆವಿಚ್‌  ಆಯ್ಕೆಯಾಗಿದ್ದಾರೆ.

ಈ ಕಾಲದ ನೋವು ಮತ್ತು ಧೈರ್ಯದ ಪ್ರತೀಕವಾದ ವಿವಿಧ ಪ್ರಕಾರಗಳಲ್ಲಿನ ಅವರ ಬರವಣಿಗೆಗೆ ಈ ಗೌರವ ನೀಡಲಾಗುತ್ತಿದೆ ಎಂದು ಸ್ವೀಡಿಷ್‌ ಅಕಾಡೆಮಿ ಹೇಳಿದೆ.

ಉಕ್ರೇನ್‌ನಲ್ಲಿ ಸಂಭವಿಸಿದ ಚೆರ್ನೊಬಿಲ್‌ ಅಣು ಅವಘಡ ಮತ್ತು ಎರಡನೇ ಮಹಾಯುದ್ಧದ ದುರಂತಗಳ ಕುರಿತ ಭಾವನಾತ್ಮಕ ಬರಹಗಳ ಮೂಲಕ ಅಲೆಕ್ಸಿಯೆವಿಚ್‌ (67) ಜಾಗತಿಕ ಮನ್ನಣೆ ಗಳಿಸಿದ್ದಾರೆ. ಪತ್ರಕರ್ತೆಯಾಗಿಯೂ ಅವರು ದುಡಿದಿದ್ದಾರೆ.

ಈ ಭೀಕರ ದುರಂತಗಳನ್ನು ಕಣ್ಣಾರೆ ನೋಡಿದ ಪ್ರತ್ಯಕ್ಷದರ್ಶಿಗಳ ಅನುಭವದ ಮಾತುಗಳನ್ನು ಅವರು ತಮ್ಮ ಅನುಭವದಂತೆಯೇ ದಾಖಲಿಸಿದ್ದಾರೆ. ಅವರ ಬರಹಗಳು ಜಗತ್ತಿನ ಅನೇಕ ಭಾಷೆಗಳಿಗೆ ಅನುವಾದವಾಗಿವೆ. ಅಲ್ಲದೆ, ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನೂ ಗಳಿಸಿವೆ.

ದೇಶದ ಸರ್ವಾಧಿಕಾರಿ ಅಧ್ಯಕ್ಷ ಅಲೆಕ್ಸಾಂಡರ್‌ ಲುಕಶೆಂಕೊ ಅವರ ಆಡಳಿತವನ್ನು ಹಬ್ಬುತ್ತಿರುವ ಸೆನ್ಸಾರ್‌ಶಿಪ್‌ ಎಂದು ಅಲೆಕ್ಸಿಯೆವಿಚ್‌ ಟೀಕಿಸಿದ್ದರು. ಹೀಗಾಗಿ ರಷ್ಯನ್ ಭಾಷೆಯಲ್ಲಿ ಅವರು ಬರೆದಿರುವ ವಿವಾದಾತ್ಮಕ ಪುಸ್ತಕಗಳು ತಾಯ್ನಾಡಿನಲ್ಲಿ ಪ್ರಕಟವಾಗಲು ಅವಕಾಶ ದೊರೆತಿಲ್ಲ.

ಅಲೆಕ್ಸಿಯೆವಿಚ್‌, ನೊಬೆಲ್ ಸಾಹಿತ್ಯ ಪ್ರಶಸ್ತಿಗೆ ಪಾತ್ರರಾಗುತ್ತಿರುವ 14ನೇ ಮಹಿಳೆಯಾಗಿದ್ದಾರೆ. ಅವರು ಎಂಬತ್ತು ಲಕ್ಷ ಸ್ವೀಡಿಷ್‌ ಕ್ರೋನಾರ್‌ (₹6.18 ಕೋಟಿ) ಪ್ರಶಸ್ತಿ ಮೊತ್ತ ಪಡೆಯಲಿದ್ದಾರೆ.

ನೊಬೆಲ್ ಶಾಂತಿ ಪ್ರಶಸ್ತಿ ಶುಕ್ರವಾರ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.