ADVERTISEMENT

ದೀಪವು ನಿನ್ನದೆ...

ಕಲೀಮ್ ಉಲ್ಲಾ
Published 30 ಏಪ್ರಿಲ್ 2014, 19:30 IST
Last Updated 30 ಏಪ್ರಿಲ್ 2014, 19:30 IST
ದೀಪವು ನಿನ್ನದೆ...
ದೀಪವು ನಿನ್ನದೆ...   

ಆ ನಾಟಕದಲ್ಲಿ ಅಭಿನಯಿಸುತ್ತಿದ್ದ ಹುಡುಗರೆಲ್ಲಾ ಹೊಸಬರು. ರಂಗಭೂಮಿಯ ಬಗ್ಗೆ ಏನೂ  ತಿಳಿಯದವರು. ಒಂದಿಷ್ಟು ಸಿನಿಮಾ, ಕೆಲವೊಂದಿಷ್ಟು ಮನೆಹಾಳು ಧಾರಾವಾಹಿಗಳು ಬಿಟ್ಟರೆ ಬೇರೆ ಯಾವ ಮಾಹಿತಿಯೂ ಅವರಲ್ಲಿ ಇರಲಿಲ್ಲ. ಇವರಿಗೆ ಅಭಿನಯ ಕಲಿಸಲೆಂದು ಬಂದ ನಿರ್ದೇಶಕರು ತುಂಬಾ ಒಳ್ಳೆಯವರು. ಆದರೆ, ಮಹಾ ಮೂಡಿ ಮನುಷ್ಯ.  ಪ್ರತಿ ದೃಶ್ಯ ಹೀಗೇ ಇರಬೇಕು, ನಟನೆ ಹೀಗೇ ನಡೀಬೇಕು ಎಂದು ನಿರೀಕ್ಷೆ ಇಟ್ಟುಕೊಂಡವರು. ಇದಕ್ಕೆ ಪೂರಾ ತದ್ವಿರುದ್ಧ ನಮ್ಮ ಹುಡುಗರು.

ನಾಟಕದ್ದು ಪೌರಾಣಿಕ ಕಥೆ. ಮಕ್ಕಳ ನಾಲಿಗೆ ಮೇಲೆ ಅದರ ಸಂಭಾಷಣೆಗಳು ನೆಟ್ಟಗೆ ಹೊರಳುತ್ತಿರಲಿಲ್ಲ. ನಡುವೆ ಸಂಸ್ಕೃತ ಶ್ಲೋಕಗಳು ಬೇರೆ! ಮಕ್ಕಳು ಮಾಡುವ ತಪ್ಪುಗಳ ನೋಡಿ, ಕೇಳಿ ನಿರ್ದೇಶಕರ ಬಿಪಿ ಮುಗಿಲು ಮುಟ್ಟುತ್ತಿತ್ತು.  ತಮ್ಮ ತಲೆ ಕೂದಲು ತಾವೇ ಕಿತ್ತುಕೊಳ್ಳುವಷ್ಟರ ಮಟ್ಟಿಗೆ ಅವರು ರೋಸಿ ಹೋಗಿದ್ದರು. ಒಂದು ದಿನ ಅವರ ತಾಳ್ಮೆ ಕೈಕೊಟ್ಟು ಆಗ ಬಂದ ಸಿಟ್ಟಿಗೆ ತಮ್ಮ  ಕನ್ನಡಕವನ್ನೇ ನೆಲಕ್ಕೆ ಎತ್ತಿ ಕುಕ್ಕಿದ್ದರು. ಅದು ಬಿದ್ದು ಪುಡಿಪುಡಿಯಾಗಿ ಈ ಮನುಷ್ಯನ ಕಾಟ ಕೊನೆಗಾದರೂ ತಪ್ಪಿತಲ್ಲ ಎಂದು ನಿಶ್ಚಿಂತೆಯಿಂದ ಮಲಗಿತ್ತು. ಮಕ್ಕಳೆಲ್ಲಾ ಥರಗುಟ್ಟುತ್ತಾ ಒಂದು ಮೂಲೆಯಲ್ಲಿ ಪಿಳಿಪಿಳಿ ನೋಡುತ್ತಾ ನಿಂತಿದ್ದರು.

ಅದರಲ್ಲಿ ಒಬ್ಬ ನಟಿಯನ್ನಂತೂ ಬದಲಾಯಿಸಲೇಬೇಕಿತ್ತು. ಇಪ್ಪತ್ತು ದಿನವಾದರೂ ಆಕೆ ಡೈಲಾಗ್‌ಗಳನ್ನು ನೆಟ್ಟಗೆ ಕಲಿತಿರಲಿಲ್ಲ. ಇನ್ನು ಅವಳ ಧ್ವನಿಯಂತೂ ಸ್ವತಃ ಅವಳಿಗೇ ಕೇಳಿಸದಷ್ಟು ಕ್ಷೀಣವಾಗಿತ್ತು.
ರಾಜ್ಯ ಮಟ್ಟದ ನಾಟಕ ಸ್ಪರ್ಧೆಗೆ ಹೆಸರು ಕೊಟ್ಟಾಗಿದೆ. ನಾಟಕಕ್ಕೆ ಇನ್ನು ವಾರ ಮಾತ್ರ ಬಾಕಿ ಇದೆ.

ಹೊಸಬಳನ್ನು ಕರೆಸಿ ಕಲಿಸಲು ಸಮಯವೂ ಇಲ್ಲ. ಅಯ್ಯೋ ನಾಟಕವೇ ನಿಂತು ಬಿಡುವುದಲ್ಲ ಎಂದು ಆ ಕ್ಷಣ ಎಲ್ಲರೂ ಚಿಂತಾಕ್ರಾಂತರಾದರು. ನಿರ್ದೇಶಕರು ಏನೂ ತೋಚದೆ  ತಲೆಮೇಲೆ ಕೈಹೊತ್ತು ಕುಳಿತಿದ್ದರು.
ಆಗ ನಮ್ಮ ನಾಟಕದ ತಾಲೀಮನ್ನು ಕಿಟಕಿಯಿಂದ ಇಣುಕಿ ನೋಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಚಿಟ್ಟೆಯಂತೆ ಹಾರಿ ಬಂದು ನಮ್ಮ ಮುಂದೆ ನಿಂತಳು. ಅವಳ ಹೆಸರು ದೀಪಾ. ಅವಳು ಮಾಡುತ್ತಿದ್ದ ಪಾರ್ಟನ್ನು ನಾನು ಮಾಡುತ್ತೀನಿ ಸಾರ್. ಅವಕಾಶ ಕೊಡ್ತೀರಾ ಎಂದು ಧೈರ್ಯವಾಗಿ ಅವಳೇ ಕೇಳಿಬಿಟ್ಟಳು. ನಮಗೆಲ್ಲಾ  ಆಶ್ಚರ್ಯ! ಮರುಭೂಮಿಯಲ್ಲಿ ಮರದ ನೆರಳು ಸಿಕ್ಕಷ್ಟು ಸಂತೋಷವಾಯಿತು.

ಅವಳು ಎಲ್ಲರ ಹಾಗಿರಲಿಲ್ಲ. ತುಂಬಾ ವಿಶೇಷ ಅನ್ನಿಸುವ ಚುರುಕು ಹುಡುಗಿ. ಎಂದೂ ಮುಗಿಯದ ನಗುವನ್ನು ಮುಖದಲ್ಲಿ ಮೂಡಿಸಿಕೊಂಡವಳು. ಸಣಕಲು ದೇಹದ ಕಪ್ಪು ಸುಂದರಿ. ಎಳೆಯ ಮಗುವಿನಂತೆ ಸದಾ ನಗುವ ಅವಳ ಕಣ್ಣುಗಳಲ್ಲಿನ ಆತ್ಮವಿಶ್ವಾಸ, ಇಡೀ ನಾಟಕ ತಂಡದ ಉತ್ಸಾಹವನ್ನೇ ಹೆಚ್ಚಿಸಿತು. ಎರಡು ಮೂರು ದಿನದಲ್ಲೇ ಆಕೆ ಎಲ್ಲವನ್ನೂ ಸೊಗಸಾಗಿ ಕಲಿತು ಅಚ್ಚುಕಟ್ಟಾಗಿ ಒಪ್ಪಿಸಿದಳು. ನಿರ್ದೇಶಕರು ಭೇಷ್ ಎಂದರು. ನಮ್ಮ ನಾಟಕದ ತಯಾರಿ ಭರ್ಜರಿಯಾಗಿ ನಡೆಯತೊಡಗಿತು.

ಒಂದು ದಿನ ಸಂಜೆ ದೀಪಾ ಹೊರತು ಪಡಿಸಿ ರಿಹರ್ಸಲ್‌ನಲ್ಲಿದ್ದ ಉಳಿದವರ ಮುಖಗಳೂ ಬಾಡಿದ್ದವು. ಯಾಕೆಂದು ಕೇಳಿದೆ. ಹೊಟ್ಟೆ ಹಸೀತಿದೆ ಏನಾದ್ರೂ ತಿಂಡಿ ತರಿಸಿ ಸಾರ್ ಎಂದರು. ಮಧ್ಯಾಹ್ನ ಏನು ತಿಂದಿಲ್ಲವಾ? ಎಂದೆ. ತಿಂದಿರೋದು ಎಲ್ಲಾ ಖಾಲಿ ಸಾರ್ ಎಂದರು. ದೀಪಾ ಮಾತ್ರ ಏನು ಕೇಳದೆ ಸುಮ್ಮನೇ ನಗುತ್ತಾ ನಿಂತಿದ್ದಳು. ‘ದೀಪಾ ನೀನು ತಿಂಡಿ ಬೇಕು ಅಂತ ಕೇಳ್ತಾನೆ ಇಲ್ವಲ್ಲಮ್ಮ ಏನು ಸಮಚಾರ’ ಅಂದೆ. ನಾನು ರಾತ್ರಿ ಮನೆಗೆ ಹೋಗಿ ಊಟ ಮಾಡ್ತೀನಿ ಏನು ಬೇಡ ಬಿಡಿ ಸಾರ್ ಎಂದು ಮೃದುವಾಗಿ ನಕ್ಕಳು.

ಹಕೀಖತ್ತು ಎಂದರೆ ಆವತ್ತು ದೀಪಾ ಬೆಳಿಗ್ಗೆಯಿಂದ ಏನನ್ನೂ ತಿಂದಿರಲಿಲ್ಲ. ಆದರೂ ಅವಳ ಮುಖದಲ್ಲಿನ ಉತ್ಸಾಹ ಒಂದಿಷ್ಟೂ ಕಡಿಮೆಯಾಗಿರಲಿಲ್ಲ. ಅವಳ ಮನೇಲಿ ತುಂಬಾ ಕಷ್ಟ ಇದೆ ಸಾರ್. ಅವಳು ಊಟ ತಿಂಡಿ ಇಲ್ಲದೆ ಹೀಗೆ ಎಷ್ಟೋ ದಿನದಿಂದ ಇರೋ ಅಭ್ಯಾಸ ಮಾಡ್ಕೊಂಡಿದ್ದಾಳೆ. ನಾವು ತಿಂಡಿ ಊಟಕ್ಕೆ ಕರೆದರೂ ಇಲ್ಲ ನಾನು ತಿಂದಿದ್ದೀನಿ ಅಂತ ಸುಳ್ಳು ಹೇಳ್ತಾಳೆ.

ಉಪವಾಸ ಅವಳಿಗೆ ಫ್ಯಾಷನ್ ಆಗಿ ಬಿಟ್ಟಿದೆ ಸಾರ್ ಎಂದು ಉಳಿದ ಹುಡುಗಿಯರು ದೂರು ಹೇಳಿದರು. ನನಗೆ ಶಾಕ್ ಅನ್ನಿಸಿತು. ಅವಳಿಗೆ ಜೋರು ಮಾಡಿ ಮೊದಲು ತಿಂಡಿ ತರಿಸಿ ತಿನ್ನಿಸಿದೆ. ಇನ್ನು ಯಾವತ್ತೂ ಉಪವಾಸ ಇರಬೇಡ. ಗೆಳೆಯರ ಹತ್ತಿರ ಕೇಳಿ ಪಡೆದು ತಿಂದರೆ ನಿನ್ನ ಗಂಟೇನು ಹೋಗಲ್ಲ. ಕಷ್ಟ ಇದ್ದರೆ ಕೊನೇಪಕ್ಷ ಆತ್ಮೀಯರ ಹತ್ರ ನಮ್ಮ ಹತ್ರನಾದ್ರೂ ಹೇಳಿಕೊಳ್ಳಬೇಕು ದೀಪಾ ಎಂದು ಬೈದು ಬುದ್ಧಿ ಹೇಳಿದೆ. ಆ ಮಾತಿಗೂ ನಕ್ಕು ಸುಮ್ಮನಾದಳು. ನಮ್ಮ ನಾಟಕ ಪ್ರದರ್ಶನದಲ್ಲಿ ಯಶಸ್ವಿಯಾಗಿ ಒಂದು ಬಹುಮಾನ ಪಡೆದಾಗ ಎಲ್ಲರಿಗಿಂತ ಆಕೆ ಹೆಚ್ಚಾಗಿ ಕುಣಿದು ಸಂಭ್ರಮಿಸಿದ್ದಳು.  

ದೀಪಾಗೆ ತಂದೆ ಇದ್ದರೋ ಇಲ್ಲವೋ ಗೊತ್ತಿಲ್ಲ. ಕೇಳಿದರೆ ಇಲ್ಲ ಎನ್ನುತ್ತಿದ್ದಳು. ತಾಯಿ ಗಾರೆ ಕೆಲಸ ಮಾಡಿ ಅವಳನ್ನು ಸಾಕುತ್ತಿದ್ದರು. ಕಾಲೇಜಿನಿಂದ ದೂರದ ಮನೆಗೆ ನಡೆದೇ ಹೋಗುತ್ತಿದ್ದಳು. ನಾನು ಅವಳ ಊಟ ತಿಂಡಿಯ ಖರ್ಚಿಗೆ, ಸಿಟಿ ಬಸ್ಸಿನ ಖರ್ಚಿಗೆ ಅಂತ ಕೊಟ್ಟ ದುಡ್ಡನ್ನೂ ಆಕೆ ಉಳಿಸಿಕೊಂಡು ನಡೆದೇ ಮನೆಗೆ ಸೇರುತ್ತಿದ್ದಳು. ಉಳಿಸಿದ ಆ ದುಡ್ಡಿನಲ್ಲಿ ತಂಗಿಗೆ ಬಿಸ್ಕತ್ತು, ಪೆನ್ನು ತೆಗೆದುಕೊಂಡು ಹೋಗುತ್ತಿದ್ದಳು ಎಂದು ನಂತರ ಗೊತ್ತಾಯಿತು. ಉಪವಾಸ ಅವಳಿಗೆ ಕರಗತವಾಗಿ ಹೋಗಿತ್ತು. ಕಷ್ಟಗಳಿದ್ದರೂ ಅದನ್ನು ತಕ್ಷಣ ಹೇಳಿಕೊಳ್ಳುವ ಸ್ವಭಾವ ಅವಳಿಗೆ ಬಂದಿರಲಿಲ್ಲ. ಕೊರಗುವುದು, ಮುಖ ಬಾಡಿಸಿಕೊಂಡಿರುವುದು ಅವಳಿಗೆ ಗೊತ್ತೇ ಇರಲಿಲ್ಲ. ನಗು ಮಾತ್ರ ಆಕೆಯ ವ್ಯಕ್ತಿತ್ವಕ್ಕೆ ಅಂಟಿ ಬಿಟ್ಟಿತ್ತು.

ಈ ಸಲದ ಆಕೆಯ ಪರೀಕ್ಷೆಗಳು ಮುಗಿದ ಮೇಲೆ ದೀಪಾ ಸಿಕ್ಕಳು. ಅವಳನ್ನು ನಾನು ದತ್ತುಪುತ್ರಿ ಎಂದು ಸ್ವೀಕರಿಸಿದ್ದೆ. ದಿನಾ ಅವಳ ಓದು, ಊಟಗಳ ಬಗ್ಗೆ ಬಿಡದೆ ವಿಚಾರಿಸುತ್ತಿದ್ದೆ. ಬಡತನ ಇದೆ ಅಂತ ನೀನು ಹೆದರಬೇಡ. ಅದೇನು ಶಾಶ್ವತವಾಗಿ ಇರಲ್ಲ.

ಮುಂದೆ ಚೆನ್ನಾಗಿ ಓದೋದಕ್ಕೆ ನೀನು ರೆಡಿಯಾಗು. ನಿನಗೆ ಬೇಕಾಗುವ ಎಲ್ಲಾ ಸಹಾಯವನ್ನು ನಾವೊಂದಿಷ್ಟು ಉಪನ್ಯಾಸಕರು ಸೇರಿ ಮಾಡುವುದು ಎಂದು ತೀರ್ಮಾನಿಸಿದ್ದೇವೆ ಎಂದು ಧೈರ್ಯ ಹೇಳಿದೆ. ಇಲ್ಲಾ ಸಾರ್ ನಾನು ದುಡಿದು ಓದುತ್ತೇನೆ. ಎಲ್ಲಾದರೂ ಒಂದು ಪಾರ್ಟ್ ಟೈಮ್ ಕೆಲಸ ನೋಡಿ ಎಂದಳು. ಅವಳ ಆತ್ಮವಿಶ್ವಾಸ ನೋಡಿ ನನಗೆ ಹೆಮ್ಮೆ ಎನಿಸಿತು. ಬಾ ಇಲ್ಲೇ ಹತ್ತಿರದಲ್ಲಿ ನಿನಗೊಂದು ಕೆಲಸ ಹುಡುಕೋಣ ಎಂದು ಹೇಳಿ ಅವಳನ್ನು ಕರೆದುಕೊಂಡು ನನ್ನ ಗೆಳೆಯ ಶಿವು ಅಂಗಡಿಗೆ ಹೋದೆ.

ಗೆಳೆಯ ಶಿವು ಪುಸ್ತಕದ ಅಂಗಡಿಯೊಂದನ್ನು ನಮ್ಮ ಕಾಲೇಜಿನ ಮುಂದೆಯೇ ಇಟ್ಟುಕೊಂಡಿದ್ದಾನೆ. ಬಡಮಕ್ಕಳು ಎಂದರೆ ಅವನಿಗೂ ಬಲು ಪ್ರೀತಿ. ಓದಲು ಪುಸ್ತಕ, ಪೆನ್ನು, ಫೀಸಿಗೆ ದುಡ್ಡು ಇತ್ಯಾದಿ ಸಹಾಯಗಳನ್ನು ತುಂಬು ಮನಸ್ಸಿನಿಂದ ಸದಾ ಮಾಡುವ ವ್ಯಕ್ತಿ ಅವನು. ದೀಪಾಳ ಕಷ್ಟದ ಪರಿಸ್ಥಿತಿಯನ್ನು ಅವನಿಗೂ ಅವರ ಶ್ರೀಮತಿ ಜ್ಯೋತಿಯವರಿಗೂ ವಿವರಿಸಿ ಹೇಳಿ ದೀಪಾಳ ಪರಿಚಯವನ್ನೂ ಮಾಡಿಸಿದೆ. 

ನೀವು ಏನಾದರೂ ಮಾಡಿ ಈಕೆಗೆ ಒಂದು ಕೆಲಸವನ್ನು  ಕೊಡಲೇಬೇಕು, ಇಲ್ಲ ಎನ್ನಬೇಡಿ ಎಂದು ಒತ್ತಾಯ ಮಾಡಿದೆ. ಅವರಿಬ್ಬರೂ, ಯೋಚಿಸಿ ಆಯ್ತೆಂದು ಒಪ್ಪಿ ಮೇ ತಿಂಗಳಿನಿಂದ ಕೆಲಸಕ್ಕೆ ಬಾರಮ್ಮ ಎಂದು ಹೇಳಿ ಕಳಿಸಿದರು. ದೀಪಾ ಸಂತೋಷದಿಂದ ಫೋನ್ ನಂಬರ್ ಕೊಟ್ಟು ಹೊರಟು ಹೋದಳು. ಬಡತನವನ್ನು ಗೆಲ್ಲುವ ವಿಶ್ವಾಸ ಅವಳಲ್ಲಿ ರೂಪುಗೊಂಡಿತ್ತು.

ಮೊನ್ನೆ ಪುಸ್ತಕದ ಅಂಗಡಿಗೆ ಹೋದಾಗ ಸಿಕ್ಕ ಶಿವು, ಸಾರ್ ನಿಮ್ಮ ಸ್ಟೂಡೆಂಟ್ ದೀಪಾಗೆ ಮುಂದಿನ ತಿಂಗಳಿಂದ ಕೆಲಸಕ್ಕೆ  ಬರೋಕೆ ಹೇಳಿ ಸಾರ್. ಹೊಸ ಜೆರಾಕ್ಸ್ ಮೆಶಿನ್ ತರಿಸುತ್ತಿದ್ದೇನೆ. ಅದನ್ನು ಅವಳು ನೋಡಿಕೊಳ್ಳಲಿ. ಕಾಲೇಜಲ್ಲಿ ಓದ್ತಾನೆ ಎಷ್ಟಾಗುತ್ತೋ ಅಷ್ಟು ಕೆಲಸ ಮಾಡಲಿ ಎಂದು ಹೇಳಿದ.  ನಾನು ತಕ್ಷಣ ಆಕೆ ಬರೆಸಿ ಹೋಗಿದ್ದ  ಮನೆಯ ನಂಬರ್‌ಗೆ ಫೋನು ಮಾಡಿದೆ. ದೀಪಾಳ ತಾಯಿ ಫೋನು ಎತ್ತಿಕೊಂಡರು. 

ನಾನು ದೀಪಾಳ ಮೇಷ್ಟ್ರು ಮಾತಾಡ್ತಾ ಇದ್ದೀನಿ. ದೀಪಾ ಎಲ್ಲಿದ್ದಾಳೆ? ಸ್ವಲ್ಪ ಕರೀರಿ ಎಂದೆ. ಅದಕ್ಕೆ ಅವರಮ್ಮ  ದೀಪಾ ಎಲ್ಲಿದ್ದಾಳೆ ಸಾರ್. ನಿನ್ನೇನೆ ಸತ್ತೋದಳು. ಈಗಷ್ಟೇ ಮಣ್ಣು ಮಾಡಿ ಬಂದು ಕೂತ್ಕೊಂಡಿದ್ದೀನಿ ಎಂದು ಬಿಟ್ಟರು. ನನ್ನ ಕಿವಿಗೆ ಸಿಡಿಲೇ ಬಡಿದಂತಾಯಿತು. ಏನಮ್ಮ ನೀವು ಏನು ಹೇಳ್ತಾ ಇದ್ದೀರಾ? ದೀಪಾಗೆ ಏನಾಯಿತು? ಹ್ಯಾಗೆ ಸತ್ತಳು? ಯಾವಾಗ ಆಗಿದ್ದು? ಎಂದೆಲ್ಲಾ ಗಾಬರಿಯಿಂದ ಪ್ರಶ್ನಿಸುತ್ತಿದ್ದೆ. ಅವರ ತಾಯಿ ಅಳುತ್ತಾ ಮಾತಾಡ್ತಾನೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.