ADVERTISEMENT

ಎನ್‌ಐಸಿ ಪ್ರಮಾಣಿತ ಡಿಜಿಟಲ್‌ ಸುಳ್ಳು

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:24 IST
Last Updated 16 ಜೂನ್ 2018, 9:24 IST

ಕರ್ನಾಟಕ ವಿಧಾನ ಮಂಡಲದ ಉಭಯ ಸದನ­ಗಳಲ್ಲಿ ಸುಳ್ಳು ಆದಾಯ ಹಾಗೂ ಜಾತಿ ಪ್ರಮಾಣ ಪತ್ರಗಳ ಕುರಿತ ಚರ್ಚೆ ಬಿಸಿಯೇರಿದ ಭಾವ ಹುಟ್ಟಿಸಿ ಅದು ತಣ್ಣಗಾದ ಹೊತ್ತಿನಲ್ಲಿ ಕನ್ನಡಿಗ ತಂತ್ರಜ್ಞ ಮತ್ತು ಮುಕ್ತ ತಂತ್ರಾಂಶ ಆಂದೋಲನದಲ್ಲಿ ಸಕ್ರಿಯರಾಗಿರುವ ತೇಜೇಶ್  ಜಿ.ಎನ್. ಇನ್ನೊಂದು ಸುಳ್ಳು ಪ್ರಮಾಣ ಪತ್ರದ ಹಗರಣದ ಕುರಿತು  ಬ್ಲಾಗಿಸಿದ್ದರು (http://goo.gl/U0iEnv).

2014ರ ಜುಲೈ 11ರ ಮುಂಜಾನೆ http://twit.tv ಯಲ್ಲಿ ಪ್ರಸಾರವಾದ ‘ಸೆಕ್ಯುರಿಟಿ ನೌ’ ಕಾರ್ಯಕ್ರಮ ನೋಡಿ ಅದರಲ್ಲಿದ್ದ ವಿಚಾರವೊಂದರ ಎಳೆ ಹಿಡಿದು ಬರೆದ ತೇಜೇಶ್ ಅವರ ಬ್ಲಾಗ್ ಭಾರತದ ಎಲ್ಲಾ ಸರ್ಕಾರಿ ವೆಬ್‌ಸೈಟ್‌ಗಳನ್ನು ರೂಪಿಸಿ, ನಿರ್ವಹಿಸುವ ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ (ಎನ್‌ಐಸಿ) ವಿತರಿಸಿರುವ ಸುಳ್ಳು ಪ್ರಮಾಣ ಪತ್ರಗಳ ಹಗರಣವೊಂದನ್ನು ವಿವರಿಸಿತ್ತು. ತೇಜೇಶ್‌ಗೆ ಎನ್ಐಸಿ ಮಾಡಿದ ಅನಾಹುತ ತಿಳಿಯುವ ಹೊತ್ತಿಗಾಗಲೇ ಗೂಗಲ್‌ಗೂ ಇದರ ಅರಿವಾಗಿತ್ತು. 

ಗೂಗಲ್‌ನ ಸೆಕ್ಯುರಿಟಿ ಎಂಜಿನಿಯರ್ ಆ್ಯಡಂ ಲ್ಯಾಂಗ್ಲಿ ಕೂಡಾ ಈ ಕುರಿತಂತೆ ಒಂದು ಬ್ಲಾಗ್ ಬರೆದು (http://goo.gl/j9p6fC) ಗೂಗಲ್ ಉತ್ಪನ್ನಗಳ ಗ್ರಾಹಕರಿಗೆ ಹೆಚ್ಚೇನೂ ತೊಂದರೆಯಾಗಲಾರದು ಎಂಬ ಭರವಸೆ ನೀಡಿದ್ದರು. ಕಳೆದ ಬುಧವಾರ (16 ಜುಲೈ 2014) ಕೆಲವು ಇಂಗ್ಲಿಷ್ ಪತ್ರಿಕೆಗಳು ಮತ್ತು ಭಾಷಾ ಪತ್ರಿಕೆಗಳೂ ಇದರ ಬಗ್ಗೆ ಬರೆದವಾದರೂ ತಾಂತ್ರಿಕ ಪರಿಭಾಷೆ­ಯಲ್ಲಿದ್ದ ಆ ಸುದ್ದಿಯನ್ನು ಓದಿದವರಿಗೆ ಎನ್‌ಐಸಿ ಮಾಡಿದ ಅನಾಹುತ ನಿಜಕ್ಕೂ ಎಂತಹುದು ಎಂಬುದು ಅರ್ಥವಾಗುವಂತಿರಲಿಲ್ಲ.

ಪರಿಣಾಮವಾಗಿ ಕರ್ನಾಟ­ಕ­ದ ವಿಧಾನ ಮಂಡಲದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರಗಳ ಚರ್ಚೆಗೆ ಆದ ಗತಿಯೇ ಎನ್ಐಸಿ ವಿತರಿಸಿದ ಸುಳ್ಳು ಪ್ರಮಾಣ ಪತ್ರಗಳಿಗೂ ಆಯಿತು. ಅಂತೂ ಇಂತೂ ಎನ್ಐಸಿಯ ದೊಡ್ಡ ತಲೆಗಳ ಮಟ್ಟಿಗೆ ಇವು ‘ಒಳ್ಳೆಯ ದಿನಗಳೇ’ ಸರಿ.
ಎನ್‌ಐಸಿ ವಿತರಿಸಿದ ಸುಳ್ಳು ಪ್ರಮಾಣ ಪತ್ರಗಳು ಯಾವುವು ಎಂಬ ಪ್ರಶ್ನೆ ನಿಮ್ಮ ಮುಂದಿರಬಹುದು. ಇದಕ್ಕೆ ಉತ್ತರ ಕಂಡುಕೊಳ್ಳುವುದಕ್ಕೆ ಡಿಜಿಟಲ್ ಪ್ರಮಾಣ ಪತ್ರಗಳೆಂದರೆ ಏನು ಎಂಬುದನ್ನು ಅರಿಯಬೇಕು.

ಅದಕ್ಕೆ ನಾವು ಬ್ರೌಸರ್ ಬಳಸಿ ಒಂದು ಜಾಲ ತಾಣ ಅಥವಾ ಪುಟವನ್ನು ತೆರೆಯುವ ಹೊತ್ತಿನಲ್ಲಿ ನಡೆಯುವ ತಾಂತ್ರಿಕ ಸಂವಹನವನ್ನು ಸ್ವಲ್ಪಮಟ್ಟಿಗೆ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಒಂದು ನಿರ್ದಿಷ್ಟ  ವೆಬ್‌ಸೈಟ್‌ ಅನ್ನು ಬ್ರೌಸರ್‌ನಲ್ಲಿ ನೋಡುತ್ತೇವೆ ಎಂದರೆ ಮತ್ತೊಂದು ಕಂಪ್ಯೂಟರ್ ಜೊತೆಗೆ ಸಂಪರ್ಕ ಸಾಧಿಸುತ್ತಿದ್ದೇವೆ ಎಂದರ್ಥ. ನಾವು ಬ್ರೌಸರ್ ತೆರೆದು ಯುಆರ್‌ಎಲ್ ಅಥವಾ ವೆಬ್ ವಿಳಾಸವನ್ನು ಟೈಪಿಸಿದ ನಂತರ ನಮ್ಮ ಕಂಪ್ಯೂಟರ್ ವೆಬ್‌ಸೈಟ್‌ ಅನ್ನು ಹೊಂದಿರುವ ಕಂಪ್ಯೂಟರ್ ಅಥವಾ ಸರ್ವರ್ ಅನ್ನು ಸಂಪರ್ಕಿಸುತ್ತದೆ.

ಇದನ್ನು ತಾಂತ್ರಿಕ ಭಾಷೆಯಲ್ಲಿ SYN ಸಂದೇಶವನ್ನು (ಸಮ್ಮಿಳನ ಸಂದೇಶ) ಕಳುಹಿಸುವ ಕ್ರಿಯೆ ಎನ್ನುತ್ತಾರೆ. ಈ ಸಂದೇಶವನ್ನು ಸ್ವೀಕರಿಸಿದ ಸರ್ವರ್ ತನ್ನ SYN ಸಂದೇಶದ ಜೊತೆಗೆ ನಮ್ಮ ಕಂಪ್ಯೂಟರಿನ ಸಂದೇಶವನ್ನು ಸ್ವೀಕರಿಸಿರುವುದನ್ನು ತಿಳಿಸುವ ACK ಸಂದೇಶವನ್ನು (ಸ್ವೀಕೃತಿ ಸಂದೇಶ) ಕಳುಹಿಸುತ್ತದೆ.  ನಮ್ಮ ಕಂಪ್ಯೂಟರ್ ಇದನ್ನೊಪ್ಪಿ  ತಾನೂ ಒಂದು ACK ಸಂದೇಶ ಕಳುಹಿಸುತ್ತದೆ. ಅಲ್ಲಿಗೆ ಎರಡೂ ಕಂಪ್ಯೂಟರುಗಳು ಪರಸ್ಪರ ಸಂಪರ್ಕ ಸಾಧಿಸುವ ಕ್ರಿಯೆ ಪೂರ್ಣಗೊಳ್ಳುತ್ತದೆ. ಇಷ್ಟಾದರೆ ತಾತ್ವಿಕವಾಗಿ ಜಾಲತಾಣ ತೆರೆದುಕೊಳ್ಳಬೇಕು.

ಈ ಪ್ರಕ್ರಿಯೆಯನ್ನು ತ್ರೀ ವೇ ಹ್ಯಾಂಡ್ ಶೇಕ್ ಅಥವಾ ಮೂರು ಹಂತದ ಹಸ್ತಲಾಘವ ಎಂದು ಕರೆಯಲಾಗುತ್ತದೆ. ಸಾಮಾನ್ಯ ಸಂದರ್ಭದಲ್ಲಿ ಈ ಪ್ರಕ್ರಿಯೆ ಸಾಕು. ಆದರೆ ಇಂದಿನ ಸೈಬರ್ ಜಗತ್ತಿನಲ್ಲಿ ನಾವು ನೋಡಲು ಉದ್ದೇಶಿಸಿರುವ ವೆಬ್‌ಸೈಟ್‌ನ ಎಲ್ಲಾ ಮೇಲ್ಮೈ ಲಕ್ಷಣ­ಗಳಿರುವ ನಕಲಿ ವೆಬ್‌ಸೈಟ್ ಇರುವ ಸಾಧ್ಯತೆಗಳಿವೆ. ಇವುಗಳ ಮಧ್ಯೆ ನಾವು ಸರಿಯಾದ ವೆಬ್‌ಸೈಟ್ ಸಂಪರ್ಕಿಸುತ್ತಿದ್ದೇವೆ ಎಂಬುದನ್ನು ಖಾತರಿ ಪಡಿಸಿಕೊಳ್ಳುವುದಕ್ಕೆ ಇರುವ ಮಾರ್ಗವೇನು?

ಉದಾಹರಣೆಗೆ ಇಂಟರ್‌ನೆಟ್ ಬ್ಯಾಂಕಿಂಗ್‌ ಅಥವಾ ಆನ್‌ಲೈನ್ ಖರೀದಿಗೆ ನಾವೊಂದು ವೆಬ್‌ಸೈಟ್‌ಗೆ ಪ್ರವೇಶಿಸುವುದಾದರೆ ಅದರ ಅಸಲೀತನವನ್ನು ಖಚಿತ ಪಡಿಸಿಕೊಳ್ಳುವುದು ಹೇಗೆ? ಇದಕ್ಕಾಗಿ ಎಸ್ಎಸ್ಎಲ್ ಅಥವಾ ಸೆಕ್ಯೂರ್ಡ್ ಸಾಕೆಟ್ಸ್ ಲೇಯರ್ ಅಥವಾ ಅದರ ಇತ್ತೀಚಿನ ರೂಪವಾದ ಟಿಎಲ್‌ಎಸ್ ಅಥವಾ ಟ್ರಾನ್ಸ್‌ಪೋರ್ಟ್ ಲೇಯರ್ ಸೆಕ್ಯುರಿಟಿ ಎಂಬ ತಂತ್ರ­ಜ್ಞಾನವಿದೆ. ಇದು ಬಳಕೆದಾರ ಮತ್ತು ಸೇವಾದಾತ ಕಂಪ್ಯೂಟರುಗಳ ನಡುವಣ ಸಂವಹನ ಅತ್ಯುನ್ನತ ಭದ್ರತೆಯಲ್ಲಿ ನಡೆಯುವಂತೆ ನೋಡಿಕೊಳ್ಳುತ್ತದೆ.

ಉದಾಹರಣೆಗೆ ಆನ್‌ಲೈನ್ ಖರೀದಿಗಾಗಿ ವೆಬ್‌ಸೈಟ್ ಸಂಪರ್ಕಿಸಿದಾಗ ಅದು ನಿರ್ದಿಷ್ಟ ಕಂಪೆನಿಯದ್ದೇ ಎಂಬುದನ್ನು ಖಾತರಿಪಡಿಸಿಕೊಳ್ಳುವ ಕೆಲಸವನ್ನು ನಿಮ್ಮ ಬ್ರೌಸರ್ ಮಾಡುತ್ತದೆ. ಹೀಗೆ ಖಾತರಿ ಪಡಿಸಿಕೊಂಡ ಮೇಲೆ ಎರಡೂ ಕಂಪ್ಯೂಟರುಗಳ ನಡುವೆ ವಿನಿಮಯವಾಗುವ ಮಾಹಿತಿ ಇನ್ನಾರೂ ಮಧ್ಯಪ್ರವೇಶಿಸಿ ತಿಳಿಯಲು ಸಾಧ್ಯವಿಲ್ಲದಂತೆ ಸಂಪರ್ಕ­ದಲ್ಲಿ­ರುವ ಗ್ರಾಹಕ ಮತ್ತು ಸೇವಾದಾತ ಕಂಪ್ಯೂಟರು­ಗಳಷ್ಟೇ ಅರ್ಥ ಮಾಡಿಕೊಳ್ಳಬಲ್ಲ ಗುಪ್ತಸಂಕೇತ ಸಂವಹನವನ್ನು ಆರಂಭಿಸುತ್ತದೆ. ಆನ್‌ಲೈನ್ ಖರೀ­ದಿಯ ಪಾವತಿ, ಇಂಟರ್‌ನೆಟ್ ಬ್ಯಾಂಕಿಂಗ್, ಇಮೇಲ್ ಸೇವೆಗಳೆಲ್ಲವೂ ಈ ಬಗೆಯಲ್ಲಿ ನಡೆಯುತ್ತವೆ.

ಅಂದರೆ ನಾವು ಇಂಟರ್‌ನೆಟ್ ಬ್ಯಾಂಕಿಂಗ್ ಅಥವಾ ಆ ಬಗೆಯ ಯಾವುದೇ ವ್ಯವಹಾರಕ್ಕಾಗಿ ವೆಬ್‌ಸೈಟ್‌ಗೆ ಹೋದಾಗ ಅದರ ಸಾಚಾತನವನ್ನು ಅರಿಯಲು ವೆಬ್‌ಸೈಟ್‌ನ ಎಸ್ಎಸ್ಎಲ್ ಅಥವಾ ಟಿಎಸ್ಎಲ್ ಪ್ರಮಾಣ ಪತ್ರವನ್ನು ನಮ್ಮ ಕಂಪ್ಯೂಟರ್ ಪರಿಶೀಲಿಸುತ್ತದೆ. ಇದಕ್ಕಾಗಿ ಜಗತ್ತಿನ ಎಲ್ಲಾ ವೆಬ್‌ಸೈಟ್‌ಗಳ ಪ್ರಮಾಣ ಪತ್ರಗಳ ದತ್ತಾಂಶ ಸಂಗ್ರಹ ನಮ್ಮ ಕಂಪ್ಯೂಟರಿನಲ್ಲಿ ಇರಬೇಕಾಗುತ್ತದೆ. ಆದರೆ ಇದು ಪ್ರಾಯೋಗಿಕವಾಗಿ ಅಸಾಧ್ಯ. ಸಾಲದ್ದಕ್ಕೆ ಇವುಗಳ ಸಂಖ್ಯೆ ಪ್ರತೀಕ್ಷಣವೂ ಹೆಚ್ಚುತ್ತಿರುತ್ತದೆ.

ಇದನ್ನು ಸರಳಗೊಳಿಸುವುದಕ್ಕೆ ಪ್ರಮಾಣ ಪತ್ರಗಳನ್ನು ವಿತರಿಸುವ ಪ್ರಾಧಿಕಾರಗಳು ಬಂದವು. ಇಂಥ ಪ್ರಾಧಿಕಾರಗಳಲ್ಲಿ ವೆರಿಸೈನ್, ಜಿಯೋ ಟ್ರಸ್ಟ್ ಮುಂತಾದ ಸಂಸ್ಥೆಗಳ ಜೊತೆಗೆ ಭಾರತ ಸರ್ಕಾರದ ಒಡೆತನದ ಎನ್ಐಸಿ ಕೂಡಾ ಇದೆ. ಇವುಗಳ ಪಟ್ಟಿಯೊಂದು ನಾವು ಕಂಪ್ಯೂಟರಿಗೆ ಆಪರೇಟಿಂಗ್ ಸಿಸ್ಟಂ ಇನ್‌ಸ್ಟಾಲ್ ಮಾಡುವಾಗಲೇ ಸೇರಿರುತ್ತದೆ. ಅಥವಾ ಬ್ರೌಸರ್‌ನ ಜೊತೆಗೆ ಬಂದಿರುತ್ತದೆ. ನಿರ್ದಿಷ್ಟ ಜಾಲತಾಣಗಳು ಈ ಪ್ರಾಧಿಕಾರಗಳಿಂದ ಪ್ರಮಾಣ ಪತ್ರ ಪಡೆದಿದ್ದರೆ ನಮ್ಮ ಬ್ರೌಸರ್ ಅವುಗಳನ್ನು ಸಾಚಾ ವೆಬ್‌ಸೈಟ್ ಎಂದು ಗುರುತಿಸುತ್ತದೆ.

ಉದಾಹರಣೆಗೆ ನಾವು ‘ಅಮೆಝಾನ್’ ತಾಣವನ್ನು ಪ್ರವೇಶಿಸುತ್ತೇವೆಂದುಕೊಳ್ಳಿ. ಆಗ ನಮ್ಮ ಬ್ರೌಸರ್‌ನಲ್ಲಿರುವ ಜಿಯೋ ಟ್ರಸ್ಟ್‌ನ ಮಾಹಿತಿ ‘ಅಮೆಝಾನ್’ ತಾಣದಲ್ಲಿರುವ ಪ್ರಮಾಣ ಪತ್ರವನ್ನು ಪರಿಶೀಲಿಸುತ್ತದೆ. ಅದಕ್ಕೆ ಅಲ್ಲಿರುವ ಜಿಯೋಟ್ರಸ್ಟ್‌ನ ಪ್ರಮಾಣ ಪತ್ರ ಕಾಣಸಿಗುತ್ತದೆ. ಅದರಲ್ಲಿರುವ ಮಾಹಿತಿಯನ್ನು ಒಪ್ಪಿ ಮುಂದುವರಿಯಲು ಅವಕಾಶ ಮಾಡಿಕೊಡುತ್ತದೆ.

ಜಾಲತಾಣಗಳ ಇಂಥ ಪ್ರಮಾಣ ಪತ್ರಗಳು ಅವಧಿ ಮೀರಿದ್ದರೆ ಅಥವಾ ನಕಲಿ ತಾಣವೊಂದಕ್ಕೆ ನೀವು ಭೇಟಿ ನೀಡಿದ್ದರೆ ಬ್ರೌಸರ್‌ ಕೆಂಪು ಅಕ್ಷರಗಳಲ್ಲಿ ಎಚ್ಚರಿಕೆ ನೀಡುತ್ತದೆ. ಕೆಲವು ಬ್ರೌಸರ್‌­ಗಳಂತೂ ನೀವು ಯಾವ ಮಾಹಿತಿಯನ್ನೂ ಊಡಿಸಲು ಬಿಡದಂತೆ ಎಚ್ಚರಿಕೆಗಳ ಮೂಲಕ ಕಾಡುತ್ತವೆ. ಇಲ್ಲೊಂದು ಅಂಶವನ್ನು ಗಮನಿಸಬೇಕು. ನಾವು ಪ್ರವೇ­ಶಿ­ಸು­ತ್ತಿರುವುದು ‘ಅಮೆಝಾನ್’ನ ಅಧಿಕೃತ ತಾಣ ಎಂಬುದನ್ನು ನಮ್ಮ ಬ್ರೌಸರ್ ಖಾತರಿ ಪಡಿಸುತ್ತಿ­ರುವುದು ಜಿಯೋ ಟ್ರಸ್ಟ್‌ನ ಪ್ರಮಾಣ ಪತ್ರದ ಮೂಲಕ.

ಒಂದು ವೇಳೆ ಜಿಯೋ ಟ್ರಸ್ಟ್  ‘ಅಮೆಝಾನ್’ ಅನ್ನೇ ಹೋಲುವ ನಕಲಿ ತಾಣ­ವೊಂದಕ್ಕೆ ಪ್ರಮಾಣ ಪತ್ರ ನೀಡಿದರೆ ನಮ್ಮ ಬ್ರೌಸರ್ ಅದನ್ನೂ ಅಸಲಿಯೆಂದೇ ಭಾವಿಸಿ ಮುಂದುವರಿ­ಯುತ್ತದೆ. ಬಳಕೆದಾರರಾದ ನಾವು ಖರೀದಿಸುವ ವಸ್ತುವಿನ ಬೆಲೆಯನ್ನು ಪಾವತಿಸಲು ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಬಳಸಿ ಮೂರ್ಖರಾಗುತ್ತೇವೆ.

ಎನ್ಐಸಿ ಕೂಡಾ ಜಿಯೋ ಟ್ರಸ್ಟ್‌ನಂತೆಯೇ ವೆಬ್‌ಸೈಟ್‌ಗಳ ಅಸಲೀತನವನ್ನು ಖಾತರಿಪಡಿಸುವ ಪ್ರಮಾಣ ಪತ್ರಗಳನ್ನು ನೀಡುವ ಒಂದು ಪ್ರಾಧಿಕಾರ. ಇದು 2014ರ ಜೂನ್ 25ರಂದು ನಾಲ್ಕು ಪ್ರಮಾಣ ಪತ್ರಗಳನ್ನು ತಪ್ಪಾಗಿ ವಿತರಿಸಿದೆ. ಮಾಧ್ಯಮ ವರದಿಗಳು ಮತ್ತು ತಂತ್ರಜ್ಞರ ಬ್ಲಾಗ್‌ಗಳಲ್ಲಿರುವ ಮಾಹಿತಿಯಂತೆ ಗೂಗಲ್‌ ಸಂಸ್ಥೆಗೆ ಸೇರಿದ ಮೂರು ಡೊಮೈನ್‌ಗಳು (ವೆಬ್ ವಿಳಾಸ) ಮತ್ತು ಯಾಹೂ ಸಂಸ್ಥೆಗೆ ಸೇರಿದ ಒಂದು ಡೊಮೈನ್ ಅನ್ನು ಹೋಲುವ ವೆಬ್‌ಸೈಟ್‌ಗಳಿಗೆ ಈ ಪ್ರಮಾಣ ಪತ್ರಗಳನ್ನು ವಿತರಿಸಲಾಗಿದೆ. ಒಂದು ವೇಳೆ ‘ಜಿಮೇಲ್’ ಅನ್ನು ಹೋಲುವ ನಕಲಿ ಡೊಮೈನ್‌ಗೆ ಪ್ರಮಾಣ ಪತ್ರ ದೊರೆತಿದ್ದರೆ ಅದು ಖಂಡಿತವಾಗಿಯೂ ಜಿಮೇಲ್ ಬಳಕೆದಾರರ ಮಾಹಿತಿಯನ್ನು ಸುಲಭದಲ್ಲಿ ಕದಿಯುತ್ತದೆ.

ಜುಲೈ 2ರಂದು ಈ ವಿಚಾರ ಗೂಗಲ್‌ಗೆ ತಿಳಿಯಿತು. ತಕ್ಷಣವೇ ಅದು ತನ್ನ ಬ್ರೌಸರ್ ಕ್ರೋಮ್‌ನಲ್ಲಿ ಎನ್ಐಸಿ ನೀಡುವ ಪ್ರಮಾಣ ಪತ್ರಗಳನ್ನು ನಂಬದಂತೆ ವ್ಯವಸ್ಥೆ ಮಾಡಿತು. ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಕೂಡಾ ಇದೇ ವ್ಯವಸ್ಥೆ ಮಾಡಿದೆ. ಫೈರ್‌ಫಾಕ್ಸ್ ಈ ಪ್ರಮಾಣ ಪತ್ರಗಳನ್ನು ಬೇರೆಯೇ ಬಗೆಯಲ್ಲಿ ಸಂಸ್ಕರಿಸುವುದರಿಂದ ಅದನ್ನು ಬಳಸುವವರಿಗೆ ಈ ತೊಂದರೆ ಎದುರಾಗುವುದಿಲ್ಲ.

ಜೂನ್ 25ರಿಂದ ಜುಲೈ 2ರ ನಡುವಣ ಏಳು ದಿನ­ಗಳಲ್ಲಿ ಯಾವುದೇ ಗೂಗಲ್ ಗ್ರಾಹಕರಿಗೆ ಯಾವುದೇ ತೊಂದರೆಯಾಗಿರುವುದು ಈ ತನಕ ವರದಿಯಾಗಿಲ್ಲ. ಸದ್ಯದ ಮಟ್ಟಿಗೆ ಇದೊಂದೇ ಸಮಾಧಾನದ ಸಂಗತಿ. ಇದೆಷ್ಟು ದಿನ ಉಳಿಯುತ್ತದೆ ಎಂಬುದನ್ನು ಕಾದು ನೋಡಬೇಕು. ಎನ್‌ಐಸಿ ಕೇವಲ ಸರ್ಕಾರಿ ವೆಬ್‌ಸೈಟ್‌ಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸುವ ಪ್ರಾಧಿಕಾರ. ಅದು ಹೇಗೆ ತನ್ನ ವ್ಯಾಪ್ತಿಯನ್ನು ಮೀರಿ ಇತರ ಸಂಸ್ಥೆಗಳಿಗೆ ಪ್ರಮಾಣ ಪತ್ರ ವಿತರಿಸಿತು ಎಂಬುದು ಯಕ್ಷ ಪ್ರಶ್ನೆ.

ಇದು ಹಗರಣವೊಂದರ ಸಾಧ್ಯತೆಯನ್ನು ತೋರಿ­ಸುತ್ತಿದೆ. ವೈಯಕ್ತಿಕ ಮಾಹಿತಿಯನ್ನು ಕದಿಯುವ ದೊಡ್ಡ ಜಾಲವೇ ಇದರ ಹಿಂದಿರಬಹುದು. ಭಾರತ­ದಲ್ಲಿ ಡಿಜಿಟಲ್ ಪ್ರಮಾಣ ಪತ್ರಗಳನ್ನು ವಿತರಿಸುವ ಪ್ರಾಧಿಕಾರಗಳ ಮೇಲ್ವಿಚಾರಕ ಸಂಸ್ಥೆಯಾದ ಸಿಸಿಎ (ಕಂಟ್ರೋಲರ್ ಆಫ್ ಸರ್ಟಿಫಿಕೇಶನ್ ಅಥಾರಿಟೀಸ್) ಕೂಡಾ ಪ್ರಮಾಣ ಪತ್ರಗಳ ಗೋಲ್‌ಮಾಲ್ ನಡೆದಿರುವುದನ್ನು ಖಚಿತಪಡಿಸಿದೆಯಷ್ಟೇ ಅಲ್ಲದೆ ತನಿಖೆಯನ್ನೂ ಆರಂಭಿಸಿದೆ.

ಸಿಸಿಎ ಮತ್ತು ಎನ್ಐಸಿಗಳೆರಡೂ ಕೇಂದ್ರ ಸರ್ಕಾರದ ಮಾಹಿತಿ ತಂತ್ರ­ಜ್ಞಾನ ಇಲಾಖೆಯ ಅಡಿಯಲ್ಲಿಯೇ ಕಾರ್ಯ­ನಿರ್ವ­ಹಿ­ಸುತ್ತಿವೆ. ಇಲ್ಲಿಯ ತನಕ ಸರ್ಕಾರ ಈ ಹಗರಣದ ಕುರಿತಂತೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ.ಎನ್‌ಐಸಿ ಮತ್ತು ಸಿಸಿಎಗಳು ಇಂಥ ಹಗರಣಗಳು ನಡೆದಾಗ ಸರ್ಕಾರಿ ಇಲಾಖೆಗಳು ವಹಿಸುವ ಅಸಹನೀಯ ಮೌನವನ್ನೇ ತಮ್ಮ ಸಮರ್ಥನೆಯನ್ನಾಗಿಸಿಕೊಂಡಿವೆ.

ಇಷ್ಟಕ್ಕೂ ಎನ್ಐಸಿ ವಿತರಿಸಿರುವುದು ನಾಲ್ಕೇ ಸುಳ್ಳು ಪ್ರಮಾಣ ಪತ್ರಗಳು ಎಂಬುದನ್ನು ನಂಬುವುದು ಹೇಗೆ ಎಂಬ ಪ್ರಶ್ನೆಯೂ ಇಲ್ಲಿದೆ. ತಂತ್ರಜ್ಞಾನದ ಸಂಕೀರ್ಣ ಪರಿಭಾಷೆಯೊಳಗೆ ಸರ್ಕಾರಿ ಸಂಸ್ಥೆಯೊಂದು ಜವಾ­ಬ್ದಾರಿ­ಯಿಂದ ನುಣುಚಿಕೊಳ್ಳುವುದನ್ನು ತಡೆ­ಯಲು ಅಗತ್ಯವಿರುವ ಕ್ರಮಗಳು ಈಗಿನ ತುರ್ತು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.