ADVERTISEMENT

ಸರ್ಕಾರಿ ವೆಬ್‌ಸೈಟ್‌ಗಳೆಂಬ ಚಕ್ರವ್ಯೂಹ

ಎ.ಎನ್‌ ಎಮ ಇಸ್ಮಾಯಿಲ್
Published 22 ಜೂನ್ 2014, 19:30 IST
Last Updated 22 ಜೂನ್ 2014, 19:30 IST

ಕೇಂದ್ರ ಸರ್ಕಾರ ರೂಪಿಸಿ ಜಾರಿಗೊಳಿಸಿ­ರುವ ಭೂಸ್ವಾಧೀನ ಕಾಯ್ದೆಗೆ ಅನು­ಗುಣವಾಗಿ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ‘ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರ­ದರ್ಶಕತೆ ಮತ್ತು ಸೂಕ್ತ ಪರಿಹಾರದ ಹಕ್ಕು, ಪುನ­ರ್ನಿರ್ಮಾಣ ಮತ್ತು ಪುನರ್ವಸತಿ (ಕರ್ನಾಟಕ) ನಿಯಮಗಳು -2014’ರ ಕರಡನ್ನು  ಶನಿವಾರ (21 ಜೂನ್, 2014) ಪ್ರಕಟಿಸಿದೆ. ಈ ಮಾಹಿತಿ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಜೊತೆಗೆ ಈ ಕರಡು ನಿಯಮಗಳ ಪ್ರತಿ ಕರ್ನಾಟಕ ಕಂದಾಯ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿದೆಯೆಂದು ಪತ್ರಿಕಾ ವರದಿಗಳು ಹೇಳುತ್ತಿವೆ. ಯಾವ ವರದಿಯೂ ನಿರ್ದಿಷ್ಟ ಯುಆರ್ಎಲ್ ಅಥವಾ ಅಂತರ್ಜಾಲ ವಿಳಾಸವನ್ನು ನೀಡಿಲ್ಲ. ಸರ್ಕಾರವೂ ತನ್ನ ಪ್ರಕಟಣೆಯಲ್ಲಿ ಈ ವಿವರವನ್ನು ಒದಗಿಸುವ ಗೋಜಿಗೆ ಹೋಗಿಲ್ಲ ಅನ್ನಿಸುತ್ತದೆ.

ಸರ್ಕಾರದ ಮಾಧ್ಯಮಗಳಿಗೆ ನೀಡಿರುವ ಮಾಹಿ­ತಿ­ಯನ್ನು ಆಧಾರವಾಗಿಟ್ಟುಕೊಂಡು ಗೂಗಲಿಸಿ ಕಂದಾಯ ಇಲಾಖೆಯ ವೆಬ್‌ಸೈಟ್‌ ಹುಡುಕಿದರೆ ಸಿಗುವುದು ಭೂದಾಖಲೆಗಳನ್ನು ಕಂಪ್ಯೂ­­ಟರೀ­ಕರಿ­ಸಿದ ‘ಭೂಮಿ’ ಯೋಜನೆಯ ವೆಬ್‌ಸೈಟ್‌­(www.bhoomi.karnataka.gov.in/landrecordsonweb/). ಗೂಗಲ್ ಅನ್ನು ನಂಬದೆ ಕರ್ನಾಟಕ ಸರ್ಕಾರದ ಅಧಿಕೃತ ಪೋರ್ಟಲ್ ಆದ www.karnataka.gov.inನಲ್ಲಿ ನೀಡ­ಲಾಗಿರುವ ವಿವಿಧ ಇಲಾಖೆಗಳ ಅಧಿಕೃತ ವೆಬ್‌ಸೈಟ್‌ಗಳ ಪಟ್ಟಿ­ಯಲ್ಲಿ ಕಂದಾಯ ಇಲಾಖೆಯನ್ನು ಆರಿಸಿಕೊಂಡರೆ ಅಲ್ಲಿ ಮೂರು ಆಯ್ಕೆಗಳಿವೆ. ಮೊದಲನೆ­ಯದ್ದು ‘ಭೂಮಿ’ ಯೋಜನೆಯ ವೆಬ್‌ಸೈಟ್‌, ಎರಡನೆ­ಯದ್ದು  ಮುದ್ರಾಂಕ ಮತ್ತು ನೋಂದಣಿ ಇಲಾ­ಖೆಯ ವೆಬ್‌ಸೈಟ್‌, ಮೂರನೆ­ಯದ್ದು ‘ಅಟಲ್ಜಿ ಜನ­ಸ್ನೇಹಿ ಕೇಂದ್ರ’ ಅರ್ಥಾತ್ ನಾಡ ಕಚೇರಿಗಳಿಗೆ ಸಂಬಂ­ಧಿಸಿದ ವೆಬ್‌­ಸೈಟ್‌. ಈ ಮೂರೂ ವೆಬ್‌ಸೈಟ್‌ಗಳು ಕಂದಾಯ ಇಲಾಖೆಯ ಅಡಿ­ಯ­ಲ್ಲಿಯೇ ಬರು­ತ್ತವೆ ಎಂದು ಭಾವಿಸಿ ಮೂರನ್ನೂ ಶೋಧಿಸಿ­ದಾಗಲೂ ಕರ್ನಾಟಕ ಸರ್ಕಾರ ರೂಪಿಸಿರುವ ಹೊಸ ಭೂಸ್ವಾಧೀನ ನಿಯಮಗಳ ಕರಡು ಕಾಣಿಸಲೇ ಇಲ್ಲ.

ಸರ್ಕಾರಿ ಇಲಾಖೆಗಳಲ್ಲಿ ಅತ್ಯಂತ ಹಳೆಯ ಇಲಾಖೆಯೊಂದಿದ್ದರೆ ಅದು ಕಂದಾಯ ಇಲಾಖೆ. ಭೂ­ಕಂದಾಯವೇ ಸರ್ಕಾರಗಳ ಮುಖ್ಯ ಆದಾಯ­ವಾಗಿದ್ದ ಕಾಲದಲ್ಲಿ ರೂಪುಗೊಂಡ ಈ ಇಲಾಖೆ ರಾಜರ ಆಡಳಿತ, ವಸಾಹತು ಶಾಹಿ ಆಡಳಿತ­ವನ್ನು ದಾಟಿ ಬಂದು ಸ್ವಾತಂತ್ರ್ಯೋತ್ತರ ಭಾರತಕ್ಕೂ ಬಂತು. ತಾಲೂಕು ದಂಡಾಧಿಕಾರಿ­ಯಾಗಿ­ರುವ ತಹಶೀಲ್ದಾರ್ ಕಂದಾಯ ಇಲಾ­ಖೆಗೆ ಸೇರಿದವರು, ಜಿಲ್ಲಾ ದಂಡಾಧಿಕಾರಿ­ಯಾಗಿ­ರುವ ಜಿಲ್ಲಾಧಿಕಾರಿ ಕೂಡಾ ಕಂದಾಯ ಇಲಾ­ಖೆಗೆ ಸೇರಿದವರೇ. ಜಿಲ್ಲೆಯ ಇತರ ಎಲ್ಲಾ ಇಲಾಖೆಗಳ ಮೇಲೂ ಜಿಲ್ಲಾಧಿಕಾರಿಗೆ ಒಂದು ಬಗೆಯ ನಿಯಂತ್ರಣ­ವಿರು­ತ್ತದೆ. ಈ ಕಾರಣ­ದಿಂದಾ­ಗಿಯೇ ಕಂದಾಯ ಇಲಾ­ಖೆ­ಯನ್ನು ಎಲ್ಲಾ ಇಲಾಖೆಗಳ ತಾಯಿ ಎಂದೂ ಕರೆಯುತ್ತಾರೆ.

ಭಾರತದ ನಾಗರಿಕ­ನೊಬ್ಬನಿಗೆ ಕಂದಾಯ ಇಲಾಖೆಯ ಜೊತೆಗಿನ ಸಂಬಂಧ ಅವನ ಹುಟ್ಟಿನೊಂದಿಗೇ ಆರಂಭ­ವಾಗಿಬಿಡುತ್ತದೆ. ಒಬ್ಬನ ಪೌರತ್ವವನ್ನು ಖಾತರಿ ಪಡಿಸುವುದರಿಂದ ಆರಂ­ಭಿಸಿ ಅವನ ಜಾತಿ, ಆದಾಯ, ಧರ್ಮ ಎಲ್ಲದಕ್ಕೂ ಸಂಬಂ­ಧಿಸಿದ ಪ್ರಮಾಣ ಪತ್ರಗಳನ್ನು ಪಡೆಯ­ಬೇಕಿರುವುದು ಇದೇ ಇಲಾಖೆಯಿಂದ. ರೈತರಿಗೂ ಕಂದಾಯ ಇಲಾಖೆಗೂ ಇರುವ ಸಂಬಂಧ ಇನ್ನೂ ದೊಡ್ಡದು. ತಮ್ಮ ಜಮೀನುಗಳ ದಾಖಲೆಗಳಿಂತ ಆರಂಭಿಸಿ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಆಗುವ ಬೆಳೆ ನಾಶಕ್ಕೆ ಪರಿಹಾರ ಪಡೆಯು­ವು­ದಕ್ಕೂ ಇದೇ ಇಲಾಖೆಯನ್ನು ಸಂಪರ್ಕಿಸಬೇಕು. ಮತ­ದಾರರ ಪಟ್ಟಿಯನ್ನು ಸಿದ್ಧಪಡಿಸುವ ಪ್ರಕ್ರಿಯೆ­ಯಿಂದ ತೊಡಗಿ ಚುನಾವಣೆಗಳನ್ನು ನಡೆ­ಸುವ ತನಕದ ಎಲ್ಲಾ ಪ್ರಕ್ರಿಯೆಗಳ ಮೇಲ್ವಿ­ಚಾರಣೆಯನ್ನು ನಡೆಸು­ವುದೂ ಇದೇ ಇಲಾ­ಖೆಯ ಅಧಿಕಾರಿಗಳು. ಸರಳ­ವಾಗಿ ಹೇಳ­ಬೇಕೆಂ­ದರೆ ಜನರಿಗೆ ಅಗತ್ಯ­ವಾಗಿ­ರುವ ಅನೇಕ ಮಾಹಿತಿ­ಗಳು ಈ ಇಲಾಖೆಗೆ ಸಂಬಂ­ಧಿ­ಸಿದ್ದು. ಇಷ್ಟಾ­ಗಿಯೂ ಕಂದಾಯ ಇಲಾಖೆಯ ಒಟ್ಟೂ ಕೆಲಸ­ವನ್ನು ವಿವರಿಸುವ ಮತ್ತು ಅದು ಆಗಾಗ ಹೊರ­ಡಿಸುವ ಸುತ್ತೋಲೆ, ಆದೇಶ ಇತ್ಯಾದಿ­ಗಳನ್ನು ಒಂದೆಡೆ ನೀಡುವ ಒಂದು ವೆಬ್‌ಸೈಟ್‌ ಇಲ್ಲ.

ಕಂದಾಯ ಇಲಾಖೆಗೆ ವೆಬ್‌ಸೈಟ್‌ ಇಲ್ಲ ಎಂದರೆ ಅದು ತಂತ್ರಜ್ಞಾನಕ್ಕೆ ವಿಮುಖವಾಗಿದೆ ಎಂದು ಭಾವಿಸಬೇಕಾಗಿಲ್ಲ. ಭೂದಾಖಲೆಗಳ ಗಣಕೀಕರಣ­ದಲ್ಲಿ ಭಾರತದಲ್ಲೇ ಮೊದಲ ಹೆಜ್ಜೆಯನ್ನಿಟ್ಟದ್ದು ಕರ್ನಾಟಕದ ಕಂದಾಯ ಇಲಾಖೆ. ಇದಕ್ಕೆ ಅಂತಾ­ರಾಷ್ಟ್ರೀಯ ಮಟ್ಟದ ಮನ್ನಣೆಗಳೂ ದೊರೆತಿವೆ. ಅದರ ಹಿಂದೆಯೇ ನೋಂದಣಿ ಪ್ರಕ್ರಿಯೆಯನ್ನು ಗಣಕೀಕರಣ­ಗೊಳಿಸ ಖ್ಯಾತಿಯೂ ಇದೇ ಇಲಾ­ಖೆಗೆ ಸೇರಿದೆ. ಭೂದಾಖಲೆಗಳನ್ನು ನೀಡುವ ‘ಭೂಮಿ’ ಮತ್ತು ನೋಂದಣಿ ಪ್ರಕ್ರಿಯೆಗೆ ಬಳಸುವ ‘ಕಾವೇರಿ’ ತಂತ್ರಾಂಶಗಳಿಗೆ ಪರಸ್ಪರ ಸಂಪರ್ಕ­ವನ್ನೂ ಕಲ್ಪಿಸಲಾಗಿದೆ. ಅಷ್ಟು ಸಾಲದು ಎಂಬಂತೆ ವಿವಿಧ ಪ್ರಮಾಣ ಪತ್ರಗಳನ್ನು ವಿತರಿಸುವ ಕೆಲಸ ಕೂಡಾ ಈಗ ಕಂಪ್ಯೂಟರೀಕರಣ­ಗೊಂ­ಡಿದೆ. ಆದರೂ ಕಂದಾಯ ಇಲಾಖೆಗೆ ವೆಬ್‌ಸೈಟ್‌ ಮಾತ್ರ ಇಲ್ಲ!

ಕಂದಾಯ ಇಲಾಖೆಗೆ ವೆಬ್‌ಸೈಟ್‌ ಇಲ್ಲದೇ ಇರುವುದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು? ಹೀಗಾಗುವುದಕ್ಕೆ ಮಾಹಿತಿಯನ್ನು ಜನರಿಗೆ ಒದಗಿ­ಸುವುದು ಅಪಾಯಕಾರಿ ಎಂದು ಭಾವಿಸಿರುವುದ ವರ್ಗ­ವೊಂದು ಕೆಲಸ ಮಾಡುತ್ತಿದೆ ಎಂದು ಊಹಿ­ಸು­ವುದು ತಪ್ಪಾಗಲಾರದು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಭೂಸ್ವಾಧೀನ ಕಾಯ್ದೆಗೆ ಅನುಗುಣವಾಗಿ ರಾಜ್ಯ ಸರ್ಕಾರ ರೂಪಿಸಿರುವ ನಿಯ­ಮಾವಳಿಗಳು ಕರ್ನಾಟಕದ ಎಲ್ಲಾ ರೈತ­ರಿಗೂ ಅವರೊಂದಿಗೆ ಸಂಬಂಧ­ಗಳ­ನ್ನಿಟ್ಟು­ಕೊಂಡಿ­ರುವ ವಕೀಲರಿಗೆ ತಲುಪ­ಬೇಕಿರು­ವುದು ಅಗತ್ಯ.  ಅದು ಕಂದಾಯ ಇಲಾಖೆಯ ಅಧಿಕೃತ ವೆಬ್‌­ಸೈಟ್‌­­­ನಲ್ಲಿ­ದ್ದರೆ ಎಲ್ಲರಿಗೂ ಸುಲಭದಲ್ಲಿ ಸಿಗು­ತ್ತಿತ್ತು. ಆದ­ರೀಗ ಅದು ಎಲ್ಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಕರಡನ್ನೇ ಓದದೆ ಅದಕ್ಕೆ ಆಕ್ಷೇ­­ಪಣೆ­ ಸಲ್ಲಿಸುವುದು ಹೇಗೆ ಎಂಬು­ದನ್ನು ಕಂದಾಯ ಇಲಾಖೆ ಅಧಿಕಾರಿ­ಗಳೇ ವಿವರಿಸ­ಬೇಕು.

ಇದು ಕೇವಲ ಭೂಸ್ವಾಧೀನ ಕಾಯ್ದೆಯ ಹೊಸ ನಿಯಮಾವಳಿಗಳ ಕರಡು ಪ್ರಕಟಣೆಗೆ ಸಂಬಂ­ಧಿಸಿದ ಸಮಸ್ಯೆಯಲ್ಲ. ಸರ್ಕಾರದ ಎಲ್ಲಾ ಇಲಾಖೆಗಳ ಮಾಹಿತಿಗೆ ಸಂಬಂಧಿಸಿದ ಸಮಸ್ಯೆ. ಉದಾಹರಣೆಗೆ ಕೇಂದ್ರ ಸರ್ಕಾರದ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹಿಂದುಳಿದ ವರ್ಗಗಳಿಗೆ ಲಭ್ಯವಿರುವ ಮೀಸಲಾತಿಯನ್ನು ಪಡೆಯ­ಬೇಕಾದರೆ ಅದಕ್ಕೆ ನಿರ್ದಿಷ್ಟ ನಮೂನೆ­ಯೊಂದರಲ್ಲಿ ‘ಹಿಂದುಳಿದ ವರ್ಗಗಳಿಗೆ ಸೇರಿ­ರುವ ಪ್ರಮಾಣ ಪತ್ರ’ ಪಡೆಯಬೇಕಾ­ಗು­ತ್ತದೆ. ರಾಜ್ಯದ ಹಿಂದುಳಿದ ಜಾತಿಗಳ ಪಟ್ಟಿಯಲ್ಲಿರುವ ಜಾತಿ­ಗ­ಳಿಗೂ ಕೇಂದ್ರ ಪಟ್ಟಿಯಲ್ಲಿರುವ ಜಾತಿಗಳಿಗೂ ವ್ಯತ್ಯಾಸ­ವಿದೆ. ಅಟಲ್‌ ಜೀ ಜನಸ್ನೇಹಿ ಕೇಂದ್ರಗಳಿಗಾಗಿ ರೂಪಿಸಿ­ರುವ ತಂತ್ರಾಂಶದಲ್ಲಿ ಈ ಎಲ್ಲಾ ವಿವರ­ಗಳೂ ಇವೆ. ಆದರೆ ಕರ್ನಾಟಕದ ಅನೇಕ ನಾಡ ಕಚೇರಿಗಳಲ್ಲಿ ಅರ್ಜಿ ಸ್ವೀಕರಿಸುವ ಎಷ್ಟು ಮಂದಿ ಸಿಬ್ಬಂದಿಗೆ ಈ ವಿಚಾರ ತಿಳಿದಿದೆ? ತಮಗೆ ಗೊತ್ತಿಲ್ಲದ ಎಲ್ಲವನ್ನೂ ಅವರು ‘ಇದು ಸಾಧ್ಯ­ವಿಲ್ಲ’ ಎಂದು ಹೇಳುತ್ತಾರಷ್ಟೆ.

ಕರ್ನಾಟಕ ಸರ್ಕಾರ ಹಿಂದುಳಿದ ವರ್ಗಗಳ ಕೇಂದ್ರ ಮತ್ತು ರಾಜ್ಯ ಪಟ್ಟಿಯಲ್ಲಿರುವ ವ್ಯತ್ಯಾಸಕ್ಕೆ ಸಂಬಂಧಿಸಿ­ದಂತೆ ಅನೇಕ ಸುತ್ತೋಲೆಗಳನ್ನು ಹೊರಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳಿವೆ. ಇದನ್ನೆಲ್ಲಾ ‘ಜನಸ್ನೇಹಿ ಕೇಂದ್ರ’ಗಳ ಸಿಬ್ಬಂದಿಗೆ ಅರ್ಥ ಮಾಡಿಸ­ಬೇಕಾದರೆ ಕನಿಷ್ಠ ಜಿಲ್ಲಾಧಿಕಾರಿಗಳನ್ನು ಭೇಟಿ­ಯಾಗಿ ಬರಬೇಕಾಗುತ್ತದೆ. ಸರ್ಕಾರಿ ಸುತ್ತೋಲೆ­ಗಳು, ಆದೇಶಗಳು ಇತ್ಯಾದಿಗಳೆಲ್ಲವೂ ಒಂದು ನಿರ್ದಿಷ್ಟ ಜಾಲತಾಣದಲ್ಲಿ ದೊರೆತರೆ ಅವುಗಳನ್ನು ಬಳಸಿಕೊಂಡಾದರೂ ಜನರು ಸರ್ಕಾರಿ ಸಿಬ್ಬಂದಿಯ ಜೊತೆಗೆ ಸೆಣಸಬಹುದಿತ್ತು. ಸುತ್ತೋಲೆ, ಆದೇಶ ಇತ್ಯಾದಿಗಳೆಲ್ಲವೂ ಒಂದೆಡೆ ಒದಗಿಸುವ ಯಾವ ಪ್ರಯತ್ನವನ್ನೂ ಕರ್ನಾಟಕ ಸರ್ಕಾರ ಮಾಡಿಲ್ಲ ಎಂದು ಹೇಳಲೂ ಸಾಧ್ಯವಿಲ್ಲ. ಹುಡುಕಾಟದಲ್ಲಿ ನಿಮಗೆ ನಿಜಕ್ಕೂ ನಂಬಿಕೆಯಿದ್ದರೆ ಸುತ್ತೋಲೆ ಮತ್ತು ಆದೇಶಗಳನ್ನು ಒದಗಿಸುವುದಕ್ಕಾಗಿಯೇ ಸರ್ಕಾರ ರೂಪಿಸಿರುವ ಒಂದು ವೆಬ್‌ಸೈಟ್‌ ನಮಗೆ ಕಾಣಸಿಗುತ್ತದೆ. ಅದರ ಯುಆರ್ಎಲ್ ಅಥವಾ ವೆಬ್‌ ವಿಳಾಸ ಹೀಗಿದೆ:http://202.138.105.13/svsearch/. ಇದನ್ನು ಹುಡುಕಿ ಕೊಡುವುದಕ್ಕೆ ಗೂಗಲ್ ಬಿಡಿ ದೇವ­ರಿಗೂ ಕಷ್ಟ. ಕೊನೆಗೂ ನೀವಿದನ್ನು ಕಂಡು­ಕೊಂಡು ನಿಮಗೆ ಬೇಕಿರುವ ಇಲಾಖೆಯ ಬೇಕಿ­ರುವ ಸುತ್ತೋಲೆ ಅಥವಾ ಆದೇಶವನ್ನು ಹುಡುಕ­ಬೇಕೆಂದರೆ ಅದೂ ಸುಲಭವಲ್ಲ. ಅಂದಾಜಿನ ಮೇಲೆ ಹುಡುಕಿದರೆ ನಿಮಗೆ ಏನೂ ಸಿಗುವುದಿಲ್ಲ. ಅಂದರೆ ಕೇವಲ ಪದಗಳನ್ನು ಬಳಸಿ ಹುಡುಕು­ವುದು ಇದರಲ್ಲಿ ಅಸಾಧ್ಯ ಎನಿಸುವಷ್ಟು ಕಷ್ಟ. ಸುತ್ತೋ­ಲೆಯ ದಿನಾಂಕ, ಇಲಾಖೆ, ವಿಷಯ ಇತ್ಯಾದಿಗಳು ಸರಿಯಾಗಿ ಗೊತ್ತಿದ್ದರೆ ಹುಡುಕ­ಬಹುದು. ಆಗಲೂ ನಿಮಗೆ ಸಿಗುವುದು 2004­ರಿಂದ ಈಚೆಗಿನ ಕೆಲವು ದಾಖಲೆಗಳು ಮಾತ್ರ.

ಮಾಹಿತಿಗಳನ್ನು ಚಕ್ರವ್ಯೂಹದೊಳಗೆ ಬಂಧಿಸಿ­ಡುವ ಸರ್ಕಾರಿ ವರ್ತನೆ ವ್ಯಾಪಕ­ವಾಗಿ­ದ್ದರೂ ಇದಕ್ಕೆ ಸಂಪೂರ್ಣ ಅಪವಾದ­ವೆನಿಸುವಂಥ ಕೆಲವು ಉದಾಹರಣೆಗಳೂ ಸಿಗುತ್ತವೆ. ಇಂಥದ್ದ­ರಲ್ಲಿ ಒಂದು ಹಾಸನ ಜಿಲ್ಲೆಯ ಚನ್ನರಾಯ­ಪಟ್ಟಣ ತಾಲೂಕು ಆಡಳಿತದ ವೆಬ್‌ಸೈಟ್‌ (http://channarayapatna.kar.nic.in/). ಕರ್ನಾಟಕ ಯಾವ ತಾಲೂಕು ಆಡಳಿತಕ್ಕೂ ಇಂಥ­ದ್ದೊಂದು ಅಧಿಕೃತ ವೆಬ್‌ಸೈಟ್‌ ಇಲ್ಲ. ಸರ್ಕಾರಿ ವ್ಯವಸ್ಥೆಯಾದ ಎನ್ಐಸಿ (ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್) ಬಳಸಿಕೊಂಡೇ ಈ ವೆಬ್‌ಸೈಟ್‌ ರೂಪಿಸಲಾಗಿದೆ. ತಾಲೂಕು ಕಚೇರಿಗೆ ಸಂಬಂಧಿಸಿ­ದಂತೆ ಇದರಲ್ಲಿ ಸಂಪೂರ್ಣ ಮಾಹಿತಿ­ಗಳು ಲಭ್ಯ. ಕಂದಾಯ ಇಲಾಖೆಯಿಂದ ತಾಲೂಕು ಕಚೇರಿಗೆ ಬಂದ ಸುತ್ತೋಲೆಗಳು, ಆದೇಶ­ಗಳು ಮತ್ತಿತರ ಅಧಿಕೃತ ಮಾಹಿತಿ­ಗಳ­ನ್ನೆಲ್ಲಾ ಇಲ್ಲಿ ವಿಷಯವಾರು ನೀಡಲಾಗಿದೆ. ಜೊತೆಗೆ ತಾಲೂಕು ಕಚೇರಿ ಸಿಬ್ಬಂದಿಯ ಸಂಬ­ಳದ ವಿವರಗಳನ್ನೂ ಇಲ್ಲಿ ನೋಡ­ಬಹುದು.  ತಹ­ಶೀಲ್ದಾರ್ ಅವರ ಫೋಟೋ ಮತ್ತು ಮೊಬೈಲ್ ದೂರವಾಣಿ ಸಂಖ್ಯೆಯೂ ಇಲ್ಲಿದೆ. ಆದರೆ ಈ ವೆಬ್ಸೈಟ್ಗೆ ಮಾಹಿತಿ­ಯನ್ನು ಊಡಿಸುವ ಈಗ ನಿಂತು ಹೋಗಿರು­ವಂತಿದೆ. ಈ ವೆಬ್‌ಸೈಟ್‌ನಲ್ಲಿರುವ ಮಾಹಿತಿ­ಯಂತೆ ಚನ್ನರಾಯಪಟ್ಟಣದ ತಹ­ಶೀಲ್ದಾರ್ ಡಾ.ಎಚ್.ಎಲ್.ನಾಗರಾಜು. ಅವರ ಫೋಟೋ ಕೂಡಾ ಇದೆ. ಆದರೆ ನಾಗರಾಜು ಅವರು ಚನ್ನ­ರಾಯ­ಪಟ್ಟಣದಿಂದ ಈ ವರ್ಷ ಫೆಬ್ರವರಿಯಲ್ಲೇ ವರ್ಗಾವಣೆಯಾಗಿದ್ದಾರೆ.

ಕರ್ನಾಟಕದ ಯಾವ ತಾಲೂಕಿಗೂ ಇಲ್ಲದ ಅಧಿಕೃತ ವೆಬ್‌ಸೈಟ್‌ ಚನ್ನರಾಯಪಟ್ಟಣ ತಾಲೂ­ಕಿಗೆ ಹೇಗೆ ದೊರೆಯಿತು ಎಂದು ಶೋಧಿಸಿದಾಗ ಅನಾವರಣ­ಗೊಂಡದ್ದು ವರಪ್ರಸಾದ್ ರೆಡ್ಡಿ ಎಂಬ ಉತ್ಸಾಹಿ ಯುವ ತಹಶೀಲ್ದಾರ್ ಒಬ್ಬರ ಪ್ರಯತ್ನ. ಚನ್ನರಾಯಪಟ್ಟಣ ತಾಲೂಕಿಗೊಂದು ಅಧಿಕೃತ ವೆಬ್‌ಸೈಟ್‌ ರೂಪಿಸಿ ಅದಕ್ಕೆ ಮಾಹಿತಿ­ಯನ್ನು ಊಡಿಸಿದ್ದು ಈ ಯುವ ಅಧಿಕಾರಿ. ತಾಲೂಕು ಮಟ್ಟದಲ್ಲಿ ಜನಸಾಮನ್ಯರಿಗೆ ಅಗತ್ಯ­ವಿರುವ ಎಲ್ಲಾ ಸುತ್ತೋಲೆ ಆದೇಶಗಳನ್ನು ಅವರು ಈ ವೆಬ್‌ಸೈಟ್‌­ನಲ್ಲಿ ಒದಗಿಸಿದ್ದಾರೆ. 2012ರಲ್ಲಿ ಅವರು ಅಲ್ಲಿಂದ ವರ್ಗಾವಣೆಯಾದ ನಂತರ ಬಂದವರು ಈ ಕೆಲಸವನ್ನು ಮುಂದುವರಿಸಿದರು.  ಡಾ.ಎಚ್.­ಎಲ್.­ನಾಗರಾಜು ಅವರು ವರ್ಗಾ­ವಣೆ­ಯಾದ ಮೇಲೆ ವೆಬ್‌ಸೈಟ್‌ಗೆ ಯಾವುದೇ ಹೊಸ ಮಾಹಿತಿ ಊಡಿಸಿ­­ದಂತಿಲ್ಲ. ಮಾಹಿತಿಯನ್ನು ಚಕ್ರವ್ಯೂಹ­ದೊಳಗೆ ಅಡಗಿಸಿ ಹುಡುಕಿಕೊಳ್ಳಿ ಎಂದು ಸವಾಲು ಹಾಕುವ ಸರ್ಕಾರಿ ಮನೋ­ವೃತ್ತಿಯ ಮಧ್ಯೆ ಇಂಥ ಪ್ರಯತ್ನಗಳು ಹೆಚ್ಚು ಕಾಲ ಬಾಳುವುದಿಲ್ಲ ಎಂಬು­ದಕ್ಕೂ ಚನ್ನರಾಯಪಟ್ಟಣ ತಾಲೂಕಿನ ವೆಬ್‌ಸೈಟ್‌ ಸಾಕ್ಷಿಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.