ADVERTISEMENT

ಚಿತ್ತಭ್ರಾಂತಿ, ವಿಜಯಾಕಾಂಕ್ಷೆ: ಇತಿಹಾಸದಲ್ಲಿ ಹಿಂದುತ್ವ

ರಾಮಚಂದ್ರ ಗುಹಾ
Published 10 ಜುಲೈ 2014, 19:30 IST
Last Updated 10 ಜುಲೈ 2014, 19:30 IST

ಜೆ.ಎಚ್. ಎಲಿಯಟ್ ಇತ್ತೀಚಿನ ತಮ್ಮ ‘ಹಿಸ್ಟರಿ ಇನ್‌ ದಿ ಮೇಕಿಂಗ್‌’ ಕೃತಿ­ಯಲ್ಲಿ ಎರಡು ವಿಭಿನ್ನ ರಾಷ್ಟ್ರೀಯವಾದಿ ಸಿದ್ಧಾಂತ­ಗಳ ನಡುವಿನ ಆಸಕ್ತಿಕರವಾದ ವ್ಯತ್ಯಾಸ­ವನ್ನು ಉಲ್ಲೇಖಿಸಿದ್ದಾರೆ. ಒಂದು, ‘ದೇವರು ಆರಿಸಿದ ರಾಷ್ಟ್ರ’ (chosen nation) ಎಂಬ ಭಾವ. ಒಂದು ದೇಶವು ತನ್ನದೇ ಆದ ವಿಶೇಷ ಆಧ್ಯಾತ್ಮಿಕ, ಜೈವಿಕ, ವರ್ಣ ಗುಣಲಕ್ಷಣಗಳನ್ನು ಹೊಂದಿದ್ದು, ಜಾಗತಿಕ ವ್ಯವಹಾರಗಳಲ್ಲಿ ಅವು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳುವ ಮನಸ್ಥಿತಿ ಇದು. ಇನ್ನೊಂದು, ‘ಬಲಿಪಶು ರಾಷ್ಟ್ರ’ ಎನ್ನುವ ಭಾವ. ಬಡ ಅಥವಾ ಸೋಲು ಅನುಭವಿಸಿದ ರಾಷ್ಟ್ರವೊಂದು ತನ್ನ ಸೋಲಿಗೆ ಇರಬಹುದಾದ ಆಂತರಿಕ ಕಾರಣಗಳನ್ನು ಉಪೇ­ಕ್ಷಿಸಿ, ಎಲ್ಲಕ್ಕೂ ದುರದೃಷ್ಟ ಎನ್ನುತ್ತಾ ಇತರರನ್ನು ಅದಕ್ಕೆ ಹೊಣೆಯಾಗಿಸುವ ಸ್ಥಿತಿ ಇದು.

ಎಲಿಯಟ್‌, ಯೂರೋಪ್‌ ಹಾಗೂ ಉತ್ತರ ಅಮೆರಿಕದ ವಿದ್ವಾಂಸ. ಅವರು ಕೊಟ್ಟಿರುವ ಉದಾಹರಣೆಗಳು ಸಹಜವಾಗಿಯೇ ಆ ಹಿನ್ನೆಲೆ­ಯಿಂದಲೇ ಬಂದಿರುತ್ತವೆ. ಸ್ಪೇನ್‌, ಬ್ರಿಟನ್‌ ಹಾಗೂ ಅಮೆರಿಕ ದೇಶದವರು ತಮ್ಮ ಇತಿ­ಹಾಸದ ಹಲವು ಘಟ್ಟಗಳಲ್ಲಿ ತಂತಮ್ಮ ದೇಶ­ಗ­ಳನ್ನು ಜಗತ್ತನ್ನು ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊ­ಯ್ಯಲು ದೇವರೇ ಆಯ್ಕೆ ಮಾಡಿ­ಕೊಂ­ಡಂ­ಥವು ಎಂದು ನಂಬಿದ್ದರು. ಪೋಲೆಂಡ್ ಸರ್ಬಿಯಾ, ಕ್ಯಾಟಲೋನಿಯದ ಜನರು ಬೇರೆಯದೇ ನೆಲೆಯಲ್ಲಿ ತಮ್ಮನ್ನು ತಾವು ಸಾಹಸಿಗಳೆಂದು ಭಾವಿಸಿಕೊಂಡಿದ್ದರು.  ಜೊತೆಗೆ ತಮ್ಮ ನೆಲೆ, ಸ್ವಾತಂತ್ರ್ಯವನ್ನು ಕಸಿದುಕೊಂಡ ವಿಶ್ವಾಸಘಾತುಕ ವಿದೇಶಿಯರಿಂದ ಕಿರುಕುಳ­ಕ್ಕೊಳ­ಗಾದವರು ಎಂದು ಭಾವಿಸಿದ್ದರು.

ಎಲಿಯಟ್‌ ಪ್ರತಿಪಾದಿಸಿದ ಸೂತ್ರವು ದಕ್ಷಿಣ ಏಷ್ಯಾದ ರಾಷ್ಟ್ರಗಳ ಜೊತೆ ಹೇಗೆ ಅನುರಣಿ­ಸುತ್ತದೆ? ಪಾಕಿಸ್ತಾನ ‘ಬಲಿಪಶು ರಾಷ್ಟ್ರ’ ಎನ್ನುವುದು ಸ್ಪಷ್ಟ. 1940ರಲ್ಲಿ ಮುಸ್ಲಿಂ ಪ್ರತ್ಯೇಕ ರಾಷ್ಟ್ರಕ್ಕಾಗಿ ನಡೆದ ಹೋರಾಟದ ನಾಯಕತ್ವ ವಹಿಸಿದವರು,  ‘ಏಕ ರಾಷ್ಟ್ರವಾಗಿ ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟಲ್ಲಿ ಅಲ್ಲಿನ ಹಿಂದೂ­ಗಳು, ವಿಶೇಷವಾಗಿ ಕಪಟಿ ಬ್ರಾಹ್ಮಣರು ಹಾಗೂ ಆಸೆಬುರುಕ ಬನಿಯಾಗಳು ಬೇರೆ ನಂಬಿಕೆ­ಗಳುಳ್ಳ ಜನರಿಗೆ ಉಪದ್ರವ ಕೊಡುತ್ತಾರೆ’ ಎಂಬ ವಾದವನ್ನು ಆಧಾರವಾಗಿ­ಟ್ಟುಕೊಂ­ಡಿದ್ದರು.

ಪಾಕಿಸ್ತಾನ ಒಡಮೂಡಿ ಆರೂವರೆ ದಶಕಗಳ ನಂತರವೂ ಅದು ಬಲಿಪಶು ರಾಷ್ಟ್ರ ಎಂಬ ಭಾವ ಉಳಿದಿದೆ. ತಮ್ಮ ತೊಂದರೆಗಳಿಗೆ ವಿದೇಶಿಯರೇ ಕಾರಣ ಎಂದು ಅನೇಕ ಪಾಕಿಸ್ತಾನೀಯರು ಈಗಲೂ ದೂರುತ್ತಾರೆ. ಕೆಲವರು ಭಾರತವನ್ನು ‘ದೆವ್ವ’ವನ್ನಾಗಿಸಿದರೆ, ಇನ್ನು ಕೆಲವರು ಅಮೆರಿಕ­ವನ್ನು ಹೀಗೆ ಬಿಂಬಿಸುತ್ತಾರೆ. ಪಂಥೀಯ ಹಿಂಸಾ­ಚಾರ, ರಾಜಕೀಯ ಅಸ್ಥಿರತೆ, ಆರ್ಥಿಕ ಅಭದ್ರತೆ ಹಾಗೂ ಬಹುತೇಕ ಎಲ್ಲಾ ಸಮಸ್ಯೆಗಳಿಗೂ ‘ಕೆಟ್ಟ ಹಿಂದೂ ನೆರೆರಾಷ್ಟ್ರ ಹಾಗೂ ಅತಿಕೆಟ್ಟ ಕ್ರಿಶ್ಚಿಯನ್‌ ಸೂಪರ್‌ಪವರ್‌’ ರಾಷ್ಟ್ರವೇ ಕಾರಣ ಎಂದು ಅಲ್ಲಿಯವರು ದೂರುತ್ತಾರೆ.

ಬಾಂಗ್ಲಾದೇಶ ಕೂಡ ಒಂದು ರೀತಿಯಲ್ಲಿ ‘ಬಲಿಪಶು ಪ್ರಜ್ಞೆ’ಯಿಂದಲೇ ಹುಟ್ಟಿದ್ದು. ಬಂಗಾಳಿ ಭಾಷೆಯಲ್ಲಿ ನುಡಿಯುವ, ಬರೆಯು­ವವ­ರನ್ನು ತಾರತಮ್ಯ ಭಾವದಿಂದ ನೋಡುತ್ತಿ­ರು­­ವುದಕ್ಕೆ ಪೂರ್ವ ಪಾಕಿಸ್ತಾನದಲ್ಲಿ ಮುನಿಸಿತ್ತು. ಪಶ್ಚಿಮ ಪಾಕಿಸ್ತಾನ ಆರ್ಥಿಕವಾಗಿ ತಮ್ಮನ್ನು ಶೋಷಣೆಗೆ ಒಳಪಡಿಸಿದೆ ಎಂದು ಬಂಗಾಳಿ ಭಾಷಿ­ಕರು ದೂಷಿಸುತ್ತಿದ್ದರು. ಈ ಕಹಿ ಭಾವನೆಗಳೇ ರಾಜ­­ಕೀಯ ಪ್ರತ್ಯೇಕತೆಗೆ ವ್ಯಾಪಕ ಹೋರಾಟ ನಡೆ­ಯಲು ಕಾರಣವಾದವು. ಪಂಜಾಬಿ ಪ್ರಾಬ­ಲ್ಯದ ಪಾಕಿಸ್ತಾನದ ಸೇನೆ ಪ್ರತಿಭಟನೆಗಳನ್ನು ನಿಗ್ರಹಿ­ಸಿದ್ದರಿಂದ ದೊಡ್ಡ ಪ್ರಮಾಣದಲ್ಲಿ ನಿರಾಶ್ರಿತರು ಭಾರತಕ್ಕೆ ಬಂದರು. ಅಂತಿಮವಾಗಿ ಭಾರತ ಸೇನೆಯ ಮಧ್ಯ ಪ್ರವೇಶದಿಂದ  1971ರ ಡಿಸೆಂಬರ್‌ನಲ್ಲಿ  ಬಾಂಗ್ಲಾದೇಶ ಹುಟ್ಟಿತು.

ಸ್ವಾತಂತ್ರ್ಯ ಬಂದ ನಲವತ್ತೆರಡು ವರ್ಷಗಳ ನಂತರವೂ ಬಾಂಗ್ಲಾದೇಶ ಸ್ವಲ್ಪಮಟ್ಟಿಗೆ ಬಲಿ­ಪಶು ರಾಷ್ಟ್ರವಾಗಿಯೇ ಉಳಿದಿದೆ. ಪಾಕಿಸ್ತಾನದ ಕ್ರೌರ್ಯದ ನೆನಪು ಈಗಲೂ ಉಳಿದಿದೆ, ಅದು ಪದೇ­ಪದೇ ಜನಪ್ರಿಯ ಚರ್ಚೆಗಳ ಭಾಗವೂ ಆಗುತ್ತದೆ. ‘ದೊಡ್ಡಣ್ಣನಾದ ಭಾರತ ದರ್ಪಶೀಲ ಧೋರಣೆ ತೋರುತ್ತಿದೆ’ ಎಂಬ  ಹೊಸ ದೂರು­ಗಳು ಇತ್ತೀಚೆಗೆ ಸೇರಿಕೊಂಡಿವೆ.  ಹಾಗಿದ್ದೂ, ಬಾಂಗ್ಲಾ­ದೇಶದ ಬುದ್ಧಿಜೀವಿಗಳ ವರ್ಗ ತಮ್ಮ ದೇಶದ ಸಮಸ್ಯೆಗಳಿಗೆ ದೇಶೀಯ ಮೂಲಗಳೇ ಕಾರಣ ಎನ್ನುವುದನ್ನು ಒಪ್ಪಿಕೊಳ್ಳುತ್ತಿದ್ದಾರೆ ಎಂದೇ ನನ್ನ ತಿಳಿವಳಿಕೆ. ಕಿರು ಸಾಲ, ಗ್ರಾಮೀಣ ಆರೋಗ್ಯ  ಹಾಗೂ ಮಹಿಳಾ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಕೆಲಸಗಳನ್ನು ನಿರ್ವಹಿಸಿರುವ ಆ ದೇಶದ ನಾಗರಿಕ ಸಮಾಜ ಸಂಘಟನೆಗಳನ್ನು ಗಮನಿಸಿ. ಆದರೆ ಪಾಕಿಸ್ತಾನದಲ್ಲಿ  ಸಾಮಾಜಿಕ ವಲಯ ಎಷ್ಟೊಂದು ದುರ್ಬಲವಾಗಿದೆ ಎಂದರೆ ತಮ್ಮ ದುರದೃಷ್ಟಕ್ಕೆ  ಇತರ ರಾಷ್ಟ್ರ­ಗಳನ್ನು ದೂರುವ ಪಾಕಿಸ್ತಾನದ ಪ್ರವೃತ್ತಿಗೆ ಇದೂ ಒಂದು ಕಾರಣ.

ಹಾಗಿದ್ದರೆ ಭಾರತದ ರಾಷ್ಟ್ರೀಯವಾದದ ಬಗೆಗೆ ಏನು ಹೇಳಬೇಕು? ಕೊನೇಪಕ್ಷ ದೇಶದ ಪ್ರಮುಖ ಚಿಂತಕರು ಖಚಿತವಾಗಿ ಪ್ರತಿಪಾದಿಸಿರು­ವಂತೆ  ಇಲ್ಲಿನ ರಾಷ್ಟ್ರೀಯವಾದವು ಕುರುಡು ಅಥವಾ ಅತಿರೇಕದ  ಬಲಿಪಶು  ಪ್ರಜ್ಞೆಯಿಂದ ರೂಪು­­ಗೊಂಡಿಲ್ಲ. ‘ಬ್ರಿಟಿಷ್‌ ರಾಜ್‌’ನಿಂದ ‘ಸ್ವರಾಜ್’ ಬೇಕೆಂಬ ಪ್ರತಿಪಾದನೆಯು ತಮ್ಮದೇ ಸಮಾಜದ ಸಮಸ್ಯೆಗಳನ್ನು ಗುಣಪಡಿಸುವ ಅಗತ್ಯ­ದಿಂದ  ಸುಧಾರಕರನ್ನು ಹಿಮ್ಮೆಟ್ಟಿಸಲಿಲ್ಲ.  ಕೆಳ­ಜಾತಿ­ಯವರನ್ನು ಹಾಗೂ ಮಹಿಳೆಯರನ್ನು ತುಚ್ಛವಾಗಿ ಕಾಣುವುದು ವಸಾಹತುಶಾಹಿ ಬಿಳಿ­ಯ­ರಿಂದ ಉದ್ಭವಿಸಿದ ಸಮಸ್ಯೆಯಲ್ಲ; ಅದು ಭಾರತದ ಸಾಂಪ್ರದಾಯಿಕ ಚಿಂತನೆ, ಆಚ­ರಣೆ­ಗಳ ಫಲ ಎನ್ನುವುದು 19ನೇ ಶತಮಾನದ ಉತ್ತ­ರಾ­ರ್ಧದ  ಚಿಂತಕರಾದ ಗೋಪಾಲಕೃಷ್ಣ ಗೋಖಲೆ, ಜ್ಯೋತಿಬಾ ಫುಲೆ ಅವರಂಥವರಿಗೆ ಗೊತ್ತಿತ್ತು.

20ನೇ ಶತಮಾನದಲ್ಲಿ ಪ್ರಭಾವ ಬೀರಿದ ರಾಷ್ಟ್ರೀಯವಾದಿಗಳಲ್ಲೂ ಈ ಮುಕ್ತ ಧೋರಣೆ ಮುಂದುವರಿಯಿತು. ವಿಶ್ವದ ಎಲ್ಲೆಡೆ ಹಬ್ಬಿರುವ ಅರಿವಿನ ಬೆಳಕಿನಲ್ಲಿ ಭಾರತೀಯರು ಪ್ರಕಾಶಿಸ­ಬೇಕು ಎಂದು ರವೀಂದ್ರನಾಥ ಟ್ಯಾಗೋರ್‌ ವಾದಿ­ಸಿ­ದ್ದರು. 1920ರಲ್ಲಿ ಗಾಂಧಿ ಚಳವಳಿಯು ಪರ­ಕೀ­ಯರನ್ನು ದ್ವೇಷಿಸಲು ಪ್ರೇರೇಪಿಸುತ್ತದೆ­ಯೇನೋ ಎಂಬಂತೆ ಭಾಸವಾದಾಗ, ಕವಿ ಟ್ಯಾಗೋರ್ ಅವರು ತಮ್ಮ ವಿಚಾರ–ವಿಮರ್ಶೆಗಳಿಂದ   ಮಹಾತ್ಮ  ಗಾಂಧಿ ಅವರನ್ನು ಎಚ್ಚರಿಸಿದರು. ಇದರಿಂದಾಗಿ ತಮ್ಮನ್ನು  ಆತ್ಮವಿಮರ್ಶೆಗೆ ಒಳಪಡಿಸಿಕೊಂಡ  ಗಾಂಧಿ, ಅಲ್ಲಿಂದಾ­ಚೆಗೆ ಪಾಶ್ಚಾತ್ಯ ಚಿಂತನೆಗಳು, ಸಂಸ್ಥೆಗ­ಳನ್ನು ‘ದೆವ್ವ’ಗಳೆಂದು ಬಿಂಬಿಸುವುದನ್ನು ಬಿಟ್ಟರು. ಸ್ವಾತಂತ್ರ್ಯಾ ನಂತರ ಭಾರತವನ್ನು ಬ್ರಿಟನ್‌ನ ಸಂಗಾತಿಯಂತೆ ನೋಡಲು ತಾವು ಇಷ್ಟಪಡು­ವು­ದಾಗಿ ಹೇಳುವಷ್ಟರ ಮಟ್ಟಿಗೆ 1930ರ ಹೊತ್ತಿಗೆ ಗಾಂಧಿ ಬದಲಾದರು. ‘ತನ್ನ ಸುಖ–ದುಃಖ­ಗಳನ್ನು ಬ್ರಿಟನ್‌ ಜೊತೆ ಭಾರತ ಸಮಾನ ನೆಲೆಯಲ್ಲಿ ಹಂಚಿಕೊಳ್ಳ­ಬೇಕು’ ಎಂದರು.

ಗಾಂಧಿ ಹಾಗೂ ಟ್ಯಾಗೋರ್‌ ಪ್ರತಿಪಾದಿಸಿದ ರಾಷ್ಟ್ರೀಯವಾದವು  ಹಿಂಸೆಗೆ ಒಳಗಾದ ಪ್ರಜ್ಞೆ­ಯನ್ನಾಗಲೀ, ಸಾಂಸ್ಕೃತಿಕ ಅಥವಾ ಜನಾಂಗೀಯ ಮೇಲರಿಮೆಯ ಭಾವನೆಯನ್ನಾಗಲೀ ಆಧರಿಸಿ­ದ್ದಲ್ಲ. ಅವರು ಪ್ರತಿನಿಧಿಸಿದ ಭಾರತ, ಅವರು ರೂಪಿಸಲು ಬಯಸಿದ ಭಾರತ ‘ಬಲಿಪಶು ರಾಷ್ಟ್ರ’ವೂ ಅಲ್ಲ, ‘ದೇವರು ಆರಿಸಿದ ರಾಷ್ಟ್ರ’ವೂ ಅಲ್ಲ, ಗಾಂಧಿ, ಟ್ಯಾಗೋರ್ ಜೀವಿತ ಕಾಲದಲ್ಲಿ ಅವರಿಬ್ಬರ ದೃಷ್ಟಿಕೋನಗಳೂ ಚರ್ಚೆಗೆ ಒಳಗಾ­ದವು. ಮತತತ್ತ್ವ ಪ್ರಣೀತವಲ್ಲದ ಅವರ ಧೋರಣೆ­ಯನ್ನು ರಾಜಕೀಯ ಒಲವುಳ್ಳ ಕೆಲವರು ಪ್ರಶ್ನಿಸಿದರು. ಆ ರಾಜಕೀಯ ಒಲವು­ಳ್ಳ­ವರು ಪ್ರತಿಪಾದಿಸಿದ ಅಂಶವನ್ನೇ ನಾವು ಈಗ ‘ಹಿಂದುತ್ವ’ ಎನ್ನುತ್ತೇವೆ. 1930 ಹಾಗೂ 1940ರಲ್ಲಿ ಇದು ಇಬ್ಬರು ವ್ಯಕ್ತಿಗಳು–ವಿ.ಡಿ. ಸಾವರ್ಕರ್‌ ಮತ್ತು ಎಂ.ಎಸ್‌. ಗೊಳ್ವಾಲ್ಕರ್‌ ಹಾಗೂ ಎರಡು ಸಂಘಟನೆಗಳ–ಹಿಂದೂ ಮಹಾ­ಸಭಾ  ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೊತೆಗೆ ಬೆಸೆದುಕೊಂಡಿತು.

ವಸಾ­ಹತು­ಶಾಹಿ ಆಡಳಿತದ ಕೊನೆಯ ದಶಕಗಳಲ್ಲಿ ಹಿಂದು­ತ್ವವು ರಾಜಕೀಯವಾಗಿ ಅಂಚಿನಲ್ಲಿತ್ತಷ್ಟೆ. ಸ್ವತಂತ್ರ ಭಾರತದ ಮೊದಲ ಕೆಲವು ದಶಕಗಳಲ್ಲಿ ಅದು ರಾಜಕೀಯವಾಗಿ ಪರಿಣಾಮಕಾರಿ ಆಗಿರಲಿಲ್ಲ.  1980ರ ನಂತರ ಕ್ರಮೇಣ ಅದು ನೆಲೆ ಕಂಡು­ಕೊಳ್ಳತೊಡಗಿತು. ಅದರ ಪ್ರಾತಿನಿಧಿಕ ಸಂಘಟನೆ­ಗಳು  ಕೆಲವು ರಾಜ್ಯಗಳಲ್ಲಿ ಅಧಿಕಾರ ಹಿಡಿದವು.  1998– 2004ರ ಅವಧಿಯಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೇರಿ ಮುಂಚೂಣಿಗೆ ಬಂದವು. ಕಾಂಗ್ರೆಸ್‌ ಪಕ್ಷ ತನ್ನ ಭ್ರಷ್ಟಾಚಾರ, ಸ್ವಜನಪಕ್ಷ­ಪಾತ­ದಿಂದ ಕೇಂದ್ರ ಸರ್ಕಾರವನ್ನು ಒಂದು ದಶಕ ಕಾಲ ನಿಯಂತ್ರಿಸಿದ್ದರಿಂದ 16ನೇ ಲೋಕಸಭಾ ಚುನಾವಣೆಯಲ್ಲಿ ಹಿಂದುತ್ವ ಆಧಾರಿತ ಪಕ್ಷಕ್ಕೆ ಅಧಿಕಾರ ಸಿಕ್ಕಿತು.

ಜೆ.ಎಚ್‌. ಎಲಿಯಟ್‌ ಕೊಟ್ಟಂಥ ಮಾದರಿ­ಗ­ಳನ್ನೇ ಇಟ್ಟುಕೊಂಡು ಹಿಂದುತ್ವವನ್ನು ಪರಾಮ­ರ್ಶಿ­­ಸುವುದು ಹೇಗೆ? ಮೊದಲ ನೋಟಕ್ಕೆ ಅದು ‘ಬಲಿಪಶು ರಾಷ್ಟ್ರದ ಲಕ್ಷಣ’ಕ್ಕೆ ಉತ್ತಮ ನಿದರ್ಶ­ನ­ದಂತೆ ಕಾಣುತ್ತದೆ. ಹಿಂದೆ ವಿದೇಶಿ­ಯ­ರಿಂದ ಅನುಭವಿಸಿದ ಶೋಷಣೆಯ ಸ್ಮೃತಿ­ಯನ್ನೇ ಹಿಂದುತ್ವ ಸಾರುತ್ತದೆ. ಹಾಗಾಗಿಯೇ 11ನೇ ಶತಮಾನದಲ್ಲಿ ಮಹಮದ್‌ ಘಜ್ನಿ ಸೋಮ­ನಾಥ ದೇವಾಲಯದ ಮೇಲೆ ದಾಳಿ ನಡೆಸಿದ್ದನ್ನು, 17ನೇ ಶತಮಾನದಲ್ಲಿ ಔರಂಗಜೇಬನು ಜಿಝಿಯಾ ತೆರಿಗೆ ವಿಧಿಸಿದ್ದನ್ನು, 18ನೇ ಶತಮಾ­ನದ ಪ್ಲಾಸಿ ಕದನದಲ್ಲಿ ಕರ್ನಲ್‌ ರಾಬರ್ಟ್‌ ಕ್ಲೈವ್‌ ಕೈಲಿ ಸೋಲು ಅನುಭವಿಸಿದ್ದನ್ನು, 19ನೇ ಶತಮಾನದಲ್ಲಿ ಕಲಿಕಾ ಮಾಧ್ಯಮವಾಗಿ ಇಂಗ್ಲಿಷನ್ನು ಮೆಕಾಲೆ  ಹೇರಿದ್ದನ್ನು, 20ನೇ ಶತ­ಮಾನದಲ್ಲಿ ಪಾಕಿಸ್ತಾನ ರಚಿತವಾದದ್ದನ್ನು (ಕೆಡುಕ ಜಿನ್ನಾಗೆ ಮೂರ್ಖ ನೆಹರೂ ಸಹಕಾರ ಕೊಟ್ಟಿದ್ದರಿಂದ) ಹಿಂದುತ್ವ ಸಿದ್ಧಾಂತದವರು ಪದೇ ಪದೇ ನೆನಪಿಸಿಕೊಳ್ಳುತ್ತಾ ಇರುತ್ತಾರೆ.

ಹಿಂದುತ್ವದ ಈ ‘ಸೈದ್ಧಾಂತಿಕ ಕಥನ’ದಿಂದ  ಅದಕ್ಕೆ ಎಲಿಯಟ್‌ ಕೊಟ್ಟಂಥ ‘ಬಲಿಪಶು ರಾಷ್ಟ್ರದ ಲಕ್ಷಣ’ವನ್ನು ಅನ್ವಯಿಸಬ­ಹುದು. ಇದನ್ನು ಇನ್ನೂ ವಿಸ್ತರಿಸಿ ಹೇಳುವುದಾ­ದರೆ, ‘ಎಲ್ಲಾ ಸಮುದಾಯದವರೂ ತಮ್ಮ ದುರ­ದೃಷ್ಟಕ್ಕೆ ಬೇರೆಯವರನ್ನೇ ಹೊಣೆಗಾರರ­ನ್ನಾಗಿಸಿ, ಅದಕ್ಕೆ ಇರಬಹುದಾದ ಆಂತರಿಕ ಕಾರಣಗಳನ್ನು ಉಪೇಕ್ಷಿಸುವವರೇ’. ಹಿಂದುತ್ವ­ವನ್ನು ಅತಿಶಯ ಮಾಡಿ ಹೇಳುವ ಪರಿಪಾಠವೂ ಇದೆ. ವೇದಗಳೇ  ಅತಿ ಪ್ರಾಚೀನ ಪವಿತ್ರ ಗ್ರಂಥ, ಉಪನಿಷತ್ ಹಾಗೂ ಭಗವದ್ಗೀತೆ ಗಹನವಾದ ತತ್ತ್ವಗಳಿರುವ ಪಠ್ಯಗಳು ಎಂದು ಹಿಂದುತ್ವ ಸಾರುವುದು ಅದಕ್ಕೇ. ಪ್ರಾಚೀನ ಹಿಂದೂಗಳೇ ಶ್ರೇಷ್ಠ ವಿಜ್ಞಾನಿಗಳು, ಖಗೋಳವಿಜ್ಞಾನಕ್ಕೆ ಅವರ ಕೊಡುಗೆ ಹಾಗೂ ಸೊನ್ನೆಯನ್ನು ಕಂಡುಹಿಡಿದಿ­ರು­ವುದೇ ಇದಕ್ಕೆ ಸಾಕ್ಷ್ಯ ಒದಗಿಸುತ್ತವೆ ಎಂಬ ಅಭಿಪ್ರಾಯವನ್ನೂ ಹಿಂದುತ್ವ ಮಂಡಿಸುತ್ತದೆ.

ಬಿಜೆಪಿ ಒಂದು ದಶಕ ಅಥವಾ ಅದಕ್ಕಿಂತ ಹೆಚ್ಚಿನ ಅವಧಿ ಅಧಿಕಾರದಲ್ಲಿ ಇದ್ದರೆ ಭಾರತವು ಜಾಗತಿಕ ಸೂಪರ್‌ಪವರ್‌ ದೇಶವಾಗುತ್ತದೆ ಎಂದು ನಂಬಿರುವ ಅನೇಕ ಹಿಂದುತ್ವ­ವಾದಿ­ಗಳಿ­ದ್ದಾರೆ. ಸದ್ಯಕ್ಕೆ ದೇಶ ಆರ್ಥಿಕವಾಗಿ ಹಿಂದುಳಿ­ದಿದ್ದು, ರಾಜಕೀಯವಾಗಿ ದುರ್ಬಲವಾಗಿದೆ ಎನ್ನು­ವು­ದಂತೂ ಸತ್ಯ. ಹಾಗಿದ್ದೂ ಹಿಂದೂಗಳು ಇತರ ನಾಗರಿಕ ರಾಷ್ಟ್ರಗಳಿಗಿಂತ ಶ್ರೇಷ್ಠವಾದ ಸಾಂಸ್ಕೃ­ತಿಕ ಪರಂಪರೆಯ ವಾರಸುದಾರರು (ಹೀಗೆ ಅವರ ವಾದ ಹರಿಯುತ್ತದೆ). ವಿಧಿ ಅಥವಾ ದೈವದ ಅನುಗ್ರಹವಾಗಿ ತಮ್ಮ ಹಣೆ­ಬರ­ಹದ ಮೇಲೆ ನಿಯಂತ್ರಣ ಸಾಧಿಸುವುದು ಸಾಧ್ಯ­ವಾದರೆ ಹಿಂದೂಗಳು ಬಲಾಢ್ಯರೂ, ಶ್ರೀಮಂತರೂ ಆಗುವುದಲ್ಲದೆ ಜಗತ್ತನ್ನು ತಮ್ಮ ಸಿದ್ಧಾಂತದ ಸಾಕಾರ ರೂಪವಾಗಿಸಬಲ್ಲರು.

ಹಿಂದೂಗಳು ಜಗತ್ತನ್ನು ಆಳಲು ಹುಟ್ಟಿದ­ವರು ಎಂದು ನಂಬಿದ್ದವರು ಜನಸಂಘದ (ಈಗಿನ ಬಿಜೆಪಿಯ ಪೂರ್ವ ಸಂಸ್ಥೆ) ಸಂಸ್ಥಾಪಕ ಶ್ಯಾಮಾ ಪ್ರಸಾದ್‌ ಮುಖರ್ಜಿ. 1944 ಡಿಸೆಂಬರ್‌ನಲ್ಲಿ ಭಾಷಣ ಮಾಡುತ್ತಾ ಡಾ. ಮುಖರ್ಜಿ, ‘ಸಮಸ್ಯೆ­ಗ­ಳಿಂದ ಬಳಲುತ್ತಿರುವ ಭಾರತದ ಲಕ್ಷಾಂತರ ಜನರಿಗಷ್ಟೇ ಅಲ್ಲದೆ ವಿಶ್ವದ ಎಲ್ಲರಿಗೂ ಹಿಂದು­ತ್ವದ ಮರು ಅಳವಡಿಕೆಯಿಂದ ಒಳಿತಾಗುತ್ತದೆ’ ಎಂದಿದ್ದರು. ‘ಪಾಶ್ಚಿಮಾತ್ಯರ ಭೋಗ ಜೀವನಕ್ಕೆ ಹೊರತಾದ ಹಿಂದುತ್ವವು ಮನುಷ್ಯನ ಆಧ್ಯಾತ್ಮಿಕ ಸ್ವಭಾವಕ್ಕೆ ಒತ್ತು ನೀಡುತ್ತದೆ. ಭಾರತ ಮಾತ್ರ ಹೊಸ ನಾಗರಿಕತೆಗೆ ಸೂಕ್ತವಾದ ಸಂಯೋಜಕ ಶಕ್ತಿಯಾಗಬಲ್ಲದು’ ಎಂದೂ ಅವರು ವಾದಿಸಿದ್ದರು.

‘ಬಲಿಪಶು ರಾಷ್ಟ್ರ’ ಹಾಗೂ ‘ದೇವರು ಆರಿ­ಸಿದ ರಾಷ್ಟ್ರ’ ಎಂಬ ಭಾವಗಳಿಗೆ ಹೊರತಾದ ವಿಭಿನ್ನ ಪ್ರಜ್ಞೆಯನ್ನು ಹಿಂದುತ್ವ ರೂಪಿಸಬಲ್ಲದೇ? ಇಸ್ರೇಲಿನಲ್ಲಿ ಯಹೂದಿ ರಾಷ್ಟ್ರೀಯವಾದ  (ಜಿಯೋ­ನಿಸಂ) ನೆಲೆಯೂರಿಸುವ ಪ್ರಯತ್ನವನ್ನು ಇದು ನೆನಪಿಗೆ ತರುತ್ತದೆ. ಈ ಸಿದ್ಧಾಂತವು ನೊಂದ­ವರ, ಬಲಿಪಶುಗಳಾದವರಿಗೂ ನೆಮ್ಮದಿ ತರುವಂಥ ವಿಶೇಷ ಅವಕಾಶದಂತೆ ಕಾಣಬ­ಹುದು. ಅನೇಕ ಯಹೂದಿಗಳು ಕೂಡ ತಾವು ‘ದೇವರು ಆರಿಸಿದ ಜನ’, ದೇವರ ಜೊತೆಗೆ ವಿಶೇಷ ಸಂಬಂಧ ಇರುವವರು ಎಂದು ಭಾವಿಸಿ­ದ್ದಾರೆ. ಹಾಗಿದ್ದೂ ಸೂಕ್ಷ್ಮವಾದ ವ್ಯತ್ಯಾಸ­ವೊಂದು ಇದೆ. ಹಿಂದೂಗಳು ಪ್ರತಿಪಾದಿಸುವ ‘ಅಖಂಡ ಭಾರತ’ವು ‘ಜಿಯೋನಿಸ್ಟ್‌’ಗಳ ಬೈಬಲ್‌ ಭಾಷಿಕರ ಕ್ಷೇತ್ರವನ್ನು ಮೀರಿದ ವಿಶಾಲ ವ್ಯಾಪ್ತಿ­ಯನ್ನು ಹೊಂದಿದೆ. ತಮ್ಮ ಸಾಂಸ್ಕೃತಿಕ ಪ್ರಭಾವ ಪ್ಯಾಲಸ್ತೀನ್‌ಗಿಂತ ಆಚೆಗೂ ಬೆಳೆ­ಯ­ಬೇಕು ಎಂದು ಜಿಯೋನಿಸ್ಟ್‌ಗಳು ಬಯಸಲಿಲ್ಲ. ಆದರೆ, ಹಿಂದುತ್ವವಾದಿಗಳು ಬೇರೆ ರಾಷ್ಟ್ರಗಳೂ ಹಿಂದೂ ಚಿಂತನೆ ಮತ್ತು ಜೀವನಕ್ರಮದ ಶ್ರೇಷ್ಠತೆ­ಯನ್ನು ಗುರುತಿಸುತ್ತವೆ ಎಂದು ನಂಬಿದ್ದಾರೆ.

ದೀರ್ಘಕಾಲ ತಾವು ಬಲಿಪಶುಗಳಾಗಿದ್ದೆವು ಎಂದು ಹೇಳುವ ಹಿಂದುತ್ವವಾದಿಗಳಿಗೆ ಈ ಹಿಂಸೆಯಿಂದ ಹೊರಬಂದು, ಕೊನೆಗೆ ತಾವು ವಿಜಯಶಾಲಿಗಳಾಗುತ್ತೇವೆ ಎಂಬ ನಂಬಿಕೆ ಇದೆ.  ಹಿಂದೆ ಚಿತ್ತಭ್ರಾಂತಿ, ವಿಜಯಾಕಾಂಕ್ಷಿ ರಾಷ್ಟ್ರೀಯ­ವಾದ ಸಿದ್ಧಾಂತವಾಗಿದ್ದ ಹಿಂದುತ್ವವು ಈ ದೃಷ್ಟಿ­ಯಿಂದ, ಒಂದು ರೀತಿಯಲ್ಲಿ ಅನನ್ಯವೂ  ಹಾಗೂ ಹೋಲಿಕೆ ಮಾಡಲಾಗ­ದಂಥದ್ದು.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.