ADVERTISEMENT

ಬ್ಯಾಟಿಂಗ್, ಬೌಲಿಂಗ್ ಕನಸುಗಳು

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:16 IST
Last Updated 16 ಜೂನ್ 2018, 9:16 IST

ತರುಣನಾಗಿದ್ದಾಗ ನನ್ನ ಬಹುತೇಕ ಕನಸುಗಳು ಕ್ರಿಕೆಟ್‌ಗೆ ಸಂಬಂಧಿಸಿದವೇ ಆಗಿದ್ದವು. ಆಟದ ಹುಚ್ಚು ಹತ್ತಿಸಿಕೊಂಡಿದ್ದ ನಾನು, ಶಾಲೆ ಹಾಗೂ ವಿಶ್ವವಿದ್ಯಾಲಯ ಮಟ್ಟದಲ್ಲಿ ಸಾಕಷ್ಟು ಗಂಭೀರವಾಗಿ ಆಡಿದ್ದೆ. ನಮ್ಮ ಕಾಲೇಜು ಇಲೆವೆನ್ ಬಹುಶಃ ಆಗ ಭಾರತದಲ್ಲಿಯೇ ಶ್ರೇಷ್ಠ ತಂಡವಾಗಿತ್ತು.

ನನ್ನ ಇಬ್ಬರು ಸಹ ಆಟಗಾರರು ಮುಂದೆ ಟೆಸ್ಟ್ ಕ್ರಿಕೆಟ್ ಆಡುವ ಮಟ್ಟಕ್ಕೆ ಬೆಳೆದರು. ಅನೇಕ ಆಟಗಾರರು ರಣಜಿ, ದುಲೀಪ್ ಟ್ರೋಫಿ ಪಂದ್ಯಗಳಲ್ಲಿ ಆಡಿದರು. ಹತ್ತನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ, ತಿರುವು ಪಡೆಯದಂಥ ಆಫ್ ಬ್ರೇಕ್ ಬೌಲಿಂಗ್ ಮಾಡುತ್ತಿದ್ದ ನಾನು ತಂಡದಲ್ಲಿ ಅತಿ ಕಡಿಮೆ ಪ್ರತಿಭೆ ಇದ್ದ ಆಟಗಾರನಾಗಿದ್ದೆ.

ಆಡುವ ಹನ್ನೊಂದು ಜನರಲ್ಲಿ ನಾನೂ ಒಬ್ಬ ಎನ್ನುವುದೇ ಕ್ರಿಕೆಟ್ ನನ್ನ ಬದುಕು ಎಂದು ಭಾವಿಸಲು ಸಾಕಾಗಿತ್ತು. ವರ್ಷಕ್ಕೆ ನಾವು ಏನಿಲ್ಲವೆಂದರೂ ಅರವತ್ತು ಪಂದ್ಯಗಳನ್ನು ಆಡುತ್ತಿದ್ದೆವು. ಪಂದ್ಯ ಇಲ್ಲದ ಸಂದರ್ಭದಲ್ಲಿ ನಿತ್ಯ ಏನಿಲ್ಲವೆಂದರೂ ಸತತವಾಗಿ ನಾಲ್ಕು ಗಂಟೆ ಅಭ್ಯಾಸ ಮಾಡುತ್ತಿದ್ದೆವು.

ಐಪಿಎಲ್ ಇಲ್ಲದ ಆ ದಿನಗಳಲ್ಲಿ ಟೆಸ್ಟ್ ಸರಣಿಗಳು ನಡೆಯುತ್ತಿದ್ದುದು 2 ವರ್ಷಗಳಿಗೆ ಒಮ್ಮೆ. ದೆಹಲಿ ವಿಶ್ವವಿದ್ಯಾಲಯದ ಅಂತರಕಾಲೇಜು ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ನೋಡಲು 10– 15 ಸಾವಿರ ಜನ ಸೇರುತ್ತಿದ್ದರು (ಆಗ ಐದು ದಿನಗಳ ಪಂದ್ಯ ನಡೆಯುತ್ತಿತ್ತು. ತಂಡಗಳು ಎರಡು ಇನಿಂಗ್ಸ್ ಆಡಬೇಕಿತ್ತು).

ರಾಜಧಾನಿಯ ಪತ್ರಿಕೆಗಳ ಪುಟಗಳಲ್ಲಿ ಫೈನಲ್ ಪಂದ್ಯದ ಸಂಪೂರ್ಣ ಸ್ಕೋರ್ ಕಾರ್ಡ್ ಪ್ರಕಟಿಸುತ್ತಿದ್ದರು. ಎರಡು ಕಾಲಂಗಳಷ್ಟು ಪಂದ್ಯದ ವರದಿಯೂ ಇರುತ್ತಿತ್ತು. ನಾನೆಂದೂ ತಲೆಬರಹದಲ್ಲಿ ನನ್ನ ಹೆಸರು ಮೂಡುವಷ್ಟು ಚೆನ್ನಾಗಿ ಆಡಲಿಲ್ಲ. ಹಾಗಿದ್ದೂ ಆಗೀಗ ಪಂದ್ಯದ ಮೊದಲ ಅಥವಾ ಎರಡನೇ ದಿನ ‘ನೈಟ್ ವಾಚ್‌ಮನ್’ ಆಗಿ ಆಡುವ ಅವಕಾಶ ಸಿಗುತ್ತಿತ್ತು. ಮರುದಿನದ ಪತ್ರಿಕೆಗಳಲ್ಲಿ ನನ್ನ ಕಾಲೇಜು ತಂಡದ ಸ್ಕೋರ್ ಕಾರ್ಡ್ ಪ್ರಕಟವಾಗುತ್ತಿತ್ತಲ್ಲ; ಅದರಲ್ಲಿ ‘2 ವಿಕೆಟ್‌ಗೆ 50 ರನ್’ ಎಂದು ನಮೂದಾಗಿ, ವಿವರಗಳಲ್ಲಿ ‘ಆರ್. ಗುಹಾ ನಾಟೌಟ್ 2’ ಎಂದು ಇರುತ್ತಿತ್ತು.

ಪ್ರತಿವರ್ಷವೂ ಹತ್ತನೇ ಕ್ರಮಾಂಕದಲ್ಲಿಯೇ ಬ್ಯಾಟಿಂಗ್ ಮಾಡಿದ್ದು. ನಾನು ಗಳಿಸಿದ ಅತಿ ಹೆಚ್ಚು ರನ್ 4 (ಆಗಲೂ ಔಟ್ ಆಗಿದ್ದೆ). ಕಾಲೇಜು ಓದನ್ನು ಮುಗಿಸಿದ ಕನಿಷ್ಠ ಹತ್ತು ವರ್ಷ ನನ್ನ ಬ್ಯಾಟ್ಸ್‌ಮನ್‌ಷಿಪ್ ಕನಸನ್ನು ನೇವರಿಸುತ್ತಲೇ ಇದ್ದೆ. ಟೆಂಟ್‌ನಲ್ಲಿ ಕುಳಿತು, ಉಗುರು ಕಡಿಯುತ್ತಾ ನಾಯ ಕನ ಇಶಾರೆಗೆ ಸದಾ ಎದುರು ನೋಡುತ್ತಿದ್ದೆ. ನಾಯಕ ‘ಪ್ಯಾಡಪ್’ ಎಂದೊಡನೆ ನನ್ನ ಜಡತ್ವ ಎಲ್ಲಾ ಓಡಿಹೋಗು ತ್ತಿತ್ತು.

ಕಿಟ್ ಬಳಿಗೆ ಓಡಿ, ಮೊದಲು ಹೊಟ್ಟೆಯ ಗಾರ್ಡ್ ಹಾಕಿಕೊಳ್ಳುತ್ತಿದ್ದೆ. ಆಮೇಲೆ ಪ್ಯಾಡ್ ಕಟ್ಟಿಕೊಳ್ಳುವುದೇ ಒಂದು ಆನಂದ. ಒಂದು ಪ್ಯಾಡ್ ಒಂದು ಬಕಲನ್ನು ಏಕಕಾಲದಲ್ಲಿ ಕಟ್ಟಿಕೊಳ್ಳುವಾಗ ಎಂಥದ್ದೋ ಹುಮ್ಮಸ್ಸು. ಸಜ್ಜಾದ ಮೇಲೆ ಕುರ್ಚಿ ಮೇಲೆ ಕುಳಿತು, ಕಾಲುಗಳ ನಡುವೆ ಬ್ಯಾಟ್ ಇಟ್ಟುಕೊಂಡು ಕಾಯುತ್ತಾ ಆಟ ನೋಡುತ್ತಿದ್ದೆ. ಸ್ವಲ್ಪ ಹೊತ್ತಿನಲ್ಲೇ ವಿಕೆಟ್ ಬೀಳುತ್ತಿತ್ತು. ನಾನು ದಿಗ್ಗನೆ ಎದ್ದು, ಗ್ಲೌವ್ಸ್ ತೊಟ್ಟು  ಕ್ರೀಸ್‌ನತ್ತ ಧಾವಿಸುತ್ತಿದ್ದೆ. ಆಗ ಹೆಲ್ಮೆಟ್ ಇರ ಲಿಲ್ಲ. ಮತ್ತೊಮ್ಮೆ ಪತ್ರಿಕೆಯ ಸ್ಕೋರ್ ಕಾರ್ಡ್‌ನಲ್ಲಿ ನನ್ನ ಹೆಸರು ಬಂದಿತ್ತು.

ಕನಸನ್ನು ಮುರಿಯುವುದು ಸುಲಭ. ವಿದೂಷಕನೊಬ್ಬ ‘ಹ್ಯಾಮ್ಲೆಟ್’ ನಾಟಕವಾಡುವ ಕನಸನ್ನು ಕಾಣುವುದು ಎಷ್ಟು ಸಹಜವೋ ನನ್ನ ಕನಸೂ ಅಷ್ಟೇ ಸಹಜವಾಗಿತ್ತು. ಬ್ಯಾಟ್ಸ್‌ಮನ್‌ಗಳು ಕ್ರಿಕೆಟ್‌ನಲ್ಲಿ ವಿಶೇಷ ಸವಲತ್ತು ಪಡೆದರೆ, ಬೌಲರ್‌ಗಳು ಬೆವರಿಳಿಸಿಯೂ ಅಷ್ಟು ಹೆಸರು ಮಾಡಲು ಆಗುತ್ತಿರಲಿಲ್ಲ. ತಂಡದ ಹತ್ತು ನಾಯಕರಲ್ಲಿ ಒಂಬತ್ತು ಮಂದಿ ಬ್ಯಾಟ್ಸ್‌ಮನ್‌ಗಳೇ ಆಗಿರುತ್ತಾರೆ. ಪತ್ರಿಕೆಗಳ ತಲೆಬರಹಗಳಲ್ಲಿ ಶೇ 90ರಷ್ಟು ಸಲ ಪ್ರಕಟವಾಗುವುದು ಬ್ಯಾಟ್ಸ್‌ಮನ್‌ಗಳ ಹೆಸರೇ. ಅಷ್ಟೇ ಪ್ರತಿಶತ ‘ಪಂದ್ಯ ಪುರುಷೋತ್ತಮ’ ಪ್ರಶಸ್ತಿಗಳೂ ಅವರಿಗೆ ಲಭಿಸುತ್ತವೆ.  

ಶೇ 90ರಷ್ಟು ಜಾಹೀರಾತುಗಳು ಅವರದ್ದೇ ಪಾಲು. 1956ರ ಆಸ್ಟ್ರೇಲಿಯಾ ತಂಡದ ಇಂಗ್ಲೆಂಡ್ ಪ್ರವಾಸ ನನಗಿಷ್ಟವಾದ ಕ್ರಿಕೆಟ್ ಕಥೆ. ಇಂಗ್ಲೆಂಡ್‌ನ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಲೆನ್ ಹಟನ್ ಪ್ರೆಸ್ ಬಾಕ್ಸ್‌ನಲ್ಲಿ ಇದ್ದರು. ಆಸ್ಟ್ರೇಲಿಯಾದ ಮಾಜಿ ಗೂಗ್ಲಿ ಬೌಲರ್ ಆರ್ಥರ್ ಮೈಲಿ ಕೂಡ ಅಲ್ಲಿದ್ದರು. ಪಂದ್ಯದ ನಡುವೆಯೇ ಇಂಗ್ಲೆಂಡ್‌ನ ರಾಣಿ ಹಟನ್ ಅವರಿಗೆ ‘ನೈಟ್‌ಹುಡ್ ಪದವಿ’ ನೀಡಿರುವ ಸುದ್ದಿ ಹೊರಬಿತ್ತು. ಹಟನ್ ಬಳಿಗೆ ಹೋದ ಮೈಲಿ, ಅವರನ್ನು ಅಭಿನಂದಿಸಿ ಕೈಕುಲುಕಿದರು.

ಮೆಲುದನಿಯಲ್ಲಿ ಎಲ್ಲರಿಗೂ ತುಸು ಕೇಳುವಂತೆ ಅವರು ಹಟನ್ ಕಿವಿಯಲ್ಲಿ ಹೀಗೆ ಉಸುರಿದರು: ‘ಧನ್ಯವಾದಗಳು, ಸರ್ ಲಿಯೊನಾರ್ಡ್. ಮುಂದಿನ ಸಲವಾದರೂ ಈ ಪದವಿ ಬೌಲರ್‌ಗೆ ಸಿಗುತ್ತದೆ ಎಂದು ನಿರೀಕ್ಷಿಸುತ್ತಿದ್ದೇನೆ. ನೈಟ್‌ಹುಡ್ ಪದವಿ ಪಡೆದ ಕೊನೆಯ ಬೌಲರ್ ಫ್ರಾನ್ಸಿಸ್ ಡ್ರೇಕ್’.

ಮೈಲಿ ಆಡಿದ ಮಾತು ಬೌಲರ್‌ಗಳನ್ನು ಕುರಿತ ಸಾಮಾಜಿಕ ಪೂರ್ವಗ್ರಹದ ಕಡೆ ಗಮನಸೆಳೆಯುವಂತಿತ್ತು. ಆ ಪೂರ್ವಗ್ರಹ ಎಷ್ಟು ಆಳವಾಗಿ ಬೇರೂರಿತ್ತೆಂದರೆ, ಬ್ರಿಟಿಷ್ ಚಕ್ರಾಧಿಪತ್ಯದ ಧೋರಣೆಯೂ ಅದೇ ಆಗುವಷ್ಟು. ಹಟನ್‌ಗಿಂತ ಮೊದಲು ಬ್ಯಾಟ್ಸ್‌ಮನ್‌ಗಳಾದ ಜಾಕ್ ಹಾಬ್ಸ್,  ಡಾನ್ ಬ್ರಾಡ್ಮನ್‌ಗೆ ನೈಟ್‌ಹುಡ್ ಪದವಿ ಸಂದಿತ್ತು. ಹಟನ್ ನಂತರ ಬ್ಯಾಟಿಂಗ್ ಆಲ್‌ರೌಂಡರ್‌ಗಳಾದ ಫ್ರಾಂಕ್ ವೋರೆಲ್, ಗ್ಯಾರಿ ಸೋಬರ್ಸ್‌ಗೆ ನೈಟ್‌ಹುಡ್ ಪದವಿಯ ಗೌರವ ಲಭಿಸಿತು.

ದಶಕಗಳ ನಂತರ 1990ರಲ್ಲಿ ಸರ್ ರಿಚರ್ಡ್ ಹ್ಯಾಡ್ಲಿ ನೈಟ್‌ಹುಡ್ ಪದವಿ ಪಡೆದ ಪಟ್ಟಿಗೆ ಸೇರಿದ ಬೌಲರ್ ಎನಿಸಿದರು. ಫ್ರಾನ್ಸಿಸ್ ಡ್ರೇಕ್ ನಂತರ ಈ ಗೌರವ ಸಂದ ಏಕೈಕ ಬೌಲರ್ ಹ್ಯಾಡ್ಲಿ. ನಾನು ಕನವರಿಸಿದ್ದು ಅಥವಾ ಫ್ಯಾಂಟಸಿಯಂತೆ ಕಲ್ಪಿಸಿಕೊಂಡಿದ್ದು ಕೈಲಿ ಬ್ಯಾಟ್ ಹಿಡಿಯುವುದನ್ನು. ಬ್ಯಾಟ್ಸ್‌ಮನ್ ಅಥವಾ ಬ್ಯಾಟ್ಸ್‌ಮನ್‌ಷಿಪ್‌ನ ಮೌಲ್ಯ ಏರಿಸಿದ ಸಾಮಾಜಿಕ ಭಾವದ ಪರಿಣಾಮ ಇದು.

ನನ್ನ ಕನವರಿಕೆಗೆ ತಣ್ಣೀರೆರಚುವಂತೆ ಹತ್ತನೆ ಕ್ರಮಾಂಕದಲ್ಲಿ ಆಡುವ ಅವಕಾಶ ಸಿಕ್ಕಾಗಲೂ ನಾನು ಬ್ಯಾಟ್ಸ್‌ಮನ್‌ಷಿಪ್ ಕನಸು ಕಾಣುವುದನ್ನು ಮಾತ್ರ ಬಿಡಲಿಲ್ಲ. ನಾಯಕನಿಗೂ ನನ್ನ ಸಾಮರ್ಥ್ಯದ ಅರಿವಿದ್ದಿರಬೇಕು ಎಂಬ ಸತ್ಯ ಗೊತ್ತಿದ್ದೂ ಕನಸು ಮೊಟಕಾಗಲಿಲ್ಲ. ತರುಣನಾಗಿದ್ದಾಗ ನಾನು ಬೌಲರ್, ಕೀಪರ್ ಅಥವಾ ಫೀಲ್ಡರ್ ಆಗುವ ಕನಸನ್ನು ಕಾಣಲೇ ಇಲ್ಲ. ಬ್ಯಾಟ್ಸ್‌ಮನ್ ಆಗಬೇಕೆಂದೇ ಆಸೆ ಪಡುತ್ತಿದ್ದೆ.

25 ವರ್ಷ ದಾಟಿದ ಮೇಲೆ ಕ್ರಿಕೆಟ್ ಆಡುವುದನ್ನು ಬಿಟ್ಟುಬಿಟ್ಟೆ. 35ರ ಹೊತ್ತಿಗೆ ಆಟದ ಕನಸು ಕಾಣುವುದನ್ನೂ ನಿಲ್ಲಿಸಿದೆ. ಮುಂದಿನ ಒಂದು ದಶಕ ನನ್ನ ಕನಸುಗಳೆಲ್ಲಾ ಗ್ರಂಥಾಲಯ, ಪತ್ರಾಗಾರಗಳ ಸುತ್ತಲೇ ಹೆಣೆದುಕೊಂಡವು. ಆಮೇಲೊಂದು ದಿನ ದಿಢೀರನೆ ರಾತ್ರೋರಾತ್ರಿ ಆಟ ಮತ್ತೆ ನೆನಪಾಗುವಂಥ ಅನುಭವ ಆಯಿತು. ದೆಹಲಿಯಲ್ಲಿ ನನ್ನದೊಂದು ಪುಸ್ತಕ ಬಿಡುಗಡೆಯಾಗುವ ಹಿಂದಿನ ರಾತ್ರಿ. ಚಡಪಡಿಸುತ್ತಿದ್ದೆ.

ಆಟದ ಕುರಿತ ಉತ್ಸಾಹ ಮಕಾಡೆಯಾಗಿದ್ದ ಆ ಕಾಲಘಟ್ಟದಲ್ಲಿ ಬಿದ್ದ ಕನಸಿನಲ್ಲಿ ನಾನು ಹಾಗೆ ಚಡಪಡಿಸಿದ್ದು. ಭಾರತ-ಇಂಗ್ಲೆಂಡ್ ನಡುವಿನ ಪಂದ್ಯ. ಅನಿಲ್ ಕುಂಬ್ಳೆ ಎದುರಲ್ಲಿದ್ದ ಅಲೆಕ್ ಸ್ಟುವರ್ಟ್‌ಗೆ ಬೌಲ್ ಮಾಡುತ್ತಿದ್ದರು. ಕುಂಬ್ಳೆ ಬತ್ತಳಿಕೆಯಲ್ಲಿದ್ದ ಅಪರೂಪದ ಗೂಗ್ಲಿ ಪ್ರಯೋಗಗೊಂಡಿದ್ದೇ, ಸ್ಟುವರ್ಟ್ ಬ್ಯಾಟ್ ಅಂಚಿಗೆ ಚೆಂಡು ತಾಗಿ, ಸ್ಲಿಪ್‌ನಲ್ಲಿ ನಿಂತಿದ್ದ ದ್ರಾವಿಡ್ ಬಳಿಗೆ ಹೋಯಿತು.

ಚೆಂಡು ಇನ್ನೇನು ಭೂಸ್ಪರ್ಶ ಮಾಡೀತು ಎನ್ನುವಷ್ಟರಲ್ಲಿ ದ್ರಾವಿಡ್ ಕ್ಯಾಚ್ ಹಿಡಿದುಬಿಟ್ಟರು. ಆ ಕ್ಷಣ ಖುಷಿಯಿಂದ ಎಚ್ಚೆತ್ತುಕೊಂಡೆ. ಬರಹಗಾರನಾಗಿ ಉತ್ಸುಕನಾದಾಗ ನನ್ನ ಮನಸ್ಸೆಂದೂ ಬ್ಯಾಟ್ಸ್‌ಮನ್‌ಷಿಪ್ ಕನಸು ಕಂಡಿಲ್ಲ. ನನ್ನದೇ ಊರಿನ ಬೌಲರ್‌ನ ಗೂಗ್ಲಿಗೆ, ನನ್ನದೇ ಊರಿನ ಇನ್ನೊಬ್ಬ ಫೀಲ್ಡರ್ ಕ್ಯಾಚ್ ಹಿಡಿದ ಕನಸು ಕಂಡೆ. ಕಾಲೇಜು ದಿನಗಳಲ್ಲಿ ನಾನು ಆಡುವಾಗಲೂ ಒಮ್ಮೆ ಒಬ್ಬ ಬ್ಯಾಟ್ಸ್‌ಮನ್‌ನನ್ನು ಹಾಗೇ ಔಟ್ ಮಾಡಿದ್ದ ನೆನಪು.

ಸ್ಲಿಪ್‌ನಲ್ಲಿ ನಿಂತಿದ್ದ ನನ್ನ ಕಾಲೇಜು ತಂಡದ ನಾಯಕ ಅರುಣ್ ಲಾಲ್ ಆ ಕ್ಯಾಚ್ ಹಿಡಿದಿದ್ದರು. ಮುಂದೆ ಅವರೇ ದೆಹಲಿ, ಉತ್ತರ ವಲಯ, ಬಂಗಾಳ, ಪೂರ್ವ ವಲಯ ಹಾಗೂ ಭಾರತ ತಂಡದ ಪರವಾಗಿ ಹಲವು ಉತ್ತಮ ಕ್ಯಾಚ್‌ಗಳನ್ನು ಹಿಡಿದದ್ದೂ ಹೌದು.

ಕುಂಬ್ಳೆ-ದ್ರಾವಿಡ್ ಕನಸು ಬಿದ್ದದ್ದು 2002ರಲ್ಲಿ. ಆಮೇಲೆ ನಾನು ಪ್ರೀತಿಸುವ ಆಟದ ಕನಸೇ ನನಗೆ ಬಿದ್ದಿಲ್ಲ. ಇತ್ತೀಚೆಗೆ ನನಗೆ ಬೀಳುವ ಕನಸುಗಳಲ್ಲಿ ಡೆಹ್ರಾಡೂನ್‌ನ ಮರಗಳು, ಮೈದಾನಗಳು ಇರುತ್ತವೆ. ಈಗ ಮರ, ಮೈದಾನಗಳಿದ್ದ ಆ ಜಾಗಗಳಲ್ಲಿ ಮನೆಗಳು, ಕಚೇರಿಗಳೆದ್ದಿವೆ ಎನ್ನುವುದು ಬೇರೆ ಮಾತು. ಮಧ್ಯವಯಸ್ಕನಾದಾಗ, ಒಮ್ಮೊಮ್ಮೆ ಸಹಜವಾಗಿಯೇ ಸಲೀಸಾಗಿ ನಿದ್ದೆ ಬರುವುದಿಲ್ಲ. ನನಗೂ ಅಂಥ ರಾತ್ರಿಗಳು ಎದುರಾಗಿವೆ. ಆಗೆಲ್ಲಾ ನಾನು ನನ್ನ ಕಾಲದ ಇಬ್ಬರು ಪ್ರತಿಭಾವಂತ ಹಾಗೂ ಶ್ರೇಷ್ಠ ಬೌಲರ್‌ಗಳನ್ನು ನೆನಪಿಸಿಕೊಂಡು ಅಂಗಾತವಾಗುತ್ತಿದ್ದೆ.

ಆ ಇಬ್ಬರು ಬೌಲರ್‌ಗಳೇ ಶೇನ್ ವಾರ್ನ್, ವಾಸಿಂ ಅಕ್ರಂ. ಮೊದಲಿಗೆ ವಾರ್ನ್. ಅವರನ್ನು ಕಲ್ಪಿಸಿಕೊಂಡಾಗಲೆಲ್ಲಾ ಕಡಿಮೆ ದೂರದ ನಿಧಾನಗತಿಯ ಅವರ ರನ್‌ಅಪ್, ಬಲವಾದ ಭುಜಗಳನ್ನು ತಿರುಗಿಸಿ, ಮುಂಗೈನ ಮಾಂತ್ರಿಕ ಶಕ್ತಿಯಿಂದ ಸ್ಪಿನ್ ಮಾಡಿ ಅವರು ಹಾಕುತ್ತಿದ್ದ ಎಸೆತ ಪುಟಿದದ್ದೇ ಬಲಕ್ಕೆ ತಿರುವು ಪಡೆದು ಬ್ಯಾಟ್‌ನ ಅಂಚಿಗೆ ತಾಕುತ್ತಿದ್ದ ರೀತಿ, ಸ್ಪಿನ್ ಮಾಡದೇ ಇದ್ದ ಎಸೆತ ನೇರವಾಗಿ ನುಗ್ಗಿ ಬ್ಯಾಟ್ಸ್‌ಮನ್‌ನನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸುತ್ತಿದ್ದ ಚಾಕಚಕ್ಯತೆ ಎಲ್ಲವೂ ಕಣ್ಣಿಗೆ ಕಟ್ಟುತ್ತವೆ. ಇನ್ನು ವಾಸಿಂ ಅಕ್ರಂ ವಿಷಯ.

ಅವರ ವೇಗದ ರನ್‌ಅಪ್‌ನಲ್ಲೂ ಇದ್ದ ನಾಜೂಕುತನ, ಹೊಸ ಚೆಂಡನ್ನು ಓವರ್ ದಿ ವಿಕೆಟ್ ಬೌಲ್ ಮಾಡುತ್ತಿದ್ದ ಎಡಗೈನ ವೈಖರಿ, ಇನ್‌ಸ್ವಿಂಗರ್ ವಿಕೆಟ್ ಹಾರಿಸುತ್ತಿದ್ದ ರೀತಿ ಅಥವಾ ಹಳೆಯ ಚೆಂಡನ್ನು ರೌಂಡ್ ದಿ ವಿಕೆಟ್ ಬೌಲ್ ಮಾಡಿದಾಗ ಲೆಗ್‌ಸೈಡ್‌ನಿಂದ ಆಫ್‌ಸೈಡ್‌ನತ್ತ ರಿವರ್ಸ್ ಸ್ವಿಂಗ್ ಆಗಿ ಬ್ಯಾಟ್ಸ್‌ಮನ್ ಸ್ಲಿಪ್‌ನಲ್ಲಿ ಕ್ಯಾಚ್ ಕೊಡುವ ಪರಿಸ್ಥಿತಿ ಸೃಷ್ಟಿಯಾಗುತ್ತಿದ್ದುದು... ಎಲ್ಲವೂ ನೆನಪಾಗುತ್ತಿತ್ತು.

ವಾರ್ನ್, ಅಕ್ರಂ ಇಬ್ಬರನ್ನೂ ನಾನು ಅಷ್ಟು ಹೊಗಳುವುದು ಯಾಕೆ ಎಂದು ಸ್ಪಷ್ಟಪಡಿಸಲು ಆಸ್ಟ್ರೇಲಿಯಾದ ಆರ್ಥರ್ ಮೈಲಿ ಅವರದ್ದೇ ಇನ್ನೊಂದು ಕಥೆಯನ್ನು ಹೇಳಬೇಕು. 1930ರಲ್ಲಿ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್‌ಗೆ ಪ್ರವಾಸ ಹೋಗಿತ್ತು. ಆತಿಥೇಯ ತಂಡವು ಇಯಾನ್ ಪೀಬಲ್ ಎಂಬ ಹೊಸ ಮುಂಗೈ ಸ್ಪಿನ್ನರ್‌ನನ್ನು ಆಯ್ಕೆ ಮಾಡಿತ್ತು.

ಟೆಸ್ಟ್ ಪಂದ್ಯಗಳ ನಡುವಿನ ಬಿಡುವಿನಲ್ಲಿ ಪದಾರ್ಪಣೆ ಮಾಡಿದ ಆ ಬೌಲರ್ ಮೈಲಿ ಬಳಿಗೆ ಹೋಗಿ ಗೂಗ್ಲಿ ಪ್ರಯೋಗಿಸುವುದು ಹೇಗೆ ಎಂದು ಕೇಳಿದ. ಮೈಲಿ ಅದನ್ನು ಹೇಳಿಕೊಟ್ಟರಷ್ಟೆ. ಕೆಲವು ಆಸ್ಟ್ರೇಲಿಯನ್ ಪತ್ರಿಕೆಗಳು ‘ಮೈಲಿ ದೇಶಭಕ್ತನಲ್ಲ’ ಎಂದು ಟೀಕಿಸಿದವು. ಮೈಲಿ ಅದಕ್ಕೆ ಪ್ರತಿಕ್ರಿಯಿಸಿದ್ದು ಹೀಗೆ: ‘ಸ್ಪಿನ್ ಬೌಲಿಂಗ್ ಒಂದು ಕಲೆ. ಕಲೆ ಎನ್ನುವುದು ಅಂತರರಾಷ್ಟ್ರೀಯವಾದುದು’.

ಸ್ವಿಂಗ್ ಬೌಲಿಂಗ್ ಕೂಡ ಒಂದು ಕಲೆಯೇ. ಅದರ ಆಧುನಿಕ ಮಾಸ್ಟರ್ ವಾಸಿಂ ಅಕ್ರಂ. ಕೆಲ ವರ್ಷಗಳ ಹಿಂದೆ ಕ್ರೀಡಾಂಗಣವೊಂದರ ಪೆವಿಲಿಯನ್‌ನಲ್ಲಿ ಕುಳಿತು ನಾನು ಭಾರತ, ಪಾಕಿಸ್ತಾನದ ನಡುವಿನ ಪಂದ್ಯ ನೋಡುತ್ತಿದ್ದೆ. ಅಕ್ರಂ ಕಾಮೆಂಟರಿ ಬಾಕ್ಸ್‌ನಿಂದ ಹೊರಬಂದರು. ಗಾಯಗೊಂಡಿದ್ದ ಜಹೀರ್ ಖಾನ್ ಕೂಡ ಅಲ್ಲಿದ್ದರು. ತಮ್ಮ ಸ್ನೇಹಿತರು, ಅಭಿಮಾನಿಗಳ ಜೊತೆ ವಾಸಿಂ ಮಾತನಾಡುತ್ತಿದ್ದುದನ್ನು ಜಹೀರ್ ಸುಮ್ಮನೆ ನೋಡಿದರು.

ತಮ್ಮ ಹೀರೊನನ್ನು ಅವರು ದಿವ್ಯವಾದ ಬೆರಗಿನಿಂದ, ಗೌರವದಿಂದ ನೋಡುತ್ತಿದ್ದುದು ಸ್ಪಷ್ಟವಾಗಿತ್ತು. ಆಗ ಅವರಿಬ್ಬರ ನಡುವೆ ಯಾವ ಸಂವಾದವೂ ನಡೆಯಲಿಲ್ಲ. ಆದರೆ ಮುಂದೆ ಚೆಂಡಿನ ಗತಿ ಬದಲಿಸುವುದು ಹೇಗೆ, ರಿವರ್ಸ್ ಸ್ವಿಂಗ್ ಪರಿಣಾಮಕಾರಿಯಾಗುವಂತೆ ಮಾಡುವುದು ಹೇಗೆ, ಯಾವಾಗ ರೌಂಡ್ ದಿ ವಿಕೆಟ್ ಬೌಲಿಂಗ್ ಮಾಡಬೇಕು ಎಂದೆಲ್ಲಾ ವಾಸಿಂ, ಜಹೀರ್‌ಗೆ ಪಾಠ ಹೇಳಿಕೊಟ್ಟರು. ಕೆಲ ‘ವೀರಾಭಿಮಾನಿ’ ಪಾಕಿಸ್ತಾನೀಯರು ಹೀಗೆ ಪಾಠ ಹೇಳಿಕೊಟ್ಟಿದ್ದಕ್ಕೆ ವಾಸಿಂ ಅವರನ್ನೂ ಟೀಕಿಸಿದರು. ಆಸ್ಟ್ರೇಲಿಯಾದ ಇಯಾನ್ ಪೀಬಲ್ಸ್‌ಗೆ ಗೂಗ್ಲಿ ಹೇಳಿಕೊಟ್ಟ ಮೈಲಿಗೆ ಆದಂತೆಯೇ ವಾಸಿಂಗೂ ಆದದ್ದು. ಅದರಿಂದ ವಿಚಲಿತರಾಗದ ವಾಸಿಂ, ಭಾರತದ ಬೌಲರ್‌ಗಳಿಗೆ ಪಾಠ ಮುಂದುವರಿಸಿದರು.

ಬಾಲಕನಾಗಿದ್ದಾಗ ಬ್ಯಾಟ್ಸ್‌ಮನ್ ಕುರಿತು ‘ಮೂರ್ಖತನದ ಫ್ಯಾಂಟಸಿ’ಗಳನ್ನು ಬೆಳೆಸಿಕೊಂಡುಬಿಟ್ಟಿದ್ದೆ.  ಮಧ್ಯ ವಯಸ್ಕನಾದಾಗ ವೇಗದ ಬೌಲರ್‌ಗಳಿಗೇ ಇತಿಹಾಸದ ಪುಟಗಳಲ್ಲಿ ಹೆಚ್ಚು ಸ್ಥಳ ಕೊಡುವ ಮನಸ್ಸು ನನ್ನದಾಯಿತು. 30 ಚಿಲ್ಲರೆ ವಯಸ್ಸಿನವನಾಗಿದ್ದಾಗಲೂ ಸದಾ ನನ್ನ ತಂಡವೇ ಗೆಲ್ಲಬೇಕು ಎಂದು  ಬಯಸುತ್ತಿದ್ದೆ.

ಈಗ ನನಗೆ ಒಳ್ಳೆಯ ಪಂದ್ಯ ಬೇಕಷ್ಟೆ. ಅದಕ್ಕೇ ನಿದ್ದೆ ನನಗೆ ಆಟವಾಡಿಸುವಾಗಲೆಲ್ಲ ಶೇನ್ ವಾರ್ನ್ ಮಾಡುತ್ತಿದ್ದ ಲೆಗ್ ಬ್ರೇಕ್‌ಗಳ ಸೊಗಸುಗಾರಿಕೆ, ವಾಸಿಂ ಅಕ್ರಂ ಹಾಕುತ್ತಿದ್ದ ಲೇಟ್ ಇನ್‌ಸ್ವಿಂಗ್ ಎಸೆತಗಳನ್ನು ಮೆಲುಕುಹಾಕುತ್ತಾ ಅಂಗಾತವಾಗುತ್ತೇನೆ.
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.