ADVERTISEMENT

ಮಾರ್ಕ್ಸ್‌ವಾದ, ಹಿಂದುತ್ವದ ಹೊರತಾದ ಇತಿಹಾಸ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:16 IST
Last Updated 16 ಜೂನ್ 2018, 9:16 IST

1984ರ ಅಕ್ಟೋಬರ್‌ನಲ್ಲಿ ಕೋಲ್ಕತ್ತದ (ಆಗ ಕಲ್ಕತ್ತಾ) ಸಮಾಜ ವಿಜ್ಞಾನ ಅಧ್ಯ­ಯನ ಕೇಂದ್ರದಲ್ಲಿ ನನ್ನ ಮೊದಲ ಉದ್ಯೋಗ ಆರಂಭಿಸಿದ್ದೆ. ನಾನು ಆ ಸಂಸ್ಥೆ ಸೇರಿದ ಒಂದು ವಾರದಲ್ಲೇ ಚೆನ್ನೈನ (ಆಗಿನ ಮದ್ರಾಸ್‌)  ಸ್ನೇಹಿತರೊಬ್ಬರು ಶ್ರೀಲಂಕಾ ತಮಿಳರ ದುಃಸ್ಥಿತಿಯನ್ನು ವಿವರಿಸುವ ಮನವಿ ಪತ್ರವೊಂದನ್ನು ಕಳುಹಿಸಿದರು. ನನ್ನ ಕೆಲ ಸಹೋ­ದ್ಯೋಗಿಗಳು ಆ ಮನವಿ ಪತ್ರಕ್ಕೆ ಸಹಿ ಹಾಕ­ಬಹುದು ಎಂಬ ಆಸೆ ಅವರದಾಗಿತ್ತು.

ಈಶಾನ್ಯ ಭಾರತದ ಇತಿಹಾಸಕಾರರೊಬ್ಬರ ಬಳಿ ಮೊದಲಿಗೆ ಈ ವಿಚಾರ ಪ್ರಸ್ತಾಪಿಸಿದೆ. ಅವರು ಮಾಡಿದ್ದ ಕೆಲಸದ ಬಗ್ಗೆ ನನಗೆ ತಿಳಿದಿ­ದ್ದರೂ ಅವರ ಬಳಿ ಆವರೆಗೆ ಮಾತನಾಡಿರಲಿಲ್ಲ. ಆ ಮನವಿ ಪತ್ರ ಓದಿದ ಅವರು, ‘ಜನಾಂಗೀಯ ವಿಚಾರಗಳನ್ನು ಚರ್ಚೆಗೆ ಎತ್ತಿಕೊಳ್ಳುವುದು ಅಂದರೆ ಶ್ರೀಲಂಕಾ ದಲ್ಲಿ ನಡೆಯುತ್ತಿರುವ ವರ್ಗ ಸಂಘರ್ಷದಿಂದ ಬೇರೆಡೆ ಗಮನ ಸೆಳೆದಂತಾಗು­ವು­ದಿ­ಲ್ಲವೇ ಎಂದು ಮಾರ್ಕ್ಸ್‌ವಾದಿಗಳಾಗಿ ನಾನು ಮತ್ತು ನೀವು ಪ್ರಶ್ನೆ ಹಾಕಿಕೊಳ್ಳಬೇಕಿದೆ’ ಎಂದರು.

ನನ್ನ ಈ ಸಹೋದ್ಯೋಗಿ, ಭಾರತೀಯ  ಕಮ್ಯುನಿಸ್ಟ್‌ ಪಕ್ಷದ (ಮಾರ್ಕ್ಸ್‌ವಾದಿ) ಸದಸ್ಯ­ರೆಂಬುದು  ಎಲ್ಲರಿಗೂ ತಿಳಿದಿತ್ತು. ಆದಾಗ್ಯೂ, ನಾನು ಸಹ ಆ ಪಕ್ಷಕ್ಕೆ ಸೇರಿದವನು ಎಂದು ಅವರು ತೀರ್ಮಾನಿಸಿದ್ದು ನನ್ನಲ್ಲಿ ಅಚ್ಚರಿ ಹುಟ್ಟಿ­ಸಿತು. ಅದು ನಮ್ಮ ಮೊದಲ ಭೇಟಿಯಾಗಿ­ದ್ದರೂ, ಕೇಂದ್ರಕ್ಕೆ ಹೊಸದಾಗಿ ಸೇರಿರುವ ನಾನು ಅವ­ರಂತೆ ಹಾಗೂ ಅಲ್ಲಿನ ಬಹುತೇಕ ವಿದ್ವಾಂಸ­ರಂತೆ ಮಾರ್ಕ್ಸ್‌ವಾದಿಯಾಗಿರಬೇಕು ಎಂಬ ತೀರ್ಮಾನಕ್ಕೆ ಅವರು ಬಂದಿದ್ದರು.

80ರ ದಶಕದಲ್ಲಿ ಭಾರತದ ಶ್ರೇಷ್ಠ ಇತಿಹಾಸ ಅಧ್ಯಯನ ಸಂಸ್ಥೆಗಳಲ್ಲಿ ಮಾರ್ಕ್ಸ್‌ವಾದಿಗಳೇ  ಮೇಲುಗೈ ಸಾಧಿಸಿದ್ದರು. ಇದಕ್ಕೆ ಮೂರು ಕಾರಣ ಗಳಿವೆ. ಒಂದು ಬೌದ್ಧಿಕವಾದದ್ದು. ಮಾರ್ಕ್ಸ್‌­ವಾದಿಗಳು ರಾಜರು, ಸಾಮ್ರಾಜ್ಯಗಳು ಹಾಗೂ ಯುದ್ಧಗಳ ಬಗ್ಗೆ ಒತ್ತು ನೀಡಿದ್ದ ಇತಿ­ಹಾಸ­ವನ್ನು  ಬಿಟ್ಟು, ಕೃಷಿಕರು ಹಾಗೂ ಕೂಲಿ ಕಾರ್ಮಿಕರ ಬಗ್ಗೆಯೂ ಆಳ ಅಧ್ಯಯನ ನಡೆಸಿ­ದರು. ಭಾರತದಲ್ಲಿ ಇತಿಹಾಸ ಬರವಣಿಗೆ ಬ್ರಿಟನ್‌ ಮಾದರಿಯಿಂದ ಪ್ರೇರೇಪಿತವಾಗಿತ್ತು. ಇ.ಪಿ. ಥಾಮ್ಸನ್‌ ಹಾಗೂ ಎರಿಕ್‌ ಹಾಬ್ಸ್‌­ಬಾಮ್‌ ಅವರಂತಹ ಕಟ್ಟಾ ಮಾರ್ಕ್ಸ್‌ವಾದಿ­ಗಳು ರೂಪಿಸಿದ್ದ ‘ಕೆಳಗಿನಿಂದ ಇತಿಹಾಸ’ ಬರೆ­ಯುವ ಮಾದರಿಯನ್ನು ಭಾರತದ ಇತಿಹಾಸಕಾ­ರರು ಅನುಸರಿಸಿದರು.

ಮಾರ್ಕ್ಸ್‌ವಾದಿಗಳು ಮುನ್ನೆಲೆಗೆ ಬರುವಲ್ಲಿ ಸೈದ್ಧಾಂತಿಕ ಹಿನ್ನೆಲೆಯೂ ಇತ್ತು. 60 ಮತ್ತು 70ರ ದಶಕದಲ್ಲಿ ಏಷ್ಯಾ ಮತ್ತು ಆಫ್ರಿಕಾದಲ್ಲಿ ವಸಾ­ಹತುಶಾಹಿಗಳ ವಿರುದ್ಧ ನಡೆದ ಹೋರಾ­ಟದ ನೇತೃತ್ವವನ್ನು ಮಾರ್ಕ್ಸ್‌ವಾದಿಗಳು ವಹಿಸಿ­ದ್ದರು. ಹೊ ಚಿ ಮಿನ್‌ ಹಾಗೂ ಸಮೋರಾ ಮ್ಯಾಚೆಲ್‌ ಅವರಂತಹ ವ್ಯಕ್ತಿಗಳು ಭಾರತದಲ್ಲಿ ಆದರ್ಶ­ವಾಗಿದ್ದರು (ಇತರ ತೃತೀಯ ಜಗತ್ತಿನ ದೇಶಗಳಲ್ಲಿ ಇದ್ದಂತೆ).

ತಮ್ಮ ದೇಶಗಳ ಸ್ವಾತಂತ್ರ್ಯ­ಕ್ಕಾಗಿ ಹೋರಾಡುತ್ತಿದ್ದವರನ್ನು ಸೋವಿ­ಯತ್‌ ರಷ್ಯಾ ಹಾಗೂ ಕಮ್ಯುನಿಸ್ಟ್‌ ಚೀನಾ ಬೆಂಬಲಿ­ಸುತ್ತಿದ್ದವು. ಅಮೆರಿಕ ಹಾಗೂ ಇತರ ಬಂಡ­ವಾಳ­ಶಾಹಿ ದೇಶಗಳು ಅವರನ್ನು ವಿರೋಧಿ­ಸು­ತ್ತಿದ್ದವು. ಶೀತಲ ಯುದ್ಧದ ದಿನಗಳಲ್ಲಿ ಮಾರ್ಕ್ಸ್‌­ವಾದಿ ಎಂದು ಗುರುತಿಸಿಕೊಳ್ಳುವುದು ಬಡ ಹಾಗೂ ದಮನಿತ ಜನರ ಪರವಾಗಿದ್ದೇನೆ ಎಂದು ಹೇಳಿಕೊಂಡಂತೆ ಆಗಿತ್ತು.

ಭಾರತದಲ್ಲಿ ಅಷ್ಟೊಂದು ಸಂಖ್ಯೆಯಲ್ಲಿ ಮಾರ್ಕ್ಸ್‌­ವಾದಿ ಇತಿಹಾಸಕಾರರು ಇರಲು ಕಾರಣ ಅವರಿಗೆ ಸರ್ಕಾರದ ಬೆಂಬಲವೂ ಇತ್ತು. 1969ರಲ್ಲಿ ಕಾಂಗ್ರೆಸ್‌ ಪಕ್ಷ ಹೋಳಾಗಿ, ಲೋಕ­ಸಭೆ­ಯಲ್ಲಿ ಅಲ್ಪಸಂಖ್ಯಾತವಾದಾಗ, ಅಧಿಕಾರದ­ಲ್ಲಿ ಮುಂದುವರಿಯಲು ಆಗಿನ ಪ್ರಧಾನಿ ಇಂದಿರಾ ಗಾಂಧಿ, ಕಮ್ಯುನಿಸ್ಟ್‌ ಪಕ್ಷದ ಬೆಂಬಲ ಪಡೆದರು. ಅದೇ ಸಮಯದಲ್ಲಿ ಹಲವು ಮಾಜಿ ಕಮ್ಯುನಿಸ್ಟರು ಕಾಂಗ್ರೆಸ್‌ ಪಕ್ಷ ಸೇರಿಕೊಂಡು ಸಚಿವ ಸ್ಥಾನ ಪಡೆದರು.

ಆಡಳಿತಾರೂಢ ಕಾಂಗ್ರೆಸ್‌ ಪಕ್ಷ, ಆರ್ಥಿಕ ನೀತಿಯ ವಿಚಾರ ಬಂದಾಗ ಎಡದತ್ತ ವಾಲತೊಡಗಿತು. ಬ್ಯಾಂಕ್‌­ಗಳು, ಗಣಿ ಮತ್ತು ತೈಲ ಕಂಪೆನಿಗಳ ರಾಷ್ಟ್ರೀಕ­ರಣ ಇತ್ಯಾದಿ. ಸೋವಿಯತ್‌ ಒಕ್ಕೂಟದ  ಜತೆಗೆ ‘ಸೌಹಾರ್ದ ಒಪ್ಪಂದ’ ಮಾಡಿಕೊಂಡಂತೆ  ವಿದೇ­ಶಾಂಗ ನೀತಿಯಲ್ಲೂ ಈ ಪ್ರಭಾವ ಕಾಣಿಸಿ­ಕೊಂಡಿತು.

1969ರಲ್ಲಿ ಕಾಂಗ್ರೆಸ್‌ ಹಾಗೂ ಇಂದಿರಾ ಗಾಂಧಿ ಎಡದತ್ತ ವಾಲುವ ಮೊದಲು ಭಾರತ ಸರ್ಕಾರ ‘ಭಾರತೀಯ ಸಮಾಜ ವಿಜ್ಞಾನಗಳ ಅನುಸಂಧಾನ ಪರಿಷತ್ತು’ (ಐಸಿಎಸ್‌ಎಸ್‌ಆರ್‌) ಸ್ಥಾಪಿ­ಸಿತ್ತು. ದೇಶದಲ್ಲಿ ಆಗುತ್ತಿರುವ ಗಮ­ನಾರ್ಹ ಸಾಮಾಜಿಕ ಹಾಗೂ ಆರ್ಥಿಕ ಪಲ್ಲಟಗ­ಳನ್ನು ದಾಖಲಿಸುವ ಅಧ್ಯಯನಗಳನ್ನು ಉತ್ತೇಜಿ­ಸುವ ಉದ್ದೇಶ ಇದಕ್ಕಿತ್ತು. ಈ ಪರಿಷತ್ತು ದೇಶದ ಕೆಲ ಅತ್ಯುತ್ತಮ ಸಂಸ್ಥೆಗಳಿಗೆ ಅನುದಾನ ನೀಡಿತು. ದೆಹಲಿಯ ಆರ್ಥಿಕ ಅಭಿವೃದ್ಧಿ ಸಂಸ್ಥೆ, ಪುಣೆಯ ಗೋಖಲೆ ರಾಜಕೀಯ ಹಾಗೂ ಆರ್ಥಿಕ  ಸಂಸ್ಥೆ ಮತ್ತು ತಿರುವನಂತಪುರದ ಅಭಿವೃದ್ಧಿ ಅಧ್ಯಯನ ಕೇಂದ್ರ ಅವುಗಳಲ್ಲಿ ಕೆಲವು.

ಇತಿಹಾಸ, ಸಮಾಜ ವಿಜ್ಞಾನವೂ ಹೌದು. ಸಾಹಿತ್ಯದ ಶಾಖೆಯೂ ಹೌದು. ಸೈದ್ಧಾಂತಿಕ­ವಾಗಿ ಇತಿಹಾಸ ಸಂಶೋಧನೆ ಐಸಿಎಸ್‌­ಎಸ್‌ಆರ್‌ ವ್ಯಾಪ್ತಿಗೇ ಬರಬೇಕಿತ್ತು. ಆದರೆ 1972­ರಲ್ಲಿ ಸರ್ಕಾರ, ಭಾರತೀಯ ಇತಿಹಾಸ ಅನುಸಂಧಾನ ಪರಿಷತ್‌ (ಐಸಿಎಚ್‌ಆರ್‌) ಸ್ಥಾಪಿಸಿತು. ಆ ಸಮಯದಲ್ಲಿ ಶಿಕ್ಷಣ ಸಚಿವರಾ­ಗಿದ್ದ ನೂರುಲ್‌ ಹಸನ್‌ ಸ್ವತಃ ಇತಿಹಾಸಕಾರರಾಗಿದ್ದರು. ಐಸಿಎಚ್‌ಆರ್‌ಗೆ ಉತ್ತೇಜನ  ನೀಡಿ­ದ­ವರು ಹಾಗೂ ಅದನ್ನು ನಡೆಸಿದವರೆಲ್ಲ ಪ್ರೊ. ಹಸನ್‌ಗೆ ವೈಯಕ್ತಿಕವಾಗಿ ಆಪ್ತರಾಗಿದ್ದರು. ಸೈದ್ಧಾಂತಿ­ಕವಾಗಿ ಅವರೆಲ್ಲ ಮಾರ್ಕ್ಸ್‌ವಾದಿಗಳಾ­ಗಿ­ದ್ದರು ಇಲ್ಲವೇ ಸಹಪಥಿಕರಾಗಿದ್ದರು.

ಐಸಿಎಸ್‌ಎಸ್‌ಆರ್‌ ಸ್ಥಾಪನೆಗೆ ಕಾರಣರಾದ ಡಿ.ಆರ್‌.ಗಾಡ್ಗೀಳ್‌ ಅರ್ಥಶಾಸ್ತ್ರಜ್ಞರಾಗಿದ್ದರು. ಜೆ.ಪಿ. ನಾಯ್ಕ್‌ ಶಿಕ್ಷಣ ತಜ್ಞರಾಗಿದ್ದರು. ಇವರಿ­ಬ್ಬರೂ ಅದ್ಭುತ ವಿದ್ವಾಂಸರು. ಆದರೆ, ಯಾರೊ­ಬ್ಬರೂ ಮಾರ್ಕ್ಸ್‌ವಾದಿಯಾಗಿರಲಿಲ್ಲ. ನೈಜ ಸುಧಾ­ರಣಾವಾದಿಗಳಾಗಿದ್ದ ಈ ಇಬ್ಬರೂ ಸಿದ್ಧಾಂತ, ವೈಯಕ್ತಿಕ ಸಂಪರ್ಕ ಎಲ್ಲವನ್ನೂ ಬದಿ­ಗಿಟ್ಟು ಉನ್ನತ ಗುಣಮಟ್ಟದ ಸಂಶೋಧನೆಗೆ ಒತ್ತು ನೀಡಿದ್ದರು.
ಆದರೆ, ಐಸಿಎಚ್‌ಆರ್‌ ವಿಚಾರದಲ್ಲಿ ಹಾಗಾ­ಗ­ಲಿಲ್ಲ. ಆರಂಭದಿಂದಲೂ ಅದು ಮಾರ್ಕ್ಸ್‌­ವಾದಿ ಇತಿಹಾಸಕಾರರ ಹಿಡಿತದಲ್ಲಿ ಇತ್ತು. ಸಂಶೋಧನೆ, ಪ್ರವಾಸ ಹಾಗೂ ಅನುವಾದದ ವಿಚಾರದಲ್ಲಿ ಈ ಮಾರ್ಕ್ಸ್‌ವಾದಿಗಳು ತಾವು ಹಾಗೂ ತಮ್ಮ ಸ್ನೇಹಿತರಿಗೆ ಆದ್ಯತೆ ನೀಡಿದರು.

80ರ ದಶಕದಲ್ಲಿ ಐಸಿಎಚ್‌ಆರ್‌ನಲ್ಲಿ  ಮಾರ್ಕ್ಸ್‌­ವಾದಿಗಳ ಪ್ರಭಾವ ದುರ್ಬಲ ಗೊಂಡಿತ್ತು. ಆದರೆ, 1991ರಲ್ಲಿ ಅರ್ಜುನ್‌ ಸಿಂಗ್‌ ಶಿಕ್ಷಣ ಸಚಿವರಾದಾಗ ಮತ್ತೆ ಮಾರ್ಕ್ಸ್‌­ವಾದಿಗಳು ಮೇಲುಗೈ ಪಡೆದರು. ‘ಜಾತ್ಯತೀತ’ ಹಾಗೂ ‘ವೈಜ್ಞಾನಿಕ’ ಇತಿಹಾಸಕ್ಕೆ ಬೆಂಬಲ ನೀಡುವ ಮೂಲಕ ರಾಮಜನ್ಮಭೂಮಿ ಅಭಿ­ಯಾನ­ವನ್ನು ತಡೆಯಬಹುದು ಎಂದು ಅವರ ಮನವೊಲಿಸಲಾಯಿತು. ಅರ್ಜುನ್‌ ಸಿಂಗ್‌ ಕರೆಗೆ ಓಗೊಟ್ಟು ಮಾರ್ಕ್ಸ್‌ವಾದಿ ಇತಿಹಾಸಕಾರರು ಮುಗಿಬಿದ್ದು ಯೋಜನೆಗಳನ್ನು ಕೈಗೆತ್ತಿಕೊಂಡರು.

1998ರಲ್ಲಿ ಭಾರತೀಯ ಜನತಾ ಪಕ್ಷ ಅಧಿ­ಕಾರಕ್ಕೆ ಬಂತು. ಹೊಸ ಶಿಕ್ಷಣ ಸಚಿವ ಮುರಳಿ ಮನೋ­ಹರ್‌ ಜೋಷಿ ಬಲಪಂಥೀಯ­ರಾಗಿ­ದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಸಮಾಜ­ವಾದಿ­ಗಳ ಪಾತ್ರವನ್ನು ಕಡೆಗಣಿಸುತ್ತಿದ್ದ, ಸರಸ್ವತಿ ನದಿಯ ಮೂಲವನ್ನು ಹುಡುಕಲು ಆಸಕ್ತಿ ಹೊಂದಿದ್ದ  ಬಲಪಂಥಿಯ ತಜ್ಞರ ಕೈಗೆ ಐಸಿ­ಎಚ್‌ಆರ್‌ ಚುಕ್ಕಾಣಿ ನೀಡಲಾಯಿತು.

ಮಾರ್ಕ್ಸ್‌ವಾದಿ ಇತಿಹಾಸಕಾರರ ಬೆನ್ನು ತಟ್ಟು­­ವಾಗ ಅರ್ಜುನ್‌ ಸಿಂಗ್‌ ಅವರು ನೂರುಲ್‌ ಹಸನ್‌ ಅವರಿಂದ ಸ್ಫೂರ್ತಿ ಪಡೆದಿ­ದ್ದರು. ಹಿಂದು­ತ್ವ­ವಾದಿ ವಿದ್ವಾಂಸರಿಗೆ ಬೆಂಬಲ ನೀಡುವಾಗ ಈಗಿನ ಮಾನವ ಸಂಪನ್ಮೂಲ ಸಚಿ­ವರು  ಎಂ.ಎಂ.­ ಜೋಷಿ ಅವರ ಹಾದಿ­ಯನ್ನು ತುಳಿ­ದಂತೆ ಕಾಣುತ್ತಿದೆ. ಭಾರತೀಯ ಇತಿಹಾಸ ಅನು­ಸಂಧಾನ ಪರಿಷತ್ತಿನ ಅಧ್ಯಕ್ಷರಾಗಿ ವೈ. ಸುದ­ರ್ಶನ ರಾವ್‌ ಅವರ ನೇಮಕ ಈ ನೆಲೆಯಲ್ಲೇ ಆಗಿದೆ.

ಪ್ರೊ. ರಾವ್‌ ಅವರ ಹೆಸರನ್ನು ನಾನು ಹಿಂದೆಂದೂ ಕೇಳಿರಲಿಲ್ಲ. ಇತರ ಇತಿಹಾಸ­ಕಾ­ರರೂ ಅವರ ಹೆಸರು ಕೇಳಿದಂತೆ ಇಲ್ಲ. ಅವರು ಆಂಧ್ರಪ್ರದೇಶದವರಾಗಿದ್ದರಿಂದ ಅಲ್ಲಿನ ಕೆಲ ಇತಿ­ಹಾಸ­ಕಾರರ ಬಳಿ ರಾವ್‌ ಬಗ್ಗೆ ಪ್ರಶ್ನಿಸಿದೆ. ಅವ­ರೆಲ್ಲ ಹೇಳಿದಂತೆ ಪ್ರೊ. ರಾವ್‌, ಯಾವುದೇ ಬೌದ್ಧಿಕ ಅಥವಾ ಶೈಕ್ಷಣಿಕ ಅಹಂಕಾರವಿಲ್ಲದ  ಸಾಮಾನ್ಯ ವಿದ್ವಾಂಸ. ಆದರೆ, ಆರ್‌ಎಸ್‌ಎಸ್‌ಗೆ ಆಪ್ತರು. ಪ್ರಖರ ಪ್ರತಿಭೆಯ ಕೊರತೆ ಹಾಗೂ ಸೈದ್ಧಾಂತಿಕ ಪೂರ್ವಗ್ರಹದ ಹೊರತಾಗಿಯೂ ಅವರೊಬ್ಬ ಎಲ್ಲರೊಂದಿಗೆ ಬೆರೆಯುವ ಸ್ನೇಹಪರ ವ್ಯಕ್ತಿ ಎಂದು ಅವರೆಲ್ಲ ಅಭಿಪ್ರಾಯಪಟ್ಟರು.

ವೈಯಕ್ತಿಕ ವರ್ಚಸ್ಸಿನ ಹೊರತಾಗಿ ಪ್ರೊ. ರಾವ್‌ ಯಾವುದೇ ಪ್ರಮುಖ ಪುಸ್ತಕ ಬರೆದಿಲ್ಲ. ವೃತ್ತಿಪರ ಜರ್ನಲ್‌ಗಳಲ್ಲಿ ಒಂದೇ ಒಂದು ವಿದ್ವತ್‌ಪೂರ್ಣ ಪ್ರಬಂಧ ಪ್ರಕಟಿಸಿಲ್ಲ. ಆದರೆ, ಜಾತಿ ವ್ಯವಸ್ಥೆಯ ಉತ್ತಮ ಅಂಶಗಳು ಹಾಗೂ ರಾಮಾಯಣ, ಮಹಾಭಾರತದ ಐತಿಹಾಸಿಕತೆ ಬಗ್ಗೆ ಅವರಿಗಿರುವ ನಂಬಿಕೆಯನ್ನು ಯಶಸ್ವಿ­ಯಾಗಿ ಜಾಹೀರು ಮಾಡಿದ್ದಾರೆ. ಐಸಿಎಚ್‌ಆರ್‌ ಅಧ್ಯಕ್ಷರಾಗಿ ಅವರನ್ನು ನೇಮಿಸಲು ಇದೂ ಒಂದು ಕಾರಣವಾಗಿರಬಹುದು.

ಒಂದು ಕಾಲದಲ್ಲಿ ಐಸಿಎಚ್‌ಆರ್‌ ನೇತೃತ್ವ ವಹಿಸಿದ್ದ ಮಾರ್ಕ್ಸ್‌ವಾದಿಗಳು ಪೂರ್ವಗ್ರಹಪೀಡಿ­ತ­­ರಾಗಿದ್ದರು. ಸ್ವಜನಪಕ್ಷಪಾತದಲ್ಲೂ ತೊಡಗಿ­ಕೊಂಡಿ­ದ್ದರು. ಆದರೆ, ಅವರೆಲ್ಲ ದಕ್ಷ ವೃತ್ತಿಪರ­ರಾ­ಗಿದ್ದರು. ಮಾನವ ಸಮಾಜಗಳು ಹೇಗೆ ಬದಲಾಗುತ್ತವೆ ಹಾಗೂ ವಿಕಸನಗೊಳ್ಳುತ್ತವೆ ಎಂಬು­ದನ್ನು ವಿಶ್ಲೇಷಿಸುವಲ್ಲಿ ಮಾರ್ಕ್ಸ್‌ ವಿಚಾರ­ಧಾರೆ ಸ್ಪಷ್ಟ ಚೌಕಟ್ಟು ಒದಗಿಸುತ್ತಿತ್ತು.

ಬೌದ್ಧಿಕ ಅನ್ವೇಷಣೆಯ ನಿಟ್ಟಿನಿಂದ ಅವ­ಲೋಕಿ­ಸಿ­ದಾಗ ಮಾರ್ಕ್ಸ್‌ವಾದಿ ದೃಷ್ಟಿಕೋನದ ಇತಿಹಾಸ ಅಧ್ಯಯನ ಸಂಶೋಧನೆಗೆ ಸರಿಯಾದ ಮಾದರಿ ಒದಗಿಸುತ್ತದೆ. ಆದರೆ, ಈ ಮಾದರಿ ಎಲ್ಲದಕ್ಕೂ ಲೌಕಿಕ ವಿವರಣೆಯನ್ನು ಬಯಸುವು­ದ­ರಿಂದ  ಸಂಸ್ಕೃತಿಗಳು, ಪರಿಕಲ್ಪನೆಗಳು, ಮಾನ­ವನ ಮೇಲೆ ನಿಸರ್ಗದ ಪ್ರಭಾವ, ನಿಸರ್ಗ ಸಹಜ ಪ್ರಕ್ರಿಯೆ­ಗಳು, ಅಧಿಕಾರದ ಚಲಾವಣೆ ಇತ್ಯಾದಿ­ಗಳನ್ನು ವಿಶ್ಲೇಷಣೆಗೆ ಒಳಪಡಿಸುವಾಗ ಸೀಮಿತ ಬಳಕೆ ಹೊಂದಿರುವಂತೆ ತೋರುತ್ತದೆ.

ಆಧುನಿಕ ಬೌದ್ಧಿಕ ಸಂಸ್ಕೃತಿ, ಬಲಪಂಥೀಯ ಇತಿಹಾಸಕಾರರಿಗೂ ಜಾಗ ಕಲ್ಪಿಸಬೇಕಾಗುತ್ತದೆ. ಅಮೆರಿಕದಲ್ಲಿ ಸಂಪ್ರದಾಯವಾದಿ ಇತಿಹಾಸ­ಕಾ­ರ­­­ರಾದ ನಿಯಾಲ್‌ ಫರ್ಗ್ಯುಸನ್‌ ತರಹದವರು ಪ್ರಭಾವಿಯಾಗಿದ್ದಾರೆ ಹಾಗೂ ಅವರನ್ನು ವಿಶ್ವಾ­ಸಾರ್ಹ ಎಂದು ಪರಿಗಣಿಸಲಾಗುತ್ತದೆ. ಕುಟುಂಬ ಹಾಗೂ ಸಮುದಾಯ ಹೇಗೆ ಎಲ್ಲ­ವನ್ನೂ ಸಮ­ತೋಲನದಲ್ಲಿ ಇಡುತ್ತದೆ ಎಂಬು­ದರ ಬಗ್ಗೆ ಅವರು ಅಧ್ಯಯನ ಮಾಡಿದ್ದಾರೆ.

ತಂತ್ರಜ್ಞಾನದ ಮುನ್ನಡೆ ಹಾಗೂ ವೈಯಕ್ತಿಕ ಹಕ್ಕುಗಳ ಕುರಿತು ಇರುವ ಗೌರವ, ಸಂಸ್ಕೃತಿಯಿಂದ ಸಂಸ್ಕೃತಿಗೆ ಭಿನ್ನವಾಗುತ್ತದೆ ಎಂದೂ ವಾದಿಸುತ್ತಾರೆ.  ಕಾರ್ಮಿಕರನ್ನು ಶೋಷಿಸುತ್ತಾರೆ ಎಂಬ ಕಾರ­ಣಕ್ಕೆ ಮಾರ್ಕ್ಸ್‌ವಾದಿ ಇತಿಹಾಸಕಾರರು ಬಂಡ­ವಾ­ಳ­ಶಾಹಿಗಳನ್ನು ಟೀಕಿಸುತ್ತಾರೆ. ಅದೇ ಬಲ­ಪಂಥೀಯ ಇತಿಹಾಸಕಾರರು ಅವರು ಉದ್ಯೋ­ಗಾ­ವಕಾಶ ಸೃಷ್ಟಿಸುತ್ತ, ಸಂಪತ್ತು ವೃದ್ಧಿಸುತ್ತಾರೆ ಎಂದು ಹೊಗಳುತ್ತಾರೆ.

ನಿಯಾಲ್ ತರಹದ ಇತಿಹಾಸಕಾ ರರು ಭಾರತ­ದಲ್ಲಿ ಏಕಿಲ್ಲ? ಏಕೆಂದರೆ ಇಲ್ಲಿನ ಬಲ­ಪಂಥೀ­ಯರು ಸಂಶೋಧನೆ ಹಾಗೂ ವಿಶ್ಲೇಷಣೆಗೆ ಬದಲಾಗಿ ಪುರಾಣ ಹಾಗೂ ಹಳೆಯ ನಂಬಿಕೆ­ಗಳಿಗೆ ಜೋತುಬೀಳುವ  ಹಿಂದುತ್ವಕ್ಕೆ ಅಂಟಿಕೊಂ­ಡಿ­ದ್ದಾರೆ. ಯಾವ ಗಂಭೀರ ಇತಿಹಾಸಕಾರನೂ, ‘ರಾಮನೊಬ್ಬ ನೈಜ ವ್ಯಕ್ತಿ, ಹಿಂದೂಗಳು ಮಾತ್ರ ಭಾರತದ ಮೂಲ ನಿವಾಸಿಗಳು. ಕ್ರೈಸ್ತರು ಹಾಗೂ ಮುಸ್ಲಿಮರು ವಿದೇಶಿಯರು, ಬ್ರಿಟಿಷರು ಭಾರತಕ್ಕೆ ಮಾಡಿದ್ದೆಲ್ಲ ಕೆಟ್ಟದ್ದು’ ಎಂಬ ಅಭಿ­ಪ್ರಾಯಕ್ಕೆ  ಬರಲು ಸಾಧ್ಯವಿಲ್ಲ.

ಮಾಧ್ಯಮಗಳಲ್ಲಿ ಬಿಂಬಿತವಾಗಿರುವುದಕ್ಕೆ ವ್ಯತಿರಿಕ್ತವಾಗಿ ಭಾರತದಲ್ಲಿ ಕೆಲ ಶ್ರೇಷ್ಠ ಇತಿಹಾಸ­ಕಾರ ರಿದ್ದಾರೆ. ನನ್ನದೇ ತಲೆಮಾರಿನ ಕೆಲ ಇತಿ­ಹಾಸ­ಕಾರರನ್ನು ಓದುವಂತೆ ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಓದುಗರಿಗೆ ಶಿಫಾರಸು ಮಾಡ­ಬಹುದು– ಪ್ರಾಚೀನ ಇತಿಹಾಸದ ವಿಚಾರಕ್ಕೆ ಬಂದಾಗ ಉಪಿಂದರ್‌ ಸಿಂಗ್‌, ಪುರಾ­ತತ್ವ­ಶಾಸ್ತ್ರದ ವಿಚಾರಕ್ಕೆ ಬಂದಾಗ  ನಯನ್‌­ಜೋತ್‌ ಲಾಹಿರಿ, ಭಕ್ತಿ ಚಳವಳಿಯ ಬಗ್ಗೆ ವಿಜಯಾ ರಾಮಸ್ವಾಮಿ, ಐರೋಪ್ಯ ಸಾಮ್ರಾಜ್ಯ ವಿಸ್ತರಣೆಯ ಆರಂಭಿಕ ಇತಿಹಾಸದ ಬಗ್ಗೆ ಸಂಜಯ್‌ ಸುಬ್ರಹ್ಮಣ್ಯಂ,  ಮೊಗಲ್‌ ಸಾಮ್ರಾ­ಜ್ಯದ ಪತನದ ಬಗ್ಗೆ ಚೇತನ್‌ ಸಿಂಗ್‌, ಪಶ್ಚಿಮ­ಭಾರತದ ಸಾಮಾಜಿಕ ಇತಿಹಾಸದ ವಿಚಾರಕ್ಕೆ ಬಂದಾಗ ಸುಮಿತ್‌ ಗುಹ, ವೈದ್ಯಶಾಸ್ತ್ರದ ಸಾಮಾ­ಜಿಕ ಇತಿಹಾಸದ ಕುರಿತು ಸೀಮಾ ಆಳ್ವಿ, ಪೌರ­ತ್ವದ ಇತಿಹಾಸದ ಬಗ್ಗೆ ನೀರಜಾ ಗೋಪಾಲ್‌ ಜಯಲ್‌, ವಸಾಹತುಶಾಹಿಯ ಆರ್ಥಿಕ ಪರಿಣಾಮಗಳ ವಿಚಾರ ಬಂದಾಗ ತೀರ್ಥಂ­ಕರ ರಾಯ್‌, ಅರಣ್ಯ ಹಾಗೂ ವನ್ಯ­ಜೀವಿ­ಗಳ ಇತಿಹಾಸದ ಕುರಿತು ಮಹೇಶ್‌ ರಂಗ­ರಾಜನ್‌ ಮತ್ತು ದಕ್ಷಿಣ ಭಾರತದ ಸಾಂಸ್ಕೃತಿಕ ಇತಿ­ಹಾಸದ ಕುರಿತು ಎ. ಆರ್‌. ವೆಂಕಟಾಚಲಪತಿ.

ಮೇಲಿನ ಪ್ಯಾರಾದಲ್ಲಿ ಹೆಸರಿಸಿದ ವಿದ್ವಾಂಸ­ರೆಲ್ಲ ವಿಭಿನ್ನ ವಿಚಾರಗಳ ಕುರಿತು, ಕಾಲಘಟ್ಟಗಳ ಕುರಿತು ವೈವಿಧ್ಯಮಯ ಶೈಲಿಯಲ್ಲಿ ಅದ್ಭುತ­ವಾದ ಪುಸ್ತಕಗಳನ್ನು ಬರೆದಿದ್ದಾರೆ. ಅವರೆಲ್ಲ ಕಾರ್ಲ್‌ ಮಾರ್ಕ್ಸ್‌ನನ್ನು ಓದಿಕೊಂಡಿದ್ದಾರೆ ಹಾಗೂ ಆತನ ವಿಚಾರಗಳನ್ನು ಅರಗಿಸಿ­ಕೊಂಡಿ­ದ್ದಾರೆ. ಅದೇ ಸಮಯದಲ್ಲಿ ಆತನ ದೃಷ್ಟಿಕೋನ­ವನ್ನಷ್ಟೇ ಅವರು ನೆಚ್ಚಿಕೊಂಡಿಲ್ಲ. ಮಾನವರ ಬದುಕು ಹಾಗೂ ಸಾಮಾಜಿಕ ನಡವಳಿಕೆಯನ್ನು ಪುನರ್‌­ರಚಿಸುವ ಸಂದರ್ಭಗಳಲ್ಲಿ ಈ ಇತಿಹಾಸ­ಕಾ­ರರು ಇತರ ಬುದ್ಧಿಜೀವಿಗಳು, ಅನ್ಯ ಮಾದರಿ­ಗಳಿಂ­ದಲೂ ಸ್ಫೂರ್ತಿ ಪಡೆದಿದ್ದಾರೆ.

ಮಾನವಶಾಸ್ತ್ರ, ರಾಜಕೀಯ ಸಿದ್ಧಾಂತ ಮತ್ತು ಭಾಷಾಶಾಸ್ತ್ರದಂತಹ ವಿಷಯಗಳ ಬಗ್ಗೆ ಬರೆಯು ವಾಗ ಈ ವಿದ್ವಾಂಸರು, ವಿದೇಶಿ ಇತಿ­ಹಾಸ­ಕಾ­ರರ ಮಾದರಿಯಲ್ಲಿಯೇ  ಪ್ರಾಥ­ಮಿಕ ಸಂಶೋಧ ನೆಯ ಅಂಶಗಳು ಹಾಗೂ ವಿಶ್ಲೇಷಣಾ­ತ್ಮಕ ಒಳನೋಟಗಳನ್ನು ಕೊಡುತ್ತಾರೆ. ಇಲ್ಲಿ ಅವರ ವೈಯಕ್ತಿಕ ಅಥವಾ ರಾಜಕೀಯ ಸಿದ್ಧಾಂತ ಗೌಣವಾಗುತ್ತದೆ. ಅವರು ಮಂದಿಡುವವಾದ­ಕ್ಕಿಂತ ಹೆಚ್ಚಾಗಿ ಸಂಶೋಧನೆಯ ಆಳ ಅವರ ಕೆಲಸದ ಮಹತ್ವವನ್ನು ಸಾರುತ್ತದೆ.


ಐಸಿಎಚ್‌ಆರ್‌ ಸ್ಥಾಪನೆಯಾಗಿ 40 ವರ್ಷ­ಗಳೇ ಉರುಳಿವೆ. ಇತಿಹಾಸಕಾರರ ವೃತ್ತಿಯೂ ಈಗ ಬದಲಾಗಿದೆ. ಒಂದು ಕಾಲದಲ್ಲಿ ಜನರನ್ನು ಸೆಳೆಯುತ್ತಿದ್ದ ಮಾರ್ಕ್ಸ್‌ವಾದ ಇತಿಹಾಸ ಅಧ್ಯ­ಯನದಲ್ಲಿ ಜಾಗ ಗಿಟ್ಟಿಸಲು ಪರ­ದಾಡುತ್ತಿದೆ. ಮಾನವ ಸಂಪನ್ಮೂಲ ಸಚಿವರಿಗೆ  ಐಸಿ­ಎಚ್‌ಆರ್‌ ನೇತೃತ್ವ ವಹಿಸಲು ವೃತ್ತಿಪರ, ನಿಷ್ಪಕ್ಷಪಾತ ಮತ್ತು ಮಾರ್ಕ್ಸ್‌­ವಾದಿ­ಯಲ್ಲದ ವಿದ್ವಾಂಸರು ಬೇಕಿದ್ದಲ್ಲಿ ಸಾಕಷ್ಟು ಆಯ್ಕೆ­ಗಳು ಇದ್ದವು. ಆದರೆ, ಸಚಿವೆಗೆ ದಕ್ಷ ಅಥವಾ ಗೌರವಾನ್ವಿತ ಇತಿಹಾಸಕಾರರ ಬದಲಿಗೆ  ನಿರ್ದಿಷ್ಟ ಸಿದ್ಧಾಂತಕ್ಕೆ ಬದ್ಧರಾದ ವ್ಯಕ್ತಿ­ಯೊಬ್ಬರು ಬೇಕಾಗಿದ್ದರು ಅನ್ನಿಸುತ್ತದೆ ಮತ್ತು ಅವರಿಗೆ ಅಂತಹ ವ್ಯಕ್ತಿ ಸಿಕ್ಕಿದ್ದಾರೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.