ADVERTISEMENT

ಸುಂದರ ಗೆಲುವಿನ ಮೆಲುಕು

ರಾಮಚಂದ್ರ ಗುಹಾ
Published 3 ಏಪ್ರಿಲ್ 2014, 19:30 IST
Last Updated 3 ಏಪ್ರಿಲ್ 2014, 19:30 IST
ಜೈಪುರದಲ್ಲಿ ನಡೆದ 1973–74ರ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್‌ನ ಫೈನಲ್‌ನಲ್ಲಿ ರಾಜಸ್ತಾನದ ವಿರುದ್ಧ ಗೆದ್ದ ಕರ್ನಾಟಕ ತಂಡದ ಆಟಗಾರರು ಬೆಂಗಳೂರಿಗೆ ಬಂದ ನಂತರ 1974ರ ಏಪ್ರಿಲ್‌ 3ರಂದು ‘ಪ್ರಜಾವಾಣಿ’ ಕಚೇರಿಗೆ ಭೇಟಿ ನೀಡಿ ಸಂಭ್ರಮವನ್ನು ಹಂಚಿಕೊಂಡಿದ್ದರು 	– ಪ್ರಜಾವಾಣಿ ಆರ್ಕೈವ್‌ ಚಿತ್ರ
ಜೈಪುರದಲ್ಲಿ ನಡೆದ 1973–74ರ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್‌ನ ಫೈನಲ್‌ನಲ್ಲಿ ರಾಜಸ್ತಾನದ ವಿರುದ್ಧ ಗೆದ್ದ ಕರ್ನಾಟಕ ತಂಡದ ಆಟಗಾರರು ಬೆಂಗಳೂರಿಗೆ ಬಂದ ನಂತರ 1974ರ ಏಪ್ರಿಲ್‌ 3ರಂದು ‘ಪ್ರಜಾವಾಣಿ’ ಕಚೇರಿಗೆ ಭೇಟಿ ನೀಡಿ ಸಂಭ್ರಮವನ್ನು ಹಂಚಿಕೊಂಡಿದ್ದರು – ಪ್ರಜಾವಾಣಿ ಆರ್ಕೈವ್‌ ಚಿತ್ರ   

ಡಿ‌ಸೆಂಬರ್ ೧೯೭೩ರಲ್ಲಿ ಡೆಹ್ರಾಡೂನ್‌­‌ನಲ್ಲಿ ಹೈಸ್ಕೂಲು ಪರೀಕ್ಷೆ ಬರೆದೆ. ಅದರ ಮುಂದಿನ  ವರ್ಷ ಜುಲೈನಲ್ಲಿ ನಾನು ವಿಶ್ವ­ವಿದ್ಯಾ­ಲಯ ಸೇರಬೇಕಿತ್ತು. ನಡುವಿನ ಅವಧಿ­ಯಲ್ಲಿ ಉಪಯೋಗಕ್ಕೆ ಬರುವ, ಆಸಕ್ತಿಕರವಾದ ಏನ­ನ್ನಾ­ದರೂ ಮಾಡಬೇಕೆಂಬುದು ನನ್ನ ಉದ್ದೇಶ. ಎದು­ರಲ್ಲಿ ಎರಡು ಆಯ್ಕೆಗಳಿದ್ದವು. ಒಂದು– ಗ್ವಾಲಿಯರ್‌ನ ಸಿಂಧಿಯಾ ಶಾಲೆ­ಯಲ್ಲಿ ಪಾಠ ಮಾಡುವುದು. ಇನ್ನೊಂದು – ಬೆಂಗಳೂರಿನ ಫ್ರೆಂಡ್ಸ್ ಯೂನಿಯನ್ ಕ್ರಿಕೆಟ್ ಕ್ಲಬ್‌ನಲ್ಲಿ  ಆ ಆರು ತಿಂಗಳು ಅಭ್ಯಾಸ ಮಾಡುತ್ತಾ ಕಳೆಯುವುದು.

ಒಂದು ವೇಳೆ ನನಗೆ ವ್ಯಾವಹಾರಿಕ ಮನಸ್ಥಿತಿ ಇದ್ದು, ಅಪ್ಪ–ಅಮ್ಮ ಸಂಪ್ರದಾಯಸ್ಥರಂತೆ ಯೋಚಿ­ಸಿ­­­­­­­ದ್ದಿದ್ದರೆ ಗ್ವಾಲಿಯರ್‌ನಲ್ಲಿ ಬೋಧನೆ ಮಾಡುವ ದಾರಿಯನ್ನೇ ಆರಿಸಿಕೊಳ್ಳುತ್ತಿದ್ದೆ. ಆದರೆ ನನಗೆ ಕ್ರಿಕೆಟ್ ಹುಚ್ಚು. ಅಪ್ಪ–ಅಮ್ಮನೂ ನನ್ನ ಆ ಬಯಕೆ ಈಡೇರಿಸಿದರು. ದೆಹಲಿಗೆ ಬಸ್ ಹತ್ತಿದೆ. ಅಲ್ಲಿಂದ ಗ್ರ್ಯಾಂಡ್ ಎಕ್ಸ್‌ಪ್ರೆಸ್ ರೈಲು ಹತ್ತಿ ಮದ್ರಾಸ್ ತಲುಪಿದೆ. ಆಮೇಲೆ ಬೆಂಗಳೂ­ರಿಗೆ ಬೃಂದಾವನ್ ಎಕ್ಸ್‌ಪ್ರೆಸ್‌ನಲ್ಲಿ ಪಯಣ. ‘ಅಂಕಲ್’ ಮನೆಯಲ್ಲಿ ನನ್ನ ಠಿಕಾಣಿ. ಈಗಾಗಲೇ ನಾನು ತಿಳಿಸಿದ ಫ್ರೆಂಡ್ಸ್ ಯೂನಿಯನ್ ಕ್ರಿಕೆಟ್ ಕ್ಲಬ್‌ನಲ್ಲಿ (ಎಫ್‌ಯುಸಿಸಿ) ಅವರು ನಾಯಕ­ರಾಗಿದ್ದರು.

ಆ ದಿನಗಳಲ್ಲಿ ಪ್ರತಿದಿನ ಮಧ್ಯಾಹ್ನ ಎರಡ­ರಿಂದ ನಾಲ್ಕು ಗಂಟೆಯವರೆಗೆ ಎಫ್‌ಯು­ಸಿಸಿಗೆ ಹೋಗಿ ಅಭ್ಯಾಸ ಮಾಡುತ್ತಿದ್ದೆ. ಒಬ್ಬರಾದ ಮೇಲೆ ಒಬ್ಬರಂತೆ ಮೊದಲ ದರ್ಜೆ ಬ್ಯಾಟ್ಸ್‌­ಮನ್‌­­­ಗಳು ಅಭ್ಯಾಸಕ್ಕೆ ಬಂದಾಗ, ನಾನು ಫೀಲ್ಡಿಂಗ್ ಮಾಡುತ್ತಿದ್ದೆ. ಕೊನೆಯ ಒಂದು ಗಂಟೆ­­­ಯಲ್ಲಿ ಅಷ್ಟೇನೂ ಪ್ರಬಲರಲ್ಲದ ಬ್ಯಾಟ್ಸ್‌­ಮನ್‌­ಗಳು ಆಡಲು ಬಂದಾಗ ಅವರಿಗೆ ಆಫ್‌­ಸ್ಪಿನ್ ಬೌಲಿಂಗ್ ಮಾಡುತ್ತಿದ್ದೆ.

ಎಫ್‌ಯುಸಿಸಿಯಲ್ಲಿ ಅಭ್ಯಾಸ ಮಾಡಿದ್ದು ನನ್ನ ಕ್ರಿಕೆಟ್ ಕೌಶಲವನ್ನು ಸ್ವಲ್ಪಮಟ್ಟಿಗೆ ಹೆಚ್ಚಿ­ಸಿತು. ಆ ತಿಂಗಳುಗಳಲ್ಲಿ ನನಗೆ ಅನಿರೀಕ್ಷಿತ­ವಾದ ಇನ್ನೊಂದು ಲಾಭವಾಯಿತು. ದೇಶದ ಪ್ರತಿಷ್ಠಿತ ರಣಜಿ ಟೂರ್ನಿಯಲ್ಲಿ ಪ್ರಬಲ ತಂಡ­ಗಳ ಕ್ರಿಕೆಟ್ ಪಂದ್ಯ­ಗಳನ್ನು ನೋಡುವ ಅವಕಾಶ ನನ್ನ­ದಾ­ಯಿತು. ನಾನು ಡೆಹ್ರಾಡೂನ್‌­ನಿಂದ ಬೆಂಗ­ಳೂ­ರಿಗೆ ಹೋಗಲು ನಿರ್ಧರಿಸಿದಾಗ, ದಕ್ಷಿಣ ವಲಯ­ದಲ್ಲಿ ಕರ್ನಾಟಕ ತಂಡವು ಲೀಗ್ ಪಂದ್ಯ­ಗಳನ್ನು ಆಡುತ್ತಿತ್ತು. ಬೆಂಗಳೂರು ತಲು­ಪುವ ಹೊತ್ತಿ­ಗಾ­ಗಲೇ ಕರ್ನಾಟಕ ನಾಕೌಟ್ ಹಂತ ಪ್ರವೇಶಿಸಿತ್ತು. ೧೯೭೪ರ ಮಾರ್ಚ್‌ನಲ್ಲಿ ನಾನು ನೋಡಿದ ಆ ಪಂದ್ಯಗಳ ನೆನಪುಗಳು ನಲವತ್ತು ವರ್ಷ­ಗಳ ನಂತರವೂ ಮನದಲ್ಲಿ ಹಾಗೆಯೇ ಉಳಿದಿವೆ. ನಾನು ನೋಡಿದ ಅತಿ ಸ್ಮರಣೀಯ ಪಂದ್ಯ­ಗಳು ಅವು. ಕರ್ನಾಟಕವು ದೆಹಲಿ ವಿರುದ್ಧ ಆಡಿದ ರಣಜಿ ಕ್ವಾರ್ಟರ್‌­ಫೈನಲ್ ಹಾಗೂ ಬಾಂಬೆ ಎದುರು ಆಡಿದ ರಣಜಿ ಸೆಮಿಫೈನಲ್ ಪಂದ್ಯ­ಗಳಂತೂ ಅದ್ಭುತ­ವಾಗಿದ್ದವು.

ಆ ಎರಡೂ ಪಂದ್ಯಗಳು ನಡೆದದ್ದು, ಆಗಿನ್ನೂ ಅರ್ಧ ಮಾತ್ರ ನಿರ್ಮಾಣವಾಗಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಕ್ರೀಡಾಂ­ಗಣ­­­­­ದಲ್ಲಿ. ಎರ್ರಪಲ್ಲಿ ಪ್ರಸನ್ನ ಹಾಗೂ ಚಂದ್ರ­ಶೇಖರ್ ತರಹದ ನಿಧಾನಗತಿಯ,     ಘಟಾ­ನು­­­ಘಟಿ ಸ್ಪಿನ್ ಬೌಲರ್‌ಗಳು ಇದ್ದಿದ್ದರಿಂದ ದೆಹಲಿ­ಯನ್ನು ಕರ್ನಾಟಕ ಸುಲಭವಾಗಿ ಸೋಲಿ­ಸಿತು. ದೆಹಲಿ ತಂಡದಲ್ಲಿ ಇದ್ದ ಪ್ರತಿಭಾವಂತ ಸ್ಪಿನ್ನರ್ ಆ ತಂಡದ ನಾಯಕ ಬಿಷನ್ ಸಿಂಗ್ ಬೇಡಿ ಒಬ್ಬರೇ. ಬಾಂಬೆ ವಿರುದ್ಧ ಗೆಲ್ಲಲು ಕಾರಣ­ಗಳು ಬೇರೆಯೇ ಇದ್ದವು.

೧೯೭೪ಕ್ಕೂ ಮುಂಚೆ ಬಾಂಬೆ ತಂಡಕ್ಕೆ ರಣಜಿ ಟ್ರೋಫಿ ಗೆಲ್ಲುವುದು ಸಲೀಸು ಎಂಬಂತಾಗಿ­ಬಿಟ್ಟಿತ್ತು. ಅಲ್ಲಿಯವರೆಗೆ ಸತತವಾಗಿ ಹದಿನೈದು ಬಾರಿ ಅದು ರಣಜಿ ಟ್ರೋಫಿ ಗೆದ್ದಿತ್ತು. ಒಂದು ದಶಕ­ದಲ್ಲಿ ನಮ್ಮ ಕರ್ನಾಟಕ­ದವರು ನಾಲ್ಕು ಸಲ ಬಾಂಬೆ ವಿರುದ್ಧ ಆಡಿದ್ದರು. ಆಗ ಪ್ರತಿ ಪಂದ್ಯ­ದಲ್ಲೂ ಹೀನಾಯ­ವಾಗಿ ಸೋತಿದ್ದರು.

೧೯೭೪ರ ರಣಜಿ ಸೆಮಿ­ಫೈನಲ್ಸ್‌­­ನಲ್ಲಿ ನಮ್ಮ­ವರು ಮೊದಲು ಬ್ಯಾಟಿಂಗ್ ಮಾಡಿ­ದರು. ಎರಡನೇ ಎಸೆತದಲ್ಲೇ ಒಂದು ವಿಕೆಟ್ ಹೋಯಿತು. ಸ್ಟ್ಯಾಂಡ್‌­ಗಳಲ್ಲಿ ಕುಳಿತಿದ್ದ ನನಗೆ ಹಾಗೂ ನನ್ನಂಥ ೨೦ ಸಾವಿರ ಪ್ರೇಕ್ಷಕ­ರಿಗೆ ಇತಿ­ಹಾಸ ಮರು­ಕಳಿಸು­­ತ್ತಿದೆ ಎನ್ನಿಸಿತು. ಆಗ ಆಡಲು ಬಂದವರೇ ಸಾಕಷ್ಟು ಕೀರ್ತಿ ಗಳಿಸಿದ್ದ ಜಿ.ಆರ್.­ವಿಶ್ವ­­ನಾಥ್. ಅವರು ಎದುರಿಸಿದ ಮೊದಲ ಎಸೆತ ಚುರುಕಾದ ಇನ್‌ಸ್ವಿಂಗರ್ ಆಗಿತ್ತು. ಬಲಗಾಲಿನ ಪ್ಯಾಡ್‌ಗೆ ಚೆಂಡು ಬಡಿ­ದಾಗ, ಕಾಲು ಸರಿಯಾಗಿ ಮಧ್ಯದ ವಿಕೆಟ್ ಮುಂಭಾಗ­ದಲ್ಲಿ ಇತ್ತು. ಸೈದ್ಧಾಂತಿಕ­­ವಾಗಿ ಅದನ್ನು ಅಂಪೈರ್ ಔಟ್ ಎಂದು  ಪರಿಗಣಿ­ಸ­ಲಿಲ್ಲ (ಆ ಅಂಪೈರ್ ಹೆಸರೇನು ಎಂಬುದು ಈಗ ನನಗೆ ಮರೆತುಹೋಗಿದೆ). ಬಹುಶಃ ಆ ಬ್ಯಾಟ್ಸ್‌­ಮನ್‌ ಗಳಿಸಿದ್ದ ಹೆಸರೂ ಅಂಪೈರ್‌ ಔಟ್‌ ಕೊಡು­ವುದೋ ಬೇಡವೋ ಎಂಬ ಗೊಂದಲಕ್ಕೆ ಸಿಲು­ಕಲು ಕಾರಣ­ವಾಗಿರ­ಬಹುದು. ಅಂತೂ ವಿಶಿಗೆ ಬ್ಯಾಟಿಂಗ್ ಮುಂದು­ವರಿಸುವ ಅವಕಾಶ ಸಿಕ್ಕಿತು.

ನೋಡನೋಡುತ್ತಲೇ ವಿಶಿ ಆಟಕ್ಕೆ ಕುದುರಿ­ಕೊಂಡು, ೧೬೨ ರನ್ ಕಲೆಹಾಕಿದರು. ಬ್ರಿಜೇಶ್ ಪಟೇಲ್ ಕೂಡ ಶತಕ ಗಳಿಸಿದರು. ಅವರಿಬ್ಬರ ಆಟ­­­ದಿಂದಾಗಿ ಕರ್ನಾಟಕ ಮೊದಲ ಇನಿಂಗ್ಸ್‌­ನಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ೩೮೫ ರನ್ ಕಲೆಹಾಕಿತು. ಅದಕ್ಕೂ ಹಿಂದೆ ಕರ್ನಾಟಕ (ಆಗಿನ ಮೈಸೂರು), ಬಾಂಬೆ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿ ೩೦೦ಕ್ಕೂ ಹೆಚ್ಚು ರನ್ ಗಳಿಸಿದ ಪಂದ್ಯದಲ್ಲಿ ಅಜಿತ್ ವಾಡೇಕರ್ ತ್ರಿಶತಕ ದಾಖಲಿಸಿದ ನೆನಪು ನಮ್ಮೆಲ್ಲ­ರಿಗೂ ಇತ್ತು. ಈ ಬಾರಿಯೂ ಅವರು ಹಾಗೆಯೇ ಆಡುವರೇನೋ ಎಂಬ ಆತಂಕ ನಮ್ಮೆಲ್ಲರಿಗೆ. ಅವರು ಹಾಗೂ ಸ್ಪಿನ್ನರ್‌­ಗಳನ್ನು ಸೊಗಸಾಗಿ ಎದುರಿಸುವ ಅಶೋಕ್ ಮಂಕಡ್ ಮೂರನೇ ದಿನದಾಟದಲ್ಲಿ ಚೆನ್ನಾಗಿ­ಯೇ ಬ್ಯಾಟಿಂಗ್ ಮಾಡುತ್ತಿದ್ದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ ಅವರಿ­ಬ್ಬರೂ ಅದಾಗಲೇ ೧೨೭ ರನ್ ಸೇರಿಸಿದ್ದರು.

ಒಂದು ಎಸೆತವನ್ನು ಎದು­ರಿಸಿದ ಮಂಕಡ್‌, ಪಾಯಿಂಟ್‌­­­ನತ್ತ ಚೆಂಡನ್ನು ತಳ್ಳಿದ್ದೇ ಇನ್ನೊಂದು ತುದಿಯಲ್ಲಿದ್ದ ವಾಡೇಕರ್ ಒಂದು ರನ್‌ಗಾಗಿ ಮುನ್ನುಗ್ಗಿದರು. ಆದರೆ ಮಂಕಡ್, ವಾಪಸ್ ಹೋಗು­ವಂತೆ ಇಶಾರೆ ಮಾಡಿದರು. ಕ್ರೀಸ್‌ನತ್ತ ಮರಳಲು ವಾಡೇಕರ್ ತಿರುಗಿದಾಗ ಕಾಲುಜಾರಿ ಬಿದ್ದರು. ಲಗುಬಗನೆ ಎದ್ದು ಕ್ರೀಸ್‌ನತ್ತ ಓಡಿದರು. ಅಷ್ಟರಲ್ಲಿ ಎಫ್‌ಯುಸಿಸಿಯ ಹೆಮ್ಮೆಯ ಫೀಲ್ಡರ್ ಸುಧಾಕರ್ ರಾವ್ ಬೌಲರ್ ಕೈಗೆ ಚುರುಕಾಗಿ ಚೆಂಡನ್ನು ತಲುಪಿಸಿದರು. ಅದನ್ನು ಹಿಡಿದ ತಂಡದ ನಾಯಕ ಎರ್ರಪಲ್ಲಿ ಪ್ರಸನ್ನ ಆ ಕಾಲ­ದಲ್ಲಿ ಸ್ಲಿಪ್‌­ನಲ್ಲಿ ಹಲವು ಕ್ಯಾಚ್‌ಗಳನ್ನು ಬಿಟ್ಟು, ಕುಖ್ಯಾತ ಫೀಲ್ಡರ್ ಎನಿಸಿಕೊಂಡಿದ್ದವರು. ಹತ್ತು ವರ್ಷಗಳ ನಂತರ ಸಿಕ್ಕಿದ ಸುವರ್ಣಾವಕಾಶವನ್ನು ಅವರು ಎಲ್ಲಿ ತಪ್ಪಿಸಿಕೊಳ್ಳುತ್ತಾರೋ ಎಂಬ ಆತಂಕ ಕೆಲವರಲ್ಲಿ ಇತ್ತು. ಆದರೆ ಅವರು ತಪ್ಪು ಮಾಡದೆ, ಸುಧಾಕರ್ ರಾವ್ ಎಸೆದ ಚೆಂಡನ್ನು ಹಿಡಿದು ಬೇಲ್ಸ್ ಹಾರಿಸಿದರು. ವಾಡೇಕರ್ ಕ್ರೀಸ್‌ನಿಂದ ಸುಮಾರು ಒಂದು ಅಡಿಯಷ್ಟು ದೂರವಿದ್ದರು.

ವಾಡೇಕರ್ ಔಟಾದ ನಂತರ ಪ್ರಸನ್ನ ಹಾಗೂ ಚಂದ್ರ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಮೊದಲ ಇನಿಂಗ್ಸ್‌ನ ರನ್ ಗಳಿಕೆಯ ಬಲದಿಂದ ನಮ್ಮ ತಂಡ ವಿಜಯಶಾಲಿಯಾಯಿತು. ಫೈನಲ್ಸ್‌­­­­ನಲ್ಲಿ ಆಡಲು ಕರ್ನಾಟಕ ರಾಜಸ್ತಾನದ ಜೈಪುರಕ್ಕೆ ಪಯಣ ಬೆಳೆಸಿತು. ಆ ಪಂದ್ಯದ ವೀಕ್ಷಕ ವಿವರಣೆಯನ್ನು ರೇಡಿಯೊದಲ್ಲಿ ಕೇಳಿದೆ. ದೆಹಲಿ, ಬಾಂಬೆ ತಂಡಗಳನ್ನು ಸೋಲಿಸಿದ್ದ ನಮ್ಮ ತಂಡಕ್ಕೆ ರಾಜಸ್ತಾನವನ್ನು ಸೋಲಿಸುವುದು ಕಷ್ಟವೇನೂ ಅಲ್ಲ ಎಂಬ ನನ್ನ ನಂಬಿಕೆ ಸುಳ್ಳಾಗಲಿಲ್ಲ. ಫೈನಲ್ಸ್‌­ನಲ್ಲಿಯೂ ನಮ್ಮವರು ಗೆದ್ದರು.

ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಆಗ ರಣಜಿ ಪಂದ್ಯ­ಗಳನ್ನು ನೋಡುತ್ತಿದ್ದ ನಾನು, ನಿತ್ಯ ಬೆಳಿಗ್ಗೆ ತಪ್ಪದೆ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆ ಓದುತ್ತಿದ್ದೆ. ಆಗ ಬೆಂಗಳೂರಿನ ಅತಿ ಮುಖ್ಯ ಪತ್ರಿಕೆ ಅದಾ­ಗಿತ್ತು. ಮರೆತಿದ್ದ ಕೆಲವು ವಿವರಗಳನ್ನು ಓದ­ಲೆಂದು ೧೯೭೪ನೇ ಇಸವಿಯ ಮಾರ್ಚ್-–ಏಪ್ರಿಲ್‌ನ ಹಳೆಯ ಸಂಚಿಕೆಗಳನ್ನು ಇತ್ತೀಚೆಗೆ ಮತ್ತೆ ಹುಡುಕಿದೆ. ಕರ್ನಾಟಕ–-ಬಾಂಬೆ ನಡುವೆ ನಡೆದ ಆ ಪಂದ್ಯದ ಎರಡನೇ ದಿನದಾಟದ ವರದಿಯ ತಲೆಬರಹ ಹೀಗಿತ್ತು: ‘Bombay Wrest Initiative in Ranaji Semi-Final’. ವಾಡೇಕರ್ ಅದ್ಭುತ­­ವಾದ ಫಾರ್ಮ್‌­ನಲ್ಲಿದ್ದು, ಮಂಕಡ್ ಅವರ ಜೊತೆ ಇನಿಂಗ್ಸ್ ಕಟ್ಟತೊಡ­ಗಿದ್ದ­ರಿಂದ ಹಾಗೂ ಸುಧೀರ್ ನಾಯಕ್, ಏಕನಾಥ್ ಸೋಳ್ಕರ್, ಮಿಲಿಂದ್ ರೆಗೆ, ರಾಕೇಶ್ ಟಂಡನ್ ಇನ್ನೂ ಬ್ಯಾಟಿಂಗ್ ಮಾಡಬೇಕಿದ್ದು­ದ­ರಿಂದ ಪತ್ರಿಕೆಯು ಕರ್ನಾಟಕ­ಕ್ಕಿಂತ ಬಾಂಬೆ ತಂಡವೇ ಮೊದಲ ಇನಿಂಗ್ಸ್‌­ನಲ್ಲಿ ಮುನ್ನಡೆ ಗಳಿಸುವ ಸಾಧ್ಯತೆ ಇತ್ತೆಂದು ಪ್ರಕಟಿಸಿತ್ತು. ನಮ್ಮಂತೆಯೇ ‘ಡೆಕ್ಕನ್ ಹೆರಾಲ್ಡ್’ ವರದಿಗಾರ ಕೂಡ ವಾಡೇಕರ್ ಜಾರಿ ಬೀಳಬಹುದು ಎಂದು ಎಣಿಸಿರಲಿಲ್ಲ.

ರಾಜಸ್ತಾನವನ್ನು ಕರ್ನಾಟಕ ಸೋಲಿಸಿದ ಮರು­ದಿನ ‘ಡೆಕ್ಕನ್ ಹೆರಾಲ್ಡ್‌’ನಲ್ಲಿ ಒಂದು ಸಂಪಾ­ದಕೀಯ ಪ್ರಕಟವಾಯಿತು. ಅದು ಪ್ರಾರಂಭ­­­­­ವಾಗುವುದು ಈ ಅರ್ಥ ಕೊಡುವ ಸಾಲು­ಗಳಿಂದ: ‘ಕರ್ನಾಟಕದ ಪಾಲಿಗೆ ಇದು ಹೆಮ್ಮೆಯ ಸಂದರ್ಭ. ನಮ್ಮ ರಾಜ್ಯದ ಕ್ರಿಕೆಟ್ ತಂಡ ಮೊದಲ ಬಾರಿಗೆ ರಣಜಿ ಟ್ರೋಫಿ ಎತ್ತಿ­ಹಿಡಿಯಿತು...’. ಅದೇ ಸಂಪಾದಕೀಯ ಮುಂದೆ ನಾಯಕ­ನನ್ನು ಹೀಗೆ ಹೊಗಳಿದೆ: ‘ಬಗೆಬಗೆಯ ಮನೋ­ಧರ್ಮದ, ವಿಭಿನ್ನ ನೋಟದ ಆಟಗಾರ­ರನ್ನು ಒಗ್ಗಟ್ಟಿನ ಪಡೆಯಾಗಿ ರೂಪಿಸಿ, ಕ್ರಿಕೆಟ್ಟನ್ನು ಸರಿಯಾದ ಉತ್ಸಾಹದಲ್ಲಿ ಆಡಿ, ಗೆಲ್ಲಲೇ­ಬೇಕೆಂದು ಹೋರಾಡುವುದು ಸುಲಭವಲ್ಲ. ಪ್ರಸನ್ನ ಆ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು’.

ಡೆಕ್ಕನ್ ಹೆರಾಲ್ಡ್‌ನ ಆ ಹಳೆಯ ಸಂಚಿಕೆ­ಗಳನ್ನು ಓದಿದರೆ, ಕರ್ನಾಟಕದ ಮೊದಲ ರಣಜಿ ಗೆಲು­ವನ್ನು ಕಂಡು ಜನ ಹೇಗೆಲ್ಲಾ ಸಂಭ್ರಮ­ ಪಟ್ಟಿ­ದ್ದರು ಎಂಬುದು ಅರ್ಥವಾಗುತ್ತದೆ. ಏಪ್ರಿಲ್ ೧, ೧೯೭೪ರ ಬೆಳಿಗ್ಗೆ ಕರ್ನಾಟಕದ ಆಟ­ಗಾರರು ಇದ್ದ, ರಾಜಸ್ತಾನದಿಂದ ಹೊರಟಿದ್ದ ರೈಲು ಬೆಂಗಳೂರು ಸಿಟಿ ರೈಲ್ವೆ ಸ್ಟೇಷನ್ ತಲುಪಿ­ದಾಗ ದೊಡ್ಡ ಸಂಭ್ರಮ. ಸುಮಾರು ೩೦೦೦ ಅಭಿ­ಮಾನಿ­­ಗಳು ಆಟಗಾರರನ್ನು ಬರಮಾಡಿ­ಕೊಳ್ಳಲು ಅಲ್ಲಿ ಜಮಾ­ಯಿಸಿದ್ದರು. ಆ ಜನ­ಸಮೂಹದ ಮುಂಚೂಣಿ­ಯಲ್ಲಿ ಆಗಿನ ಮೇಯರ್ ಟಿ.ಡಿ.ನಾಗಣ್ಣ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಗಿನ ಅಧ್ಯಕ್ಷ ಎಂ.ಚಿನ್ನಸ್ವಾಮಿ ಇದ್ದರು.  ಆ ದಿನ ಮಧ್ಯಾಹ್ನ ಆಗಿನ ರಾಜ್ಯಪಾಲ (ಅವರೂ ರಾಜಸ್ತಾನಿ ಮೂಲದವರೇ, ಮೋಹನ್­ಲಾಲ್‌ ಸುಖಾಡಿಯ ಎಂದು ಅವರ ಹೆಸರು) ಚಹಾ ಕೂಟ ಏರ್ಪಡಿಸಿದರು. ಅದಾದ ಮೇಲೆ ವಿಧಾನ­ಸೌಧದ ಗ್ರ್ಯಾಂಡ್ ಬ್ಯಾಂಕ್ವೆಟ್ ಹಾಲ್‌­ನಲ್ಲಿ ರಾತ್ರಿ ಔತಣಕೂಟ. ಅಲ್ಲಿ ಆಟಗಾರರನ್ನು ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅಭಿನಂದಿಸಿದರು.

ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಆಟ­ಗಾರ­­ರನ್ನು ಅಭಿನಂದಿಸಲು ಆಯೋಜಿಸಿದ ಕೂಟ­ಗಳ ನಡುವಿನ ಅವಧಿಯಲ್ಲಿ ಕ್ರಿಕೆಟರ್‌ಗಳಿಗೆ ಇನ್ನೊಂದು ಮುದ್ರಿತ ಆಹ್ವಾನ ಪತ್ರಿಕೆ ಸಿಕ್ಕಿತು. ಅದೇ ದಿನ ಔತಣಕೂಟದ ನಂತರ ಇನ್ನೊಂದು ಪಾರ್ಟಿ ಇದೆ ಎಂಬ ಆಮಂತ್ರಣ ಅದು. ರಾಜ್ಯದ ಆಗಿನ ಕೈಗಾರಿಕಾ ಸಚಿವ ಎಸ್.ಎಂ.ಕೃಷ್ಣ ಅವರ ಹೆಸರಿನಲ್ಲಿ ಅದು ಬಂದಿತ್ತು. ಪ್ರಸನ್ನ ಹಾಗೂ ಇತರ ಆಟಗಾರರು ವಿಧಾನಸೌಧದಿಂದ ಮಂತ್ರಿ­ಯ ಮನೆಗೆ ಹೋದರು. ಅಲ್ಲಿ ಕೃಷ್ಣ ಇರ­ಲಿಲ್ಲ. ಯಾವುದೇ ಆಮಂತ್ರಣ ನೀಡಿಲ್ಲ ಎಂದು ಅಲ್ಲಿನ ಸಿಬ್ಬಂದಿ ಹೇಳಿದರು. ಆಗ ಆಟ­ಗಾ­ರರಿಗೆ ಏಪ್ರಿಲ್ ೧ರಂದು ತಾವು ಮೂರ್ಖ­­ರಾದೆವು ಎನ್ನು­ವುದು ಗೊತ್ತಾಯಿತು. ಯಾರೋ ಆಟಗಾರ­ರನ್ನು ಮೂರ್ಖ­ರನ್ನಾ­ಗಿ­ಸಲು ಆಮಂತ್ರಣ ನೀಡಿದ್ದರು.

ಕೆಲವು ದಿನಗಳ ನಂತರ ಕರ್ನಾಟಕ ರಾಜ್ಯ ಕ್ರೀಡಾ ಸಮಿತಿ (ಕರ್ನಾಟಕ ಸ್ಟೇಟ್ ಸ್ಪೋರ್ಟ್ಸ್ ಕೌನ್ಸಿಲ್) ಸಮಾರಂಭವೊಂದನ್ನು ಆಯೋಜಿಸಿ ರಣಜಿ ಟ್ರೋಫಿ ಗೆದ್ದ ತಂಡದ ಪ್ರತಿ ಆಟಗಾರನಿಗೆ ೧೦೦೦ ರೂಪಾಯಿಯ ಚೆಕ್ ನೀಡಿ ಗೌರ­ವಿ­ಸಿತು. ಆಶ್ಚರ್ಯವೆಂದರೆ ರಾಜ್ಯ ಸರ್ಕಾರ­ವಾ­ಗಲೀ, ಕೆಎಸ್‌ಸಿಎ ಆಗಲೀ ಆಟಗಾರರಿಗೆ ಯಾವುದೇ ಹಣಕಾಸಿನ ಬಹುಮಾನ ನೀಡಲಿಲ್ಲ. ಆಗ ರಣಜಿ ಟ್ರೋಫಿ ಗೆದ್ದರೂ ನಗದು ಬಹು­ಮಾನ ಇರಲಿಲ್ಲ (ಈ ವರ್ಷ ರಣಜಿ ಟ್ರೋಫಿ ಗೆದ್ದ ಕರ್ನಾಟಕ ತಂಡಕ್ಕೆ ಬಿಸಿಸಿಐ ಎರಡು ಕೋಟಿ ರೂಪಾಯಿ ಬಹುಮಾನ ನೀಡಿತು. ಅಷ್ಟೇ ಅಲ್ಲದೆ ಕೆಎಸ್‌ಸಿಎ ಹಾಗೂ ರಾಜ್ಯ ಸರ್ಕಾರ ತಲಾ ಒಂದು ಕೋಟಿ ರೂಪಾಯಿ ಬಹುಮಾನ ಕೊಟ್ಟವು).\

ಕರ್ನಾಟಕ ತಂಡವು ಬಾಂಬೆಯನ್ನು ಸೋಲಿ­ಸಿದ ಆ ಪಂದ್ಯ ನೋಡಿದ ಇಪ್ಪತ್ತು ವರ್ಷಗಳ ನಂತರ ದೆಹಲಿಯ ಸಮಾರಂಭ­ವೊಂದ­ರಲ್ಲಿ ಅಜಿತ್ ವಾಡೇಕರ್ ಅವರನ್ನು ಭೇಟಿ ಮಾಡಿದೆ. ಆ ಪಂದ್ಯದಲ್ಲಿ ಅವರು ಜಾರಿ ಬಿದ್ದು ಔಟಾದ ಸಂದರ್ಭ­ವನ್ನು ನೆನಪಿಸಿದೆ. ಒಂದು ವೇಳೆ ಜಾರಿ ಬೀಳದೆ ಇದ್ದರೆ ಇಲ್ಲಿಯವರೆಗೆ ಚಿನ್ನಸ್ವಾಮಿ ಕ್ರೀಡಾಂಗಣ­ದಲ್ಲಿ ಬ್ಯಾಟಿಂಗ್ ಮಾಡುತ್ತಲೇ ಇರು­ತ್ತಿ­ದ್ದಿರೇನೋ ಎಂದು ಚಟಾಕಿ ಹಾರಿಸಿದೆ. ಮಿತ­ಭಾಷಿ­­ಯಾದ ಅವರು ಉತ್ತರರೂಪದಲ್ಲಿ ಒಂದು ಮಾತನ್ನಷ್ಟೇ ಸೇರಿಸಿದರು:- ‘ಹೌದು ಆಡುತ್ತಿದ್ದೆ, ಆದರೆ ಹೊಸ ಶೂಗಳನ್ನು ತೊಟ್ಟು’!

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT