ADVERTISEMENT

ಸಬಲತೆಯ ಕಥಾನಕಗಳಿಗೆ ಹೊಸ ಹೊಳಹು

ಸಿ.ಜಿ.ಮಂಜುಳಾ
Published 8 ಸೆಪ್ಟೆಂಬರ್ 2014, 19:30 IST
Last Updated 8 ಸೆಪ್ಟೆಂಬರ್ 2014, 19:30 IST
ಸಬಲತೆಯ ಕಥಾನಕಗಳಿಗೆ ಹೊಸ ಹೊಳಹು
ಸಬಲತೆಯ ಕಥಾನಕಗಳಿಗೆ ಹೊಸ ಹೊಳಹು   

ಕಳೆದ ಎರಡು ವಾರಗಳಲ್ಲಿ ಬಿಡುಗಡೆಯಾದ ‘ಮರ್ದಾನಿ’ ಹಾಗೂ ‘ಮೇರಿ ಕೋಮ್’ ಹಿಂದಿ ಚಲನಚಿತ್ರಗಳು ಮಹಿಳಾ ಸಬಲತೆಯ ಕಥಾನಕಗಳಿಗೆ ಹೊಸ ಸೇರ್ಪಡೆ. ಮಹಿಷಾಸುರ­ನನ್ನು ಸಂಹರಿಸಿದ ಚಾಮುಂಡೇಶ್ವರಿ ಮಹಿಷಾ­ಸು­ರಮರ್ದಿನಿಯಾಗುತ್ತಾಳೆ. ಹೆಣ್ಣುಮಕ್ಕಳ ಅಕ್ರಮ­ಸಾಗಣೆಯ ಸಂಘಟಿತ ಜಾಲವನ್ನು ಹಲವು ಅಪಾ­ಯಗಳನ್ನೆದುರಿಸಿ ಭೇದಿಸುವ ದಿಟ್ಟತನ ತೋರು­­ವಂತಹ  ‘ಮರ್ದಾನಿ’ – ಮುಂಬೈ  ಪೊಲೀಸ್ ಕ್ರೈಂಬ್ರಾಂಚ್‌ನ ಸೀನಿಯರ್ ಇನ್‌­ಸ್ಪೆಕ್ಟರ್ ಶಿವಾನಿ ಶಿವಾಜಿ ರಾಯ್ (ರಾಣಿ ಮುಖರ್ಜಿ). ಹಾಗೆಯೇ  ‘ಮೇರಿ ಕೋಮ್’  ಚಿತ್ರ, ಮಣಿಪು­ರದ ಬಾಕ್ಸರ್ ಮೇರಿ ಕೋಮ್ ಜೀವನ ಚರಿತ್ರೆ ಆಧರಿಸಿದ್ದು (ಬಯೊಪಿಕ್). ಈಶಾನ್ಯ ರಾಜ್ಯಕ್ಕೆ ಸಂಬಂಧಿಸಿದ ಕಥಾ ಪಾತ್ರ ಮುಖ್ಯ­ವಾಹಿನಿಯ ಸಿನಿಮಾದಲ್ಲಿ ಪ್ರಧಾನ ಭೂಮಿಕೆಯಲ್ಲಿ ಚಿತ್ರಣ­ಗೊಂಡಿರುವುದು ಬಹುಶಃ ಇದೇ ಮೊದಲ ಬಾರಿ ಎಂಬುದು ಈ ಚಿತ್ರದ ವೈಶಿಷ್ಟ್ಯವನ್ನು ಹೆಚ್ಚಿಸುತ್ತದೆ.

ಆರಂಭದಿಂದ ಕಡೆಯವರೆಗೆ ಥ್ರಿಲ್ಲರ್ ಗುಣ ಉಳಿಸಿಕೊಂಡಿರುವ ಚಿತ್ರ  ‘ಮರ್ದಾನಿ’. ಹೆಣ್ಣು­ಮಕ್ಕಳ ಅಕ್ರಮ ಸಾಗಣೆದಾರರ ವಿರುದ್ಧ ಮಹಿಳಾ ಪೊಲೀಸ್ ಅಧಿಕಾರಿಯ ಸಮರದ ಚಿತ್ರಣ ಇಲ್ಲಿದೆ. ಕುಟುಂಬದೊಳಗೆ ಬೆಚ್ಚಗಿನ ಪ್ರೀತಿ ಹರಿ­ಸುತ್ತಾ  ಪೋಷಿಸುವಂತಹ ವ್ಯಕ್ತಿ ಈಕೆ. ಆದರೆ, ಹೊರ­ಗಡೆ ಕಾನೂನು ಮುರಿಯುವ ಗೂಂಡಾ­ಗಳನ್ನು ಎಗ್ಗಿಲ್ಲದೆ ಬಗ್ಗು ಬಡಿಯುವಾಕೆ.    ಮಹಿ­ಳೆ­ಯನ್ನು ಹತ್ತಿಕ್ಕುವ ಪುರುಷ ಅಟ್ಟಹಾಸಕ್ಕೆ ಪ್ರತಿ­ರೋಧ ತೋರಲು ಪ್ರತಿ ಮಹಿಳೆಯೂ ತನ್ನೊ­ಳಗಿನ  ‘ಮರ್ದಾನಿ’ಯನ್ನು  ಅನ್ವೇಷಿಸಿ ಕೊಳ್ಳ­ಬೇಕು ಎಂಬ ಸಲಹೆಯನ್ನು ಚಿತ್ರದಲ್ಲಿ  ನೀಡಲಾ­ಗಿದೆ. 

ವಚನಕಾರ್ತಿ ಅಕ್ಕಮಹಾದೇವಿ ಹೇಳಿದ ಸಾಲುಗಳು ಈ ಸಂದರ್ಭದಲ್ಲಿ ನೆನ­ಪಾ­ಗುತ್ತವೆ:  ‘ನಾಮದಲ್ಲಿ ಹೆಂಗಸಾದರೇನು ಭಾವಿ­ಸಲು ಗಂಡು ರೂಪು’.   ಹೆಣ್ಣನ್ನು ಕೇವಲ ದೇಹ­ವಾಗಿ  ಅವಳ ವ್ಯಕ್ತಿತ್ವದ ಇತರ ಆಯಾಮಗಳ ಇರು­ವಿ­ಕೆಯನ್ನು  ಗುರುತಿಸದ ಸಮಾಜಕ್ಕೆ  ಒಂದು ಬಗೆಯ ಉತ್ತರವಾಗಿ ಇದನ್ನು ಗ್ರಹಿಸ­ಬಹುದೇನೊ.

ಹೆಣ್ಣುಮಕ್ಕಳ ಅಕ್ರಮ ಸಾಗಣೆ, ನಂತರದ ಲೈಂಗಿಕ ಹಿಂಸಾಚಾರಗಳನ್ನು ಚಿತ್ರದಲ್ಲಿ ಪರಿ­ಣಾಮ­ಕಾರಿಯಾಗಿ ಕಟ್ಟಿಕೊಡಲಾಗಿದೆ.  ಬಲ­ವಂತ­ವಾಗಿ ಬಟ್ಟೆ  ಬಿಚ್ಚಿಸುವುದು, ಅತ್ಯಾಚಾರ, ಲೈಂಗಿಕ ದುರ್ವರ್ತನೆ,  ಪರ ಹಿಂಸೆಯಲ್ಲಿ ವಿಕೃತ ಸಂತೋಷ ಕಾಣುವ (ಸ್ಯಾಡಿಸಂ) ದೃಶ್ಯಗಳು ಚಿತ್ರದಲ್ಲಿವೆ. ಪ್ರದೀಪ್ ಸರ್ಕಾರ್ ನಿರ್ದೇಶನದ ಈ ಚಿತ್ರದಲ್ಲಿನ  ವಿಲನ್ ಮಾಮೂಲಿ ಸಿನಿ­ಮಾ­ಗಳ ವಿಲನ್‌ನಂತೆ  ಚಿತ್ರವಿಚಿತ್ರ ಹಾವ­ಭಾವ­ಗಳನ್ನು ಪ್ರದರ್ಶಿಸುತ್ತಾ  ಗಹಿಗಹಿಸಿ ನಗುವುದಿಲ್ಲ. ಆತ  ಸಾಮಾಜಿಕ ನಡಾವಳಿಗಳನ್ನು ಅರಿತಂತಹ ಪಕ್ಕಾ ಜಂಟಲ್‌ಮ್ಯಾನ್. ಸೊಗಸಾಗಿ ಇಂಗ್ಲಿಷ್ ಮಾತನಾಡುತ್ತಾ ಕಂಪ್ಯೂಟರ್‌ನಲ್ಲಿ ಥ್ರಿಲ್ಲರ್  ಗೇಮ್ಸ್ ಗಳಾಡುತ್ತಾ ಕೂರುವ ಪಕ್ಕದ ಮನೆಯ ಹುಡುಗನಂತೆ  (ತಹೀರ್ ಭಾಸಿನ್‌) ಚಿತ್ರಿಸಲಾಗಿದೆ.

ಮಾನವ ಅಕ್ರಮ ಸಾಗಣೆ ನಿಯಂತ್ರಣಕ್ಕಾಗಿ ಈಗ ‘ಮರ್ದಾನಿ’ ಚಿತ್ರದಿಂದ ಬಿಹಾರ ಪೊಲೀ­ಸರು ಸ್ಫೂರ್ತಿ ಪಡೆಯಲು ಮುಂದಾಗಿರುವುದು ವಿಶೇಷ. ‘ಬಿಹಾರದಲ್ಲಿ ಮಾನವ ಅಕ್ರಮ ಸಾಗಣೆ ಜಾಲಗಳನ್ನು ಭೇದಿಸಿದ್ದೇವೆ. ಇಂತಹ ಕಾರ್ಯಾ­ಚರಣೆಗಳನ್ನು ಕೈಗೊಳ್ಳುವಾಗ  ಪೊಲೀಸ್ ಸಿಬ್ಬಂದಿ ಅಪಾಯಕಾರಿ ಸನ್ನಿವೇಶಗಳಲ್ಲಿ ಕೆಲಸ ಮಾಡಬೇಕಾಗುತ್ತದೆ.  ಆದರೆ ಅದೇ ಸಂದರ್ಭ­ದಲ್ಲಿ ಅವರಿಗೆ ಅತ್ಯುನ್ನತ ಮಟ್ಟದ ಭಾವನೆಗಳು, ಬುದ್ಧಿವಂತಿಕೆ ಹಾಗೂ ದಕ್ಷತೆ ಇರುವುದೂ ಅವಶ್ಯ.   ಈ ಚಿತ್ರದಲ್ಲಿ ರಾಣಿ ಮುಖರ್ಜಿಯ ಪಾತ್ರ ಅದಕ್ಕೆ ಉದಾಹರಣೆ’ ಎಂಬುದು ಬಿಹಾರ ರಾಜ್ಯ ಸಿಐಡಿ ಇನ್‌ಸ್ಪೆಕ್ಟರ್ ಜನರಲ್ (ದುರ್ಬಲ ವರ್ಗ)  ಅರವಿಂದ ಪಾಂಡೆ  ಅವರ ಅಭಿಮತ. ಮಹಿಳೆ,  ಮಕ್ಕಳು ಸೇರಿದಂತೆ ಸಮಾಜದ ದುರ್ಬಲ ವರ್ಗದವರ ವಿರುದ್ಧದ ಅಪರಾಧ  ನಿರ್ವ­ಹಣೆಯಲ್ಲಿ ಗಣನೀಯ ಅನುಭವ ಹೊಂದಿ­ರುವ  ಪಾಂಡೆ ಅವರು ಮನರಂಜನೆಗಾಗಿ  ಸಿನಿಮಾ ನೋಡಲು ಹೋಗಿದ್ದರಂತೆ. ಆದರೆ ಅದು ಕಣ್ತೆರೆಸುವ ಚಿತ್ರವಾಯಿತು ಎಂದು ಹೇಳಿಕೊಂಡಿದ್ದಾರೆ.

‘ಮಾನವ ಅಕ್ರಮ ಸಾಗಣೆಯ ವಿವಿಧ ಆಯಾ­ಮಗಳು ಹಾಗೂ ಅದರ ನಿಯಂತ್ರಣ ಹೇಗೆ’ ಎಂಬುದರ ಕುರಿತಾಗಿ ಆ. 30 ರಿಂದ ಎರಡು ದಿನಗಳ ಕಮ್ಮಟ ನಡೆಸಿ ಬಿಹಾರ ಪೊಲೀ­ಸರಿಗಾಗಿ ಚಿತ್ರವನ್ನೂ ಪ್ರದರ್ಶಿಸಲಾಗಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ  ಹಾಗೂ ಉತ್ತರ ಪ್ರದೇಶದಲ್ಲಿ ಈ ಚಿತ್ರಕ್ಕೆ ತೆರಿಗೆ ವಿನಾಯ್ತಿ ನೀಡಲಾಗಿದೆ.

ವೃದ್ಧ  ಅರಬ್ ಷೇಕ್‌ನೊಡನೆ ಪತ್ನಿ ಎಂಬ ಹೆಸರಿನಲ್ಲಿ ಹೈದರಾಬಾದ್‌ನಿಂದ ವಿದೇಶಕ್ಕೆ ವಿಮಾ­ನ­ದಲ್ಲಿ ಅಕ್ರಮಸಾಗಣೆಗೊಳಗಾಗುತ್ತಿದ್ದ ಅಮೀನಾ ಎಂಬ 11 ವರ್ಷದ ಬಾಲಕಿಯ ಕಥೆ 1991ರಲ್ಲಿ ಭಾರತದಲ್ಲಿ ದೊಡ್ಡ ಸುದ್ದಿಯಾ­ಗಿತ್ತು. ಆ  ವಿಮಾನದ ಗಗನಸಖಿಯೊಬ್ಬರ ಸಮಯಪ್ರಜ್ಞೆಯಿಂದ ಅಮೀನಾ ಪಾರಾಗಿ­ದ್ದಳು. ವಿವಾಹದ ನೆಪದಲ್ಲಿ ಅಕ್ರಮ  ಸಾಗಣೆ ಜಾಲ­ದಲ್ಲಿ ಅಮಾಯಕ ಹೆಣ್ಣುಮಕ್ಕಳನ್ನು ಸಿಲು­ಕಿ­ಸುವುದು ಈಗಲೂ ಮುಂದುವರಿದೇ ಇದೆ. ಉದ್ಯೋಗದ ಆಮಿಷ ಅಥವಾ ಸಿನಿಮಾ ಲೋಕದ ಆಕರ್ಷಣೆಗೊಳಗಾಗಿ ಮನೆ ಬಿಡುವ ಹೆಣ್ಣುಮಕ್ಕಳು ಅಥವಾ ಅಪಹರಣ­ಕ್ಕೊಳಗಾಗು­ವವರು  ರಾಷ್ಟ್ರದ ಲೈಂಗಿಕ ಮಾರುಕಟ್ಟೆಗಳಿಗೆ ಸರಕುಗಳಾಗಿ  ಸರಬರಾಜಾಗುವುದು ಕ್ರೂರ ವಾಸ್ತವ.

ಲೈಂಗಿಕ  ಶೋಷಣೆ,  ಮನೆಗೆಲಸದ ಜೀತ,  ಮಾದಕ ವಸ್ತುಗಳ ಸಾಗಣೆ ಚಟುವಟಿಕೆ  ಅಥವಾ ಅಂಗಾಂಗ ಕಸಿಗಳಿಗಾಗಿ ಬಳಸಿಕೊಳ್ಳಲು ಅಕ್ರಮ ಮಾನವ ಸಾಗಣೆಗಳು ನಡೆಯುತ್ತವೆ.  ಇದು ಗಂಭೀರವಾದ ಪರಿಶೀಲನೆಗೆ ಒಳಗಾಗ­ಬೇಕಿ­ರುವ ಜಾಗತಿಕ ವಿದ್ಯಮಾನ.

ಬಾಂಗ್ಲಾ ದೇಶದ ಮಹಿಳೆಯರು ಹಾಗೂ ಮಕ್ಕಳು ಭಾರತಕ್ಕೆ ಅಕ್ರಮ ಸಾಗಣೆಯಾಗು­ವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗೆಯೇ ಭಾರತದ ಮೂಲಕ ಪಾಕಿಸ್ತಾನ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ರವಾನೆ­ಯಾ­ಗು­ತ್ತಾರೆ. ಇದೇ ರೀತಿ ನೇಪಾಳದಿಂದಲೂ ಮಹಿಳೆ­ಯರು  ಹಾಗೂ ಮಕ್ಕಳು ಲೈಂಗಿಕ ಮಾರು­ಕಟ್ಟೆಗೆ ಅಥವಾ ಇತರ ಜೀತದ ಕೆಲಸ­ಗಳಿ­ಗಾಗಿ ಭಾರತಕ್ಕೆ ಅಕ್ರಮ ಸಾಗ­ಣೆಗೊಳ­ಗಾಗುತ್ತಿ­ದ್ದಾರೆ.   ಭಾರತ­ದಲ್ಲೂ  ಇಂತಹ ಅಕ್ರಮ ಸಾಗಣೆ ಜಾಲಗಳು ವ್ಯವಸ್ಥಿತ­ವಾಗಿ ಕಾರ್ಯ­ನಿರ್ವ­ಹಿಸುತ್ತಿವೆ. ಕರ್ನಾ­ಟಕ­­ದಲ್ಲೂ ಇವೆ.

ಭೂಗತ ಜಗತ್ತಿನ ಮಾಫಿಯಾ, ರಾಜಕಾರಣಿ­ಗಳು ಹಾಗೂ ಅಧಿಕಾರಿಗಳ ಅಪವಿತ್ರ ಮೈತ್ರಿ­ಯಿಂದ ಇಂತಹ ದಂಧೆ ಹಲವು ಕೋಟಿ ರೂಪಾ­ಯಿಗಳ ವಹಿ­ವಾ­ಟಾಗಿದೆ. ಮಾದಕ ವಸ್ತು, ಶಸ್ತ್ರಾಸ್ತ್ರ ಕಳ್ಳ ಸಾಗ­ಣೆಯಂತೆ ಇದೂ ಕೂಡ ದೊಡ್ಡದಾಗಿ ವ್ಯಾಪಿ­ಸಿ­ರುವ ಲಾಭ­ದಾಯಕವಾದ ಅಕ್ರಮ ದಂಧೆ­ಯಾ­ಗಿದೆ.  ಮದುವೆ ದಳ್ಳಾಳಿ­ಗಳು, ಹೋಟೆಲ್ ಮಾಲೀ­ಕರು, ಮಕ್ಕಳ ಆಶ್ರಯ ಕೇಂದ್ರಗಳು, ಉದ್ಯೋಗ ಮಾಹಿತಿ ಕೇಂದ್ರಗಳೂ  ಈ ಅಕ್ರಮ ಸಾಗಣೆಗಳ ಜಾಲಗಳಲ್ಲಿ ಪಾಲುದಾರ­ರಾಗಿರು­ವುದು ಸಾಮಾನ್ಯ ಸಂಗತಿ.

ಯೂರೋಪ್, ಅಮೆರಿಕ ಮತ್ತಿತರ ರಾಷ್ಟ್ರ­ಗಳಿಂದ ಲೈಂಗಿಕತೆ ಅರಸಿ ಬರುವಂತಹ ಪ್ರವಾಸಿಗ­ರಿಗೆ ಭಾರತ ಕೂಡ ಲೈಂಗಿಕ ಪ್ರವಾಸೋದ್ಯಮ ತಾಣವಾಗಿದೆ. ಆರ್ಥಿಕ ಉದಾರೀಕರಣ ಹಾಗೂ ಹೆಚ್ಚಿದ ಬಿಸಿನೆಸ್ ಪ್ರವಾಸಗಳು  ಇಂತಹ ಉದ್ಯ­ಮದ ಹೆಚ್ಚಳಕ್ಕೆ ಕೊಡುಗೆ ಸಲ್ಲಿಸುತ್ತಿವೆ. ಕೆಂಪು ದೀಪ ಪ್ರದೇಶದ ವೇಶ್ಯಾವಾಟಿಕೆಯಿಂದ ಹೈ ಕ್ಲಾಸ್ ವೇಶ್ಯಾವಾಟಿಕೆಗೆ  ಒತ್ತು ಹೆಚ್ಚಾಗಿದೆ.

ಇಂತಹ ಸನ್ನಿವೇಶದಲ್ಲಿ ಮಾನವ ಅಕ್ರಮ ಸಾಗಣೆ ನಿರ್ಬಂಧಕ್ಕೆ ಭಾರತ ಗಣನೀಯ ಕ್ರಮ­ಗ­ಳನ್ನು ಕೈಗೊಂಡಿಲ್ಲ.   ಈ ವಿಚಾರವನ್ನು ಗಂಭೀರ­ವಾಗಿ ಪರಿಗಣಿಸಬೇಕೆಂದು ಸುಪ್ರೀಂ ಕೋರ್ಟ್   ಹಾಗೂ ಹೈಕೋರ್ಟ್‌ಗಳು ಸರ್ಕಾರಗಳಿಗೆ ಅನೇಕ ಬಾರಿ ನಿರ್ದೇಶನಗಳನ್ನು ನೀಡಿವೆ.  ಹೀಗಿದ್ದೂ ನಾಪತ್ತೆಯಾಗುವ ಮಕ್ಕಳ ಪ್ರಕರಣಗಳನ್ನು  ಮಾನವ ಅಕ್ರಮ ಸಾಗಣೆ ಸಮಸ್ಯೆಯ ಜೊತೆ­ಗಿಟ್ಟು ನೋಡುವಲ್ಲಿ ಹೆಚ್ಚಿನ ಪ್ರಯತ್ನಗಳಾಗು­ತ್ತಿಲ್ಲ. 2010ರಲ್ಲಿ  ಕಾಣೆಯಾದ  ಪ್ರತಿ  ಮೂವರು  ಮಕ್ಕಳಲ್ಲಿ ಒಬ್ಬರ ಪತ್ತೆ ಅಸಾಧ್ಯ­ವಾಗಿ ಉಳಿದು ಬಿಡುತ್ತಿತ್ತು.  ಆದರೆ 2013ರಲ್ಲಿ  ಕಾಣೆಯಾದ ಪ್ರತಿ ಇಬ್ಬರು ಮಕ್ಕಳಲ್ಲಿ ಒಂದು ಮಗುವಿನ ಪತ್ತೆ ಪೂರ್ಣ ಅಸಾಧ್ಯವಾಗಿರುತ್ತಿತ್ತು. 

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಪ್ರಕಾರ 2012ರಲ್ಲಿ ರಾಷ್ಟ್ರದಲ್ಲಿ 65,038 ಮಕ್ಕಳು ನಾಪತ್ತೆಯಾಗಿದ್ದಾರೆ.   ಸಂಘಟಿತವಾಗಿ ನಡೆಯುತ್ತಿರುವ ಈ ಅಪರಾಧದ ನಿರ್ವಹಣೆಗೆ ಸದ್ಯದ ಕಾನೂನಿನ ಚೌಕಟ್ಟು  ದುರ್ಬಲವಾಗಿದೆ.  ಕಾನೂನಿನ ಕೈಯಿಂದ ನುಸುಳಿಕೊಳ್ಳುವುದು ಎಷ್ಟೊಂದು ಸುಲಭ ಎಂಬುದನ್ನು ‘ಮರ್ದಾನಿ’ ಚಿತ್ರ­ದಲ್ಲೂ ಪ್ರಸ್ತಾಪಿಸಲಾಗಿದೆ. ಹೀಗಾಗಿ ‘ಸಾರ್ವ­­ಜನಿಕ ಆಕ್ರೋಶ’ದಲ್ಲಿ ನ್ಯಾಯ ಕಂಡು­ಕೊಳ್ಳುವ ವಿಚಾರವನ್ನು ಚಿತ್ರದಲ್ಲಿ ಅತಿ­ರಂಜಿ­ತ­ಗೊಳಿಸಲಾಗಿದೆ. ಆರಂಭದಿಂದಲೂ ವಿಭಿನ್ನ ನಿರೂ­ಪಣೆಯಲ್ಲಿ ಸಾಗುವ ಚಿತ್ರ ಕ್ಲೈಮ್ಯಾಕ್ಸ್ ನಲ್ಲಿ ಜನಪ್ರಿಯ ಶೈಲಿಯ ಹಾದಿ ಹಿಡಿದಿದ್ದು ಅಸಂಗತ.

ಪೊಲೀಸ್ ಬಲದಲ್ಲಿ ಹೆಚ್ಚಿನ ಮಹಿಳೆಯರ ಸೇರ್ಪಡೆಯಿಂದ ಹೆಣ್ಣುಮಕ್ಕಳ ಅಕ್ರಮ  ಸಾಗಣೆ ಅಪರಾಧಗಳಿಗೆ ಕಡಿವಾಣ ಬೀಳಬಹುದೆ? ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಸದ್ಯದ ಪರಿಸರದಲ್ಲಿ ಖಾಕಿಧಾರಿ ಮಹಿಳೆಯರು ಸಮಾಜಕ್ಕೆ ಸಕಾರಾತ್ಮಕ ಸಂದೇಶ ರವಾನಿಸುವುದು ಸಾಧ್ಯವಿದೆ ಎಂಬಂಥ ಅಭಿ­ಪ್ರಾ­ಯಗಳು ಈ ಚಿತ್ರ ವೀಕ್ಷಣೆಯ ನಂತರ ವ್ಯಕ್ತ­ವಾ­ಗಿವೆ. ಗುಜರಾತ್ ಹಾಗೂ ಮಹಾರಾಷ್ಟ್ರ ಗಳಲ್ಲಿ  ಪೊಲೀಸ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಈಗಾ­ಗಲೇ ಶೇ 33ರಷ್ಟು ಮೀಸಲಾತಿ­ಯನ್ನೇನೊ ನೀಡ­ಲಾಗಿದೆ. ಆದರೆ ಈ ಮೀಸಲಾತಿ ಹುದ್ದೆಗಳನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿಮಾಡಲಾಗಿಲ್ಲ .

ದೆಹಲಿ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಹಾಗೂ ನಂತರ ಆಕೆಯ ಸಾವು, ಮಹಿಳೆ ವಿರು­ದ್ಧದ ಹಿಂಸಾಚಾರಗಳನ್ನು  ಕುರಿತಂತೆ ರಾಷ್ಟ್ರೀಯ ವಾಗ್ವಾದದ ಕಿಡಿ ಹೊತ್ತಿಸಿತು.  ಇಂತಹ ಸಂದ­ರ್ಭ­ದಲ್ಲಿ ತಮ್ಮನ್ನು ತಾವು ಪ್ರತಿಪಾದಿಸಿ­ಕೊಳ್ಳು­ವಂತಹ ನಾಯಕಿ ಪ್ರಧಾನ ಕಥೆಗಳಿರುವ ಚಿತ್ರ­ಗಳು ಮುಖ್ಯವಾಹಿನಿ ಚಿತ್ರರಂಗದಲ್ಲಿ ಬರುತ್ತಿರು­ವುದು ಸಮಾಜದ ಆಶಯಗಳಿಗೆ ಸಹಜ ಸ್ಪಂದ­ನವೇ ಆಗಿದೆ.

ನಿಶ್ಚಿತಾರ್ಥವಾಗಿದ್ದ ಹುಡುಗ ‘ಮದು­ವೆ­ಯಾಗಲು ಸಾಧ್ಯವಿಲ್ಲ’ ಎಂದು ಕಡೆ­ಗಳಿಗೆ­ಯಲ್ಲಿ ಮದುವೆಯನ್ನು ರದ್ದು ಮಾಡಿದಾಗ  ‘ಕ್ವೀನ್’ ಚಿತ್ರದ  ರಾಣಿ ಎದೆಗುಂದುವುದಿಲ್ಲ. ಬದ­ಲಿಗೆ ವಿದೇ­ಶದಲ್ಲಿ ನಿಗದಿಯಾಗಿದ್ದ ಮಧುಚಂದ್ರ ಪ್ರವಾ­ಸಕ್ಕೆ ಅಪ್ಪ–ಅಮ್ಮನನ್ನು ಒಪ್ಪಿಸಿ  ತಾನೊ­ಬ್ಬಳೇ  ತೆರಳುತ್ತಾಳೆ.  ಬದುಕಿನ ಖುಷಿಯನ್ನು ಉಣ್ಣುವುದರ ಜೊತೆಗೆ ಕಟು ವಾಸ್ತವಗಳನ್ನು ಕಣ್ಣಾರೆ ಕಾಣುತ್ತಾಳೆ. ಇಂತಹ ಬೆಳವಣಿಗೆ ನಿರೀಕ್ಷಿಸಿರದ ಹುಡುಗ ತಪ್ಪಾಯಿ­ತೆಂದು ಪ್ರೇಮ ಯಾಚಿಸಿ ಬಂದಾಗ, ನಿರಾಕರಿಸುವ ದಿಟ್ಟತನ ಮೆರೆದು ಹೊಸ ಹೆಣ್ಣಿನ ಆಗಮನವನ್ನು ಧ್ವನಿಸಿದ್ದಳು. 

ಸಾಮಾನ್ಯವಾಗಿ ಯಶಸ್ವಿ ಪುರುಷನ ಹಿಂದೆ ಮಹಿಳೆಯೊಬ್ಬಳು ಇರುತ್ತಾಳೆ. ಹಾಗೆಯೇ ‘ಮರ್ದಾನಿ’ ಹಾಗೂ ‘ಮೇರಿ ಕೋಮ್’ ಚಿತ್ರಗಳ ನಾಯಕಿಯರ ಹಿಂದೆ ನಿಂತು ಪುರುಷ ಸಂಗಾತಿ­ಗಳು ನೀಡುವಂತಹ ಒತ್ತಾಸೆ ಹೃದಯ ತುಂಬು­ವಂತಹದ್ದು.

ಸಿನಿಮಾ ಸೂತ್ರಗಳು ಹೀಗೆ ಅದಲು­ಬದಲಾಗಿ­ರು­ವುದು ಈ ಚಿತ್ರಗಳಲ್ಲಿನ ಚಿತ್ರಣಗಳ ಮತ್ತೊಂದು ವಿಶೇಷ. ‘ಮರ್ದಾನಿ’ ಚಿತ್ರದಲ್ಲಿ  ಪ್ರತೀಕಾರ ತೀರಿ­ಸಿ­ಕೊಳ್ಳಲು ವಿಲನ್ ಬಯಸಿದಾಗ  ಆತ  ಪೊಲೀಸ್ ಇನ್‌ಸ್ಪೆಕ್ಟರ್ ಶಿವಾನಿಯ ವೈದ್ಯ ಪತಿ­ಯನ್ನು  (ಜಿಷು ಸೇನ್ ಗುಪ್ತ)   ಗುರಿ­ಯಾಗಿ­ಸಿ­­ಕೊಳ್ಳುತ್ತಾನೆ.  ಹಾಗೆಯೇ ‘ಮೇರಿ ಕೋಮ್’ ಚಿತ್ರ­ದಲ್ಲಿನ ಮೇರಿ ಕೋಮ್  ತನಗಾದ ಅವ­ಮಾನ ಸಹಿಸಿ ಕೂರುವವಳಲ್ಲ. ರೇಗಿಸಿದ ಹುಡುಗ­ರನ್ನು ಅಟ್ಟಾಡಿಸಿ ಹೊಡೆಯಲು ಪ್ರಯತ್ನಿಸುವ ‘ಜಿದ್ದಿ’ನವಳು.  

‘ಮನೆಗೆ ಡ್ರಾಪ್  ಮಾಡುತ್ತೀನಿ’ ಎಂದ ನಾಯಕನ ಬೈಕ್‌ನಲ್ಲಿ ಕೂತು ಮನೆಗೆ ಬರು­ತ್ತಿರುವಾಗ  ನಿರ್ಜನ ಪ್ರದೇಶದಲ್ಲಿ ಬೈಕ್ ಕೆಟ್ಟು ನಿಲ್ಲುತ್ತದೆ. ಆಗ  ಆತ ‘ನಾನು ಫುಟ್ ಬಾಲ್ ಕ್ಯಾಪ್ಟನ್. ಮನೆಗೆ ಡ್ರಾಪ್ ಮಾಡುತ್ತಿ­ರು­ವಾತ ಯಾರೆಂಬುದು ನಿನಗೆ ತಿಳಿದಿರಬೇಕು’ ಎಂದು ಹೇಳಿದಾಗ  ಆಕೆ ‘ನನ್ನ ತಂದೆ ಕುಸ್ತಿಪಟು’ ಎನ್ನುತ್ತಾಳೆ,  ಜೊತೆಗೆ ‘ಯೂ ಆರ್ ಸೇಫ್  ವಿಥ್ ಮಿ’ ಎಂದು ಹೇಳುವುದು ನಗೆ ಉಕ್ಕಿಸು­ತ್ತದೆ. ಆದರೆ  ಗಂಡು,  ಹೆಣ್ಣು ಕುರಿತಾದ ಹೊಸ ದೃಷ್ಟಿಯನ್ನೂ ಇದು ಕಟ್ಟಿಕೊಡುತ್ತದೆ. ‘ವಿವಾ­ಹದ ನಂತರ ಕೆರಿಯರ್ ಸಾಧ್ಯವಾಗುವುದಿಲ್ಲ’ ಎಂದು ಮೇರಿ ಕೋಮ್ ವಿವಾಹವಾಗುವುದನ್ನು ವಿರೋಧಿಸಿದ ಕೋಚ್ ಕಡೆಗೆ ‘ತಾಯ್ತನದ ನಂತರ ನಿನ್ನ ಶಕ್ತಿ ದ್ವಿಗುಣಗೊಂಡಿದೆ’ ಎಂದು ಆಕೆಗೆ ಹುರಿದುಂಬಿಸುತ್ತಾರೆ. ಹಾಗೆಯೇ  ಮೇರಿ ಸಾಧನೆಗೆ ಗಂಡನ ಪೂರ್ಣ ಸಹಕಾರ ಸಮಾಜಕ್ಕೆ ಆರೋಗ್ಯಕರ ಸಂದೇಶಗಳನ್ನು ನೀಡುವಂತಹದ್ದು.

ಮಹಿಳಾ ಶಕ್ತಿಯ ಹೊಸ ಆಯಾಮಗಳನ್ನು ತೆರೆದಿಡುವುದಲ್ಲದೆ, ಗಂಡು–ಹೆಣ್ಣಿನ ಸಂಬಂಧ­ಗಳ ಬಗ್ಗೆ ಆರೋಗ್ಯಕರ ವ್ಯಾಖ್ಯೆಗಳನ್ನು ನೀಡು­ವುದು ಈ ಚಿತ್ರಗಳ ಸಕಾರಾತ್ಮಕ ಸಂದೇಶ.  ಯಾವುದೇ ಕ್ಷೇತ್ರದಲ್ಲಾಗಲಿ ಹೆಣ್ಣುಮಕ್ಕಳ ವೃತ್ತಿ­ಪರ ಆಕಾಂಕ್ಷೆಗಳಿಗೆ ಕುಟುಂಬದ ಸದಸ್ಯರು ನೀರೆ­ರೆಯಲು  ಇಂತಹ  ಚಿತ್ರಗಳು ಪ್ರೇರಣೆ­ಯಾ­ಗ-­­ಬೇಕು.  80ರ ದಶಕದಲ್ಲಿ ಅನೇಕ ಹೆಣ್ಣು­ಮಕ್ಕಳು ಐಪಿಎಸ್ ಅಧಿಕಾರಿಗಳಾಗುವ ಕನಸು ಹೊಂದಲು ದೂರದರ್ಶನದಲ್ಲಿ ಪ್ರಸಾರ­ವಾ­ಗು­ತ್ತಿದ್ದ ‘ಉಡಾನ್’ ಧಾರಾವಾಹಿ ಪ್ರೇರಕವಾಗಿತ್ತು ಎಂಬುದನ್ನು ಮರೆಯಲಾಗದು.

ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.