ADVERTISEMENT

ಅತಿಥಿಯಿಂದ ಅಪೇಕ್ಷೆ

ಡಾ. ಗುರುರಾಜ ಕರಜಗಿ
Published 1 ಸೆಪ್ಟೆಂಬರ್ 2014, 19:30 IST
Last Updated 1 ಸೆಪ್ಟೆಂಬರ್ 2014, 19:30 IST

ಕಿಟ್ಟಣ್ಣ ಮತ್ತು ಗುಂಡಣ್ಣ ಒಂದೇ ಶಾಲೆಯಲ್ಲಿ ಓದಿದವರು. ಅವರ ಸ್ನೇಹ ಬಹಳ ಬಲವಾದದ್ದು. ಅವರು ಪರೀಕ್ಷೆ­ಯಲ್ಲಿ ಜೊತೆಗೆ ನಕಲು ಮಾಡಿದರು, ಜೊತೆಯಾಗಿಯೇ ನಪಾಸಾದರು. ನಂತರ ಒಂದೇ ದಿನ ಇಬ್ಬರಿಗೂ ಜ್ಞಾನೋ­­ದಯ­­ವಾಯಿತು. ಸರಸ್ವತಿಗೆ ನಮ್ಮ ಸೇವೆ ಇಷ್ಟವಿಲ್ಲವೆಂದು, ಇಬ್ಬರೂ ಒಂದೇ ದಿನ ಶಾಲೆ ಬಿಟ್ಟರು. 

ನಂತರ ವಿಧಿ ಅವರನ್ನು ಒಂದೆಡೆಗೇ ಇರಲು ಬಿಡಲಿಲ್ಲ. ಗುಂಡ­ಣ್ಣನ ತಂದೆಗೆ ವರ್ಗವಾಗಿ ಬೇರೆ ಊರಿಗೆ ಹೋದರು. ಕಿಟ್ಟಣ್ಣ ಊರಿನಲ್ಲಿಯೇ ಉಳಿದು ಸಣ್ಣ ವ್ಯಾಪಾರ ಮಾಡತೊಡಗಿದ. ನಿಧಾನ­ವಾಗಿ ಬೆಳೆದು ಸ್ವಲ್ಪ ಹಣ, ಹೆಸರು ಮಾಡಿದ. ಅವನಿಗೆ ಗುಂಡಣ್ಣನ ವಿಷ­ಯವೇ ತಿಳಿಯಲಿಲ್ಲ. ವರ್ಷಗಳು ಉರುಳಿ­ದವು. ಅವರಿದ್ದ ಊರು ಪಟ್ಟಣ­ವಾಯಿತು. 

ಒಂದು ದಿನ ಊರಿನ ಬಹು­ದೊಡ್ಡ ಹಾಲ್‌­ನಲ್ಲಿ ಒಬ್ಬ ಮಹಾನು­ಭಾವರ ಭಾಷಣ ಗೊತ್ತಾ­ಗಿತ್ತು. ಅವರು ಮಹಾನ್ ವ್ಯಕ್ತಿ­ಯೆಂದೂ, ಪ್ರಪಂಚದಾದ್ಯಂತ ಅನೇಕ ಸಂಸ್ಥೆಗಳನ್ನು ಕಟ್ಟಿದ್ದಾ­ರೆಂದೂ, ಬಹು­ದೊಡ್ಡ ವಾಗ್ಮಿಯೆಂದೂ ಹೆಸರು. ಕಿಟ್ಟಣ್ಣನಿಗೂ ಆಹ್ವಾನ ಬಂದಿತು. ಅದರಲ್ಲಿ ಮಹಾನುಭಾವರ ಹೆಸರು, ಭಾವಚಿತ್ರ ಪ್ರಕಟವಾಗಿತ್ತು, ಭಾಷಣ­ಕಾರರ ಹೆಸರು ಡಾ. ಬಿ.ಎಸ್ ಗುಂಡೂರಾವ್ ಎಂದಿತ್ತು.

ಅವರ ಫೋಟೊ ನೋಡಿದ ತಕ್ಷಣ ಕಿಟ್ಟಣ್ಣನ ಮನಸ್ಸಿನಲ್ಲಿ ಏನೋ ಹೊಳೆಯಿತು. ಈತನೇ ನಮ್ಮ ಗುಂಡಣ್ಣ ಇದ್ದಿರ­ಬಹುದೇ? ಈಗ ಮುಖಚರ್ಯೆ ಸ್ವಲ್ಪ ಬೇರೆಯಾಗಿ ಕಾಣು­­ತ್ತಿದೆ. ಮರುಕ್ಷಣವೇ ಅಂದುಕೊಂಡ. ಛೇ ಈ ಗುಂಡೂರಾ­ಯರೆಲ್ಲಿ ಆ ಗುಂಡಣ್ಣ ಎಲ್ಲಿ? ಆದರೂ ಸಂಶಯ ಉಳಿದೇ ಉಳಿಯಿತು. ಕಾರ್ಯಕ್ರಮಕ್ಕೆ ಹೋದ ಕಿಟ್ಟಣ್ಣ. ವಿಪರೀತ ಜನದಟ್ಟಣೆ. ಇವನಿಗೆ ಕಡೆಯ ಸಾಲು ಸಿಕ್ಕಿತು. ಅದು ಒಳ್ಳೆಯದೇ ಆಯಿತು. ಅತಿಥಿಗಳು ಹಾಲ್ ಒಳಗೆ ಬರುವುದೇ ಅಲ್ಲಿಂದ. ಬಾಗಿಲ ಹತ್ತಿರವೇ ಕುಳಿತ. ಡಾ. ಗುಂಡೂರಾವ್ ಬಂದರು. ಈಗ ಕಿಟ್ಟಣ್ಣನಿಗೆ ಸಂಶಯವೇ ಉಳಿಯ­ಲಿಲ್ಲ, ಇವನೇ ಗುಂಡಣ್ಣ!. ಕೂಗಿದ, ಗುಂಡಣ್ಣ. ಗುಂಡೂರಾವ್ ತಿರುಗಿ ನೋಡಿದರು. ಕಿಟ್ಟಣ್ಣನನ್ನು ನೋಡಿ­ದೊಡನೆ ಅವರ ಚರ್ಯೆಯೇ ಬದಲಾ­ಯಿತು.

ಮಗುವಿನಂತೆ ಓಡಿಬಂದು, ಕಿಟ್ಟಣ್ಣ ಎಂದು ಅಪ್ಪಿಕೊಂಡರು. ಇಬ್ಬರ ಕಣ್ಣಲ್ಲೂ ನೀರು! ಕಿಟ್ಟಣ್ಣ ಹೇಳಿದ, ‘ಗುಂಡಣ್ಣ ಕಾರ್ಯಕ್ರಮ ಮುಗಿದ ಮೇಲೆ ನನ್ನ ಹೊಸ ಮನೆಗೆ ಬಂದೇ ಹೋಗಬೇಕು. ನಾನು ಮುಂದೆ ಹೋಗಿ ಸಜ್ಜು ಮಾಡುತ್ತೇನೆ’. ಗುಂಡಣ್ಣ ಆಗಲಿ ಎಂದ. ತನ್ನ ಅಡ್ರೆಸ್ಸಿನ ಕಾಗದ ಕೊಟ್ಟು ಕಿಟ್ಟಣ್ಣ ಹೇಳಿದ, ‘ಇದೇ ನನ್ನ ಅಡ್ರೆಸ್, ಮನೆಯ ಮುಂದೆ ಬೇಕಾದಷ್ಟು ಕಾರು ನಿಲ್ಲಿಸಲು ಸ್ಥಳವಿದೆ.

ಅಲ್ಲಿ ಕಾರು ನಿಲ್ಲಿಸಿ ಅಪಾರ್ಟಮೆಂಟಿನ ಮುಖ್ಯದ್ವಾರಕ್ಕೆ ಬಾ. ಅದು ಸದಾ ಮುಚ್ಚಿಯೇ ಇರುತ್ತದೆ. ಅದನ್ನು ಎಡಗಾಲಿನಿಂದ ಒದ್ದು ತೆಗೆ. ನಂತರ ಎದುರಿಗೇ ಲಿಫ್ಟ್ ಇದೆ. ಎಡಗೈ ಮೊಣಕೈಯಿಂದ ಅದರ ಬಟನ್ ಒತ್ತು. ಒಳಗೆ ಬಂದು ಬಲಗೈ ಮೊಣಕೈ­ಯಿಂದ ಆರನೇ ಅಂತಸ್ತಿನ ಗುಂಡಿ ಒತ್ತು. ಆರನೇ ಅಂತಸ್ತಿಗೆ ಬಂದ ಕೂಡಲೇ ಹೊರ­ಬಂದು, ಹಾಲ್ ದಾಟಿ ಬಲಗಡೆಗೆ ತಿರುಗಿದರೆ ನನ್ನದೇ ಮೊದಲನೇ ಮನೆ. ನನ್ನ ಹೆಸರಿನ ಬೋರ್ಡ್ ಇದೆ. ಅಲ್ಲಿ ಬಲಗೈ ಮೊಣಕೈಯಿಂದ ಕರೆಗಂಟೆ­ಯನ್ನು ಒತ್ತು, ನಾನು ಬಾಗಿಲು ತೆಗೆ­ಯುತ್ತೇನೆ’. ಗುಂಡಣ್ಣ ಕೇಳಿದ, ‘ಮನೆಗೆ ಬರುವು­ದೇನೋ ಸರಿಯಪ್ಪ. ಆದರೆ ಈ ಕಾಲಿನಲ್ಲಿ ಒದೆಯುವುದು, ಮೊಣಕೈ­ಯಿಂದ ಗುಂಡಿ ಒತ್ತುವುದು, ಕರೆಗಂಟೆ ಒತ್ತುವುದು ಯಾಕೆ? ನನಗೆ ಕೈ ಇಲ್ಲವೇ?’. ಕಿಟ್ಟಣ್ಣ ಹೇಳಿದ, ‘ಅಲ್ಲಯ್ಯ, ಇಷ್ಟು ವರ್ಷಗಳ ಮೇಲೆ ಮೊದಲ ಬಾರಿಗೆ ನನ್ನ ಮನೆಗೆ ಬರುತ್ತಿದ್ದೀಯಾ. ನೀನೀಗ ತುಂಬ ದೊಡ್ಡ ಮನುಷ್ಯ. ಬರಿಗೈಯಲ್ಲಿ ಬರು­ತ್ತೀಯಾ? ಎರಡೂ ಕೈ ತುಂಬ ಸಾಮಾನು ಹಿಡಿದುಕೊಂಡಿ­ರುವುದರಿಂದ ನೀನು ಕಾಲು, ಮೊಣಕ­ೈಗಳನ್ನೇ ಉಪಯೋಗಿಸಬೇಕಲ್ಲವೇ?. ಗುಂಡಣ್ಣ, ಕಿಟ್ಟಣ್ಣನ ಮುಂದಾ­ಲೋಚ­­ನೆಗೆ ಬೆರಗಾದ. ಯಾರು, ಯಾವಾಗ, ನಮ್ಮಿಂದ ಏನನ್ನು ಅಪೇಕ್ಷೆ ಮಾಡುತ್ತಾರೆ ಎಂಬುದನ್ನು ಹೇಳುವುದು ಕಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.