ADVERTISEMENT

ಅನುಚಿತವಾದ ಸ್ಥಳ

ಡಾ. ಗುರುರಾಜ ಕರಜಗಿ
Published 16 ಜುಲೈ 2014, 19:30 IST
Last Updated 16 ಜುಲೈ 2014, 19:30 IST

ಒಂದು ಹಳ್ಳಿಯಲ್ಲಿ ಒಬ್ಬ ಗುರುವಿದ್ದ. ಆತ ಬಹಳ ಸಾಧನೆಯನ್ನು ಮಾಡಿ ಮಂತ್ರಗಳನ್ನು ಪಡೆದಿದ್ದ ಎಂಬ ಪ್ರತೀತ ಇತ್ತು. ಅದರಲ್ಲೂ ಆತನಿಗೆ ಸುವರ್ಣ­­ವರ್ಷ ಎಂಬ ಮಂತ್ರ ಸಿದ್ಧಿಸಿತ್ತು. ಸರಿಯಾದ ನಕ್ಷತ್ರಯೋಗವಿದ್ದಾಗ ಆತ ಶುದ್ಧವಾಗಿ ಕುಳಿತು ಈ ಮಂತ್ರವನ್ನು ಜಪಿಸುತ್ತ ಆಕಾಶ ನೋಡಿದರೆ ಮೇಲಿನಿಂದ ಬೆಲೆಬಾಳುವ ಮುತ್ತು ರತ್ನಗಳ ಮಳೆಯಾಗುತ್ತಿತ್ತು.

ಒಬ್ಬ ಶಿಷ್ಯ ಗುರುವಿನಿಂದ ಕಲಿ­ಯಲು ಬಂದಿದ್ದ. ಒಂದು ದಿನ ಯಾವುದೋ ಕೆಲಸದ ಮೇಲೆ ಗುರು ಶಿಷ್ಯರಿಬ್ಬರೂ ಬೇರೊಂದು ಊರಿಗೆ ಹೋಗಬೇಕಾಯಿತು. ದಾರಿ­ಯಲ್ಲಿ ಒಂದು ಕಾಡಿನ ಪ್ರದೇಶ­ವನ್ನು ದಾಟಬೇಕಿತ್ತು. ಆಗ ಹತ್ತು ಜನ ದರೋಡೆಕೋರರು ಬಂದು ಇವರನ್ನು ಹಿಡಿ­ದು­ಕೊಂಡರು. ಇವರು ತಮ್ಮ ಹತ್ತಿರ ಹಣವಿಲ್ಲವೆಂದು ಅಂಗಲಾಚಿ­ದರೂ ಅವರು ಬಿಡಲಿಲ್ಲ. ಗುರುವನ್ನು ಹಿಡಿದಿಟ್ಟು ಶಿಷ್ಯನಿಗೆ ಹೇಳಿದರು, ‘ನೀನು ಊರಿಗೆ ಹೋಗಿ ನೂರು ಹೊನ್ನು ತಾ. ತರದಿದ್ದರೆ ನಿನ್ನ ಗುರುವನ್ನು ಕತ್ತರಿಸಿ ಹಾಕುತ್ತೇವೆ’. ಶಿಷ್ಯ ಒಪ್ಪಿ ಊರಿಗೆ ಹೋಗುವ ಮೊದಲು ಗುರುವಿಗೆ ಹೇಳಿದ, ‘ಗುರುಗಳೇ ಇಂದು ರಾತ್ರಿ ನಕ್ಷತ್ರ ಯೋಗವಿದೆ. ಆದರೂ, ನೀವು ಯಾವ ಕಾರಣಕ್ಕೂ ರತ್ನಗಳ ಮಳೆ ತರಿ­ಸ­ಬೇಡಿ’. ಇವರು ‘ಆಗಲಿ’ ಎಂದರು.

ಸ್ವಲ್ಪ ಹೊತ್ತಿಗೆ ಸೂರ್ಯಾಸ್ತವಾಗಿ ನಕ್ಷತ್ರ­ಯೋಗ ಬಂದಿತು. ಗುರು ಯೋಚಿಸಿದರು. ಈ ದರೋಡೆಕೋರರು ನಮ್ಮನ್ನು ಹಿಂಸಿ­ಸು­­ವುದು ಹಣಕ್ಕಾಗಿ. ಹಣದ ಮಳೆಯನ್ನೇ ಸುರಿಸಿದರೆ ನಮ್ಮನ್ನು ಬಿಡುಗಡೆ ಮಾಡು­ತ್ತಾರಲ್ಲ ಎಂದುಕೊಂಡು ದರೋಡೆಕೋರರ ನಾಯಕನಿಗೆ ಹೇಳಿದರು, ‘ಅಯ್ಯಾ, ನಿಮಗೆ ಬೇಕಾದದ್ದು ಹಣ, ನನ್ನನ್ನು ಸ್ವಲ್ಪ ಕಾಲ ಬಿಡುಗಡೆ ಮಾಡಿದರೆ ಸ್ನಾನ ಮಾಡಿ ಬಂದು ಮಂತ್ರ ಹೇಳುತ್ತೇನೆ. ಆಗ ಹಣ ಮುತ್ತು ರತ್ನಗಳ ಮಳೆಯಾಗು­ತ್ತದೆ. ನಂತರ ನಮ್ಮನ್ನು ಬಿಟ್ಟುಬಿಡಿ’. ಕಳ್ಳರ ನಾಯಕ ಒಪ್ಪಿದ.

ಗುರುಗಳು ಮಂತ್ರ ಹೇಳಿದಾಗ ಹಣ, ರತ್ನಗಳ ಮಳೆಯೇ ಸುರಿಯಿತು. ಸಂತೋಷದಿಂದ ದರೋಡೆಕೋರರು ಅವನ್ನೆಲ್ಲ ಬಳಿದು ವಸ್ತ್ರಗಳಲ್ಲಿ ಕಟ್ಟಿಕೊಂಡರು. ಅಷ್ಟು ಹೊತ್ತಿಗೆ ಮತ್ತೆ ಐವತ್ತು ಜನ ಆಯುಧ ಸಹಿತರಾದ ಬಲಿಷ್ಠ ದರೋಡೆಕೋರರು ಬಂದು ಇವರನ್ನು ಹಿಡಿದುಕೊಂಡರು. ಆಗ ಮೊದಲಿನ ದರೋಡೆಕೋರರು ಹೊಸಬರಿಗೆ ಹೇಳಿದರು, ‘ನಾವು ಅಮಾಯಕರು, ಈ ಗುರುವಿಗೆ ಹಣ, ರತ್ನ ಸುರಿಸುವ ಮಂತ್ರ ಗೊತ್ತಿದೆ. ಇವನನ್ನು ಹಿಡಿದರೆ ನಿಮಗೆ ಅಪಾರ ಐಶ್ವರ್ಯ ದಕ್ಕುತ್ತದೆ’. ಹೀಗೆ ಹೇಳಿ ಹೋಗಲು ಪ್ರಯತ್ನಿಸಿದಾಗ ಅವರನ್ನೆಲ್ಲ ಹೊಸಬರು ಕೊಂದುಹಾಕಿ ಐಶ್ವರ್ಯ­ವನ್ನು ಪಡೆದರು.

ಅವರಿಗೆ ಅಷ್ಟರಿಂದಲೇ ತೃಪ್ತಿ ಇಲ್ಲ. ಇನ್ನಷ್ಟು ಹಣದ ಮಳೆ ಬರಿಸು ಎಂದು ಗುರುವನ್ನು ಪೀಡಿಸಿದರು. ಆಗ ಗುರು, ‘ಈ ನಕ್ಷತ್ರ ಯೋಗಕ್ಕೆ ಮತ್ತೆ ಒಂದು ವರ್ಷ ಕಾಯಬೇಕು’ ಎಂದ. ‘ಎಲಾ ಕಪಟ ಗುರು, ಆ ದರೋಡೆಕೋರರಿಗೆ ತಕ್ಷಣ ಮಳೆ ಬರಿಸಿದ ನೀನು ನಮಗೆ ಮೋಸ ಮಾಡುತ್ತೀಯಾ?’ ಎಂದು ಅವರನ್ನು ಕೋಪದಿಂದ ಕತ್ತರಿಸಿ ಹಾಕಿಬಿಟ್ಟರು. ತಮ್ಮ ಬಳಿಯಿದ್ದ ಐಶ್ವ­ರ್ಯ­ವನ್ನು ಹಂಚಿಕೊಳ್ಳಲು ತಕರಾರು ಬಂದು ಒಬ್ಬರು ಮತ್ತೊಬ್ಬರನ್ನು ಕೊಂದುಹಾಕಿದರು. ಅರ್ಧ ಗಂಟೆಯಲ್ಲಿ ಐಶ್ವರ್ಯ ಅನಾಥವಾಗಿ ಶವಗಳ ಮಧ್ಯೆ ಬಿದ್ದಿತ್ತು.

ಊರಿನಿಂದ ಹಣ ತಂದ ಶಿಷ್ಯ ನೋಡಿದ. ಅಲ್ಲಿ ಬಿದ್ದ ಐಶ್ವರ್ಯ, ಗುರುವಿನ ಶವ ಮತ್ತು ದರೋಡೆ­ಕೋರರ ದೇಹಗಳು ನಡೆದ ಕಥೆಯನ್ನು ಸೂಚಿಸಿದವು. ನಮ್ಮಲ್ಲಿ ಯಾವುದೇ, ಎಷ್ಟೇ ಶಕ್ತಿ ಇದ್ದರೂ ಅದನ್ನು ಎಲ್ಲಿ ಅವಶ್ಯವಿದೆಯೇ ಅಲ್ಲಿಯೇ ತೋರ­ಬೇಕು. ಅನುಚಿತವಾದ ಸ್ಥಳದಲ್ಲಿ ತೋರಿದ ಶಕ್ತಿ ಅನಾಹುತ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.