ADVERTISEMENT

ಗುಡು ಗುಡು ಗುಳಕ್

ಡಾ. ಗುರುರಾಜ ಕರಜಗಿ
Published 28 ಏಪ್ರಿಲ್ 2014, 19:30 IST
Last Updated 28 ಏಪ್ರಿಲ್ 2014, 19:30 IST

ಅದೊಂದು ಪುಟ್ಟ ಮೊಲ. ತುಂಬ ಸುಂದರವಾಗಿ ಬೆಣ್ಣೆಯ ಮುದ್ದೆ­ಯಂತಿದ್ದ ಈ ಮೊಲ ಎಲ್ಲರಿಗೂ ಪ್ರಿಯವಾಗಿತ್ತು. ಅದನ್ನು ಕಂಡರೆ ಎಲ್ಲ­ರಿಗೂ ಸಂತೋಷವಾಗುತ್ತಿತ್ತು. ಮೊಲ ಟಣಕ್ ಟಣಕ್ ಎಂದು ಕುಪ್ಪಳಿಸುತ್ತ, ತನ್ನ ಉದ್ದ ಕಿವಿಗಳನ್ನು ಪಟಪಟನೇ ಬಡಿಯುತ್ತ ಹೋಗುತ್ತಿದ್ದರೆ ದಾರಿಯಲ್ಲಿ ಬಂದ ಪ್ರಾಣಿಗಳು ಅದನ್ನು ನಿಂತು ನೋಡಿ ಕಣ್ಣು ತುಂಬಿಕೊಳ್ಳು­ತ್ತಿದ್ದವು.

ಒಂದು ದಿನ ಮೊಲ ನೀರು ಕುಡಿಯಲು ಸರೋವರದ ಬಳಿ ಹೋಯಿತು. ಸುತ್ತಲೂ ಬೆಟ್ಟ­ಗಳಿದ್ದ ಸರೋವರದ ನೀರು ಶಾಂತವಾಗಿ ಕನ್ನಡಿಯಂತೆ ತೋರುತ್ತಿತ್ತು. ಇದು ನೀರಿನ ಹತ್ತಿರಹೋಗಿ ಇನ್ನೇನು ಕುಡಿಯಬೇಕೆಂದಿದ್ದಾಗ ಭಾರಿ ಸದ್ದಾಯಿತು. ಕೊನೆಗೆ ಗುಡು ಗುಡು ಗುಳಕ್ ಎಂಬ ವಿಚಿತ್ರ ಸಪ್ಪಳಾಯಿತು. ಮೊದಲೇ ಹೆದರಿಕೆಯ ಸ್ವಭಾವದ ಮೊಲ, ಗಾಬರಿಯಾಗಿ ಗರಗರನೇ ಕಣ್ಣುಗುಡ್ಡೆಗಳನ್ನು ತಿರುಗಿಸಿ, ಹಿಂತಿರುಗಿ ಓಡತೊಡಗಿತು.

ತನ್ನ ಮನೆ ಯಾವ ದಿಕ್ಕಿಗೆ ಇದೆ ಎಂಬು­ದನ್ನು ಮರೆತು ವಿರುದ್ಧ ದಿಕ್ಕಿಗೆ ಓಡಿತು. ಓಡುತ್ತ ಓಡುತ್ತ ಕೂಗಿತು, ‘ಕಾಪಾಡಿ, ಕಾಪಾಡಿ, ಗುಡು ಗುಡು ಗುಳಕ್ ಬರ್ತಾ ಇದೆ. ನೀವೂ ಓಡಿ’. ದಾರಿಯಲ್ಲಿ ಆರಾಮವಾಗಿ ಹುಲ್ಲು ತಿನ್ನುತ್ತ ನಿಂತಿದ್ದ ಜಿಂಕೆ ಕಂಡಿತು. ಗಾಬರಿಯಾಗಿ ಬರುತ್ತಿದ್ದ ಮೊಲವನ್ನು ನೋಡಿ,‘ಏನಾಯ್ತು?’ ಎಂದು ಕೇಳಿತು. ಉಸಿರು ಬಿಗಿಹಿಡಿದು ಮೊಲ ಕೂಗಿತು ‘ಓಡು, ಓಡು, ಗುಡು ಗುಡು ಗುಳಕ್ ಬೆನ್ನು ಹತ್ತಿ ಬರ್ತಾ ಇದೆ’. ಜಿಂಕೆಯೂ ಮೊಲದ ಹಿಂದೆ ಓಡಿತು.

ADVERTISEMENT

ಮರದ ಮೇಲೆ ಕುಳಿತಿದ್ದ ಕೋತಿಗೆ ಓಡುತ್ತಿರುವ ಪ್ರಾಣಿಗಳನ್ನು ಕಂಡು ಆತಂಕವಾಯಿತು. ಕೋತಿಯನ್ನು ನೋಡಿ ಜಿಂಕೆ ಕೂಗಿತು, ‘ಓಡಿ ಬದುಕಿಕೊ, ಗುಡು ಗುಡು ಗುಳಕ್ ಬೆನ್ನತ್ತಿ ಬರುತ್ತಿದೆ’. ಕೋತಿ ತನಗೆ ದಿಕ್ಕು ಕಂಡೆಡೆಗೆ ಮರದಿಂದ ಮರಕ್ಕೆ ಹಾರುತ್ತ ಹೋಯಿತು. ಮುಂದೆ ಕೆಸರಿನ ಹೊಂಡದಲ್ಲಿ ಆರಾಮವಾಗಿ ಮಲಗಿದ್ದ ಬೃಹದ್ದೇಹಿ ಹಿಪ್ಪೊ ಗಾಬರಿಯ ಚಲನವಲನಗಳನ್ನು ಕಂಡು ಗೋಣಿತ್ತಿ ನೋಡಿತು. ಉಸಿರು ಬಿಗಿ ಹಿಡಿದು ಓಡುತ್ತಿದ್ದ ಜಿಂಕೆ ಚೀರಿತು, ‘ಏನು ಕುಳಿತಿದ್ದೀ ನೋಡುತ್ತ.

ಬೇಗನೇ ಮೇಲೆದ್ದು ಓಡು. ಗುಡು ಗುಡು ಗುಳಕ್ ಬರ್ತಾ ಇದೆ’. ಆಲಸಿ ಹಿಪ್ಪೊಗೆ ಏನೂ ತಿಳಿಯಲಿಲ್ಲ. ಆದರೆ ಯಾವುದೋ ಭಯಂಕರ ಅಪಾಯ ಬರುತ್ತದೆಂದು ಕೆಸರಿನಿಂದ ಕಿತ್ತುಕೊಂಡು ಮೈ ಜಾಡಿಸಿಕೊಂಡು ಅವರ ಹಿಂದೆಯೇ ಓಡಿತು. ಇವೆಲ್ಲ ಒಂದೇ ದಿಕ್ಕಿಗೆ ಓಡುವುದನ್ನು ಕಂಡು ಆನೆ, ಜಿರಾಫೆ ಮತ್ತು ಉಳಿದ ಪ್ರಾಣಿಗಳೂ ಗಾಬರಿಯಿಂದ ಓಡುತ್ತ ಹಿಂಬಾಲಿ­ಸಿದವು.

ಇವುಗಳ ಗದ್ದಲ, ಅರಚಾಟ ಕಾಡಿನ ರಾಜ ಸಿಂಹವನ್ನು ನಿದ್ರೆಯಿಂದ ಎಬ್ಬಿಸಿ­ದವು. ಪ್ರಾಣಿಗಳ ಮೇಳ ಹತ್ತಿರ ಬಂದಾಗ ಸಿಂಹ ಗರ್ಜಿಸಿತು, ‘ಹೇ ನಿಂತುಕೊಳ್ಳಿ. ಏನದು ಕೋಲಾಹಲ?’. ಆನೆ ಗಕ್ಕನೇ ನಿಂತು ಹೇಳಿತು, ‘ರಾಜಾ, ನೀನೂ ಓಡು. ಗುಡು ಗುಡು ಗುಳಕ್ ಬರ್ತಾ ಇದೆ’. ‘ಏನದು ಗುಡು ಗುಡು ಗುಳಕ್? ಯಾರು ಕಂಡರು ಅದನ್ನು?’ ಎಂದು ಜೋರಾಗಿ ಗದರಿತು ಸಿಂಹ. ಆನೆ ಹೇಳಿತು, ನಾನು ನೋಡಿಲ್ಲ, ಜಿರಾಫೆಯೂ ಹಾಗೆಯೇ ಹೇಳಿತು.

ಸಿಂಹ ಜಿರಾಫೆ ಕಡೆಗೆ ತಿರುಗಿತು. ಮತ್ತಷ್ಟು ಗಾಬರಿಯಾದ ಜಿರಾಫೆ, ನನಗೆ ಹಿಪ್ಪೊ ಹೇಳಿತು ಎಂದಿತು. ಹೀಗೆಯೇ ಸರಪಳಿ ಮುಂದುವರೆದು ಕೊನೆಗೆ ಮೊಲದ ಸರದಿ ಬಂದಿತು. ಮೊಲ ಹೇಳಿತು, ‘ರಾಜಾ ನಾನು ನೀರು ಕುಡಿಯಲು ಸರೋವರದ ಒಳಗೆ ಹೋದಾಗ ಇದೇ ರೀತಿ ಭಾರಿ ಸದ್ದಾಯಿತು’. ಎಲ್ಲ ಪ್ರಾಣಿ­ಗಳು ಸಿಂಹದ ನೇತೃತ್ವದಲ್ಲಿ ಸರೋವರದ ಬಳಿಗೆ ಬಂದವು. ಎಲ್ಲವೂ ಶಾಂತವಾಗಿ ನಿಂತವು. ಹತ್ತು ನಿಮಿಷ ಕಳೆದ ಮೇಲೆ ಪಕ್ಕದ ಬೆಟ್ಟದಿಂದ ಬಂಡೆಯೊಂದು ಗುಡು­ಗುಡು ಉರುಳುತ್ತ ನೀರಲ್ಲಿ ಗುಳಕ್ ಎಂದು ಬಿತ್ತು. ಮೊಲ ಕೂಗಿತು, ‘ಇದೇ ಗುಡು ಗುಡು ಗುಳಕ್’. ಎಲ್ಲ ಪ್ರಾಣಿ­ಗಳು ನಕ್ಕವು.

ಮೊಲವನ್ನು ನೋಡಿ ನಗೆಯಾಡಿ ತಂತಮ್ಮ ಸ್ಥಳಗಳಿಗೆ ತೆರಳಿದವು. ಇದು ಮಕ್ಕಳ ಕಥೆ ಎನಿಸುವುದಿಲ್ಲವೇ? ಹೌದು. ಆದರೆ ನಮಗರಿವಿಲ್ಲದಂತೆ ಬದುಕಿ­ನಲ್ಲಿ ನಾವೂ ಹಾಗೆಯೇ ಮಾಡುತ್ತೇವೆ. ಯಾರೋ, ಯಾವ ಸನ್ನಿವೇಶ­ದಲ್ಲೋ, ಯಾವ ಕಾರಣಕ್ಕೋ ಹೇಳಿದ ಮಾತು ಕಿವಿಯಿಂದ ಕಿವಿಗೆ ಹೋಗಿ, ಮುಂದೆ ಸಾಗುವಾಗ ಇರುವ ವಸ್ತು ಸ್ಥಿತಿಯೇ ಬೇರೆ, ತಲುಪಿದ್ದೇ ಬೇರೆಯಾಗಿ ಆತಂಕ ಸೃಷ್ಟಿಸುತ್ತದೆ.

ಇದೇ ರೀತಿ ಗಾಳಿ ಮಾತುಗಳು ಕೂಡ ಹರಡಿ ವ್ಯಕ್ತಿಗಳು, ಸಂಸ್ಥೆಗಳ ಚಾರಿತ್ರ್ಯವಧೆ ಮಾಡುತ್ತವೆ. ನಾವು ಕೇಳಿದ ವಿಷಯವನ್ನು, ಅದೆಷ್ಟೇ ರೋಚಕವಾಗಿದ್ದರೂ ಅದರ ಸತ್ಯಾಸತ್ಯತೆ ಅರಿಯದೆ ಮತ್ತೊಬ್ಬರಿಗೆ ರವಾನೆ ಮಾಡು­ವುದು ಒಂದು ಅನಾಹುತ. ಆ ಅಪರಾಧ ನಮ್ಮಿಂದಾಗದಿರಲಿ ಎಂಬ ಎಚ್ಚರಿಕೆ ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.