ADVERTISEMENT

ಗುಲಾಬಿಯ ಗುಚ್ಛ ಅಥವಾ ಕಸದ ರಾಶಿ - ಯಾವುದು ಆಯ್ಕೆ?

ಡಾ. ಗುರುರಾಜ ಕರಜಗಿ
Published 10 ನವೆಂಬರ್ 2013, 19:30 IST
Last Updated 10 ನವೆಂಬರ್ 2013, 19:30 IST

ಕೆಲವೊಂದು ಅಭ್ಯಾಸಗಳು ಉಳಿದೇ ಬಿಡುತ್ತವೆ. ನನಗೆ ಬೆಳಿಗ್ಗೆ ಎದ್ದ ಮೇಲೆ ಸ್ನಾನ ಪೂಜೆ ಮಾಡಿದ ತಕ್ಷಣ ವರ್ತಮಾನ ಪತ್ರಿಕೆ ಬೇಕು. ಒಂದು ದಿನ ಯಾವುದೋ ಕಾರಣಕ್ಕೆ ವರ್ತಮಾನ ಪತ್ರಿಕೆ ಬರದಿದ್ದರೆ ವಿಪರೀತ ಚಡಪಡಿಕೆ­ಯಾಗುತ್ತದೆ, ಯಾರೋ ಆತ್ಮೀಯರು ದೂರ ಹೋದಂತೆ ಸಂಕಟವಾಗುತ್ತದೆ.

ಎಂದಿನಂತೆ ಅಂದೂ ವರ್ತಮಾನ ಪತ್ರಿಕೆ  ತರಲು ಮನೆಯ ಗೇಟಿನ ಹತ್ತಿರ ಹೋದೆ. ಅಲ್ಲಿ ಬಿದ್ದಿತ್ತು ವರ್ತಮಾನ ಪತ್ರಿಕೆ. ಅದನ್ನು ನೋಡಿ ರಕ್ತ ತಲೆಗೇರಿಬಿಟ್ಟಿತು. ಪತ್ರಿಕೆಯನ್ನು ಹಾಕುವ ಹುಡುಗ ಅದನ್ನು ಪೆಟ್ಟಿಗೆಯಲ್ಲಿ ಹಾಕುವ ಬದಲು ಗೇಟಿನ ಮೇಲೆ ಹಾರಿಸಿ ಬಿಸಾಕಿ ಹೋಗಿದ್ದಾನೆ! ನಿನ್ನೆ ರಾತ್ರಿಯಾದ ಮಳೆಯಿಂದಾಗಿ ಗೇಟಿನ ಒಳಗೆ ನೀರು ನಿಂತು ಸಣ್ಣ ಕೊಳದಂತಾಗಿದೆ.

ಇವನು ಹಾಕಿದ ಪತ್ರಿಕೆ ನೆನೆದು ತೊಪ್ಪೆಯಾಗಿ ಇನ್ನೇನು ಕರಗಿ ಹೋಗುವ ಸ್ಥಿತಿಗೆ ಬಂದಿದೆ. ಅದನ್ನು ಓದುವುದಂತೂ ದೂರ, ಎತ್ತಿಕೊಂಡು ಒಳಗೆ ಬರುವುದೇ ಕಷ್ಟ. ಸಿಟ್ಟಿನಿಂದ ದುಮುದುಮುಗುಟ್ಟುತ್ತ ಮನೆಯೊಳಗೆ ಬಂದೆ. ಟಿವಿಯಲ್ಲಾದರೂ ವಾರ್ತೆ ಕೇಳೋಣ ಎಂದು ಹಚ್ಚಿದರೆ ಯಾವ ಚಿತ್ರವೂ ಬರಲಿಲ್ಲ. ಕರೆಂಟೇ ಇಲ್ಲ! ಮೊದಲೇ ಕಾವೇರಿದ ತಲೆ ಕುದಿಯುವಂತಾಯಿತು. ಆಫೀಸಿಗೆ ಹೊರಡಲು ಬಟ್ಟೆ ಧರಿಸಿ ಸಿದ್ಧನಾಗಿ ತಿಂಡಿ ತಿನ್ನಲು ಹೋದೆ. ಹೆಂಡತಿ ಮಾಡಿದ ಇಡ್ಲಿ, ಸಾಂಬಾರಿನ ವಾಸನೆ ಸಿಟ್ಟನ್ನು ಸ್ವಲ್ಪ ಕಡಿಮೆ ಮಾಡುವಂತೆ ತೋರಿತು.

ADVERTISEMENT

ಎರಡು ತುತ್ತು ತಿನ್ನುವಷ್ಟರಲ್ಲಿ ಪೋನ್ ಸದ್ದಾಯಿತು. ಮೊಬೈಲ್ ನನ್ನ ಕೋಟಿನ ಜೇಬಿನಲ್ಲೇ ಇತ್ತಲ್ಲ? ಎಡಗೈಯಿಂದ ಅದನ್ನು ಹೊರತೆಗೆಯುವಾಗ ತಟ್ಟೆಯಲ್ಲಿಯ ಚಮಚಕ್ಕೆ ಕೈ ಬಡಿದು ಅದು ಠಪ್ಪೆಂದು ಹಾರಿ ಸಾಂಬಾರಿನ ಬಟ್ಟಲಕ್ಕೆ ಬಡಿಯಿತು. ಅದು ಉರುಳಿತು. ಸಾಂಬಾರು ಚಿಮ್ಮಿ ನನ್ನ ಕೋರ್ಟಿನ ಮೇಲೆಯೇ ಹರಿಯಿತು. ನನ್ನ ಗ್ರಹಗತಿಯೇ ಸರಿಯಿಲ್ಲವೆಂದು ತಿಂಡಿ ತಿನ್ನದೆ ಎದ್ದು ಬಟ್ಟೆ ಬದಲಿಸಿ ಆಫೀಸಿಗೆ ಹೋದೆ. ತಲೆ ಬಿಸಿಯಾಗಿದೆ, ಹೊಟ್ಟೆ ಖಾಲಿಯಾಗಿದೆ.

ಈ ಅವಸ್ಥೆಯಲ್ಲಿ ಯಾವ ಕೆಲಸ ಮಾಡಿದರೂ ಸರಿಯಾಗುವುದು ಕಷ್ಟ. ನನಗೆ ಹಾಗೆಯೇ ಆಯಿತು. ಯಾವ ಯಾವ ಕಾರ್ಯಗಳನ್ನು ಅತ್ಯಂತ ಸುಲಭವಾಗಿ ಮಾಡುತ್ತಿದ್ದೆನೋ ಅಲ್ಲಿಯೇ ಅಂದು ತಪ್ಪುಗಳಾದವು. ಪಾಪ! ಯಾವ ದೊಡ್ಡ ತಪ್ಪು ಮಾಡದಿದ್ದರೂ ಒಂದಿಬ್ಬರು ನನ್ನಿಂದ ಬೈಸಿಕೊಂಡರು. ಆಫೀಸಿನಲ್ಲಿ ಇದ್ದಷ್ಟು ಹೊತ್ತು ಮತ್ತಷ್ಟು ಅನಾಹುತಗಳಾದಾವು ಎಂದು ಬೇಗನೇ ಮನೆಗೆ ಹೊರಟೆ. ಅಂದು ನನ್ನ ಡ್ರೈವರ್ ಇರಲಿಲ. ನಾನೇ ನಡೆಸಿಕೊಂಡು ಹೊರಟೆ.

ಉಳಿದ ಕೆಲಸವನ್ನು ಮನೆಯಲ್ಲೇ ಮಾಡಿ ಮುಗಿಸುವ ಹಂಬಲ. ಮನೆಯಿಂದ ಇನ್ನು ಅರ್ಧ ಕಿಲೋಮೀಟರ್ ಮಾತ್ರ ಇದೆಯೆಂದಾಗ ಧಡ್, ಧಡ್ ಸಪ್ಪಳ ಕೇಳಿಸಿತು. ಕಾರನ್ನು ರಸ್ತೆಯ ಬದಿಗೆ ನಿಲ್ಲಿಸಿ ಕೆಳಗಿಳಿದು ನೋಡಿದೆ. ಮುಂದಿನ ಎಡಗಡೆಯ ಟೈರು ಪಂಕ್ಚರ್ ಆಗಿದೆ! ರಸ್ತೆಯಲ್ಲಿ ವಾಹನಗಳ ದಟ್ಟಣೆ ಅದರ ಮೇಲೆ ನನ್ನದು ಸೂಟುಬೂಟಿನ ಅವಾಂತರ. ತಲೆ ಸಿಡಿದೆ ಹೋಯಿತು. ಆಫೀಸಿಗೆ ಫೋನ್ ಮಾಡಿದೆ. ಅರ್ಧಗಂಟೆಯ ಮೇಲೆ ಮತ್ತೊಬ್ಬ ಡ್ರೈವರ್ ಬಂದು ಅದನ್ನು ಸರಿಮಾಡಿ ನನ್ನನ್ನು ಮನೆ ತಲುಪಿಸುವ ಹೊತ್ತಿಗೆ ತುಂಬ ನಿಧಾನವಾಗಿತ್ತು. ಮನೆಯಲ್ಲಿ ಮಾಡಬೇಕೆಂದಿದ್ದ ಕೆಲಸ ನೆಗೆದುಬಿದ್ದಿತ್ತು!

ಬೆಳಿಗ್ಗೆಯಿಂದ ಉಪವಾಸವಿದ್ದು ಕಂಗಾಲಾಗಿದ್ದ ನಾನು ರಾತ್ರಿ ಊಟ ಮಾಡಿದ ಮೇಲೆ ಮಲಗಲು ಪ್ರಯತ್ನಿಸಿದೆ. ರಾತ್ರಿ ಹತ್ತು ಗಂಟೆಗೆ ನಿದ್ರೆ ಹತ್ತುವ ವೇಳಗೆ ಢರ್, ಢರ್ ಎಂಬ ಭಾರ ಸದ್ದು ಮನೆಯ ಮುಂದೆಯೇ ಕೇಳಿಸಿ ಎದ್ದು ಕುಳಿತೆ. ಛೇ ಮಲಗಲೂ ಸಾಧ್ಯವಿಲ್ಲವಲ್ಲ ಎಂದುಕೊಂಡು, ಏನದು ಸದ್ದು? ಎಂದು ಹೆಂಡತಿಯನ್ನು ಕೇಳಿದೆ. ಆಕೆ ಹೇಳಿದಳು, ‘ಬೆಳಿಗ್ಗೆ ಕಸ ತೆಗೆದುಕೊಂಡು ಹೋಗಲು ಬಂದ ಕಾರ್ಪೋರೇಷನ್ ಲಾರಿ ಕೆಟ್ಟು ನಿಂತಿತ್ತು. ಅದೇನೋ ಗುದ್ದಾಡಿ ಈಗ ಸರಿಮಾಡಿದ್ದಾರೆ.

ಇಡೀ ದಿನ ಕೊಳೆತು ನಾರುತ್ತಿದ್ದ ಕಸ ಈಗಾದರೂ ಹೋಗುತ್ತದಲ್ಲ. ನಾಳೆ ಓಣಿ ಶುದ್ಧವಾಗಿರುತ್ತದೆ’. ತಕ್ಷಣ ನನ್ನ ತಲೆಯಲ್ಲಿ ಬೆಳಕು ಹೊಳೆಯಿತು. ಹೌದು, ರಸ್ತೆಯಲ್ಲಿ ಬಿದ್ದಿದ್ದ ಕಸವನ್ನು ಕಾರ್ಪೋರೇಷನ್ ಲಾರಿ ತೆಗೆದುಕೊಂಡು ಹೋಯಿತು. ನಿಜ, ಆದರೆ ಬೆಳಿಗ್ಗೆಯಿಂದ ನಕಾರಾತ್ಮಕ ಚಿಂತೆಯಿಂದ ತುಂಬಿ ಹೋಗಿದ್ದ ನನ್ನ ಮನಸ್ಸಿನಲ್ಲಿಯ ಕಸ ಹೋಗುವುದು ಯಾವಾಗ? ಸಣ್ಣ ಸಣ್ಣ ತೊಂದರೆಗಳನ್ನು ಅಲ್ಲಿಯೇ ನಕ್ಕು ಮರೆಯಬಹುದಿತ್ತಲ್ಲ? ಇಡೀ ದಿನವನ್ನು ಹಾಳುಮಾಡಿಕೊಳ್ಳುವ ಅವಶ್ಯಕತೆ ಇತ್ತೇ? ಎದ್ದು ಕುಳಿತು ದೀರ್ಘಶ್ವಾಸ ತೆಗೆದುಕೊಂಡು ಮನಸ್ಸಿನಲ್ಲಿಯ ಕಸವನ್ನು ಕಾಲ್ಪನಿಕವಾಗಿ ಎತ್ತಿ ಹೋಗುತ್ತಿರುವ ಕಾರ್ಪೋರೇಷನ್ ಲಾರಿಯಲ್ಲಿ ಎಸೆದು ಮಲಗಿದೆ.

ಕೂಡಲೇ ನೆಮ್ಮದಿಯ ನಿದ್ರೆ ಬಂತು. ಇಡೀ ದಿನ ಯಾವುಯಾವುದೋ ಘಟನೆಗಳಿಂದ ಮನದಲ್ಲಿ ತುಂಬಿಕೊಂಡ ಕಸವನ್ನು ಮಲಗುವ ಮುಂದೆ ಹೊರಗೆ ಬಿಸಾಡಿ ಮಲಗುವುದು ಕ್ಷೇಮ. ಮರುದಿನವಾದರೂ ಸ್ವಚ್ಛವಾಗಿದ್ದೀತು. ನಾವು ಭೂಮಿಗೆ ಬಂದಾಗ ಭಗವಂತ ನಮಗೊಂದು ಬುಟ್ಟಿ ಕೊಟ್ಟು ಏನಾದರೂ ತುಂಬಿಕೊಂಡು ಬನ್ನಿ ಎಂದು ನಿಯಮಿಸಿದ್ದಾನೆ. ಈ ಪ್ರಪಂಚದಲ್ಲಿ ಗುಲಾಬಿಯ ತೋಟವೂ ಇದೆ, ಕಸದ ರಾಶಿಯೂ ಇದೆ. ಯಾವುದನ್ನು ಆಯ್ಕೆ ಮಾಡಿ ತುಂಬಿಕೊಳ್ಳಬೇಕೆನ್ನುವುದು ನಮ್ಮ ಆಯ್ಕೆ. ನಮ್ಮ ಬದುಕು ಹೂಗುಚ್ಛವಾಗಬೇಕೇ ಇಲ್ಲವೇ ಕಸದ ಗುಂಡಿಯಾಗಬೇಕೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.