ADVERTISEMENT

ತಾಳ್ಮೆ ಯಾರಿಗೆ?

ಡಾ. ಗುರುರಾಜ ಕರಜಗಿ
Published 21 ಮೇ 2014, 19:30 IST
Last Updated 21 ಮೇ 2014, 19:30 IST

ಅಜ್ಜಿ ಶಾಪಿಂಗ್ ಮಾಲ್‌ಗೆ ಬಂದಿ­ದ್ದರು. ಏನೇನೋ ಕೊಂಡುಕೊಳ್ಳ­ಬೇಕೆಂದು ಬಂದಿದ್ದಾರೆ. ಆದರೆ, ಯಾವುದೂ ಸರಿಯಾಗಿ ನೆನಪಾಗುತ್ತಿಲ್ಲ. ಹಾಳಾದ್ದು ವಯಸ್ಸೇ ಹೀಗೆ, ಯಾವುದೂ ನೆನಪಿರೋದಿಲ್ಲ. ಅತ್ಯಂತ ನೆನಪಿನಿಂದ ಬರೆದಿಟ್ಟಿದ್ದ ಪಟ್ಟಿಯನ್ನು ಕೂಡ ಮನೆಯಲ್ಲೇ ಬಿಟ್ಟು ಬಂದಿದ್ದಾರೆ. ಆಯ್ತು, ಎಲ್ಲ ಕೌಂಟರ್‌ಗಳನ್ನು ನೋಡುತ್ತ ಹೋದರಾಯಿತು. ತನಗೆ ಬೇಕಾದ ವಸ್ತು ಕಣ್ಣಿಗೆ ಕಂಡರೆ ತೆಗೆದು­ಕೊಂಡ­ರಾಯಿತು ಎಂದು ಅಜ್ಜಿ ನಿಧಾನವಾಗಿ ನಡೆದರು.

ಮುಂದೆ ಚಾಕಲೇಟ್‌ಗಳ ಕೌಂಟರ್ ಬಂದಿತು. ಅದರ ಮುಂದೆ ನಿಂತಾಗ ತನ್ನ ಹಿಂದೆಯೇ ಯಾರೋ ಭಯಂಕರವಾಗಿ ಚೀರಿದಂತಾಯಿತು. ಅಜ್ಜಿಯ ಎದೆ ಝಲ್ಲೆಂದಿತು. ತಿರುಗಿ ನೋಡಿದರೆ ಒಬ್ಬ ಎಂಟು ವರ್ಷದ ಹುಡುಗ ಕುರ್ಚಿಯ ಮೇಲಿಂದ ಉರುಳಿ ಬಿದ್ದು ಕೂಗು­ತ್ತಿದ್ದಾನೆ. ಆಗ ಒಬ್ಬ ಹಿರಿಯ ಓಡಿಬಂದ, ಬಹುಶಃ ಆತ ಹುಡುಗನ ಅಜ್ಜ ಇರಬೇಕು. ಬಂದವನೇ ಹುಡುಗನನ್ನು ಎತ್ತಿದ. ‘ಗುಂಡಣ್ಣ ಕೋಪ ಬೇಡಪ್ಪ. ಮುಗೀತು, ಹತ್ತು ನಿಮಿಷದಲ್ಲಿ ಅಂಗಡಿಯಿಂದ ಹೊರಗೆ ಹೋಗಿ ಬಿಡೋಣ’ ಎಂದ. ಮಗುವನ್ನು ಕರೆದು­ಕೊಂಡು ಹೊರಟ.

ಮುಂದಿನ ತರಕಾರಿ ವಿಭಾಗದಲ್ಲಿ ಅದೇ ಹಣೆಬರಹ. ಆ ಹುಡುಗ ಅಸಾಧ್ಯ ಉಪದ್ಯಾಪಿ. ಒಂದು ಕ್ಷಣ ನಿಂತಲ್ಲಿ ನಿಲ್ಲಲಾರ. ಕೈಗೆ ಸಿಕ್ಕಿದ್ದನ್ನು ಎಳೆಯುತ್ತಾನೆ, ಸಾಮಾನುಗಳನ್ನು ಬೀಳಿಸು­ತ್ತಾನೆ. ನೋಡುತ್ತಿದ್ದಂತೆ, ಹುಡುಗ ದೊಡ್ಡ ತರಕಾರಿಯ ಬುಟ್ಟಿ  ಎಳೆದು ಬೀಳಿಸಿದ. ತರಕಾರಿ ಎಲ್ಲೆಡೆ ಚೆಲ್ಲಾಡಿತು. ಮತ್ತೆ ಅಜ್ಜ ಓಡಿ ಬಂದ. ಸುತ್ತಮುತ್ತಲಿನವರ ಇರಿಯುವ ನೋಟವನ್ನು ತಾಳಿಕೊಳ್ಳುತ್ತ ಹೇಳಿದ, ‘ಬೇಡಪ್ಪ, ಬೇಜಾರು ಬೇಡ ಗುಂಡಣ್ಣ. ತಾಳಿಕೋ, ಇನ್ನರ್ಧ ಗಂಟೆ. ಖರೀದಿ ಎಲ್ಲ ಮುಗಿಯಿತು’. ಮತ್ತೆ ಹುಡುಗನ ತಲೆಯ ಮೇಲೆ ಕೈಯಾಡಿಸಿ, ಕೈಹಿಡಿದು ಕರೆದುಕೊಂಡು ಹೊರಟ. ಅಜ್ಜಿಗೆ ಈ ಅಜ್ಜನ ತಾಳ್ಮೆಯ ಬಗ್ಗೆ ಆಶ್ಚರ್ಯ­ವಾಯಿತು.

ಇದು ಇಷ್ಟಕ್ಕೇ ನಿಲ್ಲಲಿಲ್ಲ. ಅಜ್ಜ ಮತ್ತೇನನ್ನೋ ಕೊಳ್ಳಲು ಹೋದಾಗ, ಈ ಹುಡುಗ ಓಡಿ ಹೋಗಿ ಯಾವುದೋ ವಸ್ತುವನ್ನು ಎಳೆಯಲು ಹೋದ. ಮೊದಲೇ ನುಣುಪಾದ ನೆಲ, ಅದರ ಮೇಲೆ ಒಂದಿಷ್ಟು ನೀರು ಬಿದ್ದಿತ್ತೋ ಏನೋ, ಸುಂಯ್ ಎಂದು ಜಾರಿ ಬಿದ್ದ. ಪೆಟ್ಟು ಎಷ್ಟಾಯಿತೋ ತಿಳಿಯದು. ಆದರೆ ಆತ ಹೋ ಎಂದು ಅರಚಿದ್ದು ಮಾತ್ರ ಇಡೀ ಅಂಗಡಿಗೆ ಕೇಳಿಸಿತು. ಅವನ ಕೂಗನ್ನು ಕೇಳಿ ಸುತ್ತಮುತ್ತಲಿದ್ದ ಗಿರಾಕಿಗಳು ಓಡಿ ಬಂದು ಅವನ ಸುತ್ತ ನಿಂತರು.

ಈ ಪ್ರಚಂಡ ಮತ್ತೆ ಅರಚಿದ, ಮತ್ತಷ್ಟು ಭಯಂಕರವಾಗಿ ಅರಚಿದ. ಅವನ ಕೂಗಾಟ ಹಾರಾಟಕ್ಕೆ ಬೇರೆ ಮಕ್ಕಳು ಗಾಬರಿಯಾಗಿ ಅಳತೊಡಗಿ­ದವು. ಮತ್ತೆ ಅಜ್ಜ ಓಡಿ ಬಂದ. ಮೊಮ್ಮಗನನ್ನು ಎಬ್ಬಿಸಿ ನಿಲ್ಲಿಸಿದ. ಅವನ ಬಾಯಿಯ ಮೇಲೆ ತನ್ನ ಕೈಯನ್ನಿಟ್ಟು ಕೂಗಾಟವನ್ನು ಕಡಿಮೆಮಾಡಲು ಪ್ರಯತ್ನಿಸಿದ.

ಹುಡುಗ ಅಜ್ಜನ ಕೈ ಕಿತ್ತಿ ಹಾಕಿ ಮತ್ತೆ ಇನ್ನ್ನೂ ಭಯಂಕರವಾಗಿ ಕೂಗಿದ. ಅಜ್ಜನ ಮುಖ ಕೆಂಪಾಯಿತು. ಮತ್ತೆ ಸಮಧಾನದಿಂದ ಹೇಳಿದ, ‘ಬೇಡಪ್ಪ ಗುಂಡಣ್ಣ, ಬೇಜಾರುಬೇಡ, ಕೋಪಮಾಡಿಕೊಳ್ಳಬೇಡ. ಆಯ್ತು, ಇನ್ನು ಮನೆಗೆ ಹೊರಟೇ ಬಿಡೋಣ ಬಾ’ ಎಂದು ಅವನನ್ನು ಕರೆದುಕೊಂಡು ಹೊರಗೆ ನಡೆದ.

ಇದೆಲ್ಲವನ್ನೂ ನೋಡಿದ ಅಜ್ಜಿಗೆ, ಅಜ್ಜನ ಬಗ್ಗೆ ಬಹಳ ಅಭಿಮಾನ ಉಂಟಾ­ಯಿತು. ಆಕೆ ಆತನ ಬಳಿ ಹೋಗಿ ಹೇಳಿದಳು, ‘ನನಗೆ ನಿಮ್ಮ ತಾಳ್ಮೆ ಅದ್ಭುತ ಎನ್ನಿಸುತ್ತದೆ. ಇಂಥ ಕೋಲಾಹಲಪ್ರಿಯ­ನಾದ ಹುಡುಗನನ್ನು ಸಮಾಧಾನದಿಂದ ಸಂಭಾಳಿಸುತ್ತೀರಲ್ಲ. ನಿಮ್ಮ ಹುಡುಗ ಗುಂಡಣ್ಣ ಎಂಥ ಅನಾಹುತ ಮಾಡಿ­ದರೂ ಅವನಿಗೆ ಸಾಂತ್ವನ ಹೇಳುತ್ತೀರಲ್ಲ, ನಿಮಗೆ ಇದು ಹೇಗೆ ಸಾಧ್ಯವಾಯಿತು?’. ಅಜ್ಜನ ಮುಖದಲ್ಲಿ ಗಲಿಬಿಲಿ ಕಂಡಿತು. ಆತ ಏನು ಹೇಳಲೂ ತೋಚದೆ ತೊದಲಿದ. ತೊದಲುತ್ತಲೇ ಹೇಳಿದ, ‘ಅಮ್ಮ, ಆ ಹುಡುಗನ ಹೆಸರು ಪುಟ್ಟಣ್ಣ. ನನ್ನ ಹೆಸರು ಗುಂಡಣ್ಣ.

ನಾನು ಅಷ್ಟು ಹೊತ್ತು ಸಮಾಧಾನ ಮಾಡಿಕೊಳ್ಳು­ತ್ತಿದ್ದದ್ದೂ ನನ್ನನ್ನು, ಅವನನ್ನಲ್ಲ’. ಯಾವುದನ್ನೂ ಗುಣಪಡಿಸುವುದು ಸಾಧ್ಯವಿಲ್ಲವೋ ಅದನ್ನು ತಡೆದು­ಕೊಳ್ಳದೇ ಬೇರೆ ದಾರಿಯಿಲ್ಲ. ಹೀಗೆ ತಡೆದುಕೊಳ್ಳುವಾಗ ನಮಗೆ ಹೆಚ್ಚಿನ ತಾಳ್ಮೆಯ ಅಗತ್ಯವಿದೆ. ಮತ್ತೊಬ್ಬರಿಗೆ ಸಮಾಧಾನ ಹೇಳುವುದಕ್ಕಿಂತ ನಮ್ಮ ಮನಸ್ಸಿಗೆ ಸಮಾಧಾನ ತಂದುಕೊಳ್ಳುವು­ದರಲ್ಲಿಯೇ ಸಾರ್ಥಕ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.