ADVERTISEMENT

ನಾವೆಲ್ಲರೂ ಒಂದೇ

ಡಾ. ಗುರುರಾಜ ಕರಜಗಿ
Published 22 ಜನವರಿ 2013, 19:59 IST
Last Updated 22 ಜನವರಿ 2013, 19:59 IST

ಒಂದು ಬೆಳಿಗ್ಗೆ ದೊಡ್ಡ ಗರುಡ ಪಕ್ಷಿ ಹಾರಿ ಬಂದು ಮರದ ಕೊಂಬೆಯ ಮೇಲೆ ಕುಳಿತುಕೊಂಡಿತು. ಬೆಳಗಿನ ಬೇಟೆಗೆ ಹೊರಡಬೇಕಲ್ಲ ಎಂದು ಯೋಚಿಸುವ ಹೊತ್ತಿಗೆ ಯಾರೋ ಪುಟ್ಟ ಧ್ವನಿಯಲ್ಲಿ   ನಮಸ್ಕಾರ ಸಾರ್  ಎಂದಂತಾಯಿತು. ಕೊರಳು ತಿರುಗಿಸಿ ಗರುಡ ನೋಡಿದರೆ ಕೆಳಗಿನ ಕೊಂಬೆಯ ಮೇಲೆ ಒಂದು ಪುಟ್ಟ ಭಾರದ್ವಾಜ ಪಕ್ಷಿ ಕುಳಿತಿದೆ. ಅದಕ್ಕೆ ಬಾನಾಡಿ ಎಂಬ ಹೆಸರೂ ಇದೆ. ಅದು ತೀರ ಚಿಕ್ಕ ಪಕ್ಷಿ. ಅದನ್ನು ನೋಡಿ ತಿರಸ್ಕಾರದಿಂದ ಒರಟಾಗಿ,  ನಮಸ್ಕಾರ  ಎಂದಿತು ಗರುಡ. ಬಾನಾಡಿಗೆ ಉತ್ಸಾಹ ಬಂತು.  ಸಾರ್, ತಾವು ಚೆನ್ನಾಗಿದ್ದೀರಾ? ತಮ್ಮನ್ನು ನೋಡಿ ಬಹಳ ದಿನಗಳಾದವು  ಎಂದಿತು.

ಇದು ಯಾಕೋ ಅತಿಯಾಯಿತು. ಈ ಪುಟ್ಟ ಪಕ್ಷಿ ಸಲುಗೆ ತೆಗೆದುಕೊಳ್ಳುತ್ತಿದೆ ಎನ್ನಿಸಿ ಗರುಡ ಒರಟಾಗಿ ಹೇಳಿತು,  ಹೇ ಬಾನಾಡಿ, ನಿನಗೆ ದೊಡ್ಡವರೊಡನೆ ಹೇಗೆ ಮಾತನಾಡಬೇಕೆನ್ನುವುದನ್ನು ಯಾರೂ ಕಲಿಸಿಲ್ಲವೇ? ನಾನು ಪಕ್ಷಿರಾಜ. ನಾನಾಗಿಯೇ ಮಾತನಾಡಿಸದೇ ನೀನು ಮಾತನಾಡಬಾರದು ಮೂರ್ಖಪಕ್ಷಿ. ಪುಟ್ಟ ಪಕ್ಷಿ ಗೋಣೆತ್ತಿ ಕೇಳಿತು,  ಸಾರ್, ತಾವು ದೊಡ್ಡವರು ನಿಜ, ಆದರೆ ನಾವಿಬ್ಬರೂ ಒಂದೇ ಪಕ್ಷಿ ಜಾತಿಗೆ ಸೇರಿದವರಲ್ಲವೇ.  ಹೆ, ಹೆ, ಹೆ  ಎಂದು ಗಹಗಹಿಸಿ ನಕ್ಕಿತು ಗರುಡ.  ಯಾವ ಮೂರ್ಖ ಹೇಳಿದ ನಿನಗೆ. ನಾವಿಬ್ಬರೂ ಒಂದೇ ಜಾತಿಗೆ ಸೇರಿದವರೆಂದು?. ನಿನ್ನ ಆಕಾರ ನೋಡಿಕೊಂಡಿದ್ದೀಯಾ? ನನ್ನ ಹೊಡೆತಕ್ಕೆ ಅಲ್ಲ, ನನ್ನ ರೆಕ್ಕೆಯ ಗಾಳಿಗೆ ಸತ್ತು ಹೋಗುತ್ತೀಯಾ ನೀನು.  ಹೌದು ಸಾರ್, ನಾನು ಸಣ್ಣವನು ನಿಜ. ಆದರೆ ನಾನು ನಿಮ್ಮಷ್ಟೇ ಎತ್ತರಕ್ಕೆ ಹಾರಬಲ್ಲೆ, ಅದಲ್ಲದೇ ನಾನು ಚೆನ್ನಾಗಿ ಹಾಡಿ ಸಂತೋಷಪಟ್ಟು ಇತರರಿಗೂ ಸಂತೋಷ ನೀಡಬಲ್ಲೆ. ಆದರೆ ಅದು ನಿಮ್ಮಿಂದ ಅಸಾಧ್ಯ  ಎಂದು ನುಡಿದು ಕತ್ತು ಕೊಂಕು ಮಾಡಿತು.

ಏ ನನ್ನ ಜೊತೆಗೆ ಸ್ಪರ್ಧೆಗೆ ಇಳಿಯುತ್ತೀಯೇನೋ. ನೋಡು ಹೇಗೆ ಹಾರುತ್ತೇನೆ  ಎಂದು ಭರ‌್ರೆಂದು ಮೇಲೆ ಹಾರಲು ಸಿದ್ಧವಾಯಿತು. ಆಗ ಬಾನಾಡಿ ಫುರ‌್ರೆಂದು ಹಾರಿ ಬಂದು ಗರುಡನ ಬೆನ್ನ ಮೇಲೆ ಕುಳಿತಿತು, ಅಷ್ಟೇ ಅಲ್ಲ ಅದರ ರೆಕ್ಕೆಗಳನ್ನು ಕುಕ್ಕತೊಡಗಿತು. ಗರುಡನಿಗೆ ಭಾರಿ ಸಿಟ್ಟು ಬಂತು. ರಪರಪನೇ ರೆಕ್ಕೆ ಬಡಿಯಿತು, ಕತ್ತು ತಿರುಗಿಸಿ ಕೊಕ್ಕಿನಿಂದ ಕುಕ್ಕಲು ನೋಡಿತು. ಏನಾದರೂ ಬೆನ್ನ ಮೇಲೆ ಕುಳಿತ ಪುಟ್ಟ ಪಕ್ಷಿಯನ್ನು ತಲುಪುವುದು ಅಸಾಧ್ಯವಾಯಿತು. ಸುಯ್ಯೆಂದು ಗಗನಕ್ಕೇರಿತು, ಸರ‌್ರೆಂದು ಕೆಳಕ್ಕಿಳಿಯಿತು. ಏನೇನು ಸಾಹಸ ಮಾಡಿದರೂ ಗಟ್ಟಿಯಾಗಿ ಕಚ್ಚಿ ಕುಳಿತ ಬಾನಾಡಿಗೆ ಏನು ಮಾಡಲೂ ಆಗಲಿಲ್ಲ.

ಕೊನೆಗೆ ಸುಸ್ತಾಗಿ ಉಸಿರುಗಟ್ಟುವಂತಾದಾಗ ಮೊದಲಿದ್ದ ಸ್ಥಳಕ್ಕೇ ಒಂದು ದೊಡ್ಡ ಬಂಡೆಯ ಮೇಲೆ ಬಿದ್ದುಕೊಂಡಿತು. ಬಾನಾಡಿ ನಗುನಗುತ್ತಾ ಹಾರಿ ಪಕ್ಕದ ಮರದ ಮೇಲೆ ಕುಳಿತಿತು. ಆಗ ಅಲ್ಲಿಗೊಂದು ಆಮೆ ಬಂದಿತು. ಅದು ಈ ಪಕ್ಷಿಗಳ ಮಾತುಗಳನ್ನು ಗರುಡನ ಉಗ್ರತೆಯನ್ನು ಮತ್ತು ಈಗಿನ ಅವಸ್ಥೆ  ಕಂಡಿತ್ತು. ಅದು ಗರುಡನನ್ನು ನೋಡಿ ಗಹಗಹಿಸಿ ನಕ್ಕಿತು. ಮೊದಲೇ ಬೇಜಾರಾಗಿ ದುಃಖದಲ್ಲಿದ್ದ ಗರುಡ ಕೋಪದಿಂದ  ಹೇ, ಹರಿದಾಡುವ ಹುಳವೇ ಯಾಕೆ ನಗುತ್ತೀ?  ಎಂದಿತು. ಆಮೆ ಮತ್ತೆ ಫಕ್ಕನೇ ನಕ್ಕು,  ಅಯ್ಯ ಗರುಡ ಏನು ನಿನ್ನ ದುರವಸ್ಥೆ.

ಒಂದು ಪುಟ್ಟ ಬಾನಾಡಿಗೆ ನೀನು ಬಾಡಿಗೆಯ ಕುದುರೆಯಾದೆಯಲ್ಲ. ನಿಜವಾಗಿ ನೋಡಿದರೆ ನಿನಗಿಂತ ಬಾನಾಡಿಯೇ ವಾಸಿ  ಎಂದಿತು. ಗರುಡ ಮತ್ತಷ್ಟು ಕೋಪದಿಂದ,  ಏ ಚಿಪ್ಪಿನ ತಲೆಯವನೇ ನಿನ್ನ ಕೆಲಸ ನೋಡಿಕೊಂಡು ನಡೆ. ನಮ್ಮ ಚಿಂತೆ ನಿನಗೇಕೆ. ನಾವಿಬ್ಬರೂ ಒಂದೇ ಜಾತಿಯ ಅಣ್ಣತಮ್ಮಂದಿರು. ನಮ್ಮ ನಡುವೆ ಭೇದ ತರಬೇಡ  ಎಂದಿತು. ಬಾನಾಡಿಗೆ ಸಂತೋಷವಾಯಿತು. ಇದೇ ಮಾತನ್ನು ಧರ್ಮರಾಜ ಭೀಮನಿಗೆ ಹೇಳುತ್ತಾನೆ. ನಮ್ಮಲ್ಲಿ  ಭಿನ್ನಾಭಿಪ್ರಾಯ ಬಂದಾಗ ನಾವು ಐದು ಜನ, ಕೌರವರು ನೂರು ಜನ. ಆದರೆ ಹೊರಗಿನವರು ನಮ್ಮನ್ನು ಭೇದಿಸಲು ಬಂದಾಗ ನಾವು ನೂರೈದು ಜನ ಒಂದೇ. ಅಂತೆಯೇ ನಮ್ಮಲ್ಲೂ ಜಾತಿ, ಮತಗಳೆಂಬ ಅನೇಕ ಭೇದ, ಪ್ರಭೇದಗಳಿವೆ. ಆದರೆ ದೇಶದ ವಿಷಯ ಬಂದಾಗ, ದೇಶಪ್ರೇಮದ ಮಾತು ಬಂದಾಗ ನಾವೆಲ್ಲರೂ ಒಂದೇ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.