ADVERTISEMENT

ನೋಡುವ ದೃಷ್ಟಿ

ಡಾ. ಗುರುರಾಜ ಕರಜಗಿ
Published 29 ಜುಲೈ 2013, 19:59 IST
Last Updated 29 ಜುಲೈ 2013, 19:59 IST

ನಾನು ದೆಹಲಿ ಮುಟ್ಟಿದಾಗ ರಾತ್ರಿ ಎಂಟು ಗಂಟೆಯಾಗಿತ್ತು. ವಿಮಾನ ನಿಲ್ದಾಣದಲ್ಲಿ ಇಳಿದು ಹೊರಗೆ ಬರುವುದೇ ಅಸಾಧ್ಯವಾಗುವಷ್ಟು ಜೋರಾಗಿ ಮಳೆ ಬರುತ್ತಿತ್ತು. ಆದರೂ ಆಯೋಜಕರು ಕಾರು ತಂದಿದ್ದರು.  ನಾನು ಹೋಟೆಲ್ ಮುಟ್ಟುವ ಹೊತ್ತಿಗೆ ಒಂಬತ್ತು ಹೊಡೆದಿತ್ತು. ಅದೊಂದು ಪ್ರಸಿದ್ಧವಾದ ಪಂಚತಾರಾ ಹೋಟೆಲ್. ಅದರ ಬಗ್ಗೆ ತುಂಬ ಕೇಳಿದ್ದೆನಾದರೂ ಅಲ್ಲಿ ಉಳಿದದ್ದು ಇದೇ ಮೊದಲ ಬಾರಿ.

ಸೂಟಕೇಸ್ ತೆಗೆದುಕೊಂಡು ಹೋಟೆಲ್  ಕೆಲಸಗಾರ ನನ್ನನ್ನು ಕೊಠಡಿಗೆ ಕರೆದೊಯ್ದು ಇಲೆಕ್ಟ್ರಾನಿಕ್ ಕೀಲಿಕೈನಿಂದ ಬಾಗಿಲನ್ನು ತೆಗೆದ.  ನಂತರ ಬಾಗಿಲಿನ ಹಿಂದೆಯೇ ಇದ್ದ ಸ್ಥಳದಲ್ಲಿ ಅದನ್ನು ತೂರಿಸಿದ. ಆಗ ಎಲ್ಲ ಕಡೆಗೆ ಬೆಳಕು ಬರಬೇಕು. ಆದರೆ ಬೆಳಕು ಬರಲೇ ಇಲ್ಲ. ಅವನು ಏನೇನೋ ಪ್ರಯತ್ನ ಮಾಡಿದ. ದೀಪಗಳು ಹೊತ್ತಿಕೊಳ್ಳಲಿಲ್ಲ. ನನಗೆ ಸ್ವಲ್ಪ ಕಿರಿಕಿರಿಯಾಯಿತು. ಮೊದಲೇ ದೀರ್ಘಪ್ರವಾಸದಿಂದ ಸುಸ್ತಾಗಿತ್ತು. ಅದಲ್ಲದೇ ನನ್ನ ಸ್ನೇಹಿತರೊಬ್ಬರ ಸಂದರ್ಶನ ದೂರದರ್ಶನದಲ್ಲಿ 9.30 ಕ್ಕೆ ಪ್ರಸಾರವಾಗುವುದಿತ್ತು. ನಾನು ಅದನ್ನು ನೋಡಿ ಅಭಿಪ್ರಾಯ ತಿಳಿಸುವುದಾಗಿ ಹೇಳಿದ್ದೆ.

ಈಗಾಗಲೇ 9.15 ಆಗುತ್ತಿತ್ತು.  ಕೆಲಸಗಾರನಿಗೆ ಸ್ವಲ್ಪ ಬೇಜಾರಿನಿಂದಲೇ ಹೇಳಿದೆ. `ಏನಪ್ಪಾ ತಕರಾರು? ಮ್ಯೋನೇಜರ್‌ರಿಗೆ ಹೇಳಿ ಬೇರೆ ಕೊಠಡಿ ನೀಡಲು ಹೇಳು'. ಆತ  `ಕ್ಷಮಿಸಿ ಸರ್, ಒಂದೇ ನಿಮಿಷದಲ್ಲಿ ಬಂದೆ' ಎಂದು ಓಡಿಹೋಗಿ ಮತ್ತೊಬ್ಬರು ಯಾರನ್ನೋ ಕರೆದುಕೊಂಡು ಬಂದ. ಅವರೇನೋ ಮತ್ತೊಂದು ಪ್ರಯತ್ನ ಮಾಡತೊಡಗಿದರು. ನನಗೆ ಕೋಪವೇ ಬಂತು. ತಕ್ಷಣ ಕೊಠಡಿಯಲ್ಲಿದ್ದ ಪೋನ್ ಎತ್ತಿ ಮ್ಯೋನೇಜರ್‌ರಿಗೆ ಮಾತನಾಡಿದೆ, `ಏನು ವ್ಯವಸ್ಥೆ ನಿಮ್ಮದು? ನನಗೆ ಬೇರೆ ಕೋಣೆ ಕೊಟ್ಟು ಬಿಡಿ'. ಆತ, `ಕ್ಷಮಿಸಿ ಸರ್, ಒಂದೇ ನಿಮಿಷದಲ್ಲಿ ನಾನೇ ಬಂದು ಬೇರೆ ಕೋಣೆ  ಕೊಡುತ್ತೇನೆ'.

ADVERTISEMENT

ಹೇಳಿದಂತೆ ಒಂದೇ ನಿಮಿಷದಲ್ಲಿ ಬಂದ. ನನ್ನನ್ನು ಅತ್ಯಂತ ಗೌರವದಿಂದ ಮತ್ತೊಂದು ಕೋಣೆಗೆ ಕರೆದೊಯ್ದು ಬಾಗಿಲು ತೆಗೆದು, ದೀಪಗಳನ್ನು ಹಚ್ಚಿ, `ತೊಂದರೆಯಾಗಿದ್ದಕ್ಕೆ ದಯವಿಟ್ಟು ಕ್ಷಮಿಸಿ. ಸಾಮಾನ್ಯವಾಗಿ ಎಂದೂ ಹೀಗೆ ತೊಂದರೆಯಾಗುವುದಿಲ್ಲ' ಎಂದು ನನಗೆ ಶುಭ ಕೋರಿ ಹೋದ. ಆಗಲೇ 9.35 ಆಗಿತ್ತು. ನಾನು ತಕ್ಷಣ ಟಿ.ವಿ ಹಚ್ಚಿ ಚಾನೆಲ್‌ನ್ನು ತಿರುಗಿಸಿದೆ. ಸಂದರ್ಶನ ಪ್ರಾರಂಭವಾಗಿತ್ತು. ಚಿತ್ರ ಚೆನ್ನಾಗಿ ಬರುತ್ತಿತ್ತು ಆದರೆ ಧ್ವನಿ ಕೇಳುತ್ತಿರಲಿಲ್ಲ. ಧ್ವನಿಯ ಮಟ್ಟವನ್ನು ಎಷ್ಟು ಏರಿಸಿದರೂ ಧ್ವನಿಯೇ ಕೇಳುತ್ತಿಲ್ಲ!  ಇದೇನು ತಕರಾರು ಎಂದು ಮತ್ತೊಂದು ಚಾನೆಲ್ ತಿರುಗಿಸಿದೆ.  ಅಲ್ಲಿಯೂ ಅದೇ ಹಣೆಬರಹ. ಚಿತ್ರ ಕಾಣುತ್ತಿದೆ ಆದರೆ ಧ್ವನಿ ನಿಂತು ಹೋಗಿದೆ. ತಲೆ ಚಿಟ್ಟು ಹಿಡಿದು ಹೋಯಿತು.

ಮತ್ತೆ ಫೋನ್ ಎತ್ತಿ ಉಸ್ತುವಾರಿ ಮಾಡುವ ಅಧಿಕಾರಿಗೆ ಹೇಳಿದೆ, `ಇದೆಂಥ ಪಂಚತಾರಾ ಹೋಟೆಲ್‌ಲ್? ಸಣ್ಣಸಣ್ಣ ಹೋಟೆಲ್‌ಲ್ಗಳಲ್ಲಿ ಎಲ್ಲವೂ ಚೆನ್ನಾಗಿ ಕೆಲಸ ಮಾಡುತ್ತವೆ. ನಿಮ್ಮ ಟಿ.ವಿ.ಯಲ್ಲಿ ಧ್ವನಿಯೇ ಬರುತ್ತಿಲ್ಲ' ಆತ, `ಹೌದೇ ಸರ್? ಒಂದೇ ನಿಮಿಷದಲ್ಲಿ ಹುಡುಗನನ್ನು ಕಳುಹಿಸಿ ಸರಿ ಮಾಡುತ್ತೇನೆ' ಎಂದ. ಅದರಂತೆಯೇ ಹುಡುಗ ಬಂದ. ಯಾವುಯಾವುದೋ ಉಪಕರಣ ಬಳಸಿ ಕಸರತ್ತು ಮಾಡಿದ. ಹತ್ತು ನಿಮಿಷದಲ್ಲಿ ಗೋಡೆ ಕಿತ್ತುಹೋಗುವಷ್ಟು ದೊಡ್ಡ ಧ್ವನಿ ಟಿ.ವಿ.ಯಿಂದ ಹಾರಿ ಬಂತು. ನಂತರ ಅದನ್ನು ಕಡಿಮೆ ಮಾಡಿ ಆತ ಮುಗುಳ್ನಕ್ಕು,  `ಸರ್ ಒಂದು ಸಣ್ಣ ತೊಂದರೆಯಾಗಿತ್ತು. ಈಗ ಸರಿಯಾಯಿತು.

ತಮಗಾದ ತೊಂದರೆಗೆ ಕ್ಷಮೆ ಯಾಚಿಸುತ್ತೇನೆ' ಎಂದು ನಮಸ್ಕರಿಸಿ ಬಾಗಿಲು ಹಾಕಿಕೊಂಡು ಹೋದ. ಆ ಹೊತ್ತಿಗೆ ಸಂದರ್ಶನ ಮುಗಿದು ಹೋಗಿತ್ತು. ಲೈಟು ಆರಿಸಿ ಮಲಗಿಕೊಂಡೆ. ಬೆಳಿಗ್ಗೆ ಹೊರಗೆ ತಿರುಗಾಡಿ ಕೋಣೆಗೆ ಬಂದು ನೋಡಿದರೆ ಟೇಬಲ್ಲಿನ ಮೇಲೆ ಒಂದು ಸಣ್ಣ ಫಲಕವಿತ್ತು. ಅದರ ಮೇಲೆ, ನಾವು ಅಭಿಮಾನದಿಂದ ಹೇಳಿಕೊಳ್ಳುತ್ತೇವೆ. ನಮ್ಮ ಹೋಟೆಲ್ ಪ್ರಪಂಚದ ಅತ್ಯಂತ ಶ್ರೇಷ್ಠ ಹದಿನೈದು ಹೋಟೆಲ್‌ಗಳಲ್ಲಿ ಒಂದು. ಅದು ತಮ್ಮ ಸೇವೆಗಾಗಿ ಎಂದು ಬರೆದಿತ್ತು. ಅದನ್ನು ಓದಿ ಭಾರಿ ನಗು ಬಂದು ನಕ್ಕುಬಿಟ್ಟೆ. ನಿನ್ನೆ ರಾತ್ರಿ ಆದ ಅವಾಂತರದ ನೆನಪಾಯಿತು. ಆಗ ನನಗಿದ್ದದ್ದು ಎರಡೇ ದಾರಿ.

ಈ ಫಲಕವನ್ನು ನೋಡಿ ವ್ಯಂಗ್ಯವಾಡುವುದು ಇಲ್ಲ, ಇಂಥ ಸುಂದರವಾದ ವ್ಯವಸ್ಥೆಯಲ್ಲೂ ಕೆಲವೊಮ್ಮೆ ತೊಂದರೆಗಳಾಗುವುದು ಸಾಧ್ಯ ಎಂದುಕೊಂಡು ಸಮಾಧಾನಪಡುವುದು. ಎರಡನೆಯದೇ ವಾಸಿ ಎನ್ನಿಸಿತು. ಯಾಕೆಂದರೆ ಆ ಹೋಟೆಲ್‌ನಲ್ಲಿ ಎಲ್ಲವೂ ಚೆನ್ನಾಗಿತ್ತು. ಹಾಸಿಗೆ, ಹವಾ ನಿಯಂತ್ರಣ, ಶಾವರ್, ಟವೆಲ್ಲುಗಳ ಶುದ್ಧತೆ, ಕರೆದಾಗ ದೊರಕುವ ಸಹಾಯ ಎಲ್ಲವೂ ಅತ್ಯುತ್ತಮ ಮಟ್ಟದಲ್ಲಿದ್ದವು.   ಕೆಲವೊಮ್ಮೆ ಅಕಸ್ಮಾತಾಗಿ ಆಗುವ ಸಣ್ಣ ತೊಂದರೆಗಳನ್ನೆ ಎಣಿಸಿ ಇಡೀ ವ್ಯವಸ್ಥೆ ದೂರುವ ಬದಲು ಬಹಳಷ್ಟು ಸೌಕರ್ಯಗಳನ್ನು ಗಮನಿಸಿ ಚಿಕ್ಕಪುಟ್ಟ ತೊಂದರೆಗಳನ್ನು ಮರೆಯುವ ದೃಷ್ಟಿಕೋನ ಜೀವನಕ್ಕೆ ಒಳ್ಳೆಯದು ಎನ್ನಿಸಿತು. ಹೌದಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.